ಕುಷ್ಟಗಿ: ಏಪ್ರಿಲ್ 10ರ ಬೆಳಗ್ಗೆ ಕೇಸ್ ವೊಂದರ ವಾದ ಮಾಡುತ್ತಲೇ ಹೃದಯಾಘಾತ ಸಂಭವಿಸಿ, ಕುಸಿದು ಬಿದ್ದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ ತಾವರಗೇರಾ ಎಂಬವರು ಮೃತಪಟ್ಟ ಘಟನೆ ಕುಷ್ಟಗಿ ನ್ಯಾಯಾಲಯದಲ್ಲಿ ನಡೆದಿದೆ.
ತಾವರಗೇರಾ ಮೂಲದ ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ನಿಂಗಪ್ಪ ಸುದ್ದಿ (50) ಅವರು ಕುಷ್ಟಗಿ ನ್ಯಾಯಾಲಯದಲ್ಲಿ ಭೂ ವಿವಾದದ ಕೇಸ್ ವೊಂದರಲ್ಲಿ ನ್ಯಾಯಾಧೀಶರ ಎದುರು ತಮ್ಮ ವಾದ ಮಂಡಿಸುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು.
ಈ ಹೃದಯವಿದ್ರಾವಕ ಘಟನೆ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಜರುಗಿದೆ. ಮೃತ ನಿಂಗಪ್ಪ ಅವರು ತಾಯಿ, ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇದನ್ನೂ ಓದಿ: ಪೊಲೀಸರನ್ನು ಬಿಸಿಲಿನಲ್ಲಿ ನಿಲ್ಲಿಸಿದ ಪ್ರಕರಣ; ಪಿಎಸ್‌ಐ ನೇತ್ರಾವತಿ ವರ್ಗಾವಣೆ
ಮೃತ ನಿಂಗಪ್ಪ ಸುದ್ದಿ ಅವರು ಕಳೆದ 20 ವರ್ಷಗಳಿಂದ ಗಂಗಾವತಿ ಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಜೊತೆಗೆ ರಂಗಭೂಮಿ ಬಗ್ಗೆ ಒಲವಿದ್ದ ಅವರು ವಿವಿಧ ನಾಟಕ ಕಂಪನಿಗಳು ಹಾಗೂ ಅಮೆಚೂರ್ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು.
ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಕೇಸ್ ಗಳನ್ನು ನಡೆಸುತ್ತಿದ್ದರು. ಶುಕ್ರವಾರ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನಿಂಗಪ್ಪ ಸುದ್ದಿ ನಿಧನಕ್ಕೆ ಗಂಗಾವತಿ ಕುಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ವಕೀಲರ ಸಂಘದವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ನೋಡಿ: ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media
