ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಅರ್ಜಿ ಸಲ್ಲಿಸಿರುವುದನ್ನು ಸಿಪಿಐ(ಎಂ) ತೀವ್ರವಾಗಿ ವಿರೋಧಿಸಿದೆ. ಇದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಪ್ರಯತ್ನವಾಗಿದ್ದು, ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ವಿದ್ಯುತ್
ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ ಹಾಗೂ ಹೆಸ್ಕಾಂ ವ್ಯಾಪ್ತಿಯ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 14 ಮತ್ತು 15ರ ಅಡಿಯಲ್ಲಿ ಕೆಇಆರ್ಸಿಗೆ ಅರ್ಜಿ ಸಲ್ಲಿಸಿದೆ. ಇದರಿಂದ ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಬಹುದು ಎಂದು ಸಿಪಿಐ(ಎಂ) ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ತರಲು ಮುಂದಾಗಿರುವ ‘ವಿದ್ಯುತ್ ತಿದ್ದುಪಡಿ ಮಸೂದೆ-2025’ ಮೂಲಕ ವಿದ್ಯುತ್ ಉತ್ಪಾದನೆ, ಸಾಗಾಣಿಕೆ ಹಾಗೂ ವಿತರಣಾ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪಕ್ಷ ಆರೋಪಿಸಿದೆ. ಒಂದೇ ವಿತರಣಾ ಪ್ರದೇಶದಲ್ಲಿ ಹಲವು ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದರಿಂದ ವಿದ್ಯುತ್ ದರ ಏರಿಕೆ, ಕ್ರಾಸ್ ಸಬ್ಸಿಡಿ ರದ್ದು ಸೇರಿದಂತೆ ಸಾರ್ವಜನಿಕರಿಗೆ ಹಾನಿಕಾರಕ ಪರಿಣಾಮಗಳು ಉಂಟಾಗಲಿವೆ ಎಂದು ಹೇಳಿದೆ. ವಿದ್ಯುತ್
ಇದನ್ನೂ ಓದಿ : ತೈಲ & ಅನಿಲ ಬೆಲೆ ಹೆಚ್ಚಳ: ಡಿವೈಎಫ್ಐ ಖಂಡನೆ; ದರ ಇಳಿಸಲು ಒತ್ತಾಯ
ಸಾರ್ವಜನಿಕ ವಿದ್ಯುತ್ ಕ್ಷೇತ್ರವು ಜನಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಒಳಗೊಂಡಿದೆ. ಆದರೆ ಖಾಸಗಿ ಕಂಪನಿಗಳು ಲಾಭದ ದೃಷ್ಟಿಯಿಂದ ಕಾರ್ಯನಿರ್ವಹಿಸುವುದರಿಂದ ಗೃಹ ಬಳಕೆದಾರರು, ಸಣ್ಣ ರೈತರು, ಪಂಪ್‌ಸೆಟ್ ಬಳಕೆದಾರರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಹೊರೆ ಹೆಚ್ಚಾಗಲಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.
ಖಾಸಗೀಕರಣದಿಂದ ಉದ್ಯೋಗಗಳ ಮೇಲೂ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಪಕ್ಷ ಎಚ್ಚರಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕೆಇಆರ್ಸಿ ಟಾಟಾ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿ ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಉಳಿಸಬೇಕು ಎಂದು ಆಗ್ರಹಿಸಿದೆ.
ಈ ಕ್ರಮದ ವಿರುದ್ಧ ರಾಜ್ಯದ ಜನತೆ ಹೋರಾಟ ನಡೆಸಬೇಕು ಎಂದು ಕರೆ ನೀಡಿರುವ ಸಿಪಿಐ(ಎಂ), ಅಗತ್ಯವಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ವಿದ್ಯುತ್
ಇದನ್ನೂ ನೋಡಿ : FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media
