3,300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ನಿರ್ಲಕ್ಷ್ಯ: ಪುನರುಜ್ಜೀವನಕ್ಕೆ ಕೇವಲ ₹20 ಲಕ್ಷ ವೆಚ್ಚ

ಬೆಂಗಳೂರು: ಕರ್ನಾಟಕದಲ್ಲಿ 100 ವರ್ಷಕ್ಕೂ ಹೆಚ್ಚು ಹಳೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3,300ಕ್ಕೂ ಅಧಿಕ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಇವುಗಳನ್ನು ‘ಹೆರಿಟೇಜ್ ಶಾಲೆಗಳು’ ಎಂದು ಗುರುತಿಸಿದರೂ, ಅವುಗಳ ಪುನರುಜ್ಜೀವನಕ್ಕೆ ಸರ್ಕಾರ ಕೇವಲ ₹20 ಲಕ್ಷ ಮಾತ್ರ ವೆಚ್ಚ ಮಾಡಿರುವುದು ಗಮನಾರ್ಹವಾಗಿದೆ.

2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಶಾಲೆಗಳನ್ನು ಹೆರಿಟೇಜ್ ಶಾಲೆಗಳಾಗಿ ಗುರುತಿಸಿ, ಪುನರುಜ್ಜೀವನಕ್ಕೆ ಅನುದಾನ ಮೀಸಲಿಡುವುದಾಗಿ ಘೋಷಿಸಿದ್ದರು.

ಆದರೆ, ಇದೀಗ ಈ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ವಲಸೆ ಹೋಗುತ್ತಿದ್ದಾರೆ. ಶಿಕ್ಷಕರನ್ನೂ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯಸಭೆ-ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: ಜೂನ್ 18ಕ್ಕೆ ಮತದಾನ, ಅದೇ ದಿನ ಫಲಿತಾಂಶ!

ಬೆಂಗಳೂರು ನಗರದಲ್ಲೇ 155 ಇಂತಹ ಶಾಲೆಗಳಿದ್ದು, ಬಹುತೇಕವು ಜೀರ್ಣಾವಸ್ಥೆಯಲ್ಲಿವೆ. ಕೆಲವು ಶಾಲೆಗಳು ಬಾಗಿಲು ಮುಚ್ಚಿದ್ದರೆ, ಇನ್ನೂ ಕೆಲವು ಗಮನಾರ್ಹ ದುರಸ್ಥಿಯಿಲ್ಲದೆ ಮುಚ್ಚುವ ಅಂಚಿನಲ್ಲಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡುವ ಈ ಶಾಲೆಗಳ ಭವಿಷ್ಯ ಅನಿಶ್ಚಿತವಾಗಿದೆ.

ಚಾಮರಾಜಪೇಟೆಯ ಕೆಆರ್ ರಸ್ತೆಯಲ್ಲಿರುವ ಫೋರ್ಟ್ ಹೈ ಸ್ಕೂಲ್ 110 ವರ್ಷಕ್ಕೂ ಹೆಚ್ಚು ಹಳೆಯದು. ಈ ಶಾಲೆಯನ್ನು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಕ್) ಖಾಸಗಿ ನಿಧಿಯಿಂದ ₹2 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿದೆ.

‘4 ಕೊಠಡಿಗಳಲ್ಲೇ ತರಗತಿ’

ಕಲಾಸಿಪಾಳ್ಯದಲ್ಲಿರುವ 150 ವರ್ಷ ಹಳೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಜೀರ್ಣಾವಸ್ಥೆಯಲ್ಲಿದೆ. ತರಗತಿಗಳಲ್ಲಿ ಮೇಲ್ಚಾವಣಿ ಕುಸಿಯುವ ಪರಿಸ್ಥಿತಿ ಹಾಗೂ ಗೋಡೆಗಳಲ್ಲಿ ಬಿರುಕುಗಳು ಕಾಣಿಸುತ್ತಿವೆ ಎಂದು ಶಿಕ್ಷಕಿ ಒಬ್ಬರು ತಿಳಿಸಿದ್ದಾರೆ.

“ಟಿಪ್ಪು ಸುಲ್ತಾನ್ ಕಾಲದಲ್ಲಿ ಇದು ಶಸ್ತ್ರಾಗಾರವಾಗಿತ್ತು. ನಂತರ ಬ್ರಿಟಿಷರ ಕಾಲದಲ್ಲಿ ಹುಡುಗಿಯರ ಶಾಲೆಯಾಗಿ ಮಾರ್ಪಟ್ಟಿತು. ಈಗ ಸರ್ಕಾರದ ಗಮನ ಅಗತ್ಯವಿದೆ. 10 ತರಗತಿ ಕೊಠಡಿಗಳಿದ್ದರೂ, ಕೆಟ್ಟ ಮೇಲ್ಚಾವಣಿಯಿಂದ ನಾಲ್ಕು ಕೊಠಡಿಗಳಲ್ಲೇ ಪಾಠ ನಡೆಯುತ್ತಿದೆ. ಮಳೆಯಾದರೆ ಒಂದು ಕೊಠಡಿ ನೀರಿನಿಂದ ತುಂಬುತ್ತದೆ,” ಎಂದು ಅವರು ಹೇಳಿದ್ದಾರೆ.

ಈ ಶಾಲೆಯನ್ನು ಸುಮಾರು 10 ವರ್ಷಗಳ ಹಿಂದೆ ದತ್ತು ಪಡೆದ ಹಿಂದ್ ಸಿಟಿಜನ್ಸ್ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಸಯ್ಯದ್ ಅಫ್ಸರ್ ಪಾಶಾ ಅವರು, “ನಾವು ಶಾಲೆಯನ್ನು ಬಲಪಡಿಸಿ, 250 ವಿದ್ಯಾರ್ಥಿಗಳನ್ನು ದಾಖಲಿಸಿದ್ದೇವೆ. ಮೇಲ್ಚಾವಣಿ ದುರಸ್ತಿ ಮಾಡಿ, ಬೆಂಚ್‌ಗಳನ್ನು ಒದಗಿಸಿದ್ದೇವೆ. ಬಸ್ ವ್ಯವಸ್ಥೆಯನ್ನೂ ಮಾಡಿದ್ದೇವೆ. ಆದರೆ ಕೋವಿಡ್ ನಂತರ ಶಿಕ್ಷಣ ಇಲಾಖೆಯಿಂದ ಸಹಕಾರ ಸಿಗದೆ ದತ್ತು ಅವಧಿ ವಿಸ್ತರಣೆ ಆಗಿಲ್ಲ. ಹೀಗಾಗಿ ಶಾಲೆ ಮತ್ತೆ ಹಾಳಾಗಿದೆ,” ಎಂದು ತಿಳಿಸಿದ್ದಾರೆ.

ಶಿವಾಜಿನಗರದ ಕಾಕ್‌ಬರ್ನ್ ರಸ್ತೆಯಲ್ಲಿರುವ ಪಯನಿಯರ್ಚೇರಿ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ದುಷ್ಕರ್ಮಿಗಳ ವಶಕ್ಕೆ ಹೋಗಿದ್ದು, ವಿದ್ಯಾರ್ಥಿಗಳೂ ಶಿಕ್ಷಕರೂ ಕಾಣೆಯಾಗಿದ್ದಾರೆ. ಸ್ಥಳೀಯರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಶಾಲೆ ‘ಭೂತ ಬಂಗಲೆ’ಯಂತೆ ಮಾರ್ಪಟ್ಟಿರುವುದು ನೋವುಂಟುಮಾಡುತ್ತದೆ ಎಂದು ಹೇಳಿದ್ದಾರೆ.

ತಿಮ್ಮಯ್ಯ ರಸ್ತೆಯಲ್ಲಿರುವ ಸರ್ಕಾರಿ ರಹ್ಮಾನಿಯಾ ಮಾದರಿ ಉರ್ದು ಬಾಲಕರ ಶಾಲೆ 1928ರಲ್ಲಿ ನಿರ್ಮಿಸಲ್ಪಟ್ಟ ಕಲ್ಲಿನ ಕಟ್ಟಡವಾಗಿದೆ. ಇನ್ನೆರಡು ವರ್ಷಗಳಲ್ಲಿ 100 ವರ್ಷ ಪೂರೈಸಲಿರುವ ಈ ಶಾಲೆಯಲ್ಲಿ ಎಲ್‌ಕೆಜಿ ರಿಂದ 7ನೇ ತರಗತಿವರೆಗೆ 72 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು ಆರು ಕೊಠಡಿಗಳಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ನೋಡಿ: ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ಸಿಐಟಿಯು ಪ್ರತಿಕ್ರಿಯೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *