ವೇತನ ಪರಿಷ್ಕರಣೆ ವಿವಾದ: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಬೆಂಗಳೂರು: ರಾಜ್ಯ ಸರ್ಕಾರ ಆದೇಶಿಸಿದ ಶೇ.12.5 ರಷ್ಟು ವೇತನ ಪರಿಷ್ಕರಣೆ, 26 ತಿಂಗಳ ವೇತನ ಹಿಂಬಾಕಿ ವಿತರಣೆಗೆ ಒಪ್ಪದೆ ನಿಗದಿಯಂತೆ ಮೇ 20ರಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರನಡೆಸಲಿದ್ದೂ, ಕಾನೂನಾತ್ಮಕವಾಗಿ ನಮ್ಮ ಬೇಡಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವಂತೆ ಅವರು ಆಗ್ರಹಿಸಿದ್ದಾರೆ.

ಸರ್ಕಾರ ಈ ಹಿಂದೆ ಕೆಲವು ಸಭೆಗಳನ್ನು ಮಾಡಿದ್ದು ನೌಕರರ ಮಧ್ಯೆ ಸಂಧಾನ ಯಶಸ್ವಿ ಆಗಿಲ್ಲ. ಈ ನಡುವೆ ಯುದ್ಧ, ಇಂಧನ ಬೆಲೆ ಹೆಚ್ಚಳ, ಕಂಪನಿಗಳಲ್ಲಿ ಉದ್ಯೋಗ ವಜಾ, ಬೆಲೆ ಏರಿಕೆಯ ದಿನಗಳಲ್ಲಿ ಸಾರಿಗೆ ಮುಷ್ಕರ ಬೇಕಾ? ಅಂತಲೂ ಕೆಲವು ಜನ ಕೇಳುತ್ತಿದ್ದಾರೆ. ಇದಕ್ಕೆ ನೌಕರರ ಒಕ್ಕೂಟದ ಪ್ರತಿಕ್ರಿಯೆ, ಸರ್ಕಾರ ಹೇಳಿದ್ದೇನು? ಎಂಬ ಮಾಹಿತಿ ಇಲ್ಲಿದೆ.

ಸಾರಿಗೆ ಸಂಸ್ಥೆಗಳ‌ ನೌಕರ ಸಂಘಟನೆಗಳ ನಾಯಕತ್ವ ಹೊಂದಿರುವರು ಸಂಸ್ಥೆಯ ಹೊರಗಿನವರು, ಇಲ್ಲವೇ ನಿವೃತ್ತಿ ಹೊಂದಿದವರು, ಇಲ್ಲವೇ ಸಂಸ್ಥೆಯಿಂದ‌ ವಜಾಗೊಂಡಿರುವವರು. ಇವರಿಗೂ ನೌಕರರ‌ ನಾಡಿಮಿಡಿತವೇ ಅರ್ಥವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಬೇಸರ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಳೂರು| ಬೃಹತ್ ತ್ಯಾಜ್ಯ ಸಂಗ್ರಹಕ್ಕಾಗಿ ‘D Clutter’ ಆಪ್‌ ಆರಂಭಿಸಿದ BSWML

ಅಲ್ಲದೇ ಸಾರಿಗೆ ಸಂಸ್ಥೆಗಳು Road Transport Corporation ಕಾಯಿದೆ‌ ಪ್ರಕಾರ ಅಸ್ತಿತ್ವಕ್ಕೆ ಬಂದಿದ್ದು, ಸ್ವಾಯತ್ತ ಸಂಸ್ಥೆಗಳು, ಸರ್ಕಾರದಿಂದಲೇ ಸಂಸ್ಥೆಗಳನ್ನು‌ ನಡೆಸಲು ಸಾಧ್ಯವಿಲ್ಲ. ಸಂಸ್ಥೆಗಳ‌ ಆದಾಯ ಖರ್ಚು ನಿರ್ವಹಣೆಯ ಹೊಣೆ ಅವರದ್ದೇ. ಆರ್ಥಿಕ ಸಹಾಯ ಮಾಡಬಹುದು, ಆದರೆ ವೇತನ ಪಾವತಿಯೂ ಸರ್ಕಾರವೇ ಮಾಡಬೇಕೆಂಬುದು ಯಾವ ರೀತಿ ಸರಿ? ಎಂದು ಸರ್ಕಾರ ಪ್ರಶ್ನಿಸಿದೆ.

ಬೇಡಿಕೆ ಈಡೇರಿಕೆಗೆ ಬೇಕು 1578 ಕೋಟಿ ರೂ!

ಬೇಡಿಕೆಯಂತೆ ಸಾರಿಗೆ ನೌಕರರಿಗೆ ಶೇ.25ರಷ್ಟು ವೇತನ ಪರಿಷ್ಕರಣೆ ಮಾಡಿದಲ್ಲಿ ಪ್ರತಿ ತಿಂಗಳು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ರೂ.131.52 ಕೋಟಿ, ವಾರ್ಷಿಕ ರೂ.1578.18 ಕೋಟಿ ರೂಪಾಯಿ ಬೇಕಾಗುತ್ತದೆ. ಹೆಚ್ಚುವರಿ ಮೊತ್ತ ಭರಿಸಬೇಕಾಗಲಿದ್ದು, ಇದಕ್ಕೆ ಹಣ ಹೊಂದಿಸುವುದು ಹೇಗೆ? ಎಂದು ಸರ್ಕಾರ ತನ್ನೆಲ್ಲ ಜವಾಬ್ದಾರಿಗಳನ್ನು ಗಮನಲ್ಲಿಟ್ಟುಕೊಂಡು ಈ ಹಿಂದೆಯೇ ಸಭೆಗಳಲ್ಲಿ ನೌಕರರಿಗೆ ತಿಳಿಸಿದೆ.

ಇತ್ತೀಚೆಗೆ ನೌಕರರ ವೇತನ ಪರಿಷ್ಕರಣೆ ಮಾಡಿದೆ. ಹಿಂಬಾಕಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಹೀಗಿದ್ದರೂ ಮುಷ್ಕರ ಅಗತ್ಯವೇನು? ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಶ್ನೆ.

ಸಾರಿಗೆ ಇಲಾಖೆ ಮೂಲಗಳ ಪ್ರಕಾರ, 4 ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ 7130.80 ಕೋಟಿ ರೂಪಾಯಿ (ಇದರಲ್ಲಿ ರೂ. 2298.20 ಕೋಟಿ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ರೂ.822.26 ಕೋಟಿ ಇಂಧನ ಪಾವತಿ ಬಾಕಿ) ಇದೆ.

04 ಸಾರಿಗೆ ಸಂಸ್ಥೆಗಳ ಲಾಭ-ನಷ್ಟ ಎಷ್ಟಿದೆ?

2018-19 ರಲ್ಲಿ 641.72 ಕೋಟಿ ರೂಪಾಯಿ 2019-20ರಲ್ಲಿ 982.62 ಕೋಟಿ ರೂಪಾಯಿ, 2020-21 ರಲ್ಲಿ 1320.88 ಕೋಟಿ ರೂಪಾಯಿ, 2021-22 ರಲ್ಲಿ 1289.96 ಕೋಟಿ ರೂಪಾಯಿ, 2022-23 ರಲ್ಲಿ 261.41ಕೋಟಿ ರೂಪಾಯಿ, 2023-24 ರಲ್ಲಿ 1354.48 ಕೋಟಿ ರೂಪಾಯಿ ಮತ್ತು 2024-25 ರಲ್ಲಿ 842.82 ಕೋಟಿ ರೂಪಾಯಿ ಇದೆ. ಇದಲ್ಲವನ್ನು ಸರ್ಕಾರ

ಪ್ರತಿ ವರ್ಷ ನಾಲ್ಕು ಸಾರಿಗೆ ಸಂಸ್ಥೆಗಳ ಒಟ್ಟು ಶೇ. 46.31ರಷ್ಟು ಸಿಬ್ಬಂದಿ ವೆಚ್ಚ ಅಂದರೆ 6759.78 ಕೋಟಿ ರೂ. ಮತ್ತು ಶೇ. 32.51 ಡೀಸೆಲ್‌ ವೆಚ್ಚ 4744.38 ಕೋಟಿ ರೂ. ವೆಚ್ಚವಾಗುತ್ತಿದೆ. ಇದೆಲ್ಲವನ್ನು ಸರ್ಕಾರವೇ ನಿಭಾಯಿಸುತ್ತದೆ. ಹೀಗೆ ಎಲ್ಲ ಇಲಾಖೆಗಳ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ. ಹಾಗಂತ ಸರ್ಕಾರ ನೌಕರರನ್ನು ಕಡೆಗಣಿಸುತ್ತಿಲ್ಲ. ಅಗತ್ಯತೆ ನೋಡಿಕೊಂಡು ಒಂದಷ್ಟು ಬೇಡಿಕೆ ಪೂರೈಕೆಗೆ ಮುಂದಾಗಿದೆ. ಆದರೆ ನೌಕರರು ಪಟ್ಟು ಸಡಿಲಿಸುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದರು.

ಬೆಲೆ ಏರಿಕೆ ದಿನಗಳಲ್ಲಿ ವೇತನ ಹೆಚ್ಚಬೇಕಲ್ಲವೇ?; ನೌಕರರು

ಮುಷ್ಕರ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಆನಂದ್ ಅವರು, ದುಡಿದಿರುವ ಹಣ, ಕಾನೂನು ಬದ್ಧತೆಯಿಂದ ಕೊಡಬೇಕಾದ ಹಣ ಕೇಳುತ್ತಿದ್ದೇವೆ. ನಿಯಮ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಅದರಂತೆ ಶೇ. 25ರಷ್ಟು ಪರಿಷ್ಕರಣೆಗೆ ಹಾಗೂ 38 ತಿಂಗಳ ಹಿಂಬಾಕಿ ಬಿಡುಗಡೆಗೆ ನಾವು ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

2020ರಲ್ಲಿ ಶೇ.15ರಷ್ಟು ವೇತನ ಹೆಚ್ಚಾಗಿತ್ತು. ಇಂದಿಗೆ ಅದನ್ನು ಶೇ.25% ರಷ್ಟು ಕೇಳುತ್ತಿದ್ದೇವೆ. ಬೆಲೆ ಏರಿಕೆಯ ದಿನಗಳಲ್ಲಿ ನೌಕರರ ಜೀವನ ನಿರ್ವಹಣೆ ಕಷ್ಟಕರ ಹಿನ್ನೆಲೆ ಈ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಕೆಲವು ಭಾರಿ ಸಭೆ ನಡೆಸಿದ್ದ ಸರ್ಕಾರ ಮೊದಲು 14 ತಿಂಗಳು ಹಿಂಬಾಕಿಗೆ ಒಪ್ಪಿತ್ತು. ಮುಷ್ಕರ ಘೋಷಣೆ ಬೆನ್ನಲ್ಲೆ 26 ತಿಂಗಳ ಕೊಡಲು ಹಿಂಬಾಕಿ ಕೊಡಲು ಒಪ್ಪಿತು.

ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಿಸಿದ್ದು ಸರಿಯಲ್ಲ. ನೌಕರರ ಮೇಲೆ ಕಾಳಜಿ ಇದ್ದರೆ ನೀವು ಸಭೆ ನಡೆಸಿ ನೌಕರರ ಮನವೊಲಿಕೆಗೆ, ವೇತನ ಪರಿಷ್ಕರಣೆಗೆ ಔಕಾಶಿ ಮಾಡಬಹುದಿತ್ತು. ಕೆಲವು ಭಾರಿ ಮುಷ್ಕರ ನಡೆಸಿ, ಸಭೆಗಳಲ್ಲಿ ನಾವು ಪಾಲ್ಗೊಂಡ ಬಳಿಕವು ಸರ್ಕಾರದ ನಿರ್ಧಾರ ನಮಗೆ ಸಮಾಧಾನ ತಂದಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸಂಘಟನೆ ಮುಖ್ಯಸ್ಥರರು ಹೊರಗಿನವರು…

ಹೌದು, ಸಂಘಟನೆ ನೇತೃತ್ವ ವಹಿಸಿದವರು ನಿವೃತ್ತರು, ಸೇವೆಯಿಂದ ವಜಾಗೊಂಡವರು. ಸೇವೆಯಲ್ಲಿದ್ದುಕೊಂಡು ನಮ್ಮ ಅಗತ್ಯತೆ, ಬೇಡಿಕೆ ಈಡೇರಿಕೆ ಬಗ್ಗೆ ಪ್ರಶ್ನಿಸುವುದು ಕಷ್ಟಸಾಧ್ಯ. ಹೀಗಾಗಿ ನೌಕರರ ಸೇವೆಯಲ್ಲಿ ಅನುಭವ ಇರುವವರು ನೌಕರರ ಪರ ಧ್ವನಿ ಎತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರ ಅಳಲು ಏನು?

ರಾಜ್ಯದಲ್ಲಿ ಯಾವುದೇ ಬೆಲೆ ಏರಿಕೆ ಆದರೂ, ದೇಶಕ್ಕೆ ಕಷ್ಟ ಬಂದರೂ ಸಹಿತ ಪರದಾಡಬೇಕಾಗುವುದು ಜನರೇ. ಇಂಧನ, ಅಡುಗೆ ಅನಿಲ ದರ ಸೇರಿ ಅಗತ್ಯ ವಸ್ತುಗಳ ದರ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಎಐನಿಂದಾಗಿ ಇತರ ವಲಯಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ. ಸ್ವತಃ ಪ್ರಧಾನಿಯರವೇ ಕಷ್ಟಕರ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಹೀಗಿರುವಾಗ ಸಾರಿಗೆ ಮುಷ್ಕರದಿಂದ ಒಳಿತಿಗಿಂತ ಸಮಸ್ಯೆಯೇ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಸೇರಿ ಜನರು ಪರದಾಡಬೇಕಾಗುತ್ತದೆ. ಇದನ್ನು ಮುಷ್ಕರಕ್ಕೆ ಸಜ್ಜಾದ ನೌಕರರು ಅರಿತುಕೊಳ್ಳಬೇಕು. ಜೊತೆಗೆ ಸರ್ಕಾರವು ನೌಕರರೊಂದಿಗೆ ಚೌಕಾಶಿ ಮಾಡಿ ಒಂದು ಸೂಕ್ತ ನಿರ್ಧಾರದ ಮೂಲಕ ಸಾರಿಗೆ ನೌಕರರ ಮುಷ್ಕರಕ್ಕೆ ತೆರೆ ಎಳೆಯಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಸೇವೆ ಕಾರ್ಪೊರೇಟ್ ಕೈಗೆ? : ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ Janashakthi Media

Donate Janashakthi Media

Leave a Reply

Your email address will not be published. Required fields are marked *