ಸಿಯುಇಟಿ ಪರೀಕ್ಷೆಗೆ ತಾಂತ್ರಿಕ ದೋಷ: 3,765 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗದೆ ತೊಂದರೆ

ನವದೆಹಲಿ: ದೇಶದಾದ್ಯಂತ ನಡೆದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಮೇ 30ರಂದು ತಾಂತ್ರಿಕ ದೋಷಕ್ಕೆ ಗುರಿಯಾದ ಪರಿಣಾಮ, 3,765 ವಿದ್ಯಾರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗಲಿಲ್ಲ. ಈ ದೋಷದಿಂದ ಪರೀಕ್ಷೆ ಆರಂಭವು ಎರಡು ಗಂಟೆಗಳಿಗಿಂತ ಹೆಚ್ಚು ತಡವಾಗಿ ನಡೆದಿದ್ದು, ಕೆಲವು ಕೇಂದ್ರಗಳಲ್ಲಿ ಪರೀಕ್ಷೆಯನ್ನು ರದ್ದುಪಡಿಸಲಾಯಿತು. ಸಿಯುಇಟಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಬಗ್ಗೆ ಪ್ರತಿಕ್ರಿಯಿಸಿ, ಪರಿಣಾಮಿತ ವಿದ್ಯಾರ್ಥಿಗಳಿಗೆ ಮತ್ತೊಂದು ದಿನ ಪರೀಕ್ಷೆ ಬರೆಯಲು ಒಂದೇ ಬಾರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ. ಸಿಯುಇಟಿ

ಆದಾಗ್ಯೂ, ಆರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಎನ್‌ಟಿಎ ಹೇಳಿದ್ದರೂ, ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಾವು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕನಿಷ್ಠ ₹36 ಸಾವಿರ ವೇತನಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಸಿಐಟಿಯು ಪ್ರತಿಭಟನೆ

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 64 ರಲ್ಲಿರುವ ಆದರ್ಶ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ. ದಿನದ ಕೊನೆಯಲ್ಲಿ ಎನ್‌ಟಿಎ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿರುವುದನ್ನು ಒಪ್ಪಿಕೊಂಡಿತು.

ಎನ್‌ಟಿಎ ತನ್ನ ಅಧಿಕೃತ ಪ್ರಕಟಣೆಯಲ್ಲಿ, “ಇಂದು ಬೆಳಿಗ್ಗೆ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಮೊದಲ ಪಾಳಿಯ (ಮಾರ್ನಿಂಗ್ ಶಿಫ್ಟ್) ಪರೀಕ್ಷೆ ಆರಂಭದಲ್ಲಿ ವಿಳಂಬವಾಯಿತು. ತಾಂತ್ರಿಕ ಸೇವಾ ಪೂರೈಕೆದಾರರಾದ TCS iON ಗೆ ಮೂಲ ಕಾರಣ ವಿಶ್ಲೇಷಣೆ ನಡೆಸಿ ತಕ್ಷಣ ವರದಿ ಸಲ್ಲಿಸಲು ಸೂಚಿಸಲಾಗಿದೆ,” ಎಂದು ತಿಳಿಸಿದೆ.

ದೋಷವನ್ನು ಸರಿಪಡಿಸಿದ ನಂತರ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. “ಬಯೋಮೆಟ್ರಿಕ್ ನೋಂದಣಿ ಪೂರ್ಣಗೊಳಿಸಿದ್ದ 3,765 ಅಭ್ಯರ್ಥಿಗಳು ಪರೀಕ್ಷೆ ಪುನರಾರಂಭಕ್ಕೂ ಮುನ್ನವೇ ಕೇಂದ್ರವನ್ನು ತೊರೆದಿದ್ದಾರೆ,” ಎಂದು ಹೇಳಿದೆ.

TCS ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ. ಕೃತಿವಾಸನ್ ಅವರು, “ಸ್ವಲ್ಪಕಾಲದ ತಾಂತ್ರಿಕ ದೋಷದಿಂದ ಸಿಯುಇಟಿ-ಯುಜಿ ಬೆಳಗಿನ ಪಾಳಿಯ ಪರೀಕ್ಷೆಯಲ್ಲಿ ಸುಮಾರು ಎರಡು ಗಂಟೆಗಳ ವಿಳಂಬ ಉಂಟಾಯಿತು. ನಮ್ಮ ತಾಂತ್ರಿಕ ತಂಡಗಳು ಸಮಸ್ಯೆಯನ್ನು ಗುರುತಿಸಿ ಪರಿಹರಿಸಿದ್ದು, ನಂತರ ಪರೀಕ್ಷೆ ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಿತು,” ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತರಕ್ ಶರ್ಮಾ ಎಂಬ ಬಳಕೆದಾರ, “ನೋಯ್ಡಾ ಸೆಕ್ಟರ್ 64 ರ ಆದರ್ಶ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ ಮನೆಗೆ ಹೋಗುವಂತೆ ಹೇಳಿದರು. ನಂತರ ಎರಡನೇ ಪಾಳಿಯಲ್ಲಿ ಪರೀಕ್ಷೆ ನಡೆಯಲಿದೆ ಎಂಬುದನ್ನು ತಿಳಿಸಲಿಲ್ಲ. ದೂರದಿಂದ ಬಂದ ವಿದ್ಯಾರ್ಥಿಗಳ ಸ್ಥಿತಿ ಏನು?” ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಬಳಕೆದಾರ ರಾಹುಲ್ ಧನ್ವಾರಿಯಾ, “ನನ್ನ ಸಹೋದರನ ಪರೀಕ್ಷಾ ಕೇಂದ್ರ ನೋಯ್ಡಾದಲ್ಲಿತ್ತು. 2 ರಿಂದ 2.30 ಗಂಟೆಗಳ ಕಾಲ ಕಾಯಿಸಿದ ನಂತರ ಮನೆಗೆ ಹೋಗಲು ಹೇಳಿ, ಪರೀಕ್ಷೆಯನ್ನು ಮತ್ತೊಂದು ದಿನ ನಡೆಸಲಾಗುವುದು ಎಂದು ತಿಳಿಸಿದ್ದಾರೆ,” ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಬೆಂಗಳೂರಿನ ಸರಕಾರಿ ಶಾಲೆಗಳ ದುಸ್ಥಿತಿಗೆ ಯಾರು ಹೊಣೆ? – ಜಯರತ್ನ Janashakthi Media

Donate Janashakthi Media

Leave a Reply

Your email address will not be published. Required fields are marked *