ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದು, ‘ನಾನು ಯಾವುದೇ ಮುಚ್ಚುಮರೆ ಮಾಡಿಲ್ಲ. ಕೆಪಿಸಿಸಿ ಸಭೆಯಲ್ಲೇ ಮುಕ್ತವಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕೇಳಿದ್ದೆ’ ಎಂದು ಹೇಳಿದರು.
ಜಬ್ಬಾರ್ ಅವರ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಬ್ಬಾರ್ ರಾಜೀನಾಮೆ ನೀಡಿದ ಸಂದರ್ಭದಲ್ಲಿ ತಾನು ಅಲ್ಲಿರಲಿಲ್ಲ. ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ಕೈಬಿಟ್ಟ ವಿಚಾರವೂ ನನಗೆ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ವಿಚಾರಿಸುತ್ತೇನೆ ಎಂದರು.
ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಕಾಯ್ದೆ ತಿದ್ದುಪಡಿ ವಿರುದ್ಧ ಟೀಕೆ: ಸ್ವಯಂ ಗುರುತಿನ ಹಕ್ಕು ಕಡಿತ ಆರೋಪ
ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಟಿಕೆಟ್ ವಿಚಾರವಾಗಿ ಅಸಮಾಧಾನ ಇದ್ದದ್ದು ಸತ್ಯ. ಆದರೆ ನಂತರ ಪಕ್ಷದ ಅಭ್ಯರ್ಥಿ ಸಮರ್ಥ್ ಅವರಿಗೆ ಬೆಂಬಲ ನೀಡಿದ್ದಾರೆ. ನಾವು ಅಲ್ಲಿ ಶೇ.100 ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮುಸ್ಲಿಂ ಸಮುದಾಯದ ಸುಪ್ರೀಂ ನಾಯಕನಲ್ಲ. ನಾನು ಕೇವಲ ಕಾಂಗ್ರೆಸ್ ಕಾರ್ಯಕರ್ತ ಮತ್ತು ಜನಸೇವಕ. ನಾಯಕತ್ವದ ಆಸೆ ನನಗೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಾವಣಗೆರೆಯ ಎಲ್ಲಾ ಅಲ್ಪಸಂಖ್ಯಾತ ಮುಖಂಡರ ಸಮ್ಮುಖದಲ್ಲಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಜಬ್ಬಾರ್ ಅವರಿಗೆ ಸಾಧ್ಯವಿಲ್ಲ ಎಂದಾಗ, ಇತರರಿಗೆ ಅವಕಾಶ ನೀಡಿ ಎಂದು ಕೇಳಿದ್ದೆ ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಕುರಿತು ಮಾತನಾಡಿದ ಅವರು, ಯಾರಾದರೂ ಹೆಸರು ಹೇಳಬೇಕು. ಆರೋಪ ಮಾಡುವುದರಿಂದ ಏನೂ ಆಗುವುದಿಲ್ಲ ಎಂದರು.
ನಝೀರ್ ಅಹ್ಮದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಬಾಗಲಕೋಟೆಯಲ್ಲಿ ಜವಾಬ್ದಾರಿ ನೀಡಲಾಗಿತ್ತು. ನಾನು ದಾವಣಗೆರೆಗೆ ಬರುತ್ತೇನೆ ಎಂದಾಗ, ಅವರಿಗೆ ಅಲ್ಲಿಯೇ ಕೆಲಸ ಮಾಡಲು ಸೂಚಿಸಲಾಗಿತ್ತು ಎಂದು ಹೇಳಿದರು.
ಜಬ್ಬಾರ್ ಅವರು ಮಲ್ಲಿಕಾರ್ಜುನ ಅವರ ಮನೆಗೆ ಭೇಟಿ ನೀಡದಿರುವ ಕುರಿತು ಮಾತನಾಡಿದ ಅವರು, ಮಲ್ಲಿಕಾರ್ಜುನ ಅವರು ಪಕ್ಕದ ಮನೆಗೆ ಬಂದಿದ್ದರೂ ನಮ್ಮ ಮನೆಗೆ ಬರಲಿಲ್ಲ. ಇದರಿಂದ ಅವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ ಅವರು ಹೋಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅವರ ಆರೋಗ್ಯವೂ ಸರಿಯಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದರು.
ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಇಂತಹ ಪ್ರಯತ್ನಗಳು ಸಹಜ. ಪ್ರತಿಯೊಬ್ಬರೂ ತಮ್ಮ ಪ್ರಯತ್ನ ಮಾಡುತ್ತಾರೆ. ಯಾರು ಮಂತ್ರಿಯಾಗಿದ್ರೂ ನನಗೆ ಸಂತೋಷ ಎಂದು ಹೇಳಿದರು.
ತಾವು ಯಾವುದೇ ಮುಚ್ಚುಮರೆ ಮಾಡಿಲ್ಲ, ಪಕ್ಷದ ಸಭೆಯಲ್ಲೇ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ತೆರೆಯಾಗಿ ಕೇಳಿದ್ದೇನೆ ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ಗಾಳಿ ದುರಗಪ್ಪ ಫ್ಯೂಷನ್ ಮ್ಯೂಸಿಕ್ – ತಲೆದೂಗದೆ ಇರೋದು ಅಸಾಧ್ಯ! Janashakthi Media
