ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ‘ಸಹಿ ನಕಲಿ’ ವಿವಾದ ತೀವ್ರವಾಗುತ್ತಿರುವ ನಡುವೆಯೇ, ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳ ತಂಡ ಜೂನ್ 9ರಂದು ಅವರ ಕಾಲಿಘಾಟ್ ನಿವಾಸಕ್ಕೆ ಭೇಟಿ ನೀಡಿದೆ.
ಮಮತಾ ಬ್ಯಾನರ್ಜಿ ಅವರ ಕಚೇರಿಯೂ ಆಗಿರುವ 30B ಹರಿಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ನಿವಾಸಕ್ಕೆ ಕಾಲಿಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಪಡೆ ಭಾರೀ ಸಂಖ್ಯೆಯಲ್ಲಿ ತೆರಳಿದ್ದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಮಾನ್ಯತೆಗಾಗಿ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಟಿಎಂಸಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ನೋಟಿಸ್ ನೀಡಿದ ಕೆಲವೇ ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಈ ವರ್ಷ ಅಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆಗಳು: ಸಚಿವ ಈಶ್ವರ್ ಖಂಡ್ರೆ
“ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ಹೇಳಿಕೆಯಲ್ಲಿ ಶಾಸಕರ ಸಹಿಗಳನ್ನು ಪಕ್ಷದ ಕೇಂದ್ರ ಕಚೇರಿ 30B ಹರಿಶ್ ಚಟರ್ಜಿ ಸ್ಟ್ರೀಟ್‌ನಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆ ಹೇಳಿಕೆಯ ಆಧಾರದಲ್ಲಿ ನಾವು ಇಲ್ಲಿ ತನಿಖೆಗೆ ಬಂದಿದ್ದೇವೆ,” ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಟಿಎಂಸಿ ನಾಯಕ ಹಾಗೂ ಮಾಜಿ ಸಂಸದ ಸುಭಾಶಿಷ್ ಚಕ್ರವರ್ತಿ, ಅಭಿಷೇಕ್ ಬ್ಯಾನರ್ಜಿ ಅವರ ಗೈರುಹಾಜರಿಯಲ್ಲಿ ಸಿಐಡಿಗೆ ಒಳನುಗ್ಗಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
“ಅಭಿಷೇಕ್ ಬ್ಯಾನರ್ಜಿ ಇಲ್ಲದಿರುವುದರಿಂದ ನಾವು ಸಿಐಡಿಗೆ ಒಳಬರುವಂತೆ ಅನುಮತಿ ನೀಡಿಲ್ಲ. ಅವರು ಬಂದ ಬಳಿಕವೇ ಸಿಐಡಿ ಮನೆ ಶೋಧನೆ ನಡೆಸಬಹುದು,” ಎಂದು ಅವರು ಹೇಳಿದರು.
ಈ ಸಹಿ ವಿವಾದವು ಟಿಎಂಸಿಯ 28 ವರ್ಷದ ಇತಿಹಾಸದಲ್ಲೇ ಅತಿ ದೊಡ್ಡ ಆಂತರಿಕ ಸಂಕಷ್ಟಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕನಾಗಿ ಹಿರಿಯ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ಮಾನ್ಯತೆ ನೀಡಲು ಸ್ಪೀಕರ್‌ಗೆ ಕಳುಹಿಸಲಾದ ಪ್ರಸ್ತಾವನೆಯಲ್ಲಿ ಹಲವಾರು ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ FIR ದಾಖಲಾಗಿದ್ದು, ಸಿಐಡಿ ತನಿಖೆ ಆರಂಭಿಸಿದೆ.
ಈ ಬೆಳವಣಿಗೆಯಿಂದ ಟಿಎಂಸಿಗೆ ಅಸ್ತಿತ್ವದ ಸಂಕಷ್ಟ ಎದುರಾಗಿದೆ. ಪಕ್ಷದ 80 ಶಾಸಕರಲ್ಲಿ 58 ಮಂದಿ ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಹೊರಬಂದ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದಾರೆ.
ಕಳೆದ ವಾರ ಬಂಡಾಯ ಗುಂಪು ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದು, ಅವರಿಗೆ ವಿಧಾನಸಭಾ ಸ್ಪೀಕರ್ ಮಾನ್ಯತೆ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ನೋಡಿ: “ಅನ್ನದಾತನ ಬೆನ್ನಿಗೆ ಚೂರಿ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದೇ ನಿಲುವೇ?” | ಬಸವರಾಜ | ಗುರುರಾಜ ದೇಸಾಯಿ
