ಕಿನ್ಷಾಸಾ: ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಎಬೋಲಾ ರೋಗದ ಪ್ರಸರದಿಂದ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಈ ರೂಪಾಂತರಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO)ಮೇ 17ರಂದು ಈ ಪರಿಸ್ಥಿತಿಯನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ.
ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (CDC Africa) ಶನಿವಾರ ನೀಡಿದ ಮಾಹಿತಿಯ ಪ್ರಕಾರ, ಅತೀ ಸಾಂಕ್ರಾಮಿಕ ರಕ್ತಸ್ರಾವ ಜ್ವರದಿಂದ 88 ಸಾವುಗಳು ಮತ್ತು 336 ಶಂಕಿತ ಪ್ರಕರಣಗಳು ದಾಖಲಾಗಿವೆ.
ಜೆನೀವಾ ಕೇಂದ್ರವಾಗಿರುವ WHO ಭಾನುವಾರ ಬೆಳಿಗ್ಗೆ ಪ್ರಕಟಿಸಿದ ಹೇಳಿಕೆಯಲ್ಲಿ, ಬುಂಡಿಬುಗ್ಯೋ (Bundibugyo) ರೂಪಾಂತರದಿಂದ ಉಂಟಾದ ಈ ಪ್ರಸರವು “ಅಂತರರಾಷ್ಟ್ರೀಯ ಮಹತ್ವದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” ಎಂದು ಘೋಷಿಸಲಾಗಿದೆ. ಇದು ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಅಡಿಯಲ್ಲಿ ಎರಡನೇ ಗಂಭೀರ ಎಚ್ಚರಿಕೆಯ ಮಟ್ಟವಾಗಿದೆ.
ಇದನ್ನೂ ಓದಿ: ಮಸ್ಕಿಟೋ ರಿಪೆಲ್ಲೆಂಟ್ ಅಗರ್ಬತ್ತಿಗಳಲ್ಲಿ ಅಪಾಯಕರ ರಾಸಾಯನಿಕಗಳು: ಸಮೀಕ್ಷೆ ಬಹಿರಂಗ
ಜಾಗತಿಕ ಆರೋಗ್ಯ ಸಂಸ್ಥೆ ಪ್ರಕರಣಗಳ ನಿಜವಾದ ಪ್ರಮಾಣ ಮತ್ತು ರೋಗದ ವ್ಯಾಪ್ತಿ ಸ್ಪಷ್ಟವಾಗಿಲ್ಲ ಎಂದು ಎಚ್ಚರಿಸಿದೆ. ಆದರೆ 2024ರಲ್ಲಿ ಪರಿಚಯಿಸಲಾದ ಅತಿ ಉನ್ನತ ಮಟ್ಟದ ಪ್ಯಾಂಡಮಿಕ್ ಎಚ್ಚರಿಕೆಯನ್ನು ಘೋಷಿಸಲು ಮುಂದಾಗಿಲ್ಲ.
ವೈದ್ಯಕೀಯ ನೆರವು ಸಂಸ್ಥೆ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ (MSF) ಈ ಪ್ರಸರದ ವೇಗದ ಹರಡುವಿಕೆಯನ್ನು “ತೀವ್ರ ಆತಂಕಕಾರಿ” ಎಂದು ಹೇಳಿ, ದೊಡ್ಡ ಮಟ್ಟದ ಪ್ರತಿಕ್ರಿಯೆಗೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ.
“ಬುಂಡಿಬುಗ್ಯೋ ರೂಪಾಂತರಕ್ಕೆ ಯಾವುದೇ ಲಸಿಕೆ ಇಲ್ಲ, ನಿರ್ದಿಷ್ಟ ಚಿಕಿತ್ಸೆ ಕೂಡ ಇಲ್ಲ,” ಎಂದು ಕಾಂಗೋ ಆರೋಗ್ಯ ಸಚಿವ ಸ್ಯಾಮುಯೆಲ್-ರೋಜರ್ ಕಂಬಾ ಹೇಳಿದ್ದಾರೆ. “ಈ ರೂಪಾಂತರವು 50 ಪ್ರತಿಶತದವರೆಗೆ ಸಾವಿನ ಪ್ರಮಾಣ ಹೊಂದಿದೆ,” ಎಂದು ಅವರು ಹೇಳಿದರು.
2007ರಲ್ಲಿ ಮೊದಲ ಬಾರಿಗೆ ಗುರುತಿಸಲಾದ ಈ ರೂಪಾಂತರವು ನೆರೆಯ ಉಗಾಂಡಾದಲ್ಲಿಯೂ ಒಬ್ಬ ಕಾಂಗೋ ಪ್ರಜೆಯ ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆಗಳು 1976ರಲ್ಲಿ ಗುರುತಿಸಲಾದ ಜೈರ್ (Zaire) ರೂಪಾಂತರಕ್ಕೆ ಮಾತ್ರ ಲಭ್ಯವಿದ್ದು, ಅದರ ಸಾವಿನ ಪ್ರಮಾಣ 60ರಿಂದ 90 ಪ್ರತಿಶತದವರೆಗೆ ಇದೆ.
ಉಗಾಂಡಾ ಮತ್ತು ದಕ್ಷಿಣ ಸೂಡಾನ್ ಗಡಿಗೆ ಸಮೀಪದ ಇತುರಿ ಪ್ರಾಂತ್ಯದಲ್ಲಿ ಈ ಹೊಸ ಪ್ರಸರವನ್ನು ಶುಕ್ರವಾರ ದೃಢಪಡಿಸಲಾಗಿದೆ ಎಂದು CDC Africa ತಿಳಿಸಿದೆ.
“ಕಳೆದ ಎರಡು ವಾರಗಳಿಂದ ಜನರು ಸಾವನ್ನಪ್ಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ,” ಎಂದು ಸ್ಥಳೀಯ ನಾಗರಿಕ ಸಮಾಜದ ಪ್ರತಿನಿಧಿ ಐಸಾಕ್ ನ್ಯಾಕುಲಿಂದಾ ತಿಳಿಸಿದ್ದಾರೆ. “ರೋಗಿಗಳನ್ನು ಪ್ರತ್ಯೇಕಿಸಲು ಯಾವುದೇ ವ್ಯವಸ್ಥೆ ಇಲ್ಲ. ಅವರು ಮನೆಗಳಲ್ಲೇ ಸಾವನ್ನಪ್ಪುತ್ತಿದ್ದು, ಕುಟುಂಬದವರು ಮೃತದೇಹಗಳನ್ನು ನಿರ್ವಹಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಕಂಬಾ ಅವರ ಪ್ರಕಾರ, ಮೊದಲ ಸೋಂಕಿತರು (patient zero) ನರ್ಸ್ ಆಗಿದ್ದು, ಏಪ್ರಿಲ್ 24ರಂದು ಇತುರಿ ಪ್ರಾಂತ್ಯದ ರಾಜಧಾನಿ ಬುಣಿಯಾದ ಆರೋಗ್ಯ ಕೇಂದ್ರಕ್ಕೆ ಎಬೋಲಾ ಲಕ್ಷಣಗಳೊಂದಿಗೆ ಬಂದಿದ್ದರು.
ಇದನ್ನೂ ನೋಡಿ: ಕರ್ನಾಟಕಕ್ಕೂ ಬಂದೇ ಬಿಡ್ತು..SIR….ಎಚ್ಚರ ಎಚ್ಚರ Janashakthi Media
