‘ನಾವು ತುಸಿಡೈಡ್ಸ್ ಬೋನಿನಿಂದ ತಪ್ಪಿಸಿಕೊಳ್ಳಬಲ್ಲೆವೇ?’ – ಟ್ರಂಪ್ ಗೆ ಶಿ ಪ್ರಶ್ನೆಯ ಅರ್ಥವೇನು?

ಮೇ 16 : “ಚೀನಾ ಮತ್ತು ಯು.ಎಸ್ ತುಸಿಡೈಡ್ಸ್ ಬೋನಿನಿಂದ ತಪ್ಪಿಸಿಕೊಂಡು, ಅದನ್ನು ಮೀರಿ ನಿಂತು ಪ್ರಮುಖ-ಶಕ್ತಿ ರಾಷ್ಟ್ರಗಳ ನಡುವೆ ಹೊಸ ರೀತಿಯ ಸಂಬಂಧ ಹೊಸೆಯಬಲ್ಲವೇ?” ಎಂದು ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಎಂದು ಕೇಳಿದರು. ಅವರು ಚೀನಾದ ಬೇಟಿಯಲ್ಲಿರುವ ಯು.ಎಸ್ ಅಧ್ಯಕ್ಷ  ಡೊನಾಲ್ಟ್ ಟ್ರಂಪ್ ಮತ್ತು ಅವರ ಜತೆಗಿರುವ ಶಿಷ್ಟಮಂಡಳಕ್ಕೆ ಸ್ವಾಗತ ಕೋರುತ್ತಾ ಈ ಪ್ರಶ್ನೆಯನ್ನು ಕೇಳಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಶಿ  ಈ ಮೂಲಕ ತಿಳಿಸಲು ಬಯಸಿದರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ‘ತುಸಿಡೈಡ್ಸ್ ಬೋನು’ ಅಂದರೆ ಏನು ಅಂತ ಮೊದಲು ತಿಳಿದುಕೊಳ್ಳಬೇಕು.

– ವಸಂತರಾಜ ಎನ್.ಕೆ

‘ತುಸಿಡೈಡ್ಸ್ ಬೋನು’ ಎಂಬುದು ಗ್ರಹಾಂ ಅಲಿಸನ್ ಎಂಬ ಯು.ಎಸ್ ನ ರಾಜಕೀಯ ಶಾಸ್ತ್ರಜ್ಞ ಟಂಕಿಸಿದ ಪದ. ಅದರ ಪ್ರಕಾರ ಒಂದು ಪ್ರದೇಶದಲ್ಲಿ ಅಥವಾ ಜಾಗತಿಕವಾಗಿ ಅಧಿಪತ್ಯ ಸಾಧಿಸಿರುವ ಒಂದು ದೇಶ ಅವನತಿ ಹೊಂದುತ್ತಿರುವಾಗ ಮತ್ತು ಅದರ ಬದಲು ಇನ್ನೊಂದು ದೇಶ ಅದರ ಸ್ತಾನ ತುಂಬುತ್ತಿರುವಾಗ, ಅವೆರಡು ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯು  ಹೆಚ್ಚಿರುತ್ತದೆ. ಇದನ್ನು ಮೊದಲು ಪ್ರಾಚೀನ ಗ್ರೀಸ್ ನಲ್ಲಿ ಸ್ಪಾರ್ತಾದ ಅಧಿಪತ್ಯಕ್ಕೆ, ಪ್ರಬಲವಾಗುತ್ತಿದ್ದ ಅಥೆನ್ಸ್ ನ ಕುರಿತ ಭೀತಿಯಿಂದ ನಡೆದ ‘ಪೆಲೆಪ್ಪೊನ್ನೇಶಿಯನ್ ಯುದ್ಧದ ಚರಿತ್ರೆ’ ಬರೆದ ತುಸಿಡೈಡ್ಸ್ ಬರೆದಿದ್ದ. ಅಲಿಸನ್ ಅವರು ಕಳೆದ 500 ವರ್ಷಗಳ ಚರಿತ್ರೆಯ ಅಧ್ಯಯನವನ್ನು ನಡೆಸಿ ಈ ವಾದವನ್ನು ಪುಷ್ಟೀಕರಿಸಿದ್ದಾರೆ.

ಕಳೆದ 500 ವರ್ಷಗಳಲ್ಲಿ ಇಂತಹ 16 ಸಂದರ್ಭಗಳಲ್ಲಿ 12 ಯುದ್ಧದಲ್ಲಿ ಕೊನೆಗೊಂಡಿದೆ ಎನ್ನುತ್ತಾರೆ. ಈ ಸಾಧ್ಯತೆಯನ್ನು ‘ತುಸಿಡೈಡ್ಸ್ ಬೋನು’ ಅಂತ ಕರೀತಾರೆ. ಅವನತಿ ಹೊಂದುತ್ತಿರುವ ದೇಶ ಭೀತಿಯಿಂದ ಯುದ್ಧವೆಂಬ ಬೋನಿಗೆ ಬೀಳುತ್ತದೆ ಎಂಬುದು ಅವರ ಸಿದ್ಧಾಂತ. ಇದನ್ನು ಅವನತಿ ಹೊಂದುತ್ತಿರುವ ಶಕ್ತಿ ಯು.ಎಸ್ ಮತ್ತು ಉದಯಿಸುತ್ತಿರುವ ಹೊಸ ಶಕ್ತಿ ಚೀನಾದ ನಡುವಿನ ಸಂಬಂಧಕ್ಕೆ, ಟ್ರಂಪ್ ಅವರ ಮಾಜಿ ವಿದೇಶ ನೀತಿ ಸಲಹಾಗಾರ ಸ್ಟೀವ್ ಬೆನ್ನನ್ ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು ಅನ್ವಯಿಸಿದ್ದಾರೆ. ಅಂದರೆ ಯು.ಎಸ್-ಚೀನಾ ಘರ್ಷಣೆಯ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರ ಈ ಹೇಳಿಕೆಯನ್ನು ಹಲವು ರೀತಿಯಲ್ಲಿ ಅರ್ಥೈಸಬಹುದು. ಚೀನಾ ‘ತುಸಿಡೈಡ್ಸ್ ಬೋನಿ’ನ ಖೆಡ್ಡಾಕ್ಕೆ ಬೀಳುವುದಿಲ್ಲ. ಯು.ಎಸ್ ಸಹ ಬೀಳಬಾರದು ಎಂಬ ಮನವಿಯಾಗಿ ಕಾಣಬಹುದು. ಅಥವಾ ಯು.ಎಸ್ ಈ ‘ಬೋನಿ’ಗೆ ಬಿದ್ದು ಯುದ್ಧ ಆರಂಭಿಸಿದರೆ ತಕ್ಕ ಉತ್ತರ ಕೊಡಲು ಸಿದ್ಧರಿದ್ದೇವೆ ಎಂಬ ಎಚ್ಚರಿಕೆನೂ ಇರಬಹುದು. ಯು.ಎಸ್ ಅವನತಿ ಹೊಂದುತ್ತಿರುವ ಶಕ್ತಿ, ಚೀನಾ ಉದಯಿಸುತ್ತಿರುವ ಶಕ್ತಿ. ಆದರೆ ಚೀನಾಕ್ಕೆ ತನ್ನ ಜಾಗತಿಕ ಅಧಿಪತ್ಯ ಸ್ತಾಪಿಸುವ ಇರಾದೆಯಿಲ್ಲ. ಅದು ಮೂಡಿಬರುತ್ತಿರುವ (ಯಾರ ಅಧಿಪತ್ಯವೂ ಇಲ್ಲದ) ಬಹು-ಧ್ರುವೀಯ ಜಗತ್ತಿನ ಹೊಸ ವ್ಯವಸ್ಥೆಯನ್ನು ಬಯಸುತ್ತದೆ. ಈ ವಾಸ್ತವವನ್ನು ಒಪ್ಪಿಕೊಳ್ಳಿ ಎಂದು ಟ್ರಂಪ್ ಗೆ ಕಿವಿಮಾತು ಹೇಳುತ್ತಿರಬಹುದು.

ಇದನ್ನೂ ಓದಿ: ಡೀಸೆಲ್‌ ದರ ಏರಿಕೆ, ರಸಗೊಬ್ಬರ ಕೊರತೆಯಿಂದ ಕೃಷಿಗೆ ಹೊರೆ -ಪಂಜಾಬ್‌ನಲ್ಲಿ ರೈತರಲ್ಲಿ ಹೆಚ್ಚಿದ ಆತಂಕ

ನಂತರದ ಹೇಳಿಕೆಗಳ್ಲಲ್ಲಿ “ತೈವಾನ್ ಪ್ರಶ್ನೆ ಯು.ಎಸ್-ಚೀನಾ ಸಂಬಂಧಗಳಲ್ಲಿ ಪ್ರಮುಖವಾಗಿದ್ದು”, ಇದರಲ್ಲಿ “ಯು.ಎಸ್  ತಪ್ಪು ಹೆಜ್ಜೆ ಹಾಕಿದರೆ” ಎರಡು ದೇಶಗಳ ನಡುವೆ “ತಿಕ್ಕಾಟ ಮತ್ತು  “ಸಂಘರ್ಷ”:ಕ್ಕೆ ಕಾರಣವಾಗಿ “ಎರಡು ದೇಶಗಳ ನಡುವಿನ ಸಂಬಂಧ ಹದಗೆಡಬಹುದು” ಎಂದು ಶಿ ಎಚ್ಚರಿಕೆ ಕೊಟ್ಟರು. ತೈವಾನ್ ಈಗ ಸ್ವಾಯತ್ತ ಪ್ರದೇಶವಾಗಿದ್ದರೂ ಅದು ಚೀನಾದ ಅವಿಭಾಜ್ಯ ಅಂಗ. ಎಂದು ಚೀನಾ ಪ್ರತಿಪಾದಿಸುತ್ತದೆ.

ಚೀನಾಕ್ಕೆ ಒಂದು ಕಡೆ ಎಚ್ಚರಿಕೆ ಕೊಡುತ್ತಲೇ, ಎರಡು ದೇಶಗಳ ನಡುವೆ ಸಂಘರ್ಷ ಅನಿವಾರ್ಯವಲ್ಲ, ಅಪೇಕ್ಷಿತವೂ ಅಲ್ಲ ಎಂದು ಶಿ ಸ್ಪಷ್ಟಪಡಿಸಿದ್ದಾರೆ. ‘ಮಹಾನ್ ಚೀನಾ ದೇಶದ ಪುನರುಜ್ಜೀವನ’ ಮತ್ತು ‘ಅಮೆರಿಕಾ ವನ್ನ ಮತ್ತೆ ಮಹಾನ್ ಆಗಿಸುವುದು’ ಎರಡೂ ಜತೆಗೆ ಹೋಗಲು ಹಾಗೂ “ಇದು ಇಡೀ ಜಗತ್ತಿನ ಕಲ್ಯಾಣವನ್ನು ಮುಂದಕ್ಕೊಯ್ಯುವುದೂ ಸಾಧ್ಯ” ವೆಂದು ಸಹ ಶಿ ಜಿನ್ ಪಿಂಗ್ ಪ್ರತಿಪಾದಿಸಿದ್ದಾರೆ.

ಇದು ಟ್ರಂಪ್ ಮತ್ತು ಅವರ ಯುದ್ಧಕೋರ ತಂಡಕ್ಕೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ.ಆದರೆ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಅವರ ಪ್ರತಿಕ್ರಿಯೆ ನೋಡಿದರೆ, ಅವರಿಗೆ ಇದು ಅರ್ಥವಾಗಿಲ್ಲ ಅಥವಾ ಅರ್ಥವಾಗಿಲ್ಲದಂತೆ ನಟಿಸುತ್ತಿದ್ದಾರೆ. “ಯು.ಎಸ್ ಅವನತಿ ಹೊಂದುತ್ತಿರುವ ದೇಶವೆಂದು ಶಿ ನಾಜೂಕಾಗಿ ಹೇಳಿದ್ದಾರೆ” ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಮುಂದುವರೆದು, ಆದರೆ ಅದು ತನ್ನ ಆಡಳಿತದ ಅವಧಿಯ ಬಗ್ಗೆ ಹೇಳಿದ್ದಲ್ಲ. “ಎರಡು ವರ್ಷಗಳ ಮೊದಲು ಯು.ಎಸ್ ಅವನತಿ ಹೊಂದುತ್ತಿರುವ ದೇಶವಾಗಿತ್ತು ನಿಜ” ವೆಂದು ಟ್ರಂಪ್ ಉದ್ಗರಿಸಿದ್ದಾರೆ. ಅಲ್ಲಿಗೆ ನಿಲ್ಲಿಸದೆ “ಈಗ ಯು.ಎಸ್ ಜಗತ್ತಿನಲ್ಲೇ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶ. ಚೀನಾದ ಜತೆ ನಮ್ಮ ಸಂಬಂಧ ಹೆಚ್ಚು ಘನಿಷ್ಟ ಮತ್ತು ಉತ್ತಮವಾಗಿರುತ್ತದೆಯೆಂದು ಆಶಿಸಬಹುದು” ಎಂದಿದ್ದಾರೆ.

ಇದನ್ನೂ ನೋಡಿ: ಎಲ್ಲವೂ ಸರಿಯಿದೆ ಎಂದು ಹೇಳುತ್ತಲೇ ಈಗ ಸಂಕಷ್ಟ ತಂದಿಟ್ಟರೇ ಮೋದಿಜೀ? ! ಬಿ.ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *