ಪೆಟ್ರೋಲ್, ಡೀಸೆಲ್ ದರಗಳನ್ನುಕೇವಲ 11 ದಿನಗಳ ಅಂತರದಲ್ಲಿ ನಾಲ್ಕು ಬಾರಿ ದರ ಹೆಚ್ಚಿಸಿ, ಲೀಟರ್ ಗೆ ಸರಿಸುಮಾರು 8 ರೂ ಹೆಚ್ಚಳವಾಗಿದೆ. ಇದು ಮತ್ತಷ್ಟು ಹೆಚ್ಚಳವಾಗುತ್ತದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ದುರ್ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ, ದೇಶದ ಜನತೆ ಸಹಕರಿಸಬೇಕು ಎಂದು ಹೇಳುವವರೂ ಇದ್ದಾರೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿದಾಗ ಆಗುವ ಲಾಭವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿತು ಮತ್ತು ಖಾಸಗಿ ತೈಲ ಕಂಪನಿಗಳು ಹೆಚ್ಚುವರಿ ಲಾಭ ಮಾಡಿಕೊಂಡವು ಮತ್ತು ಕಳೆದ 12 ವರ್ಷಗಳಲ್ಲಿ, ಮೋದಿ ಸರ್ಕಾರವು ಜನರಿಂದ ಹೆಚ್ಚುವರಿ ತೆರಿಗೆಯಾಗಿ 40 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂಬುದನ್ನು ಇವರು ಮರೆಮಾಚುತ್ತಿದ್ದಾರೆ.
– ಸಿ. ಸಿದ್ದಯ್ಯ
ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ದರಗಳನ್ನು ಮತ್ತೊಮ್ಮೆ ಹೆಚ್ಚಿಸಲಾಗಿದೆ. ಮೇ 25ರಂದು ಪೆಟ್ರೋಲ್ ಬೆಲೆಗಳು ಲೀಟರ್ಗೆ 2.61 ರೂ. ಮತ್ತು ಡೀಸೆಲ್ ದರ ಲೀಟರ್ ಗೆ 2.71 ರೂ.ಗಳಷ್ಟು ಹೆಚ್ಚಳವಾಗಿದೆ. ಇದರೊಡನೆ, 2026ರ ಮೇ 15 ಮತ್ತು ಮೇ 25ರ ನಡುವಿನ ಕೇವಲ 11 ದಿನಗಳ ಅಂತರದಲ್ಲಿ ಮೂರು ಬಾರಿ ದರ ಹೆಚ್ಚಳವಾದಂತಾಗಿ, ಲೀಟರ್ ಗೆ ಸರಿಸುಮಾರು 8 ರೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮೇ 13ರಂದು ಪೆಟ್ರೋಲ್ ಪ್ರತಿ ಲೀಟರ್ ಗೆ 102.92 ರೂ ಇದ್ದ ದರ ಮೇ 25ರಂದು 111.18 ರೂಪಾಯಿ, ಡೀಸೆಲ್ ಗೆ 97.83 ರೂಪಾಯಿಗೆ ಮುಟ್ಟಿದೆ. ಈ ಅವಧಿಯಲ್ಲಿ ಸಿಎನ್ ಜಿ ದರದಲ್ಲೂ 4 ರೂ ಹೆಚ್ಚಳವಾಗಿದೆ.
ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ಏಪ್ರಿಲ್ 1ರಂದು 60 ರೂ. ಹೆಚ್ಚಿಸಲಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಪ್ರಿಲ್ 1 ರಂದು ರೂ. 218 ರಷ್ಟು ಮತ್ತು ಮೇ 1 ರಂದು ರೂ. 993 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರೊಂದಿಗೆ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ. 3,071.50 ತಲುಪಿದೆ. ಇವುಗಳ ಬೆಲೆ ಇನ್ನಷ್ಟು ಹೆಚ್ಚಲಿದೆ ಎಂದೂ, ಇದನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ ಎಂದೂ ಹೇಳಲಾಗುತ್ತಿದೆ. ಗೃಹಬಳಕೆಯ ಸಿಲಿಂಡರ್ ದರವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಮಯಕ್ಕಾಗಿ ಕಾಯುತ್ತಿರುವಂತಿದೆ.

ಹನಿಗೂಡಿಸಿ ಹಳ್ಳ!- ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದ, ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ, ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ದುರ್ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ, ಹಾಗೂ ಇವರ ತುತ್ತೂರಿಯಾಗಿರುವ ಮುಖ್ಯ ಮಾಧ್ಯಮಗಳು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದು ಎಷ್ಟು ನಿಜ?
2014ರಲ್ಲಿ ಕಚ್ಚಾ ತೈಲ 110 ಡಾಲರ್: ಪೆಟ್ರೋಲ್ 72 ರೂ. ಇತ್ತು
2014 ರ ಮೇ ನಲ್ಲಿ ಒಂದು ಬ್ಯಾರಲ್ (ಸುಮಾರು 159 ಲೀಟರ್) ಕಚ್ಚಾ ತೈಲ (crude oil) ಬೆಲೆ 110 ಡಾಲರ್ ಇದ್ದಾಗ, ಲೀಟರ್ ಪೆಟ್ರೋಲ್ ದರ 72 ರೂಪಾಯಿ ಇತ್ತು. ಈ ರೀತಿ ಹೇಳುವಾಗ, ಅಂದು ಡಾಲರ್ ಎದುರು ರೂಪಾಯಿ ಮೌಲ್ಯ ಇಂದಿನದಕ್ಕಿಂತ ಹೆಚ್ಚಿತ್ತು, ಆ ಕಾರಣದಿಂದ ಪೆಟ್ರೋಲ್ ದರದಲ್ಲಿ ಈಗಿನಷ್ಟು ಹೆಚ್ಚಿರಲಿಲ್ಲ ಎಂದು ವಾದ ಮಾಡಬಹುದು. ಅಂದಿನ ಮತ್ತು ಇಂದಿನ ರೂಪಾಯಿ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡು ಪೆಟ್ರೋಲ್ ದರ ಎಷ್ಟಿರಬೇಕಿತ್ತು ಎಂಬುದನ್ನು ನೋಡೋಣ.
ಡೀಸೆಲ್: ಅಬಕಾರಿ ಸುಂಕ 3.46 ರಿಂದ 31.83ರ ವರೆಗೂ ಏರಿಕೆ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಹಂತಹಂತವಾಗಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಜೂನ್ 2014 ಮತ್ತು ಜನವರಿ 2016 ರ ನಡುವೆ ಜಾಗತಿಕ ಬೆಲೆಗಳು ತೀವ್ರವಾಗಿ ಕುಸಿದವು. ನಂತರ ಫೆಬ್ರವರಿ 2016 ಮತ್ತು ಅಕ್ಟೋಬರ್ 2018 ರ ನಡುವೆ ಹೆಚ್ಚಾದವು. ಆದಾಗ್ಯೂ, ಇಡೀ ಅವಧಿಯಲ್ಲಿ ಚಿಲ್ಲರೆ ಮಾರಾಟದ ಬೆಲೆಗಳು ಸ್ಥಿರವಾಗಿ ಉಳಿದಿದ್ದವು. ಕಾರಣ ಕೇಂದ್ರ ಸರ್ಕಾರದಿಂದ ಅಬಕಾರಿ ತೆರಿಗೆ ಹೆಚ್ಚಳ.
ಇದನ್ನೂ ಓದಿ: ನಗರ ಮೂಲಸೌಕರ್ಯ ಅಭಿವೃದ್ಧಿಗೆ ರಾಷ್ಟ್ರೀಯ ಸಾರ್ವಜನಿಕ ಕಾಮಗಾರಿಗಳ ಪರಿಷತ್ ಸ್ಥಾಪನೆ
2014ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಇದ್ದ ಅಬ್ಕಾರಿ ಸುಂಕ ಕ್ರಮವಾಗಿ 9.20 ರೂ. ಮತ್ತು 3.46 ರೂಪಾಯಿ. ಜೂನ್ 2014 ಮತ್ತು ಜನವರಿ 2016 ರ ನಡುವೆ ಪೆಟ್ರೋಲ್ ಮೇಲೆ 11 ಮತ್ತು ಡೀಸೆಲ್ 13 ರೂ.ಗಳಷ್ಟು ಹೆಚ್ಚಿಸಲಾಯಿತು. ಕಚ್ಚಾ ತೈಲ ದರಗಳು ಏರಿಕೆಯಾದ ಅವಧಿಯಲ್ಲಿ ಫೆಬ್ರವರಿ 2016 ಮತ್ತು ಅಕ್ಟೋಬರ್ 2018 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳನ್ನು ನಾಲ್ಕು ರೂಪಾಯಿಗಳಷ್ಟು ಕಡಿಮೆ ಮಾಡಲಾಯಿತು.
20 ಡಾಲರ್ ಗೆ ಕುಸಿದಾಗ ಅಬಕಾರಿ ಸುಂಕ ಹೆಚ್ಚಳ!
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ, ಭಾರತದಲ್ಲಿ ಮಾತ್ರ ಅದಕ್ಕೆ ಅನುಗುಣವಾಗಿ ಬೆಲೆ ಇಳಿಕೆಯಾಗುವುದಿಲ್ಲ. 2014ರ ಪ್ರಾರಂಭದಲ್ಲಿ 120 ಅಮೆರಿಕನ್ ಡಾಲರ್ ಇದ್ದ ಜಾಗತಿಕ ಕಚ್ಚಾ ತೈಲದ ದರ, 2020ರಲ್ಲಿ ಕೋವಿಡ್ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಕುಸಿದಿತ್ತು. ಜನವರಿ-ಏಪ್ರಿಲ್ 2020 ರ ಅವಧಿಯಲ್ಲಿ ಬ್ಯಾರೆಲ್ ಗೆ 20-30 ಡಾಲರ್ ಮಟ್ಟಕ್ಕೂ ಇಳಿದಿತ್ತು. ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಶೇ. 69 ರಷ್ಟು ತೀವ್ರ ಕುಸಿತವಾಗಿತ್ತು. ಕೆಲವು ಸಮಯದಲ್ಲಿ ಆದರೆ ಭಾರತದಲ್ಲಿ ಗ್ರಾಹಕರಿಗೆ ಅದರ ಸಂಪೂರ್ಣ ಲಾಭ ಸಿಗಲಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ (ಅಬಕಾರಿ ಸುಂಕ)ಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿತು. 2020ರ ಮಾರ್ಚ್–ಮೇ ಅವಧಿಯಲ್ಲಿ ಪೆಟ್ರೋಲ್ ಮೇಲೆ ಲೀಟರ್ಗೆ ರೂ. 13 ಮತ್ತು ಡೀಸೆಲ್ ಮೇಲೆ ರೂ. 16 ಎಕ್ಸೈಸ್ ಡ್ಯೂಟಿ ಹೆಚ್ಚಿಸಿತು. ಜಾಗತಿಕ ಕಚ್ಚಾ ತೈಲ ಬೆಲೆಗಳು ಕುಸಿಯುವುದರಿಂದ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು ಅದನ್ನು ಕೇಂದ್ರ ಸರ್ಕಾರವೇ ಕಸಿದುಕೊಂಡಿತು.
ದರ ಕಡಿಮೆ ಇದ್ದಾಗ ಹೆಚ್ಚು ದಾಸ್ತಾನು ಮಾಡಲಾಗಲಿಲ್ಲ
ಏಪ್ರಿಲ್ 2020 ರಲ್ಲಿ ಚೀನಾ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 20 ಡಾಲರ್ ಇದ್ದಾಗ 1.4 ಬಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲವನ್ನು ಖರೀದಿಸಿದೆ. ಭಾರತ ಕೇವಲ 40 ಮಿಲಿಯನ್ ಬ್ಯಾರೆಲ್ಗಳನ್ನು ದಾಸ್ತಾನು ಮಾಡುವ ಸಾಮಾರ್ಥ್ಯ ಹೊಂದಿದೆಯಷ್ಟೆ. ಇದರರ್ಥ ಭಾರತದ ಕಚ್ಚಾ ತೈಲ ಸಂಗ್ರಹವು ಚೀನಾದ ಮೀಸಲುಗಳಲ್ಲಿ ಕೇವಲ 2.85 ಪ್ರತಿಶತದಷ್ಟಿದೆ. ಇದು ಭಾರತದ ಆರ್ಥಿಕತೆಯನ್ನು ತುಂಬಾ ದೊಡ್ಡ ಅಪಾಯಕ್ಕೆ ಒಡ್ಡಿದೆ.
2020-21 ಅವಧಿಯಲ್ಲಿ ಇದ್ದ ಅಬಕಾರಿ ಸುಂಕ ಪೆಟ್ರೋಲ್ ಗೆ 32.98 ರೂ. ಮತ್ತು ಡೀಸೆಲ್ ಗೆ 31.83 ರೂ. ಅಂದರೆ, ಮೋದಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಇದ್ದ ಅಬಕಾರಿ ಸುಂಕಕ್ಕಿಂತ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 23.78 ರೂ. ಮತ್ತು 28.37 ರೂ ಹೆಚ್ಚು.
ಮೇ 2020 ರಲ್ಲಿ ಅಬಕಾರಿ ಸುಂಕ ಹೆಚ್ಚಳದ ಪರಿಣಾಮವಾಗಿ, ಅಬಕಾರಿ ಸುಂಕ ಸಂಗ್ರಹವು 2019-20 ರಲ್ಲಿ 2.38 ಲಕ್ಷ ಕೋಟಿ ರೂ.ಗಳಿಂದ 2020-21 ರಲ್ಲಿ 3.84 ಲಕ್ಷ ಕೋಟಿ ರೂ.ಗಳಿಗೆ ತೀವ್ರವಾಗಿ ಏರಿತು. ಅಬಕಾರಿ ಸುಂಕ ಸಂಗ್ರಹದ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ದರವು 2019-20 ರಲ್ಲಿ ಶೇ 4 ರಷ್ಟಿದ್ದು 2020-21 ರಲ್ಲಿ ಶೇ. 67ಕ್ಕೆ ಏರಿತು. ಆದಾಗ್ಯೂ, ಆ ಅವಧಿಯಲ್ಲಿ ಮಾರಾಟ ತೆರಿಗೆ ಸಂಗ್ರಹಗಳು (ಪೆಟ್ರೋಲಿಯಂ ಉತ್ಪನ್ನಗಳಿಂದ) ಹೆಚ್ಚು ಕಡಿಮೆ ಸ್ಥಿರವಾಗಿ ಉಳಿದಿವೆ. 2014 ಮತ್ತು 2026 ರ ನಡುವೆ, ಮೋದಿ ಸರ್ಕಾರವು ಜನರಿಂದ ಹೆಚ್ಚುವರಿ ತೆರಿಗೆಯಾಗಿ 40 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
2020-21 ಅವಧಿಯಲ್ಲಿ ಇದ್ದ ಅಬಕಾರಿ ಸುಂಕ ಪೆಟ್ರೋಲ್ ಗೆ 32.98 ರೂ. ಮತ್ತು ಡೀಸೆಲ್ ಗೆ 31.83 ರೂ. ಅಂದರೆ, ಮೋದಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಇದ್ದ ಅಬಕಾರಿ ಸುಂಕಕ್ಕಿಂತ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 23.78 ರೂ. ಮತ್ತು 28.37 ರೂ ಹೆಚ್ಚು. 2014 ಮತ್ತು 2026 ರ ನಡುವೆ, ಜನರಿಂದ ಹೆಚ್ಚುವರಿ ತೆರಿಗೆಯಾಗಿ ಮೋದಿ ಸರ್ಕಾರವು 40 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಮಾರ್ಚ್ ನಲ್ಲಿ 10 ರೂ ಅಬಕಾರಿ ಸುಂಕ ಕಡಿತ!
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದದ ಕಾರಣದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ, ತೈಲ ಮಾರುಕಟ್ಟೆ ಕಂಪನಿಗಳ (OMCs) ಹಣಕಾಸಿನ ಮೇಲೆ ಒತ್ತಡ ಹೆಚ್ಚಾಯಿತು. ಐದು ರಾಜ್ಯಗಳ ಚುನಾವಣೆ ಇದ್ದ ಕಾರಣಕ್ಕಾಗಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸಿದರೆ, ಜನರ ಆಕ್ರೋಶಕ್ಕೆ ಬಿಜೆಪಿ ಗುರಿಯಾಗಬೇಕಾಗುತ್ತಿತ್ತು. ಇದನ್ನು ತಪ್ಪಿಸಲು, 2026ರ ಮಾರ್ಚ್ 27ರಂದು ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ತಲಾ ಲೀಟರ್ಗೆ 10 ರೂ.ಗಳಷ್ಟು ಕಡಿತಗೊಳಿಸಿತು. ಇಷ್ಟಾದರೂ, ಇನ್ನೂ ನಷ್ಟ ಅನುಭವಿಸುತ್ತಿದ್ದ ಸಾರ್ವಜನಿಕ ವಲಯದ OMCಗಳು ಪೆಟ್ರೋಲ್ ಮತ್ತು ಡೀಸೆಲ್ನ ಚಿಲ್ಲರೆ ಬೆಲೆಗಳನ್ನು ಚುನಾವಣೆ ಮುಗಿಯುವ ವರೆಗೂ ಹೆಚ್ಚಿಸಿರಲಿಲ್ಲ. ದರ ಪರಿಷ್ಕರಣೆಯಲ್ಲಿ ಈ ಕಂಪನಿಗಳನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂಬುದು, 4 ಬಾರಿ ಬೆಲೆ ಹೆಚ್ಚಳದ ನಂತರ ಜನತೆಗೆ ಅರಿವಾಗಿರಬಹುದು.
ಲೀಟರ್ ಗೆ ಒಂದು ರೂ. ತೆರಿಗೆ: ವರ್ಷಕ್ಕೆ 18,000 ಕೋಟಿ ಆದಾಯ
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ಒಂದು ರೂ ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ಸರಿಸುಮಾರು 18,000 ಕೋಟಿ ಆದಾಯ ಬರುತ್ತದೆ. 2026ರ ಮಾರ್ಚ್ 26 ರಂದು ಘೋಷಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂ ಕಡಿತದಿಂದಾಗಿ ಕೇಂದ್ರವು 2027 ರ ಹಣಕಾಸು ವರ್ಷದಲ್ಲಿ ರೂ. 1 ಲಕ್ಷ ಕೋಟಿಗಳಿಗೂ ಹೆಚ್ಚು ತೆರಿಗೆ ಆದಾಯವನ್ನು ಕಳೆದುಕೊಳ್ಳಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಹೇಳಿದ್ದಾರೆ. ಆದರೆ, ಇದು 1.40 ಲಕ್ಷ ಕೋಟಿಯಿಂದ 1.80 ಲಕ್ಷ ಕೋಟಿ ವರೆಗೂ ಅದಾಯ ನಷ್ಟ ಉಂಟಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸುತ್ತವೆ. ಭಾರತದಲ್ಲಿ ಪ್ರತಿದಿನ ಡೀಸೆಲ್ ಸುಮಾರು 300 ರಿಂದ 350 ಮಿಲಿಯನ್ ಲೀಟರ್ ಮತ್ತು ಪೆಟ್ರೋಲ್ ಸುಮಾರು 150 ರಿಂದ 250 ಮಿಲಿಯನ್ ಲೀಟರ್ ಮಾರಾಟವಾಗುತ್ತದೆ. ಪ್ರತಿ ಲೀಟರ್ಗೆ 10 ರೂ. ಅಬಕಾರಿ ಕಡಿತಗೊಳಿಸಿದರೆ, ಕೇಂದ್ರಕ್ಕೆ ದಿನಕ್ಕೆ ಸುಮಾರು 450 ಕೋಟಿಯಿಂದ 500 ಕೋಟಿ ರೂ.ಗಳ ಆದಾಯ ಕಡಿಮೆಯಾಗುತ್ತದೆ.
2024–25ರಲ್ಲಿ ಕೇಂದ್ರ ಖಜಾನೆಗೆ ಬಂದ ಹಣ 4,15,244 ಕೋಟಿ ರೂ.
2024–25ರ ಒಂದು ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ವಲಯದಿಂದ ಕೇಂದ್ರ ಖಜಾನೆಗೆ ಬಂದ ಹಣ 4,15,244 ಕೋಟಿ ರೂ.ಗಳು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿ ಮತ್ತು ಕೇಂದ್ರ ಆದಾಯದ ಸಂಗ್ರಹದ ಕುರಿತು ಡಿಸೆಂಬರ್ 15, 2025 ರಂದು ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ಸರ್ಕಾರ ಇದನ್ನು ಹೇಳಿದೆ. ಈ ಮೊತ್ತಗಳಲ್ಲಿ ಅಬಕಾರಿ ಸುಂಕ, ಕಸ್ಟಮ್ಸ್ ಸುಂಕ, ಸೆಸ್, ಜಿಎಸ್ಟಿ ಘಟಕಗಳು, ರಾಯಧನ, ಕಾರ್ಪೊರೇಟ್ ತೆರಿಗೆಗಳು, ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ ಲಾಭಾಂಶ ಮತ್ತು ಪರಿಶೋಧನೆಯಿಂದ ಪೆಟ್ರೋಲಿಯಂ ಲಾಭ ಸೇರಿವೆ.
ಅಂಬಾನಿ ಒಡೆತನದ ರಿಲಯನ್ಸ್, ರಷ್ಯಾ ಮೂಲದ ನಯಾರ ದಂತಹ ಖಾಸಗಿ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಆಮದು ಮಾಡಿಕೊಂಡರೂ, ಅದರ ಲಾಭವನ್ನು ಭಾರತದ ಗ್ರಾಹಕರಿಗೆ ವರ್ಗಾವಣೆ ಮಾಡಲಿಲ್ಲ. ಈ ರೀತಿ ಆಂದು ಮಾಡಿಕೊಂಡ ಕಚ್ಚಾ ತೈಲವನ್ನು ಸಂಸ್ಕರಿಸಿ ಯೂರೋಪ್ ದೇಶಗಳಿಗೆ ರಪ್ತು ಮಾಡಿ ಲಾಭ ದೋಚಿಕೊಂಡಿವೆ. ಇದೂ ಅಲ್ಲದೆ, ಭಾರತಕ್ಕೆ ಅಗತ್ಯವಾದ ತೈಲದ ಶೇಕಡಾ 15ರಷ್ಟು ತೈಲವನ್ನು ಭಾರತದಲ್ಲೇ ಹೊರತೆಯಲಾಗುತ್ತಿದೆ. ಇದನ್ನೂ ಅಂತರರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಿ ಗ್ರಾಹಕರನ್ನು ವಂಚಿಸುತ್ತಿವೆ. ಅಂದರೆ, ಈ ಖಾಸಗಿ ತೈಲಕಂಪನಿಗಳು ಗ್ರಾಹಕರನ್ನು ಸುಲಿಗೆ ಮಾಡಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿವೆ. ಸಾರ್ವಜನಿಕ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇವುಗಳಿಗೆ ಈ ರೀತಿ ಬಂದ ಲಾಭದ ಪಾಲು ಕೇಂದ್ರ ಸರ್ಕಾರಕ್ಕೆ ಹೋಗಿದೆ.
‘ಆಯಿಲ್ ಪೂಲ್ ಅಕೌಂಟ್’ ರದ್ದುಗೊಳಿಸಿದ ವಾಜಪೇಯಿ ಸರ್ಕಾರ
ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲ (LPG) ದರಗಳನ್ನು ಸ್ಥಿರವಾಗಿಡಲು ಮತ್ತು ಸಬ್ಸಿಡಿ ವೆಚ್ಚವನ್ನು ಭರಿಸಲು ಕೇಂದ್ರ ಸರ್ಕಾರವು 1970ರ ದಶಕದಲ್ಲಿ ‘ಆಯಿಲ್ ಪೂಲ್ ಅಕೌಂಟ್’ (Oil Pool Account) ಎಂಬ ನಿಧಿಯನ್ನು ಸ್ಥಾಪಿಸಿತ್ತು. 1990ರಲ್ಲಿ ಕೊಲ್ಲಿ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿದವು. ತೈಲ ಕಂಪನಿಗಳಿಗೆ ನಷ್ಟವಾದರೂ, ಜನಸಾಮಾನ್ಯರಿಗೆ ಹೊರೆಯಾಗಬಾರದೆಂದು ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲಿಲ್ಲ. ಇದರಿಂದಾಗಿ ಈ ನಿಧಿಯಲ್ಲಿ ಭಾರಿ ಪ್ರಮಾಣದ ಕೊರತೆ (Oil Pool Deficit) ಉಂಟಾಯಿತು. ಕೊರತೆಯನ್ನು ನೀಗಿಸಲು ಮತ್ತು ತೈಲ ಕಂಪನಿಗಳಿಗೆ ಹಣ ಪಾವತಿಸಲು ವಿಶೇಷ ಖಜಾನೆ ಬಿಡುಗಡೆ ಮಾಡಿ ಬಂಡವಾಳವನ್ನು ಹೊಂದಿಸಬೇಕಾಯಿತು ಎಂದು ಅಂದಿನ ನರಸಿಂಹರಾವ್ ಸರ್ಕಾರ ಹೇಳುತ್ತಿತ್ತಾದರೂ, ಸರ್ಕಾರವು, ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯಿಂದ ಬರುವ ಆದಾಯದ ಬಗ್ಗೆ ಹೇಳುತ್ತಿಲ್ಲ ಮತ್ತು ತೆರಿಗೆ ಕಡಿತ ಮಾಡಲು ಮುಂದಾಗುತ್ತಿಲ್ಲ ಎಂಬ ಟೀಕೆಗಳನ್ನು ಎಡ ಪಕ್ಷಗಳು ಮಾಡಿದವು.
ತೈಲ ಬೆಲೆ ನಿಯಂತ್ರಣವನ್ನು (Administered Pricing Mechanism) ತೆಗೆದುಹಾಕುವ ನಿರ್ಧಾರದ ಭಾಗವಾಗಿ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರವು 2002ರ ಏಪ್ರಿಲ್ 1 ರಿಂದ ಈ ತೈಲ ನಿಧಿ ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಗೊಳಿಸಿತು. ಇದನ್ನು ಎಡಪಕ್ಷಗಳು ಕಟುವಾಗಿ ಟೀಕಿಸಿದವು ಮತ್ತು ಇದರಿಂದಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದವು. ‘ಆಯಿಲ್ ಪೂಲ್ ಅಕೌಂಟ್’ ಇಂದಿಗೂ ಇದ್ದಿದ್ದರೆ, ಇಂತಹ ಸನ್ನಿವೇಶಗಳಲ್ಲಿ ಜನರ ಮೇಲೆ ಹೊರೆ ಹೊರಿಸುವ ಸ್ಥಿತಿ ಬರುತ್ತಿರಲಿಲ್ಲ.
ತೈಲ ಬೆಲೆ ನಿಯಂತ್ರಣ ತೆಗೆದುಹಾಕಿದರು
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಯ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿ, ಬೆಲೆ ನಿಗದಿಯನ್ನು ತೈಲ ಕಂಪನಿಗಳ ಇಚ್ಚೆಗೆ ಬಿಟ್ಟುಕೊಟ್ಟಿದೆ. ಈ ರೀತಿ ನಿಯಂತ್ರಣ ಮುಕ್ತ ಮಾಡಿದಾಗ, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಾರುಕಟ್ಟೆಯಿಂದ ನಿರ್ಧರಿಸಲ್ಪಡುತ್ತವೆ ಮತ್ತು ಅಂತರರಾಷ್ಟ್ರೀಯ ಉತ್ಪನ್ನ ಬೆಲೆಗಳಿಗೆ ಸಂಬಂಧಿಸಿವೆ” ಎಂದು ಸರ್ಕಾರ ಹೇಳಿತ್ತು. ಆದರೂ, ದೇಶದಲ್ಲಿ ಯಾವುದಾದರು ಚುನಾವಣೆಗಳು ನಡೆದಾಗ ತಿಂಗಳು ಕಾಲ ಬೆಲೆ ಹೆಚ್ಚಳವನ್ನು ತಡೆ ಹಿಡಿಯುತ್ತವೆ ಎಂಬುದಂತೂ ಸತ್ಯ. ಈ ರೀತಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಪಡಿಸುವ ವಿಷಯದಲ್ಲಿ, ಆಳುವ ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ, ತೈಲ ಕಂಪನಿಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತಿರುವುದನ್ನು ನೋಡುತ್ತಿದ್ದೇವೆ.
ತೈಲ ಬೆಲೆ ನಿಯಂತ್ರಣವನ್ನು ತೆಗೆದುಹಾಕುವ ನಿರ್ಧಾರದ ಭಾಗವಾಗಿ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರವು 2002ರ ಏಪ್ರಿಲ್ 1 ರಿಂದ ಈ ತೈಲ ನಿಧಿ ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಗೊಳಿಸಿತು. ಇದನ್ನು ಎಡಪಕ್ಷಗಳು ಕಟುವಾಗಿ ಟೀಕಿಸಿದವು ಮತ್ತು ಇದರಿಂದಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದವು. ‘ಆಯಿಲ್ ಪೂಲ್ ಅಕೌಂಟ್’ ಇಂದಿಗೂ ಇದ್ದಿದ್ದರೆ, ಇಂತಹ ಸನ್ನಿವೇಶಗಳಲ್ಲಿ ಜನರ ಮೇಲೆ ಹೊರೆ ಹೊರಿಸುವ ಸ್ಥಿತಿ ಬರುತ್ತಿರಲಿಲ್ಲ.
ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು
ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಿಂದಿನ ಕಣ್ಣೋಟವನ್ನು ನಮ್ಮನ್ನು ಆಳುವವರು ಕೈಬಿಟ್ಟ ನೀತಿ, ಇದರಿಂದಾಗಿ ದೇಶೀ ತೈಲ ಉತ್ಪಾದನೆಯಲ್ಲಿ ತೀವ್ರ ಇಳಿಕೆಯೂ ಇಂದಿನ ಸ್ಥಿತಿಗೆ ಕಾರಣ.1984-85ರಲ್ಲಿ ದೇಶ ತನ್ನ ಅಗತ್ಯದ ಶೇ. 70ರಷ್ಟನ್ನು ದೇಶೀ ಉತ್ಪಾದನೆಯಿಂದಲೇ ಪೂರೈಸಿಕೊಳ್ಳುತ್ತಿತ್ತು. 90ರ ದಶಕದಲ್ಲಿ ದೇಶದ ತೈಲ ಬೇಡಿಕೆಯಲ್ಲಿ ಶೇ. 50ರಷ್ಟನ್ನು ಆಮದಿನಿಂದ ಪೂರೈಸಲಾಗುತ್ತಿತ್ತು. ಭಾರತದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯು 2011-12 ರಿಂದ ನಿರಂತರವಾಗಿ ಕುಸಿಯುತ್ತಿದೆ. 2010-2014 ರ ಅವಧಿಯಲ್ಲಿ ಭಾರತದ ಶೇ. 78ರಷ್ಟಿದ್ದ ಆಮದು ಅವಲಂಬನೆಯು, ಈಗ ಶೇ. 85ಕ್ಕೆ ಏರಿದೆ. ಹೀಗಾಗಲು ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು ಒಂದು ಮುಖ್ಯ ಕಾರಣ.
ಕೇಂದ್ರ ಸರ್ಕಾರ ಏನು ಮಾಡಬಹುದು?
ಇಂದಿನ ಸನ್ನಿವೇಶದಲ್ಲಿ ಬೆಲೆ ಏರಿಕೆಯ ಹೊರೆ ಜನಸಾಮಾನ್ಯರ ಮೇಲೆ ಬೀಳದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಇದುವರೆಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸಿ ಗಳಿಸಿದ ಹಣದಲ್ಲಿ ಒಂದಷ್ಟು ಪಾಲನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಬೇಕು. ತೈಲ ಕಂಪನಿಗಳಿಗೆ ನಷ್ಟವಾಗದಂತೆ ಹಣಕಾಸಿನ ನೆರವು ನೀಡಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಂಪೂರ್ಣ ತೆರಿಗೆ ರದ್ದುಗೊಳಿಸಬೇಕು. ಖಾಸಗಿ ತೈಲ ಕಂಪನಿಗಳ ಲಾಭದ ದುರಾಸೆಗೆ ಕಡಿವಾಣ ಹಾಕಬೇಕು.
ಇದನ್ನೂ ನೋಡಿ: ಹಾಸ್ಟೆಲ್ ನೌಕರರ ಕಣ್ಣೀರ ಕಥೆ | ಬೆಂಗಳೂರಿನಲ್ಲಿ ಸಾವಿರಾರು ಜನರ ಪ್ರತಿಭಟನೆ Janashakthi Media
ಇದು ತಕ್ಷಣದ ಪರಿಹಾರದ ಕ್ರಮಗಳಾಗುತ್ತವಷ್ಟೆ. ಮುಂದಿನ ದಿನಗಳಲ್ಲಿ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಎದುರಾಗುವ ಈ ರೀತಿಯ ಸನ್ನಿವೇಶಗಳನ್ನು ಎದುರಿಸಲು ಕ್ರಮಕ್ಕೆ ಮುಂದಾಗಬೇಕು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಯ ಮೇಲೆ ಸರ್ಕಾರದ ನಿಯಂತ್ರಣವನ್ನು ಮರುಪಡೆಯಬೇಕು. ದೇಶೀಯ ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹಣ ತೊಡಗಿಸಬೇಕು. ಕಚ್ಚಾ ತೈಲ ಮೀಸಲಿಗಾಗಿ ಭಾರತದ ಕಚ್ಚಾ ತೈಲ ಸಂಗ್ರಹವು ಸಾಮರ್ಥ್ಯವನು ಹೆಚ್ಚಿಸಬೇಕು. ಇದನ್ನು ಸರಿಪಡಿಸದಿದ್ದರೆ ಈ ಸಮಸ್ಯೆ ದೇಶವನ್ನು ಬಾಧಿಸುತ್ತಲೇ ಇರುತ್ತದೆ.
ಇದಲ್ಲದೆ, ತನ್ನ ವಿದೇಶಾಂಗ ನೀತಿಯ ಪರಾಮರ್ಶೆ ನಡೆಸಿ, ರಷ್ಯಾ, ಇರಾನ್ ಅಥವ ಬೇರೆ ಯಾವುದೇ ದೇಶದಿಂದ ತೈಲ ಆಮದಿಗೆ ಯುಎಸ್ ಅನುಮತಿಗೆ ಕಾಯಬೇಕಾಗುವ ಪರಿಸ್ತಿತಿಯನ್ನು ನಿವಾರಿಸಿಕೊಳ್ಳಬೇಕು.
ರಾಜ್ಯ ಸರ್ಕಾರದ ತೆರಿಗೆಯಲ್ಲೂ ಕಡಿತ ಮಾಡಬೇಕು
ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ಶೇ. 29.84 ಮತ್ತು ಡೀಸೆಲ್ ಮೇಲೆ ಶೇ. 21.17 ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ವಿಧಿಸುತ್ತದೆ. ರಾಜ್ಯ ಸರ್ಕಾರ ವ್ಯಾಟ್ ಅನ್ನು ಜೂನ್ 2024 ರಲ್ಲಿ ಪರಿಷ್ಕರಿಸಿ ಶೇ. 25.92 ರಿಂದ ಪ್ರಸ್ತುತ ಶೇ. 29.84 ಕ್ಕೆ ಹೆಚ್ಚಿಸಿತು. ವ್ಯಾಟ್ ಅನ್ನು ಮೂಲ ಇಂಧನ ಬೆಲೆಯ ಶೇಕಡಾವಾರು ಪ್ರಮಾಣದಲ್ಲಿ ವಿಧಿಸಲಾಗುತ್ತದೆ, ಇದರಲ್ಲಿ ಡೀಲರ್ ಕಮೀಷನ್ ಮತ್ತು ಕೇಂದ್ರ ಅಬಕಾರಿ ಸುಂಕವೂ ಸೇರಿದೆ. ಇಂಧನ ಬೆಲೆಗಳು ಹೆಚ್ಚಾದಂತೆ, ರಾಜ್ಯದ ಆದಾಯವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಆದಾಗ್ಯೂ, ಕರ್ನಾಟಕದಲ್ಲಿ ಚಿಲ್ಲರೆ ಬೆಲೆಗಳು ಹಲವಾರು ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ರಾಜ್ಯ ಸರ್ಕಾರಗಳೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡುವ ಮೂಲಕ ಜನತೆಗೆ ಅಲ್ಪಮಟ್ಟಿಗಾದರೂ ಅನುಕೂಲ ಮಾಡಿಕೊಡಲು ಮುಂದಾಗಬೇಕು.
ಇರಾನ್ ಮತ್ತು ರಷ್ಯಾದಿಂದ ಅಗ್ಗದ ತೈಲ “ ಈ ಕಡೆಗೆ ಬನ್ನಿ!”

ವ್ಯಂಗ್ಯಚಿತ್ರ: ಮಂಜುಲ್ @ಫೇಸ್ಬುಕ್
