ಮೇ 30 – ಕನಿಷ್ಠ ಕೂಲಿ – ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಚಲೋ

ಮಂಗಳೂರು: ವೈಜ್ಞಾನಿಕವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿಗಾಗಿ, ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾಗಿ ತಿದ್ದುಪಡಿಗಳನ್ನು ತಂದು ನಿಯಮಗಳನ್ನು ರೂಪಿಸಬೇಕೆಂದು ಹಾಗೂ ಖಾಯಂಯೇತರ ಕಾರ್ಮಿಕರ ಖಾಯಂಗೆ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಮೇ – 30ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಬೇಕೆಂಬ CITU ಕರೆಯ ಮೇರೆಗೆ ಅಂದು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು CITU ದ.ಕ.ಜಿಲ್ಲಾ ಸಮಿತಿಯು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ. ಕೂಲಿ

ಕಳೆದ ಹಲವಾರು ವರ್ಷಗಳ ನಿರಂತರ ಹೋರಾಟಗಳ ಫಲವಾಗಿ ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಮಾಡದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಸ್ವಾಗತಿಸುತ್ತಲೇ ಈ ಕೆಳಕಂಡ ಹಕ್ಕೊತ್ತಾಯಗಳಿಗೆ ಸಿಐಟಿಯು ಒತ್ತಾಯಿಸಲಿದೆ. ಕೂಲಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ರೆಪ್ತಕೋಸ್ ಬ್ರೆಟ್ ಆಂಡ್ ಕಂ’ (Reptakos Brett) ಪ್ರಕರಣದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಆಧರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕೆಂಬ ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು.ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಎಲ್ಲಾ ಕಾರ್ಮಿಕರಿಗೆ ಸರಾಸರಿ ₹36,000 ಕನಿಷ್ಟ ವೇತನ ನಿಗದಿಪಡಿಸಬೇಕು.

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಇಲ್ಲ: ಊಹಾಪೋಹಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್

ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ 2025 ಏಪ್ರಿಲ್ 11 ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರಬೇಕು. ಒಂದು ವರ್ಷದ ಅರಿಯರ್ಸ್ ಕಾರ್ಮಿಕರಿಗೆ ನೀಡಬೇಕು.ಈ ಅಧಿಸೂಚನೆಯಿಂದ ಹೊರಗಿಟ್ಟಿರುವ ಗಾರ್ಮೆಂಟ್ಸ್ , ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ, ಇತರ ವಿಭಾಗದ ಕಾರ್ಮಿಕರಿಗೂ ಪ್ರಸ್ತುತ ಮೇ 22 ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನೆ ವಿಸ್ತರಿಸಿ ಕೂಡಲೇ ಅಧಿಸೂಚನೆ ಹೊರಡಿಸಬೇಕು.

ಸ್ಕೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು.ಪ್ರಸ್ತುತ ಪ್ರಕಟಿತ ಕನಿಷ್ಠ ವೇತನದಿಂದ ಕಾರ್ಮಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗುವುದರಿಂದ ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು CITU ಒತ್ತಾಯಿಸುತ್ತದೆ.

ಮೇ – 30ರಂದು ಬೆಳಿಗ್ಗೆ 10 ಗಂಟೆಗೆ ನಾಗುರಿ ಜಂಕ್ಷನ್ ನಿಂದ ಕಾರ್ಮಿಕರ ಮೆರವಣಿಗೆ ಹೊರಟು ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಯಲಿದೆ.ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಲಾಗುವುದು.ಆದ್ದರಿಂದ ಜಿಲ್ಲೆಯ ವಿವಿಧ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರತಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಇದನ್ನೂ ನೋಡಿ: IPL 2026 | ಪ್ಲೇಆಫ್‌ ಪೈಪೋಟಿ: ನಾಲ್ಕು ತಂಡಗಳ ಪ್ಲಸ್‌, ಮೈನಸ್‌ ಮತ್ತು ಕಪ್‌ ಲೆಕ್ಕಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *