ಪಳಣಿ (ತಮಿಳುನಾಡು): ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ತೀವ್ರಗೊಂಡಿರುವ ನಡುವೆಯೇ ನಟ ಪ್ರಕಾಶ್ ರಾಜ್ ಅವರು ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿನೆಮಾದ ಮೂಲಕ ಗಳಿಸಿದ ಅಭಿಮಾನಿ ಬಳಗವನ್ನು ರಾಜಕೀಯ ಲಾಭಕ್ಕೆ ಬಳಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು. ಚಿತ್ರರಂಗದ
ಪಳಣಿಯಲ್ಲಿ ಧರ್ಮನಿರಪೇಕ್ಷ ಪ್ರಗತಿಪರ ಮೈತ್ರಿ (ಎಸ್‌ಪಿಎ) ಬೆಂಬಲಿತ ಸಿಪಿಐ(ಎಂ) ಅಭ್ಯರ್ಥಿ ಎನ್. ಪಾಂಡಿ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಇಂದಿನ ರಾಜಕೀಯವನ್ನು ಮೂರು ಮಾದರಿಗಳಾಗಿ ವಿಂಗಡಿಸಿದರು. ದ್ರಾವಿಡ ಮಾದರಿ, ದಾಸ್ಯ ಮಾದರಿ ಮತ್ತು ಸಿನೆಮಾ ಮಾದರಿ.
ಚಿತ್ರರಂಗದ ತಾರೆಯರು ರಾಜಕೀಯಕ್ಕೆ ಪ್ರವೇಶಿಸುವ ಬೆಳವಣಿಗೆಯನ್ನು ವ್ಯಂಗ್ಯವಾಗಿ ಟೀಕಿಸಿದ ಅವರು, ಪರದೆಯ ಮೇಲೆ ನಿರ್ವಹಿಸುವ ಪಾತ್ರಗಳು ನೈಜ ರಾಜಕೀಯ ಹೊಣೆಗಾರಿಕೆಗೆ ಪರ್ಯಾಯವಾಗಲಾರವು ಎಂದು ಹೇಳಿದರು.
“ಸಿನೆಮಾದಲ್ಲಿ ನೀವು ವೈದ್ಯರಾಗಬಹುದು, ಇಂಜಿನಿಯರ್ ಆಗಬಹುದು, ಮುಖ್ಯಮಂತ್ರಿಯಾಗಬಹುದು. ಆದರೆ ನೈಜ ಜೀವನದಲ್ಲಿ ರಾಜಕೀಯಕ್ಕೆ ನಿಜವಾದ ಬದ್ಧತೆ ಅಗತ್ಯ,” ಎಂದು ಅವರು ಹೇಳಿದರು.
ಜನರು ನಟರನ್ನು ಮೆಚ್ಚಬಹುದು, ಅವರಿಗಾಗಿ ಕೂಗಬಹುದು, ಚಿತ್ರಮಂದಿರಗಳಲ್ಲಿ ಸಂಭ್ರಮಿಸಬಹುದು. ಆದರೆ ಅದೇ ಆಧಾರದಲ್ಲಿ ಆಡಳಿತದ ಹೊಣೆಗಾರಿಕೆಯನ್ನು ಒಪ್ಪಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು. ಚಿತ್ರರಂಗದ
ಇದನ್ನೂ ಓದಿ : ಎನ್ಡಿಎಗೆ ದೊಡ್ಡ ಸೋಲು; ಡಿಲಿಮಿಟೇಶನ್ ಮಸೂದೆಗೆ ಸಿಗದ ಬಹುಮತ

ತಮಿಳುನಾಡಿನಲ್ಲಿ ಭಾಷೆ ಮತ್ತು ಪ್ರಾದೇಶಿಕ ಗೌರವಕ್ಕೆ ಸಂಬಂಧಿಸಿದ ಪ್ರಮುಖ ಸಂಕಷ್ಟಗಳ ಸಮಯದಲ್ಲಿ ವಿಜಯ್ ಜನರೊಂದಿಗೆ ನಿಂತರೇ? ತಮಿಳು ಭಾಷೆಯ ಗೌರವಕ್ಕಾಗಿ ಧ್ವನಿ ಎತ್ತಿದರೇ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
“ಜನರು ನಟರ ಮೇಲೆ ತೋರಿಸುವ ಪ್ರೀತಿ ಅವರ ಅಭಿನಯದ ಕಾರಣದಿಂದಲೇ. ಅದನ್ನು ರಾಜಕೀಯ ಬೆಂಬಲವೆಂದು ಭಾವಿಸಬಾರದು,” ಎಂದು ಅವರು ಹೇಳಿದರು.
“ಈ ಚುನಾವಣೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸ್ಪರ್ಧೆಯಲ್ಲ. ವಿಜಯ್ ಹೇಳುವಂತೆ ಟಿವಿಕೆ ಮತ್ತು ಡಿಎಂಕೆ ನಡುವಿನ ಹೋರಾಟವೂ ಅಲ್ಲ. ಇದು ಏಕತೆ ಮತ್ತು ಸಮುದಾಯವಾದದ ನಡುವಿನ ಆಯ್ಕೆ,” ಎಂದು ಅವರು ಬಿಜೆಪಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
“ತಮಿಳುನಾಡು ಹಿಂದಿ ಹೇರಿಕೆ ಹಾಗೂ ನೀಟ್ ವಿರುದ್ಧ ನಿರಂತರವಾಗಿ ಹೋರಾಡಿ ದೇಶಕ್ಕೆ ಮಾದರಿಯಾಗಿದೆ. ಆ ಪರಂಪರೆಯನ್ನು ಉಳಿಸಬೇಕಾದರೆ ಮತದಾರರು ಏಕತೆ ಮತ್ತು ವಿಭಜನೆಯ ನಡುವೆ ಸ್ಪಷ್ಟ ಆಯ್ಕೆ ಮಾಡಬೇಕು,” ಎಂದು ಹೇಳಿದರು.
ಸಿನೆಮಾ ಮತ್ತು ರಾಜಕೀಯದ ನಡುವಿನ ವ್ಯತ್ಯಾಸವನ್ನು ಮತದಾರರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ರಾಜ್ಯದ ಭವಿಷ್ಯಕ್ಕಾಗಿ ರಾಜಕೀಯ ಅರಿವು ಮತ್ತು ಬದ್ಧತೆಯುಳ್ಳ ನಾಯಕರನ್ನೇ ಆಯ್ಕೆ ಮಾಡಬೇಕು ಎಂದು ಕರೆ ನೀಡಿದ ಅವರು, ಎಡಪಕ್ಷಗಳ ಅಭ್ಯರ್ಥಿಗಳ ಗೆಲುವಿಗೂ ಮನವಿ ಮಾಡಿದರು.
ಇದನ್ನೂ ನೋಡಿ : ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media
