“೨೦೨೯ರಿಂದಲೂ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕೆ ಇಲ್ಲ”
ಮಹಿಳಾ ಮೀಸಲಾತಿಯನ್ನು ಮತ್ತೊಂದು ಗುರಿಯೊಂದಿಗೆ, ಅಂದರೆ 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಯ ಮೂಲಕ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಹೊಸ ಕೊಂಡಿಯ ಮೋದಿ ಸರಕಾರದ ಪ್ರಸ್ತಾವ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ ಮತ್ತು ಇದಕ್ಕೆ ಎಲ್ಲಾ ರಾಜ್ಯಗಳೊಂದಿಗೆ ಚರ್ಚೆ ಮತ್ತು ಸಮಾಲೋಚನೆಯ ಅಗತ್ಯವಿರುತ್ತದೆ.ಈ ಕುರಿತು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ವ್ಯಾಪಕ ಚರ್ಚೆಗಳು ಮತ್ತು ಸಮಾಲೋಚನೆಗಳನ್ನು ನಡೆಸಲು ಸಾಧ್ಯವಾಗುವಂತೆ ಈ ಪ್ರಸ್ತಾವಗಳನ್ನು ಮುಂದೂಡಬೇಕೆಂದು ಸಿಪಿಐ(ಎಂ) ಆಗ್ರಹಪಡಿಸಿದೆ.
“ಸಿಪಿಐ(ಎಂ) ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳ ಕಡ್ಡಾಯ ಮೀಸಲಾತಿಗೆ ಬದ್ಧವಾಗಿತ್ತು ಮತ್ತು ಬದ್ಧವಾಗಿದೆ. ಅದಕ್ಕಾಗಿಯೇ 2023 ರಲ್ಲಿ, ʼನಾರಿ ಶಕ್ತಿ ವಂದನಾ ಅಧಿನಿಯಮ್ʼನಲ್ಲಿ ಪ್ರಸ್ತಾಪಿಸಿದಂತೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಮಹಿಳಾ ಮೀಸಲಾತಿಯನ್ನು ತಳುಕು ಹಾಕುವುದನ್ನು ನಾವು ವಿರೋಧಿಸಿದ್ದರೂ, ಆ ಮಸೂದೆಯ ಅಂಗೀಕಾರಕ್ಕೆ ಮತ್ತು ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಸಂವಿಧಾನದ 108 ನೇ ತಿದ್ದುಪಡಿಯ ಮಸೂದೆಯ ಅಂಗೀಕಾರಕ್ಕೆ ನಾವು ಬೆಂಬಲಿಲ ನೀಡಿದ್ದೇವೆ. ಆ ಸಮಯದಲ್ಲಿಯೂ ಸಹ, ಈ ರೀತಿ ತಳುಕು ಹಾಕುವುದರ ಅರ್ಥವೆಂದರೆ, ಮಹಿಳೆಯರಿಗೆ 2024 ರ ಚುನಾವಣೆಗಳಲ್ಲಿ ಮಾತ್ರವಲ್ಲದೆ 2029 ರ ಚುನಾವಣೆಗಳಲ್ಲಿಯೂ ಮೂರನೇ ಒಂದು ಭಾಗದಷ್ಟು ಸ್ಥಾನಗಳ ಹಕ್ಕನ್ನು ನಿರಾಕರಿಸಲಾಗುತ್ತದೆ ಎಂದು ನಾವು ಹೇಳಿದ್ದೆವು” ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಈಗ ಎರಡು ವರ್ಷಗಳ ನಂತರ, ಕ್ಷೇತ್ರ ಮರುವಿಂಗಡಣೆ ಆಯೋಗವನ್ನೂ ಸ್ಥಾಪಿಸಿಲ್ಲ ಅಥವಾ ಆಶ್ವಾಸನೆ ನೀಡಿದಂತೆ ಜನಗಣತಿಯನ್ನೂ ಪ್ರಾರಂಭಿಸಲಾಗಿಲ್ಲ, ಸರ್ವಪಕ್ಷ ಸಭೆಗೆ ಪದೇ ಪದೇ ಬೇಡಿಕೆ ಸಲ್ಲಿಸಿದರೂ, ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆಗಳಿಲ್ಲದೆ ಮೋದಿ ಸರ್ಕಾರ ಮತ್ತೊಮ್ಮೆ ಹೊಸ ಪ್ರಸ್ತಾವಗಳನ್ನು ಮಂಡಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಚುನಾವಣಾ ಪ್ರಯೋಜನದ ಸಂಕುಚಿತ ರಾಜಕೀಯ ಉದ್ದೇಶದಿಂದ ಇಂತಹ ಪ್ರಸ್ತಾವವನ್ನು ಮಂಡಿಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ, ಇದು ಸ್ವೀಕಾರಾರ್ಹವಲ್ಲ ಎಂದು ಮುಂದುವರೆದು ಸಿಪಿಐ(ಎಂ) ಹೇಳಿದೆ.
ಈ ಪ್ರಸ್ತಾವವೇ ಮಹಿಳಾ ಮೀಸಲಾತಿಯನ್ನು ಮತ್ತೊಂದು ಗುರಿಯೊಂದಿಗೆ, ಅಂದರೆ 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಯ ಮೂಲಕ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಹೊಸ ಕೊಂಡಿಯನ್ನು ಕೊಡುತ್ತದೆ. ಇದು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ ಮತ್ತು ಇದಕ್ಕೆ ಎಲ್ಲಾ ರಾಜ್ಯಗಳೊಂದಿಗೆ ಚರ್ಚೆ ಮತ್ತು ಸಮಾಲೋಚನೆಯ ಅಗತ್ಯವಿರುತ್ತದೆ.
ಸೀಟುಗಳ ಹೆಚ್ಚಳದ ಪರಿಣಾಮಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜ್ಯಗಳೊಂದಿಗೆ ವ್ಯಾಪಕ ಚರ್ಚೆಗಳು ಮತ್ತು ಸಮಾಲೋಚನೆಗಳನ್ನು ನಡೆಸಲು ಸಾಧ್ಯವಾಗುವಂತೆ ಈ ಪ್ರಸ್ತಾವಗಳನ್ನು ಮುಂದೂಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. 2029 ರ ಸಾರ್ವತ್ರಿಕ ಚುನಾವಣೆಯಿಂದ ಮಹಿಳಾ ಮೀಸಲಾತಿಯನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಜಾರಿಗೆ ತರಲು ಸಾಧ್ಯವಿದೆ ಎಂದು ನಾವು ಪುನರುಚ್ಚರಿಸುತ್ತೇವೆ, ಇದಕ್ಕೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಿಂದ ಮಹಿಳಾ ಮೀಸಲಾತಿಯನ್ನು ಬೇರ್ಪಡಿಸಲು ಒಂದು ತಿದ್ದುಪಡಿಯ ಅಗತ್ಯವಿರುತ್ತದೆ. ಆದರೆ ಮೋದಿ ಸರ್ಕಾರಕ್ಕೆ ಹಾಗೆ ಮಾಡಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
