2026ರ ಜನವರಿ 28ರಂದು ಕೇಂದ್ರ ಗೃಹ ಸಚಿವಾಲಯ (MHA) ಹೊರಡಿಸಿದ ಆದೇಶದ ಪ್ರಕಾರ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಆರು ಚರಣಗಳನ್ನೂ ಹಾಡಬೇಕು ಹಾಗೂ ಅಲ್ಲಿ ಹಾಜರಿರುವ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ. ಇದು ದೇಶಭಕ್ತಿಯ ಅಭಿವ್ಯಕ್ತಿ ಅಲ್ಲ. ಇದು ರಾಷ್ಟ್ರಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಸಂವಿಧಾನಾತ್ಮಕ ವಿಧ್ವಂಸಕ ಕೃತ್ಯವಾಗಿದೆ. ಏಕೆಂದರೆ ಇದನ್ನು ಅರ್ಥಮಾಡಿಕೊಳ್ಳಲು ನಾವು 1937ಕ್ಕೆ ಹಿಂದಿರುಗಬೇಕು; ಸಂವಿಧಾನ ಸಭೆಯು ಏನು ನಿರ್ಧರಿಸಿತು ಎಂಬುದನ್ನು ನೋಡಬೇಕು; ಮತ್ತು Bijoe Emmanuel and Others vs State of Kerala and Others (1986) ಎಂಬ ಐತಿಹಾಸಿಕ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟ್ ಏನು ಹೇಳಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು.
– ಸಂಜಯ್ ಹೆಗ್ಡೆ
1937ರ ಒಪ್ಪಂದ: ದುರ್ಬಲತೆ ಅಲ್ಲ, ವಿವೇಕ
1937ರ ಅಕ್ಟೋಬರ್ನಲ್ಲಿ ಕಲ್ಕತ್ತಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿತ್ತು. ಅಲ್ಲಿ ನಡೆದದ್ದು ಕೆಲವರು ಈಗ ಹೇಳುವಂತೆ ‘ತುಷ್ಟೀಕರಣ’ ಅಲ್ಲ. ಡಾ. ರಾಜೇಂದ್ರ ಪ್ರಸಾದ್ ಅವರು ನಿರ್ಣಯವನ್ನು ಮಂಡಿಸಿದರು; ಸರ್ದಾರ್ ವಲ್ಲಭಭಾಯಿ ಪಟೇಲ್ ಅದನ್ನು ಅನುಮೋದಿಸಿದರು. ಮಹಾತ್ಮ ಗಾಂಧಿಯವರು ವಿಶೇಷ ಆಹ್ವಾನಿತರಾಗಿ ಹಾಜರಿದ್ದರು. ಆ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಅವರು “ಮುಸ್ಲಿಂ ಸ್ನೇಹಿತರು ಹಾಡಿನ ಕೆಲವು ಭಾಗಗಳ ಕುರಿತು ವ್ಯಕ್ತಪಡಿಸಿದ ಆಕ್ಷೇಪಣೆಗಳ ನ್ಯಾಯಸಮ್ಮತತೆಯನ್ನು” ಒಪ್ಪಿಕೊಂಡು, “ರಾಷ್ಟ್ರೀಯ ಸಮಾರಂಭಗಳಲ್ಲಿ ರಾಷ್ಟ್ರೀಯ ಗೀತೆಯಾಗಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು; ಅವು ಯಾವುದೇ ದೃಷ್ಟಿಯಿಂದಲೂ ಆಕ್ಷೇಪಾರ್ಹವಲ್ಲ” ಎಂದು ತೀರ್ಮಾನಿಸಿದರು.
ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’: ವ್ಯಂಗ್ಯದಿಂದ ಹುಟ್ಟಿದ ಯುವಕರ ಕೋಪ, ವ್ಯವಸ್ಥೆಗೆ ಸವಾಲು
ಇದು ಹೇಡಿತನವಾಗಿರಲಿಲ್ಲ. ಅದು ಸಾಮಾನ್ಯ ವಿವೇಕದ ನಿರ್ಧಾರವಾಗಿತ್ತು. ಬಂಕಿಮಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂ ಕಾವ್ಯದ ನಂತರದ ಚರಣಗಳಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರನ್ನು ನೇರವಾಗಿ ಉಲ್ಲೇಖಿಸಲಾಗಿದೆ. ಒಂದು ಚರಣದಲ್ಲಿ ತಾಯ್ನಾಡನ್ನು “ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ” (ಹತ್ತು ಆಯುಧಗಳನ್ನು ಧರಿಸಿರುವ ದುರ್ಗಾ ದೇವಿ ನೀನೇ) ಎಂದು ವರ್ಣಿಸಲಾಗಿದೆ.
ಒಮ್ಮೆ ಯೋಚಿಸಿ: ಇಂತಹ ಸಾಲುಗಳನ್ನು ಹಾಡುವಾಗ ಒಬ್ಬ ಮುಸ್ಲಿಂ ಸರ್ಕಾರಿ ನೌಕರ, ಕ್ರೈಸ್ತ ಶಿಕ್ಷಕ, ಸಿಖ್ ಸೈನಿಕ, ಬೌದ್ಧ ಸನ್ಯಾಸಿ ಅಥವಾ ನಾಸ್ತಿಕ ವಿಜ್ಞಾನಿಯನ್ನು ಕಡ್ಡಾಯವಾಗಿ ಎದ್ದು ನಿಲ್ಲುವಂತೆ ಮಾಡುವುದು ಎಂದರೆ ಏನು? ಅದು ರಾಷ್ಟ್ರೀಯ ಏಕತೆಯನ್ನು ಬೆಳೆಸುವುದಲ್ಲ. ಅದು ಒಂದು ಜಾತ್ಯತೀತ ಗಣರಾಜ್ಯದಲ್ಲಿ ಧಾರ್ಮಿಕ ನಿಷ್ಠೆಯ ಪರೀಕ್ಷೆಯನ್ನು ಹೇರುವಂತಾಗಿದೆ.
ರವೀಂದ್ರನಾಥ ಟಾಗೋರ್ ಅವರೂ ಸಹ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸುವುದನ್ನು ಬೆಂಬಲಿಸಿದ್ದರು. ಸಂಪೂರ್ಣ ಸ್ವಾತಂತ್ರ್ಯ ಚಳವಳಿ — ಮಿತವಾಧಿಗಳಿಂದ ಹಿಡಿದು ಕ್ರಾಂತಿಕಾರಿಗಳವರೆಗೆ, ಜಾತ್ಯತೀತರಿಂದ ಹಿಡಿದು ಭಕ್ತಿಪರರವರೆಗೆ — ಎಲ್ಲರೂ ಮೊದಲ ಎರಡು ಚರಣಗಳು ಮಾತ್ರ ಹಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತವೆ ಹಾಗೂ ಯಾರ ಧಾರ್ಮಿಕ ನಂಬಿಕೆಗಳಿಗೂ ಧಕ್ಕೆ ತರುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
ಇದು ಕೆಲವರ ಪ್ರತ್ಯೇಕ ಅಭಿಪ್ರಾಯವಾಗಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಮತ್ತು ಜನರ ಸಾಮೂಹಿಕ ವಿವೇಕದಿಂದ ರೂಪುಗೊಂಡ ನಿರ್ಧಾರವಾಗಿತ್ತು.
1950ರ ಜನವರಿ 24ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಘೋಷಿಸಿದರು ಹಾಗೂ ವಂದೇ ಮಾತರಂಗೂ “ಸಮಾನ ಗೌರವ” ನೀಡಲಾಗುವುದು ಎಂದು ತಿಳಿಸಿದರು. ಆದರೆ ಇಲ್ಲಿ ಮುಖ್ಯವಾದ ಸಂಗತಿ ಏನೆಂದರೆ, ಸಂವಿಧಾನ ಸಭೆಯು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಿತ್ತು. ಉಳಿದ ನಾಲ್ಕು ಚರಣಗಳು ಆಕಸ್ಮಿಕವಾಗಿ ಮರೆತುಹೋಗಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿತ್ತು. ಏಕೆಂದರೆ ಭಾರತದ ಸ್ಥಾಪಕರು ಒಂದು ಮೂಲಭೂತ ಸತ್ಯವನ್ನು ಅರ್ಥಮಾಡಿಕೊಂಡಿದ್ದರು: ನಿರ್ದಿಷ್ಟ ದೇವ-ದೇವಿಯರಿಗೆ ಸಮರ್ಪಿತವಾದ ಪದ್ಯಗಳನ್ನು ಒಂದು ಜಾತ್ಯತೀತ ಗಣರಾಜ್ಯದ ಅಧಿಕೃತ ರಾಷ್ಟ್ರೀಯ ಸಂಕೇತಗಳನ್ನಾಗಿ ಮಾಡಲಾಗುವುದಿಲ್ಲ.
ಸಂವಿಧಾನದ 51A(ಅ) ವಿಧಿಯು ಪ್ರತಿಯೊಬ್ಬ ನಾಗರಿಕನಿಗೆ “ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವ” ಕರ್ತವ್ಯವನ್ನು ವಿಧಿಸುತ್ತದೆ. ಗಮನಿಸಿದರೆ, ರಾಷ್ಟ್ರೀಯ ಗೀತೆ (National Song) ಇದರಲ್ಲಿಲ್ಲ. 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಮೂಲಭೂತ ಕರ್ತವ್ಯಗಳನ್ನು ಸೇರಿಸಿದಾಗ, ಸಂಸತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ನಿರ್ದಿಷ್ಟವಾಗಿ ಉಲ್ಲೇಖಿಸಿತು. ರಾಷ್ಟ್ರೀಯ ಗೀತೆಯನ್ನು ಸೇರಿಸಲಿಲ್ಲ. ಇದು ನಿರ್ಲಕ್ಷ್ಯದಿಂದ ಆಗಿಲ್ಲ; ಇದು ಒಂದು ಪ್ರಜ್ಞಾಪೂರ್ವಕ ಆಯ್ಕೆಯಾಗಿತ್ತು.
1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ. ವಂದೇ ಮಾತರಂ ಅದರಲ್ಲಿ ಸೇರಿಲ್ಲ. ಅದನ್ನು ಹಾಡದಿದ್ದಕ್ಕಾಗಿ, ಅದರ ವೇಳೆ ನಿಲ್ಲದಿದ್ದಕ್ಕಾಗಿ ಅಥವಾ ನಿರ್ದಿಷ್ಟ ಗೌರವ ತೋರದಿದ್ದಕ್ಕಾಗಿ ಯಾವುದೇ ಕಾನೂನು ಶಿಕ್ಷೆ ಇಲ್ಲ. ಇದೂ ಸಹ ಆಕಸ್ಮಿಕವಲ್ಲ. ಸಂವಿಧಾನಾತ್ಮಕ ಚೌಕಟ್ಟು ರಾಷ್ಟ್ರಗೀತೆಯನ್ನು (ಜಾತ್ಯತೀತ ಮತ್ತು ಎಲ್ಲರನ್ನು ಒಳಗೊಳ್ಳುವ ಸಂಕೇತ) ಮತ್ತು ರಾಷ್ಟ್ರೀಯ ಗೀತೆಯನ್ನು (ಧಾರ್ಮಿಕ ಅಂಶಗಳನ್ನು ಹೊಂದಿರುವ ಕಾರಣ ಮಿತಿಗೊಳಿಸಬೇಕಾದ ಸಂಕೇತ) ಉದ್ದೇಶಪೂರ್ವಕವಾಗಿ ವಿಭಿನ್ನವಾಗಿ ಪರಿಗಣಿಸಿದೆ.
ಹಾಡದಿರುವ ಹಕ್ಕಿನ ಕುರಿತ ಪ್ರಕರಣ
1985ರ ಜುಲೈನಲ್ಲಿ ಕೇರಳದ ಮೂವರು ಮಕ್ಕಳು — ಬಿಜೋ, ಬಿನು ಮೋಲ್ ಮತ್ತು ಬಿಂದು ಇಮ್ಯಾನುಯೆಲ್ — ಶಾಲೆಯಿಂದ ಹೊರಹಾಕಲ್ಪಟ್ಟರು. ಅವರು Jehovah’s Witnesses ಎಂಬ ಕ್ರೈಸ್ತ ಧಾರ್ಮಿಕ ಪಂಥಕ್ಕೆ ಸೇರಿದವರಾಗಿದ್ದರು. ಪ್ರತಿದಿನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ರಾಷ್ಟ್ರಗೀತೆ ಕೇಳಿಬಂದಾಗ ಅವರು ಗೌರವದಿಂದ ಎದ್ದು ನಿಲ್ಲುತ್ತಿದ್ದರು. ಆದರೆ ತಮ್ಮ ಧಾರ್ಮಿಕ ನಂಬಿಕೆಯ ಕಾರಣದಿಂದ ಅದನ್ನು ಹಾಡುತ್ತಿರಲಿಲ್ಲ. ಅವರು ಯಾವುದೇ ಗಲಾಟೆ ಮಾಡಲಿಲ್ಲ, ಯಾರಿಗೂ ತೊಂದರೆ ಉಂಟುಮಾಡಲಿಲ್ಲ. ಆದರೂ ಒಬ್ಬ ರಾಜ್ಯ ಸಚಿವರು ಮಧ್ಯಪ್ರವೇಶಿಸಿದ ನಂತರ ಅವರನ್ನು ಶಾಲೆಯಿಂದ ಹೊರಹಾಕಲಾಯಿತು.
ಕೇರಳ ಹೈಕೋರ್ಟ್ ಈ ಕ್ರಮವನ್ನು ಸಮರ್ಥಿಸಿದರೂ, ಸುಪ್ರೀಂ ಕೋರ್ಟ್ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಿತು.
ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿ ತಮ್ಮ ತೀರ್ಪಿನಲ್ಲಿ, ಮಕ್ಕಳನ್ನು ಹೊರಹಾಕಿದ್ದು ಅವರ ಮಾತಿನ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು. ಬಳಿಕ ಅವರು ಭಾರತೀಯ ಸಂವಿಧಾನಾತ್ಮಕ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕಾದ ಮಾತುಗಳನ್ನು ಬರೆದರು:

«“ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುವುದರ ಮೂಲಕ ಅದಕ್ಕೆ ಯೋಗ್ಯ ಗೌರವ ಸಲ್ಲಿಸಲಾಗುತ್ತದೆ. ಅದರೊಂದಿಗೆ ಹಾಡದಿರುವುದರಿಂದ ಅವಮಾನ ಮಾಡಲಾಗಿದೆ ಎಂದು ಹೇಳುವುದು ಸರಿಯಲ್ಲ.”»
ನ್ಯಾಯಾಲಯ ಇನ್ನೂ ಮುಂದೆ ಹೋಗಿ, “ಹಾಡದೆ ಗೌರವದಿಂದ ನಿಂತಿರುವುದು ಯಾವುದೇ ಕಾನೂನಿನ ಉಲ್ಲಂಘನೆಯಲ್ಲ” ಎಂದು ಸ್ಪಷ್ಟಪಡಿಸಿತು. ಮೌನವಾಗಿರುವ ಹಕ್ಕು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿದ್ದು, ಅದಕ್ಕೂ ಸಂವಿಧಾನಾತ್ಮಕ ರಕ್ಷಣೆ ಇದೆ ಎಂದು ಕೋರ್ಟ್ ಹೇಳಿತು.
ನ್ಯಾಯಮೂರ್ತಿ ರೆಡ್ಡಿ, ಅಮೆರಿಕದ West Virginia State Board of Education vs Barnette (1943) ಪ್ರಕರಣದಲ್ಲಿ ನ್ಯಾಯಮೂರ್ತಿ ರಾಬರ್ಟ್ ಎಚ್. ಜಾಕ್ಸನ್ ನೀಡಿದ್ದ ಪ್ರಸಿದ್ಧ ಅಭಿಪ್ರಾಯವನ್ನು ಉಲ್ಲೇಖಿಸಿದರು:
«“ನಮ್ಮ ಸಂವಿಧಾನಾತ್ಮಕ ಆಕಾಶಗಂಗೆಯಲ್ಲಿ ಯಾವುದಾದರೂ ಸ್ಥಿರ ನಕ್ಷತ್ರವಿದ್ದರೆ ಅದು ಇದೇ: ರಾಜಕೀಯ, ರಾಷ್ಟ್ರಭಕ್ತಿ, ಧರ್ಮ ಅಥವಾ ಅಭಿಪ್ರಾಯಗಳ ಯಾವುದೇ ವಿಷಯದಲ್ಲಿ ಯಾವ ಅಧಿಕಾರಿಯೂ — ದೊಡ್ಡವನಾಗಲಿ ಚಿಕ್ಕವನಾಗಲಿ — ಯಾವುದು ಸರಿ ಎಂದು ನಿರ್ಧರಿಸಿ ನಾಗರಿಕರನ್ನು ಅದನ್ನು ಮಾತಿನ ಮೂಲಕವಾಗಲಿ, ಕೃತಿಯ ಮೂಲಕವಾಗಲಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ.”
ಆ ನಕ್ಷತ್ರ ಇಂದಿಗೂ ಪ್ರಕಾಶಿಸುತ್ತಿದೆ.
ಗೃಹ ಸಚಿವಾಲಯದ ಆದೇಶ ಏನು ಮಾಡುತ್ತದೆ?
ಈಗ ಗೃಹ ಸಚಿವಾಲಯದ ಆದೇಶವನ್ನು ಪರಿಗಣಿಸಿ. ಅದು ನಾಗರಿಕ ಸನ್ಮಾನ ಸಮಾರಂಭಗಳು, ರಾಷ್ಟ್ರಪತಿ ಕಾರ್ಯಕ್ರಮಗಳು ಮತ್ತು ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಸಂಪೂರ್ಣ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುತ್ತದೆ. ಎಲ್ಲರೂ ಎದ್ದು ನಿಲ್ಲಬೇಕು. ಶಾಲೆಗಳು ತಮ್ಮ ದಿನವನ್ನು ರಾಷ್ಟ್ರೀಯ ಗೀತೆಯ ಸಾಮೂಹಿಕ ಗಾಯನದೊಂದಿಗೆ ಆರಂಭಿಸಬೇಕು. ಮತ್ತು ಮುಖ್ಯವಾಗಿ, ಸಂವಿಧಾನ ಸಭೆಯು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದ್ದ ಆ ನಾಲ್ಕು ಚರಣಗಳನ್ನೂ ಇದು ಒಳಗೊಂಡಿದೆ — ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯ ಸ್ತುತಿಯನ್ನು ಒಳಗೊಂಡ ಚರಣಗಳು.
ತರ್ಕ ಸರಳವಾಗಿದೆ. ಸಂವಿಧಾನಾತ್ಮಕ ಮಾನ್ಯತೆ (51A ವಿಧಿ) ಹಾಗೂ ಕಾನೂನು ರಕ್ಷಣೆ ಹೊಂದಿರುವ ರಾಷ್ಟ್ರಗೀತೆಯನ್ನೇ ಯಾರನ್ನೂ ಬಲವಂತವಾಗಿ ಹಾಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ, ಸಂವಿಧಾನದಲ್ಲಿಯೂ ಉಲ್ಲೇಖವಿಲ್ಲದ, ಕಾನೂನು ರಕ್ಷಣೆಯೂ ಇಲ್ಲದ ರಾಷ್ಟ್ರೀಯ ಗೀತೆಯನ್ನು ಹಾಡುವಂತೆ ಹೇಗೆ ಬಲವಂತಪಡಿಸಬಹುದು? ದೊಡ್ಡದಕ್ಕೆ ಅನ್ವಯಿಸುವ ನಿಷೇಧವು ಚಿಕ್ಕದಕ್ಕೂ ಅನ್ವಯಿಸಲೇಬೇಕು.
ಆದರೆ ಈ ಆದೇಶ ಇನ್ನೂ ಗಂಭೀರವಾದದ್ದನ್ನು ಮಾಡುತ್ತದೆ. ಇದು ಜನರನ್ನು ಕೇವಲ ಎದ್ದು ನಿಲ್ಲಲು ಹೇಳುವುದಲ್ಲ; ಸ್ಪಷ್ಟವಾದ ಧಾರ್ಮಿಕ ವಿಷಯವಿರುವ ಪದ್ಯಗಳ ಗಾಯನದಲ್ಲಿ, ಕನಿಷ್ಠ ನಿಷ್ಕ್ರಿಯವಾಗಿ ಆದರೂ, ಭಾಗಿಯಾಗುವಂತೆ ಮಾಡುತ್ತದೆ.
“ಹತ್ತು ಆಯುಧಗಳನ್ನು ಧರಿಸಿದ ದುರ್ಗೆ ನೀನೇ” ಎಂಬ ಸಾಲುಗಳು ಸಭಾಂಗಣದಲ್ಲಿ ಪ್ರತಿಧ್ವನಿಸುವಾಗ ಒಬ್ಬ ಮುಸ್ಲಿಂ ಅಧಿಕಾರಿ ಕಡ್ಡಾಯವಾಗಿ ಎದ್ದು ನಿಲ್ಲಬೇಕಾದ ಪರಿಸ್ಥಿತಿಯನ್ನು ಊಹಿಸಿ. ಅಥವಾ ಹಿಂದೂ ದೇವತೆಗಳ ಸ್ತುತಿಯ ನಡುವೆ ನಿಂತಿರುವ ಒಬ್ಬ ಕ್ರೈಸ್ತ ಬಾಲಕನನ್ನು ಕಲ್ಪಿಸಿ. ಇದು ಕೇವಲ ಔಪಚಾರಿಕತೆ ಅಲ್ಲ. ಇದು ಅವರ ಅಂತಃಕರಣದ ಮೇಲೆ ಬಿದ್ದ ಗಾಯವಾಗಿದೆ.
ಅಂತಹ ಪರಿಸ್ಥಿತಿಗಳಿಂದಲೇ ಸಂವಿಧಾನದ 25ನೇ ವಿಧಿ ನಾಗರಿಕರನ್ನು ರಕ್ಷಿಸುತ್ತದೆ.
ಭಾರತದ ಸ್ಥಾಪಕರು ಸರಳ ಮನಸ್ಸಿನವರಾಗಿರಲಿಲ್ಲ. ಅವರು ಅಪಾರ ವೈವಿಧ್ಯತೆಯ ನಾಗರಿಕತೆಯನ್ನು ಒಗ್ಗೂಡಿಸುವ ಸಂವಿಧಾನಾತ್ಮಕ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದರು. ಅವರು ಒಂದು ಮೂಲಭೂತ ಸತ್ಯವನ್ನು ಅರ್ಥಮಾಡಿಕೊಂಡಿದ್ದರು: ನಿಜವಾದ ದೇಶಭಕ್ತಿ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಪ್ರಾರ್ಥಿಸಬೇಕು ಎಂಬುದಲ್ಲ.
“ಸುಜಲಾಂ, ಸುಫಲಾಂ, ಮಲಯಜ ಶೀತಲಾಂ” ಎಂದು ಆರಂಭವಾಗುವ ಮೊದಲ ಎರಡು ಚರಣಗಳು ನಮ್ಮ ನದಿಗಳು, ಬೆಳೆಗಳು, ತಂಪಾದ ಗಾಳಿಗಳು ಮತ್ತು ಚಂದಿರ ಬೆಳಕಿನ ರಾತ್ರಿಗಳನ್ನು ಕೊಂಡಾಡುತ್ತವೆ. ಅವು ಧರ್ಮಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯರಿಗೂ ಸೇರಿವೆ. ಆದರೆ ನಂತರದ ಚರಣಗಳು ನಿರ್ದಿಷ್ಟ ಧಾರ್ಮಿಕ ಸಂಪ್ರದಾಯದ ದೇವತೆಗಳಿಗೆ ಸಮರ್ಪಿತವಾದ ಭಕ್ತಿಗೀತೆಗಳಾಗಿವೆ. ಎರಡನ್ನೂ ಒಂದೇ ಮಟ್ಟದಲ್ಲಿ ಬೆರೆಸಿ ಎಲ್ಲರನ್ನೂ ಭಾಗವಹಿಸಲು ಒತ್ತಾಯಿಸುವುದು ಗಣರಾಜ್ಯದ ಮೂಲಭೂತ ವಾಗ್ದಾನವನ್ನೇ ಉಲ್ಲಂಘಿಸುವಂತಾಗಿದೆ.
ಇದು ನಿಜವಾಗಿ ಯಾವುದರ ಬಗ್ಗೆ?
ವಂದೇ ಮಾತರಂ ಗೌರವಕ್ಕೆ ಅರ್ಹವಲ್ಲ ಎಂದು ಯಾರೂ ಹೇಳುತ್ತಿಲ್ಲ. ಅದರ ಮೊದಲ ಎರಡು ಚರಣಗಳು ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾಗಿ ಕಾರ್ಯನಿರ್ವಹಿಸಿದ್ದವು. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ಬೀದಿಗಳಲ್ಲಿ, ಕಾರಾಗೃಹಗಳಲ್ಲಿ ಅದನ್ನು ಹಾಡುತ್ತಾ ಸ್ವಾತಂತ್ರ್ಯದ ಘೋಷಣೆಯನ್ನಾಗಿ ಮಾಡಿಕೊಂಡಿದ್ದರು.
ನಿಜವಾದ ಪ್ರಶ್ನೆ ಬಹಳ ಸರಳವಾಗಿದೆ: ದೇಶಭಕ್ತಿಯ ಹೆಸರಿನಲ್ಲಿ ಸರ್ಕಾರವು ನಾಗರಿಕರನ್ನು ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುವಂತೆ ಬಲವಂತಪಡಿಸಬಹುದೇ?
ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಾಮಾಣಿಕ ಓದಿನಿಂದ ಸಿಗುವ ಉತ್ತರ ಸ್ಪಷ್ಟವಾಗಿದೆ — ಇಲ್ಲ.
Bijoe Emmanuel ತೀರ್ಪು ಯಾವುದೋ ಹಳೆಯ, ಧೂಳು ಹಿಡಿದ ಪೂರ್ವನಿದರ್ಶನವಲ್ಲ. ಅದು ಇಂದಿಗೂ ಜೀವಂತವಾಗಿದೆ. ಅದು ಒಂದು ಮೂಲಭೂತ ತತ್ವವನ್ನು ಪ್ರತಿಪಾದಿಸುತ್ತದೆ: ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು — ಅದು ಮೌನವಾಗಿಯೂ, ಗೌರವಪೂರ್ವಕವಾಗಿಯೂ ಇದ್ದರೂ — ದೇಶದ್ರೋಹವಲ್ಲ; ಅದು ಸ್ವಾತಂತ್ರ್ಯದ ಸಾರವೇ ಆಗಿದೆ.
ಗೃಹ ಸಚಿವಾಲಯದ ಈ ಆದೇಶವು 1937ರ ಐತಿಹಾಸಿಕ ಒಪ್ಪಂದವನ್ನು ತಲೆಕೆಳಗಾಗಿಸುತ್ತದೆ. ಸಂವಿಧಾನ ಸಭೆಯು ಉದ್ದೇಶಪೂರ್ವಕವಾಗಿ ಮಾಡಿದ ಆಯ್ಕೆಯನ್ನು ನಿರ್ಲಕ್ಷಿಸುತ್ತದೆ. 51A ವಿಧಿಯ ಅರ್ಥವನ್ನು ಕಡೆಗಣಿಸುತ್ತದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯನ್ನು ಬದಿಗಿರಿಸುತ್ತದೆ. Bijoe Emmanuel ತೀರ್ಪಿನ ತತ್ವಗಳನ್ನು ಉಲ್ಲಂಘಿಸುತ್ತದೆ. ಮತ್ತು ಇವೆಲ್ಲವನ್ನೂ ಯಾವುದೇ ಕಾನೂನು ತರುವುದಿಲ್ಲದೆ, ಯಾವುದೇ ಸಂವಿಧಾನ ತಿದ್ದುಪಡಿ ಮಾಡದೆ, ಯಾವುದೇ ನ್ಯಾಯಾಲಯದ ಅನುಮೋದನೆ ಇಲ್ಲದೆ ಕೇವಲ ಕಾರ್ಯನಿರ್ವಾಹಕ ಆದೇಶದ ಮೂಲಕ ಮಾಡುತ್ತದೆ.
ನಮ್ಮ ಸಂವಿಧಾನಾತ್ಮಕ ಆಕಾಶದಲ್ಲಿ ಯಾವುದಾದರೂ ಸ್ಥಿರ ನಕ್ಷತ್ರವಿದ್ದರೆ ಅದು ಇದೇ: ಹಾಡುವವರಿಗೂ, ತಮ್ಮ ಅಂತಃಕರಣದ ಕಾರಣಗಳಿಂದ ಗೌರವಪೂರ್ವಕ ಮೌನವನ್ನು ಆರಿಸುವವರಿಗೂ ಈ ಗಣರಾಜ್ಯವು ಎಲ್ಲ ನಾಗರಿಕರಿಗೂ ಸಮಾನವಾಗಿ ಸೇರಿದೆ.
ದೇಶಭಕ್ತಿಯ ಹೆಸರಿನಲ್ಲಿ ಆ ನಕ್ಷತ್ರದ ಬೆಳಕನ್ನು ನಂದಿಸುವುದು, ಭಾರತದ ಸ್ಥಾಪಕರು ಕಟ್ಟಲು ಹೋರಾಡಿದ ಭಾರತದ ಕಲ್ಪನೆಗೇ ದ್ರೋಹ ಮಾಡುವಂತಾಗಿದೆ.
ಸಂವಿಧಾನವು ಎಲ್ಲರೂ ಒಂದೇ ರೀತಿಯಲ್ಲಿ ಆರಾಧಿಸಬೇಕು ಎಂದು ಹೇಳುವುದಿಲ್ಲ. ಅದು ಎಲ್ಲರೂ ಸಮಾನ ನಾಗರಿಕರಾಗಿರಬೇಕು ಎಂದು ಹೇಳುತ್ತದೆ. ಈ ಎರಡೂ ಒಂದೇ ಅಲ್ಲ. ಮತ್ತು ಎಷ್ಟು ಬಲವಂತವಾಗಿ ಹೇರಿದರೂ ಅವು ಒಂದೇ ಆಗುವುದಿಲ್ಲ.
ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಕಡ್ಡಾಯಗೊಳಿಸಿರುವ ಗೃಹ ಸಚಿವಾಲಯದ ಆದೇಶವು ಸಂವಿಧಾನಾತ್ಮಕವಾಗಿ ಸಮರ್ಥಿಸಿಕೊಳ್ಳಲಾಗದ ಕ್ರಮವಾಗಿದೆ.
ಇದನ್ನೂ ನೋಡಿ: ಸರಕಾರಕ್ಕೆ ತೈಲದ ಆಟ, ಜನರಿಗೆ ಜೇಬಿನ ದರೋಡೆ! | ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
