ಲಖನೌ: ಉತ್ತರ ಪ್ರದೇಶದಲ್ಲಿ ತೀವ್ರಗೊಂಡಿರುವ ವಿದ್ಯುತ್ ಬಿಕ್ಕಟ್ಟಿನ ವಿಚಾರವಾಗಿ ಸಮಾಜವಾದಿ ಪಕ್ಷ (SP) ಮತ್ತು ಬಹುಜನ ಸಮಾಜ ಪಕ್ಷ (BSP) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ರಾಜ್ಯದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ, ಹೆಚ್ಚುತ್ತಿರುವ ಬಿಲ್‌ಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪರ್ಯಾಪ್ತ ವಿದ್ಯುತ್ ಪೂರೈಕೆಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ವಿದ್ಯುತ್
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಬಿಜೆಪಿ ಆಡಳಿತ ಉತ್ತರ ಪ್ರದೇಶವನ್ನು ದುಸ್ಥಿತಿಗೆ ತಳ್ಳಿದೆ” ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ವಿಫಲವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಲೋಡ್ ಶೆಡ್ಡಿಂಗ್ ನಡೆಯುತ್ತಿದ್ದು, ರೈತರು ಮತ್ತು ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ಸರ್ಕಾರವನ್ನು ಟೀಕಿಸಿದ್ದು, ಬೇಸಿಗೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ ನಿರಂತರ ವಿದ್ಯುತ್ ಕಡಿತ ಜನಜೀವನ ಅಸ್ತವ್ಯಸ್ತಗೊಳಿಸಿದೆ ಎಂದು ಹೇಳಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಸರಿಯಾದ ವಿದ್ಯುತ್ ಪೂರೈಕೆ ಇಲ್ಲದಿರುವುದು ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ವಿದ್ಯುತ್
ಇದನ್ನೂ ಓದಿ : NCERT ಪಠ್ಯಪುಸ್ತಕ ವಿವಾದ | ಮೂವರು ಶಿಕ್ಷಣ ತಜ್ಞರ ಕುರಿತು ಹಿಂದಿನ ಆದೇಶ ತಿದ್ದುಪಡಿ ಮಾಡಿದ ಸುಪ್ರೀಂ ಕೋರ್ಟ್
ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯದ ವಿರುದ್ಧ ಸ್ಥಳೀಯ ಪ್ರತಿಭಟನೆಗಳೂ ನಡೆದಿವೆ. ರೈತರು ನೀರಾವರಿ ಸಮಸ್ಯೆ ಎದುರಿಸುತ್ತಿದ್ದು, ಸಣ್ಣ ಕೈಗಾರಿಕೆಗಳು ಉತ್ಪಾದನೆ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಹೆಚ್ಚುತ್ತಿರುವ ಉಷ್ಣಾಂಶದ ನಡುವೆ ವಿದ್ಯುತ್ ಬೇಡಿಕೆ ಹೆಚ್ಚಾದರೂ, ಪೂರೈಕೆ ಸಮರ್ಪಕವಾಗಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಇದೇ ವೇಳೆ ರಾಜ್ಯ ಸರ್ಕಾರ ತನ್ನ ಆಡಳಿತವನ್ನು ಸಮರ್ಥಿಸಿಕೊಂಡಿದ್ದು, ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಉತ್ತರ ಪ್ರದೇಶವನ್ನು “ಅಪಾರ ಸಾಧ್ಯತೆಗಳ ರಾಜ್ಯ”ವನ್ನಾಗಿ ರೂಪಿಸಲಾಗಿದೆ ಎಂದು ಇತ್ತೀಚೆಗೆ ಹೇಳಿಕೊಂಡಿತ್ತು.
ಇದನ್ನೂ ನೋಡಿ : ಸಾರಿಗೆ ನೌಕರರ ಮುಷ್ಕರ | 25% ವೇತನ ಹೆಚ್ಚಳ : ಸರಕಾರ ಯಾಕೆ ಒಪ್ಪುತ್ತಿಲ್ಲ? | ಎಸ್ ವರಲಕ್ಷ್ಮಿ Janashakthi Media
