ಮಂಗಳೂರು: ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಕ್ಷನ್‌ನಲ್ಲಿ ಕಳೆದ ಹಲವು ತಿಂಗಳಿಂದ ಕೊಳಚೆ ನೀರು ಶೇಖರಣೆಯಾಗಿದ್ದು, ಇದರಿಂದ ಉಂಟಾಗುತ್ತಿರುವ ದುರ್ವಾಸನೆ ಮತ್ತು ಆರೋಗ್ಯ ಸಮಸ್ಯೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಉಳ್ಳಾಲ ವಲಯ ಸಮಿತಿ ಒತ್ತಾಯಿಸಿದೆ. ದೇರಳಕಟ್ಟೆ
ಈ ಸಂಬಂಧ ಸೋಮವಾರ ಉಳ್ಳಾಲ ತಾಲೂಕು ತಹಶೀಲ್ದಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಬೆಳ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಿಗೆ ಪಕ್ಷದ ನಿಯೋಗ ಮನವಿ ಸಲ್ಲಿಸಿತು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮುಂಭಾಗದ ರಸ್ತೆ ಬೆಳ್ಮ ಗ್ರಾಮ ಪಂಚಾಯತ್ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಧ್ಯೆ ಹಾದು ಹೋಗುತ್ತದೆ. ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಲಾಡ್ಜ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಹೊರಬರುವ ಡ್ರೈನೇಜ್ ನೀರು ಮುಖ್ಯರಸ್ತೆಯ ಅಡಿಭಾಗದಲ್ಲಿ ಹರಿದು ಆಸ್ಪತ್ರೆ ಇರುವ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದರೆ ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ಕೊಳಚೆ ನೀರಿನ ಹರಿವು ತಡೆಹಿಡಿದ ಪರಿಣಾಮ ಅಲ್ಲಿ ನೀರು ನಿಂತುಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದ ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ : ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಟಾಟಾ ಪ್ರವೇಶಕ್ಕೆ ಸಿಪಿಐ(ಎಂ) ವಿರೋಧ

ಅದೇ ಸ್ಥಳದ ಸಮೀಪ ಆಟೋರಿಕ್ಷಾ ನಿಲ್ದಾಣವಿದ್ದು, 50ಕ್ಕೂ ಹೆಚ್ಚು ಚಾಲಕರು ದುರ್ವಾಸನೆಯ ಮಧ್ಯೆಯೇ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಸಮಸ್ಯೆ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಿಪಿಐ(ಎಂ) ಆರೋಪಿಸಿದೆ.
ಆದ್ದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಸಮಸ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಆಗ್ರಹಿಸಿದೆ.
ಸಿಪಿಐ(ಎಂ) ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಪ್ಪ ಸಾಲ್ಯಾನ್, ಜನಾರ್ಧನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಸದಾಶಿವ ಕುತ್ತಾರ್, ಡಿವೈಎಫ್‌ಐ ಜಿಲ್ಲಾ ನಾಯಕ ರಜಾಕ್ ಮುಡಿಪು ಹಾಗೂ ಸಿಐಟಿಯು ನಾಯಕ ಜಗದೀಶ್ ಸೇರಿದಂತೆ ಹಲವು ಮುಖಂಡರು ನಿಯೋಗದಲ್ಲಿ ಭಾಗವಹಿಸಿದ್ದರು.
