₹24 ಕೋಟಿ ಸೇತುವೆಯಲ್ಲಿ ಬಿರುಕು: ಗುಜರಾತ್ ಬಿಜೆಪಿ ಒಳಗೆ ಅಸಮಾಧಾನ, ಭ್ರಷ್ಟಾಚಾರ ಆರೋಪ

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ₹24 ಕೋಟಿ ವೆಚ್ಚದ ಸೇತುವೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಆಡಳಿತಾರೂಢ ಬಿಜೆಪಿಗೆ ರಾಜಕೀಯ ಮುಜುಗರ ಉಂಟುಮಾಡಿದೆ. ಇದೇ ಪಕ್ಷದ ಶಾಸಕನೊಬ್ಬ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ತನಿಖೆ ನಡೆಸುವಂತೆ ಆಗ್ರಹಿಸಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ಸಾವ್ಲಿ ಕ್ಷೇತ್ರದ ಶಾಸಕ ಕೇತನ್ ಇನಾಮ್ದಾರ್ ಅವರು ಮುಖ್ಯಮಂತ್ರಿಗೆ ಬರೆದ ಕಠಿಣ ಪತ್ರದಲ್ಲಿ, ಸಾವ್ಲಿ ತಾಲ್ಲೂಕಿನ ಪಾರ್ಥಂಪುರ ಗ್ರಾಮ ಸಮೀಪದ ಮೆಸ್ರಿ ನದಿಯ ಮೇಲಿನ ಸೇತುವೆ ಕಾಮಗಾರಿ ಗುಣಮಟ್ಟದ ಕೊರತೆಯಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.

ಈ ಸೇತುವೆಯನ್ನು ಸಂಪರ್ಕ ರಸ್ತೆಗಳೊಂದಿಗೆ ಇತ್ತೀಚೆಗೆ ಉದ್ಘಾಟಿಸಲಾಗಿತ್ತು. ಆದರೆ ಕೆಲವು ದಿನಗಳಲ್ಲೇ ರಸ್ತೆ ಮೇಲ್ಮೈಯಲ್ಲಿ ಸ್ಪಷ್ಟ ಬಿರುಕುಗಳು ಕಾಣಿಸಿಕೊಂಡಿದ್ದು, ಆರ್‌ಸಿಸಿ ರಚನೆಯ ಭಾಗಗಳು ಕಳಚಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಲ್ಲಿದ್ದಲು ಹಗರಣ ಪ್ರಕರಣ | ಎಸ್‌ಕೆಎಸ್‌ ಇಸ್ಪಾತ್‌, ಮಾಜಿ ಕೇಂದ್ರ ಸಚಿವರ ಸಹೋದರ ಸೇರಿ ನಾಲ್ವರು ಖುಲಾಸೆ

ಕಾರಡ್ ಹಾಗೂ ಮೆಸ್ರಿ ನದಿಗಳ ಮೇಲಿನ ಈ ಸೇತುವೆಯಲ್ಲಿ ಕಾರ್ಯಾರಂಭವಾದ ಕೆಲವೇ ದಿನಗಳಲ್ಲಿ ದೋಷಗಳು ಕಾಣಿಸಿಕೊಂಡಿರುವುದನ್ನು ಇನಾಮ್ದಾರ್ “ತೀವ್ರ ಗಂಭೀರ” ವಿಷಯವೆಂದು ಹೇಳಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಇಮೇಜ್ ಹಾನಿಯಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

“ಸಾರ್ವಜನಿಕ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಸರ್ಕಾರ ಬದ್ಧವಾಗಿರಬೇಕು. ಆದರೆ ಗುಣಮಟ್ಟದ ಕೊರತೆಯ ಕೆಲಸಗಳು ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತರುತ್ತವೆ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿ, ತಕ್ಷಣವೇ ವಿಜಿಲೆನ್ಸ್ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಘಟನೆ ಗುಜರಾತ್ ಬಿಜೆಪಿಯ ಒಳಗಿನ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಆಯ್ಕೆಯಾದ ಪ್ರತಿನಿಧಿಗಳು ಭ್ರಷ್ಟಾಚಾರ, ಆಡಳಿತ ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿಳಂಬ ಕುರಿತು ಬಹಿರಂಗವಾಗಿ ಆರೋಪ ಮಾಡುತ್ತಿರುವುದು ಗಮನಾರ್ಹವಾಗಿದೆ.

ಕಳೆದ ಐದು ತಿಂಗಳಲ್ಲಿ ಇನಾಮ್ದಾರ್ ಅವರು ಮುಖ್ಯಮಂತ್ರಿಗೆ ನೇರವಾಗಿ ಪತ್ರ ಬರೆದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2026ರ ಜನವರಿ 8ರಂದು ಸಾರ್ವಜನಿಕ ಕಾಮಗಾರಿಗಳ ನಿರ್ಲಕ್ಷ್ಯ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರದಲ್ಲಿ ವಿಫಲತೆಯನ್ನು ಆರೋಪಿಸಿದ್ದರು.

ಅಧಿಕಾರಿಗಳ ಕಾರ್ಯಪದ್ಧತಿಯನ್ನು ವಿರೋಧಿಸುವ ಧೋರಣೆಗೆ ಹೆಸರಾದ ಇನಾಮ್ದಾರ್, ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮಗಳು ಹಾಗೂ ವಿಳಂಬಗಳ ಬಗ್ಗೆ ಆಗಾಗ್ಗೆ ಆರೋಪ ಮಾಡುತ್ತಲೇ ಇದ್ದಾರೆ.

ಈ ಪ್ರಕರಣ ವಿರೋಧ ಪಕ್ಷಗಳಿಗೆ ಹೊಸ ಆಯುಧವಾಗಿದ್ದು, ಗುಜರಾತ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ಕೊರತೆ ಇದೆ ಎಂಬ ಆರೋಪಗಳನ್ನು ಮತ್ತೆ ಮುಂದಿಟ್ಟಿವೆ.

ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media

Donate Janashakthi Media

Leave a Reply

Your email address will not be published. Required fields are marked *