ಬೆಂಗಳೂರು: ₹899 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಜೂನ್ 1ರಂದು ಬೆಂಗಳೂರಿನ ಕಂಪನಿಯೊಂದರ ಮೇಲೆ ದಾಳಿ ನಡೆಸಿದೆ.
ಪಿಎಮ್ಎಲ್ಎ, 2002 ನಿಯಮಗಳಡಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಎಂ/ಎಸ್ ದೀಪಕ್ ಕೇಬಲ್ಸ್ (ಇಂಡಿಯಾ) ಲಿಮಿಟೆಡ್, ಅದರ ನಿರ್ದೇಶಕ ಕೆ. ವೆಂಕಟೇಶ್ವರ ರಾವ್, ಕೊಲ್ಕತ್ತಾದ ಅಧುನಿಕ್ ಕಾರ್ಪೊರೇಷನ್ ಲಿಮಿಟೆಡ್ ನಿರ್ದೇಶಕ ಮಹೇಶ್ ಅಗರವಾಲ್ ಸೇರಿದಂತೆ ಇತರರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಇದೇ ವೇಳೆ, ₹1.27 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಲಾಗಿದ್ದು, ₹18 ಕೋಟಿ ಇರುವ ವಿವಿಧ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ಹಿನ್ನೆಲೆ ಅಪಹರಣ: ನಾಗಾ, ಕುಕಿ ನಾಗರಿಕರ ಬಿಡುಗಡೆಗೆ ಸಿಎಂಗಳು ಮನವಿ
ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರವಾಗಿ ಇಡಿ ತನಿಖೆ ಆರಂಭಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದ ಬ್ಯಾಂಕ್ಗಳ ಸಮೂಹವನ್ನು ₹899.35 ಕೋಟಿ ಮಟ್ಟಿಗೆ ವಂಚಿಸಿರುವ ಆರೋಪ ಕಂಪನಿ ಹಾಗೂ ಅದರ ನಿರ್ದೇಶಕರ ವಿರುದ್ಧ ಕೇಳಿಬಂದಿದೆ.
ಕಂಪನಿಯು ಸಾಲ ಪಡೆಯಲು ಕೃತಕ ಹಣಕಾಸು ದಾಖಲೆಗಳನ್ನು ಸಲ್ಲಿಸಿ, ಖಾತೆ ಪುಸ್ತಕಗಳನ್ನು ಮಾರ್ಪಡಿಸಿ ದೊಡ್ಡ ಪ್ರಮಾಣದ ಸಾಲ ಸೌಲಭ್ಯಗಳನ್ನು ಪಡೆದು ಹಣವನ್ನು ಬೇರೆಡೆಗೆ ವಹಿಸಿದೆ ಎಂದು ಆರೋಪಿಸಲಾಗಿದೆ.
ತನಿಖೆಯಲ್ಲಿ, ನಕಲಿ ಮಾರಾಟ-ಖರೀದಿ ವ್ಯವಹಾರಗಳು, ಸರ್ಕ್ಯುಲರ್ ಟ್ರೇಡಿಂಗ್ ಹಾಗೂ ಕೃತಕ ಕಾರ್ಪೊರೇಟ್ ಗ್ಯಾರಂಟಿಗಳನ್ನು ಬಳಸಿ ವಹಿವಾಟು ನಡೆಸಿರುವುದು ಬಹಿರಂಗವಾಗಿದೆ.
ಈ ಮೂಲಕ ಕಂಪನಿಯ ವ್ಯವಹಾರ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸಿ, ಬ್ಯಾಂಕ್ಗಳಿಂದ ಹೆಚ್ಚಿನ ಸಾಲ ಪಡೆಯಲು ಹಾಗೂ ಹಳೆಯ ಸಾಲಗಳನ್ನು ಮುಚ್ಚಲು (ಎವರ್ಗ್ರೀನಿಂಗ್) ಪ್ರಯತ್ನಿಸಲಾಗಿದೆ. ಜೊತೆಗೆ, ಅಪರಾಧದಿಂದ ಬಂದ ಹಣವನ್ನು ಸಂಬಂಧಿತ ಕಂಪನಿಗಳು ಮತ್ತು ವೈಯಕ್ತಿಕ ಖಾತೆಗಳ ಮೂಲಕ ಮರುಹಂಚಿಕೆ ಮಾಡಿ ಅದರ ಮೂಲವನ್ನು ಮರೆಮಾಡಲಾಗಿದೆ ಎಂದು ಇಡಿ ಹೇಳಿದೆ.
ಇದಲ್ಲದೆ, ಯಾವುದೇ ವ್ಯವಹಾರಿಕ ಕಾರಣವಿಲ್ಲದೆ ಕೆ. ವೆಂಕಟೇಶ್ವರ ರಾವ್ ಅವರ ನಿಯಂತ್ರಣದಲ್ಲಿದ್ದ ಸಂಬಂಧಿತ ಸಂಸ್ಥೆಗಳಿಗೆ ಭಾರೀ ಪ್ರಮಾಣದ ಹಣ ವರ್ಗಾವಣೆ ಮಾಡಲಾಗಿದೆ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ನೋಡಿ: ಬೆಂಗಳೂರಿನ ಸರಕಾರಿ ಶಾಲೆಗಳ ದುಸ್ಥಿತಿಗೆ ಯಾರು ಹೊಣೆ? – ಜಯರತ್ನ Janashakthi Media
