ಮುಖ್ಯಮಂತ್ರಿ ಕುರ್ಚಿ ನನ್ನದಲ್ಲ, ಅದು ಜನರದ್ದು: ಡಿಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲೇ ಡಿ.ಕೆ. ಶಿವಕುಮಾರ್ ಅವರು ಜೂನ್‌ 3ರ ಸಂಜೆ ನಡೆದ ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದರು. ರಾಜ್ಯದ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸಲು ಆನ್‌ಲೈನ್ ವೇದಿಕೆಯನ್ನು ಆರಂಭಿಸುವ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ 13 ಸಚಿವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಇದನ್ನು ಮುಖ್ಯಮಂತ್ರಿಗಳು ‘ನವ ಯುಗ’ ಹಾಗೂ ‘ಯುವ ಯುಗ’ ಎಂದು ವರ್ಣಿಸಿದರು.

ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರವು ಶಾಲಾ ಮಟ್ಟದಿಂದ ಸ್ನಾತಕೋತ್ತರ ಮಟ್ಟದವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿದೆ ಎಂದು ಶಿವಕುಮಾರ್ ಹೇಳಿದರು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದ್ದು, ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ವಿವರಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’: ವ್ಯಂಗ್ಯದಿಂದ ಹುಟ್ಟಿದ ಯುವಕರ ಕೋಪ, ವ್ಯವಸ್ಥೆಗೆ ಸವಾಲು

“ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ,” ಎಂದು ಅವರು ಮಾಧ್ಯಮಗಳಿಗೆ ಹೇಳಿದರು.

ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದ ಅವರು, ಖಾಸಗಿ ವಲಯದ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಆನ್‌ಲೈನ್ ಉದ್ಯೋಗ ಪೋರ್ಟಲ್ ಆರಂಭಿಸಲಾಗುತ್ತದೆ ಎಂದು ಘೋಷಿಸಿದರು. ಉದ್ಯಮಗಳ ಅಗತ್ಯಕ್ಕೆ ಅನುಗುಣವಾಗಿ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. FKCCI ಸೇರಿದಂತೆ ವಿವಿಧ ಉದ್ಯಮ ಸಂಘಟನೆಗಳ ಸಹಕಾರದೊಂದಿಗೆ ಈ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಐಟಿ-ಬಿಟಿ, ಆರೋಗ್ಯ ಸೇವೆ ಹಾಗೂ ಆತಿಥ್ಯ ವಲಯದ ಉದ್ಯೋಗದಾತರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡು ನೇಮಕಾತಿ ಮಾಡಬಹುದು.

ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಶಿವಕುಮಾರ್ ಹೇಳಿ, ಸ್ಥಳೀಯರಿಗೆ ಮೀಸಲಾತಿ ಪ್ರಮಾಣ ನಿಗದಿಪಡಿಸುವ ಕುರಿತು ಸರ್ಕಾರ ಚರ್ಚೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ರೂಪಿಸಲು ಮೂವರು ಸಚಿವರಿಗೆ ಜವಾಬ್ದಾರಿ ನೀಡಲಾಗಿದ್ದು, ಒಂದು ತಿಂಗಳೊಳಗೆ ಅಂತಿಮ ರೂಪ ಪಡೆಯುವ ನಿರೀಕ್ಷೆಯಿದೆ.

ಯುವಕರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ರಾಜ್ಯದಾದ್ಯಂತ 10,000 ‘ಭಾರತ್ ಜೋಡೋ ಯುವ ಸಂಘಟನೆ’ಗಳನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ ಸುಮಾರು 6,000 ಗ್ರಾಮ ಪಂಚಾಯತ್ ಮಟ್ಟದಲ್ಲಿ ಮತ್ತು ಉಳಿದವು ನಗರ ಪ್ರದೇಶಗಳಲ್ಲಿ ಸ್ಥಾಪನೆಯಾಗಲಿವೆ. ಪ್ರತಿ ಸಂಘಟನೆಗೆ ₹10 ಲಕ್ಷ ಹಣಕಾಸು ಸಹಾಯ ನೀಡಲಾಗುತ್ತದೆ ಹಾಗೂ 150-200 ಯುವ ಸದಸ್ಯರನ್ನು ಹೊಂದಿರಲಿದೆ.

ರಾಜ್ಯದಲ್ಲಿ ಅನೇಕ ಜನರಿಗೆ ಕಟ್ಟಡಗಳಿಗೆ Completion Certificate (CC) ಮತ್ತು Occupancy Certificate (OC) ಇಲ್ಲದ ಕಾರಣ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಲು ಮೇ 31ರೊಳಗೆ ನಿರ್ಮಾಣ ಹಂತದಲ್ಲಿದ್ದ 2,500 ಚದರ ಅಡಿ ಒಳಗಿನ ಕಟ್ಟಡಗಳಿಗೆ ಒಂದೇ ಬಾರಿ ಪರಿಹಾರ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ. ಫಲಾನುಭವಿಗಳು ಫೋಟೋ ಹಾಗೂ ವೀಡಿಯೊಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಮತ್ತು ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತದೆ.

“ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸುವ ಸೌಲಭ್ಯವನ್ನು ಈಗ ಬೆಂಗಳೂರಿನಲ್ಲಿ ನೀಡಲಾಗುತ್ತಿದ್ದು, ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ,” ಎಂದು ಅವರು ಹೇಳಿದರು.

ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣಕ್ಕಾಗಿ ₹2,000 ಕೋಟಿ ಅನುದಾನ ಘೋಷಿಸಲಾಗಿದೆ. “ಮುಂದಿನ ಮೂರುರಿಂದ ನಾಲ್ಕು ತಿಂಗಳಲ್ಲಿ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತದೆ,” ಎಂದು ಅವರು ಹೇಳಿದರು.

ಯುವ ಸಂಘಟನೆಗಳು ಮತ್ತು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ನಿಧಿಗಳ ಕುರಿತು ಮಾತನಾಡಿದ ಅವರು, “ಇದು ಡಿ.ಕೆ. ಶಿವಕುಮಾರ್ ಸರ್ಕಾರ” ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, “ನಾನು ಹೇಳುತ್ತಿದ್ದ ಶುಭ ಸಮಯ ಈಗ ಬಂದಿದೆ. ರಾಜ್ಯದ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಮುಂದಿನ ಎರಡು ವರ್ಷಗಳನ್ನು ಜನಹಿತಕ್ಕೆ ಅರ್ಪಿಸುತ್ತೇನೆ,” ಎಂದು ಹೇಳಿದರು.

ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಅವರು, ಏಳಿಳಿತಗಳನ್ನು ಅನುಭವಿಸಿದ್ದೇನೆ, ತಿಹಾರ್ ಜೈಲಿನ ಅನುಭವವೂ ಇದೆ ಎಂದು ಹೇಳಿದರು. “ಏಳನೇ ತರಗತಿಯಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈ ಮುಖ್ಯಮಂತ್ರಿಯ ಕುರ್ಚಿ ನನ್ನದೇ ಅಲ್ಲ, ಜನರದ್ದು. ಅವಕಾಶ ತಡವಾಗಿ ಬಂದರೂ ಈಗ ನನಗೆ ಸಿಕ್ಕಿದೆ,” ಎಂದು ಹೇಳಿದರು.

ಸಿದ್ಧರಾಮಯ್ಯ ಅವರು ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದಾರೆ ಎಂದು ಹೇಳಿದ ಶಿವಕುಮಾರ್, ಹೊಸ ಸಚಿವ ಸಂಪುಟವು ಎಲ್ಲಾ ಜಾತಿ, ಧರ್ಮ ಮತ್ತು ಪ್ರದೇಶಗಳ ಪ್ರತಿನಿಧಿತ್ವವನ್ನು ಹೊಂದಿದೆ ಎಂದು ಹೇಳಿದರು.

ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಮನವಿ ಮಾಡಿದ ಅವರು, ಸರ್ಕಾರ ತನ್ನ ತಪ್ಪುಗಳನ್ನು ಸರಿಪಡಿಸಲು ಸದಾ ಸಿದ್ಧವಾಗಿದೆ ಎಂದು ಹೇಳಿದರು.

ಇದನ್ನೂ ನೋಡಿ: ನಳ ಇದೆ, ಪೈಪ್ ಇದೆ… ಆದರೆ ನೀರೇ ಇಲ್ಲ! ಕೊಡಗಿನ ಆದಿವಾಸಿಗಳ ಕಣ್ಣೀರಿನ ಕಥೆ Janashakthi Media

Donate Janashakthi Media

Leave a Reply

Your email address will not be published. Required fields are marked *