ಮಮತಾ ಬ್ಯಾನರ್ಜಿ: ಬಿತ್ತಿದ ಬೀಜದ ಫಲ, ಎದುರಿಸುವ ಕಾಲ

– ಹರೀಶ್ ಇಂಡಿಯಾ
ಮಮತಾ ತಮ್ಮ ಒಂದು ಭಾಷಣದಲ್ಲಿ ಆರ್‌ಎಸ್‌ಎಸ್‌ನ ಮೋಹನ್ ಭಾಗವತ್, ಶೇಷಾದ್ರಿ ಚಾರಿ ಮತ್ತು ಮದನ್ ದಾಸ್ ದೇವಿ ಅವರ ಹೆಸರನ್ನು ಪ್ರಸ್ತಾಪಿಸುತ್ತಾ, “ನನಗೆ ಆರ್‌ಎಸ್‌ಎಸ್‌ನ ಹೆಚ್ಚಿನ ನಾಯಕರು ಗೊತ್ತಿಲ್ಲ, ಆದರೆ ಅವರಲ್ಲಿ ಕೆಲವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ. ನೀವು ನಿಜವಾದ ದೇಶಪ್ರೇಮಿಗಳು. ನೀವು ನಿಮ್ಮ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ” ಎಂದಿದ್ದರು.

ಒಂದಾನೊಂದು ಕಾಲದಲ್ಲಿ ಆರ್‌ಎಸ್‌ಎಸ್‌ ಬಿಜೆಪಿ ನಾಯಕರು ದುರ್ಗೆ ಎಂದು ಕರೆದ ಮಮತಾ ಬ್ಯಾನರ್ಜಿ ರಾಜಕೀಯ ಇತಿಹಾಸ ಮತ್ತು ಸ್ವಯಂ ಕೃತ ಅಪರಾಧ. ಸುಮಾರು 29 ವರ್ಷಗಳ ಹಿಂದೆ, ಅಂದರೆ 1997ರಲ್ಲಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅನ್ನು ಒಡೆದು ಮುಕುಲ್ ರಾಯ್ ಅವರೊಂದಿಗೆ ಸೇರಿ ತೃಣಮೂಲ ಕಾಂಗ್ರೆಸ್ (TMC) ಸ್ಥಾಪಿಸಿದರು. ಆಗ ಅವರು CPM, CPI ಮತ್ತು ಕಾಂಗ್ರೆಸ್ ಅನ್ನು ಮುಗಿಸಲು ಪಶ್ಚಿಮ ಬಂಗಾಳಕ್ಕೆ ಬಿಜೆಪಿಯ ಪ್ರವೇಶಕ್ಕೆ ದಾರಿ ಮಾಡಿಕೊಟ್ಟರು. 

ಮುಂದೆ ಮುಕುಲ್ ರಾಯ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 1999ರಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರ್ಕಾರಕ್ಕೆ ಸೇರ್ಪಡೆಯಾಗಿ ರೈಲ್ವೆ ಸಚಿವರಾದರು.

ಇದನ್ನೂ ಓದಿ: ಮತ ಎಣಿಕೆ ಮಧ್ಯೆ ಮಮತಾ ಆರೋಪ: ‘ಅಂಕಿ-ಸಂಖ್ಯೆಗಳು ನಕಲಿ’

2001ರ ಆರಂಭದಲ್ಲಿ ‘ಆಪರೇಷನ್ ವೆಸ್ಟ್ ಎಂಡ್’ ಮೂಲಕ ರಕ್ಷಣಾ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ದೊಡ್ಡ ಪ್ರಕರಣ ಬಯಲಿಗೆ ಬಂದಾಗ, ಮಮತಾ ಎನ್‌ಡಿಎ ಸರ್ಕಾರದಿಂದ ಹೊರಬಂದರು. ಆದರೆ, ಆಗಸ್ಟ್ 2001ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ, ನಿಮ್ಮ ಪಕ್ಷವು ಮತ್ತೆ ಎನ್‌ಡಿಎಗೆ ಮರಳುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಅವರು “ಹೌದು, ಟಿಎಂಸಿಯ ಪ್ರಣಾಳಿಕೆಯ ಪ್ರಕಾರ ಬಿಜೆಪಿ ನಮ್ಮ ‘ಸ್ವಾಭಾವಿಕ ಮಿತ್ರ’ (Natural Ally)” ಎಂದು ಉತ್ತರಿಸಿದ್ದರು.

2003ರಲ್ಲಿ ಮಮತಾ ಮತ್ತೆ ಎನ್‌ಡಿಎ ಸರ್ಕಾರಕ್ಕೆ ಸೇರ್ಪಡೆಯಾದರು, ಆದರೆ ಕೆಲವು ತಿಂಗಳುಗಳ ಕಾಲ ಯಾವುದೇ ಖಾತೆ ಇಲ್ಲದ ಸಚಿವೆಯಾಗಿದ್ದರು. ಅದೇ ವರ್ಷ, ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ದ ಅಂದಿನ ಸಂಪಾದಕ ತರುಣ್ ವಿಜಯ್ ಅವರು ಬರೆದ ‘ಕಮ್ಯುನಿಸ್ಟ್ ಭಯೋತ್ಪಾದನೆ’ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಮತಾ ಪಾಲ್ಗೊಂಡಿದ್ದರು. ಅಲ್ಲಿ ತರುಣ್ ವಿಜಯ್ ಅವರನ್ನು ‘ಬಂಗಾಳದ ದುರ್ಗಾ’ ಎಂದು ಬಣ್ಣಿಸಿ ಸ್ವಾಗತಿಸಿದ್ದರು.

ಬಿಜೆಪಿಯ ರಾಜ್ಯಸಭಾ ಸಂಸದ ಬಲಬೀರ್ ಪುಂಜ್ ಸದನದಲ್ಲಿ ಮಾತನಾಡುತ್ತಾ ಮಮತಾ ಬಗ್ಗೆ, “ನಮ್ಮ ಪ್ರೀತಿಯ ಮಮತಾ ದೀದಿ ಸಾಕ್ಷಾತ್ ದುರ್ಗಾ ಸ್ವರೂಪಿ” ಎಂದು ಹೇಳಿದ್ದರು. (ಪುಂಜ್ ಅವರು ಹದಿನೈದು ದಿನಗಳ ಹಿಂದೆಯಷ್ಟೇ ನಿಧನರಾಗಿದ್ದಾರೆ). ಆರ್‌ಎಸ್‌ಎಸ್ ಕೂಡ ಮಮತಾ ಅವರನ್ನು ‘ಬಂಗಾಳದ ದುರ್ಗಾ’ ಎಂದು ಕರೆದಿತ್ತು ಮತ್ತು ಎಡಪಂಥೀಯರ ವಿರುದ್ಧದ ಅವರ ಹೋರಾಟಕ್ಕೆ ‘ಗಟ್ಟಿ ಬೆಂಬಲ’ ವ್ಯಕ್ತಪಡಿಸಿತ್ತು.

ಮಮತಾ ತಮ್ಮ ಒಂದು ಭಾಷಣದಲ್ಲಿ ಆರ್‌ಎಸ್‌ಎಸ್‌ನ ಮೋಹನ್ ಭಾಗವತ್, ಶೇಷಾದ್ರಿ ಚಾರಿ ಮತ್ತು ಮದನ್ ದಾಸ್ ದೇವಿ ಅವರ ಹೆಸರನ್ನು ಪ್ರಸ್ತಾಪಿಸುತ್ತಾ, “ನನಗೆ ಆರ್‌ಎಸ್‌ಎಸ್‌ನ ಹೆಚ್ಚಿನ ನಾಯಕರು ಗೊತ್ತಿಲ್ಲ, ಆದರೆ ಅವರಲ್ಲಿ ಕೆಲವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ. ನೀವು ನಿಜವಾದ ದೇಶಪ್ರೇಮಿಗಳು. ನೀವು ನಿಮ್ಮ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ” ಎಂದಿದ್ದರು.

2012ರಲ್ಲಿ ಆರ್‌ಎಸ್‌ಎಸ್ ಮುಖವಾಣಿ ‘ಪಾಂಚಜನ್ಯ’, ಮಮತಾ ಬ್ಯಾನರ್ಜಿ ಅವರ ಸರಳ ಜೀವನಶೈಲಿಯನ್ನು ಹೊಗಳಿ ಲೇಖನ ಬರೆದಿತ್ತು. “ರಾಜಕೀಯವನ್ನು ಹಣ ಮಾಡಲು ಬಳಸದ ಅಪರೂಪದ ರಾಜಕಾರಣಿಗಳಲ್ಲಿ ಮಮತಾ ಒಬ್ಬರು. ಇಂತಹ ರಾಜಕಾರಣಿಗಳು ದೇಶಕ್ಕೆ ಹೆಚ್ಚು ಹೆಚ್ಚು ಸಿಗಲಿ” ಎಂದು ಹೇಳಲಾಗಿತ್ತು.

2019ರಲ್ಲಿ ಮಮತಾ ಅವರು NRC ಮತ್ತು CAA ವಿರುದ್ಧ ಹಲವು ಹೋರಾಟಗಳನ್ನು ಮಾಡಿದರು. ಆದರೆ ಸಂಸತ್ತಿನಲ್ಲಿ CAA ಮೇಲೆ ಮತದಾನ ನಡೆದಾಗ, ಟಿಎಂಸಿಯ ಎಂಟು ಸಂಸದರು ರಹಸ್ಯವಾಗಿ ಗೈರುಹಾಜರಾಗಿದ್ದರು. ಇದರಿಂದಾಗಿ ಮಸೂದೆ ಅಂಗೀಕಾರವಾಯಿತು. ಮಮತಾ ಈ ಸಂಸದರನ್ನು ಕ್ಷಮಿಸಿದರು ಮತ್ತು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

27 ಜನವರಿ 2020 ರಂದು, ಅಂದಿನ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಮ್ಮ ಭಾಷಣದಲ್ಲಿ ‘ಗೋಲಿ ಮಾರೋ…’ ಎಂದು ಘೋಷಣೆ ಕೂಗಿಸಿದಾಗ, ಟಿಎಂಸಿ ನಾಯಕ ಶೇಖ್ ಆಲಂ ಅವರು ಮುರ್ಷಿದಾಬಾದ್‌ನಲ್ಲಿ ಸಿಎಎ ವಿರೋಧಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು.

2017ರಲ್ಲಿ ಬಿಜೆಪಿಗೆ ಹೋಗಿದ್ದ ಮುಕುಲ್ ರಾಯ್, 2021ರ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಟಿಎಂಸಿಗೆ ಮರಳಿದರು ಮತ್ತು ಮಮತಾ ಅವರನ್ನು ಸಂತೋಷದಿಂದ ಬರಮಾಡಿಕೊಂಡರು. ಚುನಾವಣೆಯ ಸಂದರ್ಭದಲ್ಲಿ ಮುಕುಲ್ ಪತ್ರಕರ್ತರೊಂದಿಗೆ ಮಾತನಾಡುತ್ತಾ “ಬಿಜೆಪಿ ಎಂದರೆ ಟಿಎಂಸಿಗೆ ಸಮಾನ” (BJP is equal to TMC) ಎಂದಿದ್ದರು.

ಜುಲೈ 2022ರಲ್ಲಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಅವರನ್ನು ಬೆಂಬಲಿಸಲು ಟಿಎಂಸಿ ನಿರಾಕರಿಸಿತು. ನಂತರ ಟಿಎಂಸಿ ಸಂಸದರು ಮತದಾನದಿಂದ ದೂರ ಉಳಿದರು (Abstain). ಇದರಿಂದ ಜಗದೀಪ್ ಧಂಖರ್ ಜಯಗಳಿಸಿದರು. ಬಂಗಾಳದ ರಾಜ್ಯಪಾಲರಾಗಿದ್ದಾಗ ತಮಗೆ ತೊಂದರೆ ನೀಡಿದ್ದ ಅದೇ ಧಂಖರ್ ಅವರಿಗೆ ಮಮತಾ ಸಹಾಯ ಮಾಡಿದರು.

ಸೆಪ್ಟೆಂಬರ್ 2022ರಲ್ಲಿ ಮಮತಾ ಅವರು ಆರ್‌ಎಸ್‌ಎಸ್ ಅನ್ನು ಮನಸಾರೆ ಶ್ಲಾಘಿಸಿದರು. “ಸಂಘದಲ್ಲಿ ಅನೇಕ ಒಳ್ಳೆಯ ಜನರಿದ್ದಾರೆ, ಸಂಘವು ಒಂದು ಒಳ್ಳೆಯ ಸಂಸ್ಥೆ” ಎಂದು ಹೇಳಿದರು.

ಈ ರೀತಿಯಾಗಿ BJD, BSP, SS, JDU, TRS, YSR, PDP ಪಕ್ಷಗಳ ನಂತರ ಈಗ ಟಿಎಂಸಿಯನ್ನು ಅದೇ ಹೆಬ್ಬಾವು ನುಂಗಿ ಹಾಕಿದೆ…

ಮಮತಾ ಬ್ಯಾನರ್ಜಿ ಕಮ್ಯೂನಿಸ್ಟ್ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ನಂತರ ಕೂಡ ಕಮ್ಯೂನಿಸ್ಟ್ ಪಕ್ಷವನ್ನು ಸರ್ವನಾಶ ಮಾಡಲು ಪಣ ತೊಟ್ಟಿದ್ದರು. ಈಗ ಬಿಜೆಪಿ ವಿಪಕ್ಷಗಳನ್ನು ಮುಗಿಸಲು ಏನೇನು ಮಾಡುತ್ತಿದೆಯೋ ಅದನ್ನು ಮಮತಾ ಬ್ಯಾನರ್ಜಿ ಹತ್ತು ವರ್ಷಗಳ ಹಿಂದೆಯೇ ಆರಂಭಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಕಮ್ಯೂನಿಸ್ಟ್ (CPIM) ಆಳ್ವಿಕೆಯನ್ನು ಅಂತ್ಯಗೊಳಿಸಿದ ನಂತರ, ಮಮತಾ ಬ್ಯಾನರ್ಜಿ ಅವರು ಆ ಪಕ್ಷದ ಪ್ರಭಾವವನ್ನು ನಾಶಮಾಡಲು ಬಳಸಿದ ಪ್ರಮುಖ ತಂತ್ರಗಳು ಹೀಗಿವೆ:

– ಕಮ್ಯೂನಿಸ್ಟರ ಸಂಘಟನೆ ಧ್ವಂಸ:

ರಾಜ್ಯಾದ್ಯಂತ ಇದ್ದ ಸಿಪಿಎಂ ಪಕ್ಷದ ಕಚೇರಿಗಳನ್ನು ಟಿಎಂಸಿ ವಶಕ್ಕೆ ಪಡೆಯಿತು. ಇದರಿಂದ ಕಮ್ಯೂನಿಸ್ಟ್ ಕಾರ್ಯಕರ್ತರ ಸಂಘಟನಾ ಶಕ್ತಿ ಕುಸಿಯಿತು.

– ಕಾರ್ಯಕರ್ತರ ಮೇಲೆ ನಿರಂತರ ದಾಳಿ ಭಯದಿಂದ ಕಾರ್ಯಕರ್ತರ ವಲಸೆ:

ಅಸ್ತಿತ್ವ ಉಳಿಸಿಕೊಳ್ಳಲು ಸಾವಿರಾರು ಕಮ್ಯೂನಿಸ್ಟ್ ಕಾರ್ಯಕರ್ತರು ಟಿಎಂಸಿ ಸೇರಿದರು. ಈ ಮೂಲಕ ಸಿಪಿಎಂನ ‘ಕ್ಯಾಡರ್ ಶಕ್ತಿ’ಯನ್ನು ಮಮತಾ ತಮ್ಮದಾಗಿಸಿಕೊಂಡರು.

– ಚುನಾವಣಾ ನಿಯಂತ್ರಣ:

ಪಂಚಾಯತ್ ಮಟ್ಟದಿಂದಲೇ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯುವ ಮೂಲಕ ಕಮ್ಯೂನಿಸ್ಟರನ್ನು ಚುನಾವಣಾ ರಾಜಕೀಯದಿಂದಲೇ ದೂರವಿಟ್ಟರು.

– ಶೂನ್ಯ ಪ್ರಾತಿನಿಧ್ಯ:

2011ರಲ್ಲಿ ನೂರಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದ ಸಿಪಿಎಂ, ಮಮತಾ ಅವರ ತಂತ್ರಗಾರಿಕೆಯಿಂದಾಗಿ 2021ರ ಚುನಾವಣೆಯಲ್ಲಿ ಶೂನ್ಯ (Zero) ಸ್ಥಾನಕ್ಕೆ ಕುಸಿಯಿತು.
ಒಂದು ಖಾಲಿ ಜಾಗ ಇದ್ದರೆ ಅಲ್ಲಿ ಏನಾದರೂ ಬೆಳೆದೇ ಬೆಳೆಯುತ್ತದೆ ಇದು ಪ್ರಕೃತಿ ನಿಯಮ ಎಂದು ಮಮತಾ ಮರೆತು ಬಿಟ್ಟಿದ್ದರು.

– ಪರಿಣಾಮ: ಕಮ್ಯೂನಿಸ್ಟರನ್ನು ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕುವಲ್ಲಿ ಮಮತಾ ಯಶಸ್ವಿಯಾದರು. ಆದರೆ ಇದರಿಂದ ಸೃಷ್ಟಿಯಾದ ಖಾಲಿ ಜಾಗವನ್ನು ಇಂದು ಬಿಜೆಪಿ ಆಕ್ರಮಿಸಿಕೊಂಡಿದೆ, ಇಂದು ಅದೇ ಬಿಜೆಪಿಯಿಂದ ಮಮತಾ ಅಧಿಕಾರ ಕಳೆದುಕೊಂಡಿದ್ದಾರೆ ಸೇಡಿನ ರಾಜಕೀಯ ಕುತಂತ್ರ ರಾಜಕೀಯ ಹೀನಾಯವಾಗಿ ಸೋತು ಹೋಯಿತು.

ಮಮತಾ ಬ್ಯಾನರ್ಜಿ ಅವರು ಏನನ್ನು ಬಿತ್ತಿದ್ದಾರೋ ಅದನ್ನೇ ಈಗ ಕೊಯ್ಯುತ್ತಿದ್ದಾರೆ. ‘ಇಂಡಿಯಾ’ (INDIA) ಮೈತ್ರಿಕೂಟವನ್ನು ಮುರಿದು ಅವರು ಬಿತ್ತಿದ ಬೀಜದ ಫಲವನ್ನು ಉಣ್ಣುತ್ತಿದ್ದಾರೆ. ಈಗ ಅವರ ಪಕ್ಷದ ಸಂಸದರ ಸ್ಥಿತಿ ರಾಘವ್ ಚಡ್ಡಾ ಅವರಂತಾಗುವುದು ಖಚಿತ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 171 | ಫಾಲ್ಸ್‌ ಮೆಮರಿ ಮತ್ತು ವಾಸ್ತವದ ಗಡಿ -“ಫಾದರ್‌” ಸಿನಿಮಾ ವಿಮರ್ಶೆ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *