ಬೆಂಗಳೂರು: ನಾನು ಎಲ್ಲೇ ಇದ್ದರೂ ಸಮಾನತೆಯನ್ನು ಕಾಪಾಡಿಕೊಳ್ಳುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡುತ್ತಾ, ಸಮಾನವಾಗಿ ಮಾತನಾಡಿಸುತ್ತೇನೆ. ಜೀವನದಲ್ಲಿ ಯಾರೂ ಬಡವರಾಗಿ ಬದುಕಬಾರದು. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಏಪ್ರಿಲ್ 13ರಂದು ನಗರದ ಸ್ಫೂರ್ತಿಧಾಮದಲ್ಲಿ ಅಂಬೇಡ್ಕರ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಯುವಜನರಿಗಾಗಿ ಅಂಬೇಡ್ಕರ್’ ಸಂವಾದದಲ್ಲಿ ಮಾತನಾಡಿದ ನಟ ದುನಿಯಾ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಕೆಲಸದಲ್ಲಿ ಶ್ರದ್ಧೆಯಿರಬೇಕು. ಅದು ನಮ್ಮನ್ನು ಹೆಚ್ಚು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರು 40 ವರ್ಷ ಕಷ್ಟಪಟ್ಟು ನಮಗಾಗಿ ಅವರ ಜೀವನವೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಸಮಾನವಾಗಿರಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಷ್ಟಪಟ್ಟು ಬರೆದ ಸಂವಿಧಾನವನ್ನು ನಾವು ಮರೆಯುತ್ತಿದ್ದೇವೆ. ಆದ್ದರಿಂದ ಪ್ರಶ್ನೆ ಕೇಳುವುದನ್ನು ಕಲಿಯುವುದೇ ಜೀವನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ಕೆಲಸಗಳನ್ನು ಚುರುಕುಗೊಳಿಸಿ: ಡಿಎಂಕೆ ಕಾರ್ಯಕರ್ತರಿಗೆ ಸಿಎಂ ಸ್ಟಾಲಿನ್ ಸೂಚನೆ
ಚಿಂತಕ ಡಾ.ಸಿ.ಜಿ.ಲಕ್ಷ್ಮೀಪತಿ ಮಾತನಾಡಿ, ಭಾರತದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹಾಡು ಹಾಡುವ ರ್ಯಾಪರ್ಗಳು ಈಗ ಹೆಚ್ಚಾಗಿದಾರೆ. ಒಂದು ವಿಚಾರವೆಂದರೆ ಕೇವಲ ಭಾಷಣ, ಚಳವಳಿ ಮಾತ್ರ ಅಲ್ಲ. ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದಾಗ ಮಾತ್ರ ಅದಕ್ಕೆ ಒಂದು ಅರ್ಥ ಬರುತ್ತದೆ. ಅಂಬೇಡ್ಕರ್ ಅವರು ಈಗ ಸಿನೆಮಾದ ಒಳಗಡೆ ಕೂಡ ಪ್ರವೇಶ ಮಾಡಿದ್ದಾರೆ ಎಂದು ಹೇಳಿದರು.
ನನಗೆ ನೆನಪು ಇರುವ ಹಾಗೆ ಕನ್ನಡ ಸಿನೆಮಾಗಳಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಗಳನ್ನು ತೋರಿಸುತ್ತಿದ್ದರು. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೋರಿಸುತ್ತಿರಲಿಲ್ಲ. ಅಷ್ಟೊಂದು ಪೂರ್ವಾಗ್ರಹ, ತಪ್ಪು ಕಲ್ಪನೆ ಹಾಗೂ ಜಾತಿಯ ಮನೋಭಾವದಿಂದ ನೋಡುತ್ತಿದ್ದರು. ಈಗ ತಮಿಳು ಹಾಗೂ ಕನ್ನಡ ಸಿನೆಮಾಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಮತ್ತು ವಿಚಾರಗಳನ್ನು ಹೇಳುವಷ್ಟು ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ನಾಳೆಯ ಕನಸು ಮತ್ತು ಭವಿಷ್ಯವನ್ನು ನಾಶ ಮಾಡುವವರು ಬರುತ್ತಾರೆ. ಭಾರತದಲ್ಲಿ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆಯಾಗಿದೆ. ಹಾಗೂ ಅತೀ ಕಡಿಮೆ ಸಂಬಳಕೊಟ್ಟು ಗುಲಾಮಗಿರಿಯ ಜೀತಗಾರಿಕೆಯನ್ನು ಮಾಡಿಸಲಾಗುತ್ತಿದೆ. ಬಂಡವಾಳಶಾಹಿಗಳ ಕೈಯಲ್ಲಿ ಒಳಗಾಗಿದ್ದೇವೆ. ಮಹಿಳೆಯರ ಮೇಲೆ ನಿಯಂತ್ರಣ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾವು ಎಷ್ಟು ಮೂರ್ಖರಾಗಿರುತ್ತೇವೆ ಎಂದರೆ, ನಮ್ಮ ಜನರನ್ನು ತುಳಿಯುವವರನ್ನೇ ಹೆಗಲ ಮೇಲೆ ಹೊತ್ತು ಮೆರೆಸುತ್ತೇವೆ. ಅವರನ್ನು ಚುನಾವಣೆಯಲ್ಲಿ ಮತ್ತೆ ಮತ್ತೆ ಗೆಲ್ಲಿಸುತ್ತೇವೆ. ಗೆದ್ದ ನಂತರ ಅವರು ನಮ್ಮ ಜನರಿಗೆ ಅನ್ಯಾಯವನ್ನು ಮಾಡೇ ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸ್ಫೂರ್ತಿಧಾಮದ ಅಧ್ಯಕ್ಷ ಎಸ್.ಮರಿಸ್ವಾಮಿ, ಸಂವಾದದ ನಿರ್ದೇಶಕ ಜನಾರ್ಧನ ಕೆಸರಗದ್ದೆ, ಡಾ.ಮುರುಳಿ ಮೋಹನ್ ಕಾಟಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಎಕ್ಸಿಟ್ ಪೋಲ್ vs ಫಲಿತಾಂಶ: ಅಂದಾಜು ಮೀರಿದ ಎಲ್ಡಿಎಫ್ ಗೆಲುವು Janashakthi Media
