ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿರುವ ಷರತ್ತುಗಳನ್ನು ತಿರಸ್ಕರಿಸಿದ ಮಹಿಳಾ ಸಂಘಟನೆಗಳು

ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ತಳುಕು ಹಾಕುವುದು ನ್ಯಾಯವನ್ನು ವಿಳಂಬಗೊಳಿಸುವ ತಂತ್ರ-ಮಹಿಳಾ ಸಂಘಟನೆಗಳ ಆಕ್ರೋಶ

 ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ ಅಧಿನಿಯಮ್ (NSVA) ಗೆ ತಿದ್ದುಪಡಿಗಳನ್ನು ತರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಮುಖ ಮಹಿಳಾ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ, ಇದು ಕಾರ್ಯವಿಧಾನದ ಬದಲಾವಣೆಗಳ ನೆಪದಲ್ಲಿ ಮಹಿಳಾ ಮೀಸಲಾತಿಯನ್ನು ದುರ್ಬಲಗೊಳಿಸುವ ಮತ್ತು ವಿಳಂಬಗೊಳಿಸುವ ಲೆಕ್ಕಾಚಾರ ಹಾಕಿರುವ ಪ್ರಯತ್ನವಾಗಿದೆ ಎಂದು ಅವು ಬಣ್ಣಿಸಿವೆ.

ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (NFIW), ಅಖಿಲ ಭಾರತ ಜನವಾದಿ ಮಹಿಳಾ ಸಂಘ (AIDWA), ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (AIPWA), ಮತ್ತು POW-PMS-IJM (AI POW-PMS-IJM) ನ ಅಖಿಲ ಭಾರತ ಸಮನ್ವಯ ಸಮಿತಿ ಸೇರಿದಂತೆ ಈ ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಸಮಾಲೋಚನೆಯಿಲ್ಲದೆ ಒಂದು ಮಹತ್ವದ ಶಾಸನವನ್ನು ಪಾಸು ಮಾಡಿಸಿಕೊಳ್ಳಲು ಪ್ರಜಾಪ್ರಭುತ್ವದ ವಿಧಿ-ವಿಧಾನಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿವೆ.

ಇದನ್ನೂ ಓದಿ: ಹೊರ್ಮುಝ್ ಜಲಸಂಧಿಯ ನಿರ್ವಹಣೆಯಲ್ಲಿ ಇರಾನ್ ಪಾತ್ರ ಕಾನೂನುಬದ್ಧವೇ?

ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಅನಿರ್ದಿಷ್ಟವಾಗಿ ಮುಂದೂಡಲು ಇಂತಹ ಷರತ್ತುಗಳನ್ನು ಬಳಸಲಾಗುತ್ತಿದೆ ಎನ್ನುತ್ತ ಈ ಸಂಘಟನೆಗಳು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕುವುದನ್ನು ತಿರಸ್ಕರಿಸಿವೆ. “ಮಹಿಳಾ ಮೀಸಲಾತಿ ಜನಸಂಖ್ಯೆಯ ಬಳಕೆಗಳ ಮೇಲೆ ಅವಲಂಬಿತವಾಗಿಲ್ಲ. ಈ ಕೊಂಡಿ ನ್ಯಾಯವನ್ನು ವಿಳಂಬಗೊಳಿಸುವ ತಂತ್ರವಲ್ಲದೆ ಬೇರೇನೂ ಅಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೂರ್ವಭಾವಿ ಷರತ್ತಾಗಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಗಳನ್ನು ಅವರು ವಿರೋಧಿಸುತ್ತ ಮಹಿಳಾ ಸಂಘಟನೆಗಳು ಕ್ಷೇತ್ರ ಮರುವಿಂಗಡಣೆಯ ಬಗ್ಗೆ ಸ್ಪಷ್ಟತೆಯ ಕೊರತೆಯತ್ತ ಬೊಟ್ಟು ಮಾಡಿ, ಇಂತಹ ನಡೆಗಳು ನಿಜವಾದ ಪ್ರಾತಿನಿಧ್ಯವನ್ನು ಮುಂದೂಡುತ್ತವೆಯಷ್ಟೇ ಎಂದು ಎಚ್ಚರಿಸಿವೆ. ಇದು “ಪಿತೃಪ್ರಧಾನ ಮನಸ್ಥಿತಿ”ಯಲ್ಲಿ ಬೇರೂರಿರುವ ವಿಧಾನವಾಗಿದ್ದು, ಮಹಿಳಾ ಸಬಲೀಕರಣಕ್ಕೆ ನಿಜವಾದ ಬದ್ಧತೆಯ ಬದಲಿಗೆ ಚುನಾವಣಾ ಲೆಕ್ಕಾಚಾರಗಳಿಂದ ಚಾಲಿತವಾಗಿವೆ ಎಂದು ಈ ಮಹಿಳಾ ಸಂಘಟನೆಗಳು ಬಣ್ಣಿಸಿವೆ.

ಪ್ರಸ್ತಾವಿತ ತಿದ್ದುಪಡಿಗಳನ್ನು ಎಂತಹ  ಸಮಯದಲ್ಲಿ ತರಲಾಗುತ್ತಿದೆ ಎಂಬುದನ್ನು  ಪ್ರಶ್ನಿಸಿರುವ ಸಂಘಟನೆಗಳು, ನಡೆಯುತ್ತಿರುವ ಚುನಾವಣೆಗಳು ನಡೆಯುತ್ತಿರುವ ನಡುವೆ ಇಂತಹ  ಮಸೂದೆಯನ್ನು ತರುವುದು ಪ್ರಜಾಸತ್ತಾತ್ಮಕ  ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅರ್ಥಪೂರ್ಣ ಸಾರ್ವಜನಿಕ ಚರ್ಚೆಯನ್ನು ನಿರ್ಬಂಧಿಸುತ್ತದೆ ಎಂದು ಹೇಳಿವೆ. ಸರ್ಕಾರವು ಒಂದು ಕಷ್ಟಪಟ್ಟು ಗೆದ್ದ ಚಳುವಳಿಯನ್ನು ರಾಜಕೀಯ ಲಾಭಕ್ಕಾಗಿ “ಹೈಜಾಕ್” ಮಾಡಲು ಪ್ರಯತ್ನಿಸುತ್ತಿದೆ ಎಂದು ಅವು  ಆರೋಪಿಸಿವೆ..

ಮಹಿಳಾ ಮೀಸಲಾತಿ ಮಸೂದೆಗಾಗಿ ದಶಕಗಳ ಹೋರಾಟವನ್ನು ನೆನಪಿಸಿಕೊಳ್ಳುತ್ತ, ಸಂಸತ್ತಿನೊಳಗೆ ಈ ಗುರಿ ಸಾಧನೆಯತ್ತ  ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೀತಾ ಮುಖರ್ಜಿಯವರಂತಹ ನಾಯಕಿಯರಿಗೆ ಗೌರವ ಸಲ್ಲಿಸಿದ ಈ ಹೇಳಿಕೆಯು, ಯಾವುದೇ ಷರತ್ತುಗಳಿಲ್ಲದೆ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು, SC/ST ಕೋಟಾಗಳನ್ನು ಅದರ ಚೌಕಟ್ಟಿನೊಳಗೆ ಸೇರಿಸಬೇಕು ಮತ್ತು OBC ಮಹಿಳೆಯರಿಗೆ ಮೀಸಲಾತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಪಡಿಸಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕೆಂದು  ಕರೆ ನೀಡುತ್ತ, ಸರಿಯಾದ ಚರ್ಚೆಯಿಲ್ಲದೆ ತಿದ್ದುಪಡಿಗಳನ್ನು ಅಂಗೀಕರಿಸುವ ಯಾವುದೇ ಪ್ರಯತ್ನವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಅವು ಒತ್ತಾಯಿಸಿವೆ.

ಈ ಜಂಟಿ ಹೇಳಿಕೆ ಮುಂದಿಟ್ಟಿರುವ ಬೇಡಿಕೆಗಳು ಹೀಗಿವೆ:

  1. 2023 ರ ಮಸೂದೆಯಲ್ಲಿರುವ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ ಷರತ್ತುಗಳನ್ನು ತೆಗೆದುಹಾಕಿ, ಈ ಹಿಂದೆ ಅಂಗೀಕರಿಸಿದಂತೆ ಮಹಿಳಾ ಮೀಸಲಾತಿ ಮಸೂದೆಯ ತಕ್ಷಣದ ಅನುಷ್ಠಾನವನ್ನು ಖಚಿತಪಡಿಸಬೇಕು
  2. ಎಸ್‌ಟಿ/ಎಸ್‌ಸಿ ಮೀಸಲು ಮಹಿಳಾ ಮೀಸಲಾತಿ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಒಬಿಸಿ ಮಹಿಳೆಯರಿಗೆ ಮೀಸಲಾತಿಯ ವಿಷಯವನ್ನು ಪರಿಗಣಿಸಬೇಕಾಗಿದೆ.
  3. ಕ್ಷೇತ್ರ ಮರುವಿಂಗಡಣೆಯೊಂದಿಗೆ ತಳುಕು ಹಾಕಿರುವುದು ಸಂಪೂರ್ಣ ತಪ್ಪು, ಏಕೆಂದರೆ ಮಹಿಳಾ ಮೀಸಲಾತಿ ಜನಸಂಖ್ಯೆಯನ್ನು ಆಧರಿಸಿಲ್ಲ.
  4. ಮಹಿಳಾ ಮೀಸಲಾತಿ ಒಂದು ಸ್ವತಂತ್ರ ಹೆಜ್ಜೆಯಾಗಿದ್ದು, ಇದನ್ನು ಇತರ ಕಾರ್ಯಸೂಚಿಗಳಿಂದ ಬೇರ್ಪಡಿಸಬೇಕು.
  5. ಸಂಬಂಧಪಟ್ಟ ಎಲ್ಲರೊಂದಿಗೆ ಸರಿಯಾದ ಸಮಾಲೋಚನೆ ನಡೆಸಬೇಕು..
  6. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚರ್ಚೆಯಿಲ್ಲದೆ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸುವ ಯಾವುದೇ ಪ್ರಯತ್ನವನ್ನು ಹಿಂಪಡೆಯಬೇಕು..
  7. ಹೋರಾಟದ ನೇತೃತ್ವ ವಹಿಸಿರುವ ಮಹಿಳಾ ಸಂಘಟನೆಗಳು ಮೋದಿ ಸರ್ಕಾರವು ಇಂತಹ ಚಾಲಾಕಿತನದ ಮೂಲಕ ಅದನ್ನು ಅಪಹರಿಸುವುದನ್ನು ವಿರೋಧಿಸುತ್ತವೆ.

ಮಹಿಳಾ ಸಬಲೀಕರಣವನ್ನು ಸಾಂಕೇತಿಕ ಘೋಷಣೆಗಳಿಗೆ ಸೀಮಿತಗೊಳಿಸಲಾಗದು ಎಂಬುದನ್ನು ಪುನರುಚ್ಛರಿಸುತ್ತ ಈ ಮಹಿಳಾ ಸಂಘಟನೆಗಳು, ಇದನ್ನು ಪ್ರಾಮಾಣಿಕ, ಪಾರದರ್ಶಕ ಮತ್ತು ಸಮಯಬದ್ಧ ಕ್ರಿಯೆಯ ಮೂಲಕ ಈಡೇರಿಸಬೇಕು ಎಂದು ಹೇಳಿವೆ.

ಇದನ್ನೂ ನೋಡಿ: ಡಿಲಿಮಿಟೇಶನ್: ನ್ಯಾಯದ ಮುಖವಾಡದಲ್ಲಿ ಪ್ರಾಬಲ್ಯದ ರಾಜಕಾರಣ! Janashakthi Media

Donate Janashakthi Media

Leave a Reply

Your email address will not be published. Required fields are marked *