ಗಂಗಾವತಿ: ಶಾಲೆ ಮತ್ತು ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನೂ ಕೂಡಲೇ ಆರಂಭಿಸಿ, ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ತ್ವರಿತವಾಗಿ ಪ್ರಕಟಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆಗ್ರಹಿಸಿದೆ. ಶಾಲೆ
ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್, 2026-27ನೇ ಶೈಕ್ಷಣಿಕ ವರ್ಷ ಜೂನ್ 1ರಿಂದ ಆರಂಭವಾಗಿದ್ದು, ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡು ತರಗತಿಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿ ನಿಲಯಗಳು ಇನ್ನೂ ಆರಂಭವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಶಾಲೆ
ಹಾಸ್ಟೆಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರತಿದಿನ ಗ್ರಾಮಗಳಿಂದ ಕಾಲೇಜುಗಳಿಗೆ ಪ್ರಯಾಣಿಸುತ್ತಿದ್ದು, ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ. ಅನೇಕ ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆಯೂ ಇಲ್ಲದ ಕಾರಣ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಡಿಜಿಟಲ್ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು
ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ವಿಳಂಬ ಮಾಡದೆ ಕೂಡಲೇ ಪ್ರಕಟಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸುವ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಎಸ್ಎಫ್ಐ ಒತ್ತಾಯಿಸಿದೆ.
ಮೆರಿಟ್ ಆಧಾರಿತ ಆಯ್ಕೆ ಪದ್ಧತಿಯನ್ನು ಕೈಬಿಟ್ಟು, ಅಗತ್ಯವಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ವಿಸ್ತರಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್ಗಳನ್ನು ಆರಂಭಿಸಿ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ, ಶುಚಿತ್ವ ಕಿಟ್, ತಟ್ಟೆ, ಲೋಟ, ಹಾಸಿಗೆ, ಬೆಡ್ಶೀಟ್, ಹೊದಿಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಬೇಕು. ಜೊತೆಗೆ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ಕಂಪ್ಯೂಟರ್ ಪ್ರಯೋಗಾಲಯ, ಉಚಿತ ವೈ-ಫೈ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 4,500 ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಎಸ್ಎಫ್ಐ ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಶಿವಕುಮಾರ್, ಹಾಸ್ಟೆಲ್ ಉಪಸಮಿತಿ ಸಹ ಸಂಚಾಲಕ ಶರೀಫ್ ಹಾಗೂ ತಾಲೂಕು ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media
