ತುಮಕೂರು : ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಳಿಗೇಹಳ್ಳಿ ನಾಗ್ತಿಕೆರೆ ಸಮೀಪದ ತೋಟದಲ್ಲಿ ತೆಂಗಿನಕಾಯಿ ಕಳ್ಳತನ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗ್ರಾಮಸ್ಥರು ಹಿಡಿದು ಸಾರ್ವಜನಿಕವಾಗಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ ಘಟನೆ ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಆರೋಪಿಸಿದೆ. ತೆಂಗಿನಕಾಯಿ
ಸಾಲ್ಕಟ್ಟೆ ತಾಂಡ್ಯದ ಧರ್ಮಾನಾಯ್ಕ್ ಎಂಬುವರನ್ನು ಗ್ರಾಮಸ್ಥರು ಹಿಡಿದು ಊರಿನೊಳಗಿನ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ, ಮಾಧ್ಯಮಗಳನ್ನು ಕರೆಸಿ ವಿಡಿಯೋ ಹಾಗೂ ವರದಿ ಮಾಡಿಸಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಬೇಕು. ಆದರೆ ಆರೋಪಿಯನ್ನು ತಕ್ಷಣವೇ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ ಅವಕಾಶ ನೀಡಬೇಕಾಗಿದ್ದ ಗ್ರಾಮಸ್ಥರು, ಅದನ್ನು ಬಿಟ್ಟು ಸಾರ್ವಜನಿಕವಾಗಿ ಅವಮಾನಕರವಾಗಿ ವರ್ತಿಸಿರುವುದು ಅಮಾನವೀಯ ಕೃತ್ಯ ಎಂದು ಸಮಿತಿ ಆರೋಪಿಸಿದೆ.
ಕಾನೂನು ಪ್ರಕಾರ ಅಪರಾಧ ಸಾಬೀತಾಗುವ ಮೊದಲು ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ತೇಜೋವಧೆ ಮಾಡಿರುವುದು ದಬ್ಬಾಳಿಕೆ ಮನೋಭಾವದ ಪ್ರತಿರೂಪವಾಗಿದೆ. ಬಡ, ದಮನಿತ ಮತ್ತು ಹಿಂದುಳಿದ ಸಮುದಾಯಗಳ ವಿರುದ್ಧ ಇಂತಹ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ತೆಂಗಿನಕಾಯಿ
ಇದನ್ನೂ ಓದಿ : ರಸ್ತೆ ದುಸ್ಥಿತಿ ವಿರೋಧಿಸಿ ಸಿಪಿಎಂ ಪ್ರತಿಭಟನೆ: ಸುರಕ್ಷತಾ ಕ್ರಮಕ್ಕೆ ಆಗ್ರಹ
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಹಿಂದುಳಿದ ಹಾಗೂ ದಮನಿತ ಸಮುದಾಯದವರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಒತ್ತಾಯಿಸಿದೆ.
ಇದೇ ವೇಳೆ, ಬೆಸ್ಕಾಂ ಇಲಾಖೆಯೂ ಈ ಘಟನೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ. ಇಲಾಖೆಗೆ ಸೇರಿದ ವಿದ್ಯುತ್ ಕಂಬಗಳಿಗೆ ಪೋಸ್ಟರ್, ಬ್ಯಾನರ್ ಅಂಟಿಸುವುದನ್ನು ನಿಷೇಧಿಸಿರುವಂತೆ, ಜೀವಂತ ವ್ಯಕ್ತಿಗಳನ್ನು ಕಂಬಗಳಿಗೆ ಕಟ್ಟಿಹಾಕಿ ಅಮಾನುಷವಾಗಿ ವರ್ತಿಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿಕ್ಕನಾಯಕನಹಳ್ಳಿ ಬೆಸ್ಕಾಂ ಎಇಇ ಎನ್. ಗವಿರಂಗಯ್ಯ ಅವರು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಇದನ್ನೂ ನೋಡಿ : ಪಿಚ್ಚರ್ ಪಯಣ – 173| ಸಿನಿಮಾ – ಸಿರಾತ್, ʼಹುಡುಕಾಟದ ಗುಂಗಿನ ಸ್ಥಾಯಿ ಭಾವ ‘ Janashakthi Media
