NTA ಸಂಸ್ಥೆಯನ್ನೆ ರದ್ದುಗೊಳಿಸಲು ಆಗ್ರಹ
ಧಾರವಾಡ: ನೀಟ್ ಪರೀಕ್ಷೆ ‘ಪ್ರಶ್ನೆಪತ್ರಿಕೆ ಸೋರಿಕೆ’ ಖಂಡಿಸಿ, ಹಗರಣದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಹಾಗೂ NTA ಸಂಸ್ಥೆಯನ್ನು ಹಾಗೂ ನೀಟ್ ಪರೀಕ್ಷೆಯನ್ನು ರದ್ದು ಪಡಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಧಾರವಾಡ ಜಿಲ್ಲಾ ಸಮಿತಿ ಕಾರ್ಯಕರ್ತರು ಅಪಾರ ಜಿಲ್ಲಾಧಿಕಾರಿ ಗೀತಾ ಸಿ ಡಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆಯು ಮೇ 3 ರಂದು ಪರೀಕ್ಷೆ ನಡೆಸಿದ್ದು, ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ, ಮೇ 3 ರಂದು ನಡೆದಿದ್ದ ನೀಟ್ ಯುಜಿ 2026 (NEET- UG 2026) ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್.ಟಿ.ಎ) ಪರೀಕ್ಷೆಯ ನಡವಳಿಕೆಯ ಬಗ್ಗೆ ಹಾಗೂ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪಾರದರ್ಶಕತೆಯನ್ನು ಪ್ರಶ್ನಿಸುವ ಹಲವಾರು ದೂರುಗಳು ದೇಶಾದ್ಯಂತ ಬರುತ್ತಿವೆ. ಪ್ರವೇಶವನ್ನು ನಡೆಸಲು ಅಸಮರ್ಥ ಮತ್ತು ಅನರ್ಹವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ವರ್ಷದಿಂದ ವರ್ಷಕ್ಕೆ, ಪರೀಕ್ಷೆಯಿಂದ ಪರೀಕ್ಷೆಗೆ, ನ್ಯಾಷನಲ್ ಟೆಸ್ಟ್ ಏಜೆನ್ಸಿ (ಎನ್.ಟಿ.ಎ) ಪರೀಕ್ಷೆಗಳನ್ನು ನಡೆಸುವಲ್ಲಿ ತನ್ನ ಆದಾಯವನ್ನು ಸಾಬೀತುಪಡಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಎದುರಿಸಬೇಕಾದ ಮಾನಸಿಕ ಒತ್ತಡ ಮತ್ತು ತೊಂದರೆಗಳಿಗೆ ಎನ್.ಡಿ.ಎ ಸರ್ಕಾರವೇ ಜವಾಬ್ದಾರರಾಗಿರಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಟಾಟಾ ಎಲೆಕ್ಟ್ರಾನಿಕ್ಸ್ ಕೃಷ್ಣಗಿರಿ ಕಾರ್ಮಿಕರ ಮುಷ್ಕರ
ವರದಿಗಳ ಪ್ರಕಾರ, ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳ ಪ್ರಶ್ನೆಗಳು ಸೋರಿಕೆಯಾಗಿದ್ದು, ಇದು ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆ ತಂದಿದೆ. ಪರೀಕ್ಷೆಯ 180 ಪ್ರಶ್ನೆಗಳಲ್ಲಿ ಸುಮಾರು 15 ಪ್ರಶ್ನೆಗಳನ್ನು ಸಂಭಾವ್ಯ ಪ್ರಶ್ನೆ ಪತ್ರಿಕೆಯ ಹೆಸರಿನಲ್ಲಿ ಮೊದಲೇ ವಿತರಿಸಲಾಗಿತ್ತು ಮತ್ತು ರಸಾಯನಶಾಸ್ತ್ರ (Chemistry) ವಿಭಾಗದ ಸುಮಾರು 120 ಪ್ರಶ್ನೆಗಳು ಇದ್ದಕ್ಕಿದ್ದಂತೆ ಸೋರಿಕೆಯಾಗಿವೆ ಎಂದು ವರದಿಯಾಗಿದೆ.
ರಾಜಸ್ಥಾನ ಸೇರಿದಂತೆ ವಿವಿಧೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದ ಆರೋಪಗಳು ಕೇಳಿಬರುತ್ತಿವೆ ಅಕ್ರಮ ನಡೆದ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲಾಗದೆ. ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಎಳೆದರಂತೆ ಹಾಗೆ ಆಗಿದೆ. ಯಾರೋ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ಧತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಈಗ ನೀಟ್-ಯುಜಿ ಗೆ ಸಂಬಂಧಿಸಿದಂತೆಯೂ ಇದೇ ಆರೋಪ ಸಾಬೀತಾಗಿದೆ.
ಎನ್.ಟಿ.ಎ ಪ್ರಾರಂಭವಾದಾಗಿನಿಂದ ಪ್ರಮುಖ ಪರೀಕ್ಷೆಗಳ ಗಂಭೀರ ಅವ್ಯವಹಾರಗಳು ನಡೆಯುತ್ತಿದೆ, ಇಂತಹ ಸಂಸ್ಥೆಯು ಪರೀಕ್ಷೆಯನ್ನು ನಡೆಸಲು ಅಸಮರ್ಥವಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ . NET ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇದರಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ ಪಾರದರ್ಶಕ ಮತ್ತು ನಿಸ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟಿನ ನ್ಯಾಯಾಧಿಶರ ಸಮಿತಿಯನ್ನು ರಚನೆ ಮಾಡಿ ತನಿಖೆ ಮಾಡಬೇಕು.
ಈಗೆ ಹಲವಾರು ಪರೀಕ್ಷೆಗಳನ್ನು ನಡೆಸಲು NTA ವಿಫಲವಾಗಿದೆ ಮತ್ತು ಭ್ರಷ್ಟಾಚಾರವಾಗಿರುವುದು ಮತ್ತು ಪತ್ರಿಕೆ ಸೋರಿಕೆಯಾಗಿರುವುದು ಸ್ಪಷ್ಟವಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ, ಆದರಿಂದ NTA ರದ್ದು ಪಡಿಸಬೇಕೆಂದು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವರು ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕು.
ನೀಟ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಶ್ರೀಮಂತ ,ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜೊತೆಗೆ ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷಗಳಲ್ಲಿ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಒಬ್ಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕೋಚಿಂಗ್ ಗೆ ಒಂದು ಲಕ್ಷದಿಂದ ಹತ್ತು ಲಕ್ಷದವರೆಗೆ ಹಣ ವಸೂಲಿ ನಡೆಯುತ್ತಿದೆ ಇದರಿಂದ ಹಣ ಬರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು ಕಿತ್ತುಕೊಂಡಂತೆ ಆಗುತ್ತಿದೆ.
ಈ ಘಟನೆಗೆ ಸಂಬಂದಿಸಿದಂತೆ ಕೂಡಲೇ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕೆಂದು, ಎನ್ಟಿಎಯನ್ನು ರದ್ದುಪಡಿಸಲು ಮತ್ತು ಇಲ್ಲಿಯವರೆಗಿನ ಅದರ ಎಲ್ಲಾ ಹಗರಣಗಳನ್ನು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ನಾಗರಾಜ್ ಛಲವಾದಿ, ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಗವತ್, ಮುಖಂಡರಾದ ಕೃಷ್ಣ ನಾಯ್ಕ, ಮಮತ ಕೊಡದ್, ಮಮತ ಮುಂಡರಗಿ, ಮಲ್ಲಿಕಾರ್ಜುನ್ ಪರಮ್ಮನವರ, ವಿಜಯ್ ಗೋಪಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
