ಬೆಂಗಳೂರು: ‘ಗ್ರಂಥಾಲಯ ಇಲಾಖೆಗೆ ಚಿಕಿತ್ಸೆ ನೀಡುವ ಜತೆಗೆ ಸಮಗ್ರ ಪುಸ್ತಕ ನೀತಿಯನ್ನು ಸರ್ಕಾರ ರೂಪಿಸಬೇಕು’ ಎಂದು ಕರ್ನಾಟಕ ಪ್ರಕಾಶಕರ ಸಂಘ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏಪ್ರಿಲ್ 23ರಂದು ಆಯೋಜಿಸಿದ್ದ ವಿಶ್ವ ಪುಸ್ತಕ ಹಾಗೂ ಕೃತಿಸ್ವಾಮ್ಯ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂಧರ ಭೂಪತಿ ಒತ್ತಾಯಿಸಿದರು. ಸಮಗ್ರ
‘ಗ್ರಂಥಾಲಯ ಇಲಾಖೆ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡದೇ ಇರುವುದರಿಂದ ಸಮಗ್ರ ನೀತಿ ತಂದರೆ ಒಳ್ಳೆಯದಾಗಬಹುದು. ಇಲ್ಲದೇ ಇದ್ದರೆ ಇಲಾಖೆ ಖರೀದಿಸಿದ ಪುಸ್ತಕಗಳು ಓದುಗರಿಗೆ ತಲುಪದೇ ಗೋದಾಮುಗಳಲ್ಲಿ ಉಳಿಯಲಿದೆ’ ಎಂದು ಹೇಳಿದರು.
‘ಇದರ ಜತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹ ಮಾಡುತ್ತಿರುವ ಗ್ರಂಥಾಲಯ ಕರವನ್ನು ಪ್ರತ್ಯೇಕ ಶೀರ್ಷಿಕೆಯಡಿ ಸಂಗ್ರಹಿಸಿ ಗ್ರಂಥಾಲಯ, ಪುಸ್ತಕ ಸಂಸ್ಕೃತಿ ಬೆಳೆಸಲು ಬಳಸುವಂತಾಗಬೇಕು. ಶಿಕ್ಷಣ ಇಲಾಖೆಯೂ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಕಡ್ಡಾಯವಾಗಿ ಗ್ರಂಥಾಲಯ ಆರಂಭಿಸಲು ಕ್ರಮ ವಹಿಸಬೇಕು’ ಎಂದರು.
ಇದನ್ನೂ ಓದಿ: ಮಿರ್ಜಾಪುರ್| ಹಲವು ವಾಹನಗಳ ಸರಣಿ ಅಪಘಾತದಲ್ಲಿ 11 ಮಂದಿ ಸಾವು
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ, ‘ಹಿಂದೆಲ್ಲಾ ಓದುವ, ಬರೆಯುವ ವಿದ್ವಾಂಸರಿದ್ದರು. ಪಾಠ ಕೇಳಿಸಿಕೊಂಡು ವಿದ್ಯಾರ್ಥಿಗಳೂ ಪುಸ್ತಕ ಓದುತ್ತಿದ್ದರು. ಈಗ ಕಾಲೇಜುಗಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಸಲು ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸಬೇಕು‘ ಎಂದು ಸಲಹೆ ನೀಡಿದರು.
ಪತ್ರಕರ್ತೆ ಶಾಂತಲಾ ಧರ್ಮರಾಜ್ ಮಾತನಾಡಿ, ‘ದಾನಚಿಂತಾಮಣಿ ಅತ್ತಿಮಬ್ಬೆ ಅವರೇ ಕನ್ನಡದ ಮೊದಲ ಪ್ರಕಾಶಕಿ. ಆಗಲೇ ಕೈಯಲ್ಲಿ ಬರೆದು 1 ಸಾವಿರ ಕೃತಿಯನ್ನು ಜನಾರ್ಪಣೆಗೊಳಿಸಿದ ಹಿರಿಮೆ ಅವರದ್ದು. ಅವರ ಹೆಸರಲ್ಲಿ ಪ್ರಕಾಶಕರ ಸಂಘ ಕಾರ್ಯಕ್ರಮ ರೂಪಿಸಬೇಕು’ ಎಂದರು.
ಇದೇ ವೇಳೆ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ಬಳ್ಳಾರಿಯ ಪಲ್ಲವ ಪ್ರಕಾಶನದ ಕೆ.ವೆಂಕಟೇಶ್, ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿಯನ್ನು ಉತ್ತರ ಕನ್ನಡದ ಬಂಡಾಯ ಪ್ರಕಾಶನದ ಯಮುನಾ ಗಾಂವ್ಕರ್ ಅವರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರಿನ ಎಂ.ವೆಂಕಟೇಶ್( ಮುದ್ರಣ), ಜಿ.ಅರುಣ್ ಕುಮಾರ್( ಪುಸ್ತಕ ವಿನ್ಯಾಸ), ವೈ.ಜಿ.ಮುರಳೀಧರನ್( ಪುಸ್ತಕ ಅರಿವು), ಎಚ್.ಎ.ಪುರುಷೋತ್ತಮರಾವ್ ಹಾಗೂ ವಿಜಯಲಕ್ಷ್ಮಿ ಕತ್ತಿ( ಪುಸ್ತಕ ಪರಿಚಾರಿಕೆ) ಗೌರವವನ್ನು ಸ್ವೀಕರಿಸಿದರು.
ಸಂಘದ ಉಪಾಧ್ಯಕ್ಷರಾದ ಜಿ.ಎನ್.ಮೋಹನ್, ಯು.ಪ್ರೇಮಚಂದ್ರ, ಕಾರ್ಯದರ್ಶಿ ನ.ರವಿಕುಮಾರ್, ಜಂಟಿ ಕಾರ್ಯದರ್ಶಿ ನಿಂಗರಾಜ ಚಿತ್ತಣ್ಣನವರ್, ಖಜಾಂಚಿ ರಾಜೇಂದರ ಪ್ರಸಾದ್ ಉಪಸ್ಥಿತರಿದ್ದರು.
ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ:
‘ಗ್ರಂಥಾಲಯ ಇಲಾಖೆ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಪ್ರಕಾಶಕರ ಸಂಘದ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ವಿಶ್ವ ಪುಸ್ತಕ ದಿನದಲ್ಲಿ ಆಕ್ರೋಶ ಹೊರ ಹಾಕಿದರು.
‘2020 ರಲ್ಲಿ ಖರೀದಿ ಮಾಡಿದ ಪುಸ್ತಕಗಳ ಲೇಖಕರು ಹಾಗೂ ಪ್ರಕಾಶಕರ ಬಾಕಿಯನ್ನೂ ಈವರೆಗೂ ಬಿಡುಗಡೆ ಮಾಡಿಲ್ಲ. 2022ರಲ್ಲಿ ಆಯ್ಕೆ ಮಾಡಿದ ಪಟ್ಟಿ ಬಿಡುಗಡೆ ಮಾಡಿಲ್ಲ. ಗ್ರಂಥಾಲಯ ಇಲಾಖೆ ಕಾರ್ಯವೈಖರಿ ಸರಿಪಡಿಸಿಕೊಳ್ಳುವುದು ಸೇರಿದಂತೆ ಹಲವು ವಿಚಾರವಾಗಿ 180 ಬಾರಿ ಪತ್ರ ಬರೆದರೂ ಒಂದು ಬಾರಿಯೂ ಉತ್ತರ ನೀಡಿಲ್ಲ. ಆಯವ್ಯಯವನ್ನು ಬರೀ 15 ನಿಮಿಷದಲ್ಲಿ ಮಂಡಿಸಿ ಅನುಮತಿ ಪಡೆದರೂ ಬಳಸದೇ ಇರುವುದನ್ನು ವಿರೋಧಿಸಿ ನಮ್ಮ ಪ್ರತಿಭಟನೆ ದಾಖಲಿಸಿದ್ದೇವೆ’ ಎಂದು ಸಂಘದ ಕಾರ್ಯದರ್ಶಿ ನ.ರವಿಕುಮಾರ್ ಹೇಳಿದರು.
ಇದನ್ನೂ ನೋಡಿ: ‘ಡ್ರೋನ್-ಸಂತೆ’ ಯಲ್ಲೊಂದು ದಿನ….. Janashakthi Media
