ಕೇರಳ, ತಮಿಳುನಾಡು, ಪಾಂಡಿಚೇರಿ, ಪಶ್ಚಿಮಬಂಗಾಳ, ಅಸ್ಸಾಂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆಯಲ್ಲಿ ಕರ್ನಾಟಕದ ಎರಡು ವಿಧಾನಸಭೆಯ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ಬಾಗಲಕೋಟೆ ಕ್ಷೇತ್ರದ ಹೆಚ್.ವೈ.ಮೇಟಿ ಯವರ ನಿಧನದಿಂದ ತೆರವಾಗಿರುವ ಸ್ಥಾನಗಳಿಗೆ ಈ ಉಪ ಚುನಾವಣೆ ನಡೆಯಲಿದೆ. ಮತದಾನ ಇದೇ 2026 ಎಪ್ರಿಲ್ 9, ಮತ ಎಣಿಕೆ ಮೇ 4 ರಂದು ನಡೆಯಲಿದೆ.
– ಎಸ್. ವೈ. ಗುರುಶಾಂತ್
ಈಗಾಗಲೇ ಸ್ಪರ್ದಿಗಳು ಮತ್ತು ಹೋರಾಟದ ಅಖಾಡ ಸ್ಪಷ್ಟವಿದೆ. ದಾವಣಗೆರೆ ಕ್ಷೇತ್ರಕ್ಕೆ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಶ್ರೀನಿವಾಸ ದಾಸ ಕರಿಯಪ್ಪ ಅಭ್ಯರ್ಥಿಯಾಗಿದ್ದಾರೆ. ಅಲ್ಲದೆ ಮುಸ್ಲಿಂ ಮೂಲಭೂತವಾದಿ ಎಸ್.ಡಿ.ಪಿ.ಐ. ನಿಂದ ಅಪ್ಸರ್ ಕೊಡ್ಲಿಪೇಟೆ ಯವರು ಧುಮುಕಿದ್ದಾರೆ. ಆಮ್ ಆದ್ಮಿ ಪಕ್ಷವೂ ಅಭ್ಯರ್ಥಿಯನ್ನು ಇಳಿಸಿದೆ. ಇಲ್ಲಿ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಸಲ್ಲಿಸಿದ್ದ 11 ಜನ ವಾಪಾಸು ಪಡೆದರು. ಕುತೂಹಲದ ವಿಚಾರ ಎಂದರೆ 22 ಜನ ಮುಸ್ಲಿಂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅದರಲ್ಲಿ ಎಂಟು ಜನ ವಾಪಸು ಪಡೆದಿದ್ದಾರೆ! 14 ಜನ ಕಣದಲ್ಲಿ.
ಇನ್ನು ಬಾಗಲಕೋಟೆಯಲ್ಲಿ ಕಾಂಗ್ರೆಸ್ಸಿನ ದಿವಂಗತ ಸಚಿವ ಹುಳಪ್ಪ ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ ಸ್ಪರ್ಧಿಸಿದ್ದಾರೆ. ಇನ್ನು ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ಮತ್ತಿತರೆ ಪಕ್ಷಗಳ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5 ಜನ ಹಿಂಪಡೆದಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಎಸ್ಐಆರ್: 91 ಲಕ್ಷ ಹೆಸರುಗಳು ಮತದಾರರ ಪಟ್ಟಿಯಿಂದ ಹೊರಗೆ
ಸ್ಪರ್ಧೆ ಎರಡು ಕ್ಷೇತ್ರಗಳಲ್ಲಿ ಬಹುತೇಕವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ತೀವ್ರ ಇದೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಜೆಪಿಯೊಂದಿಗಿನ ಮೈತ್ರಿಯ `ಧರ್ಮ’ ಕಾರಣಕ್ಕಾಗಿ ಜನತಾದಳ -ಎಸ್ ಸ್ಪರ್ದಿಸುತ್ತಿಲ್ಲವಂತೆ! ಈ ಚುನಾವಣೆಯಲ್ಲಿ ಸರ್ಕಾರ ಮತ್ತು ಪಕ್ಷದ ಸಾಧನೆಗಳು ಪ್ರಸ್ತಾಪಿತವಾದರೂ ಪ್ರಧಾನವಾಗಿ ಜಾತಿಗಳ ಸಮೀಕರಣ, ಹಣದ ಬಲ ಪ್ರಧಾನ ಪಾತ್ರ ವಹಿಸುವ ಸಾಧ್ಯತೆಗಳಿವೆ. ದಾವಣಗೆರೆ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಅಲ್ಪಸಂಖ್ಯಾತರ ಮತಗಳಿವೆ. ಎರಡನೆಯ ಸ್ಥಾನದಲ್ಲಿ ಪರಿಶಿಷ್ಟ ಜಾತಿ- ಎಸ್.ಸಿ, ಹಿಂದುಳಿದ ವರ್ಗಗಳು, ವಾಲ್ಮೀಕಿ-ಎಸ್.ಟಿ. ಮತ್ತು ಲಿಂಗಾಯತ ಸಮುದಾಯದ ಮತಗಳು ಪ್ರಮುಖವಾಗಿವೆ. ಬಾಗಲಕೋಟೆಯಲ್ಲಿ ಲಿಂಗಾಯತ, ಕುರುಬರು ಹಾಗೂ ಮುಸ್ಲೀಮರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಈ ಚುನಾವಣೆಯಲ್ಲಿ ಪಕ್ಷಗಳ ಪ್ರಣಾಳಿಕೆ, ಆಯಾ ಪಕ್ಷಗಳ ಕಾರ್ಯವಿಧಾನ,ಕಾರ್ಯಕ್ರಮಗಳು, ಜನತೆಗೆ ನೀಡುವ ಪರಿಹಾರಗಳು ಇತ್ಯಾದಿಗಳು ಪ್ರಸ್ತಾಪಿತವಾದರೂ ಅಷ್ಟಾಗಿ ಪ್ರಧಾನ ವೇದಿಕೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ನಾಯಕರ ಅಬ್ಬರದ ಭರಾಟೆಯೇನೂ ಕಡಿಮೆಯಾಗಿಲ್ಲ, ಆಗುವುದಿಲ್ಲ.ಮುಖ್ಯವಾಗಿ, ದಾವಣಗೆರೆ ಕ್ಷೇತ್ರದಲ್ಲಿ ಎಲ್ಲ ರೀತಿಯಿಂದಲೂ ಅತ್ಯಂತ ಪ್ರಬಲವಾಗಿರುವ ಶಾಮನೂರು ಕುಟುಂಬಕ್ಕೆ ಮತ್ತೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಈ ಕುಟುಂಬದಲ್ಲಿ ಕರ್ನಾಟಕ ಸಚಿವರಾಗಿ, ಸಂಸದರಾಗಿರುವ ಇವರಲ್ಲಿಗೇ ಈಗಲೂ ಮತ್ತೆ ವಿಧಾನಸಭೆಯ ಟಿಕೆಟ್ ನೀಡಲಾಗಿರುವುದು ಹಲವರ ಹುಬ್ಬೇರಿಸಿದೆ. ಎಲ್ಲಾ ಅಧಿಕಾರಗಳು ಮತ್ತೆ ಮತ್ತೆ ಶಾಮನೂರು ಕುಟುಂಬಕ್ಕೆ ನೀಡುತ್ತಿರುವುದರ ಬಗ್ಗೆ ಅತೃಪ್ತಿ ಇದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಇದು ಎದ್ದು ಕಂಡಿತು. ಈ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರಿದ್ದಾರೆ (ಶೇಕಡ 13ರಷ್ಟು). ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯವರೆಗೂ ಈ ಸಮುದಾಯದ ಯಾವ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿಲ್ಲ.
ಆದ್ದರಿಂದ ಈ ಬಾರಿ ತಮ್ಮ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂಬ ತೀವ್ರವಾದ ಅಗ್ರಹ ಇತ್ತು. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತ ಮುಸ್ಲಿಮರನ್ನು ಓಲೈಸುವ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳನ್ನು ಬಿಟ್ಟರೆ ಟಿಕೆಟ್ ಕೊಟ್ಟಿದ್ದು ಇಲ್ಲ. ಬಾಯಲ್ಲಿ ಇವರೆಲ್ಲ ಏನೇ ಹೇಳಿದರೂ ಗೆಲ್ಲುವ ಕುದುರೆಗೇ ಟಿಕೆಟ್ ಎನ್ನುವುದು ಚಾಲ್ತಿಯಲ್ಲಿರುವ ನೀತಿ. ಅದರಲ್ಲೂ ಈ ಬಾರಿ ಹೈಕಮಾಂಡ್ ಪ್ರಕಟಿಸುವ ಮೊದಲೇ ಶಾಮನೂರು ಕುಟುಂಬ ನಾಮಪತ್ರವನ್ನು ಸಲ್ಲಿಸಿತ್ತು. ಅದಕ್ಕೆ ಕೇವಲ ಅಕ್ಷೇಪದ ಮಾತುಗಳನ್ನು ನಾಯಕರು ಆಡಿದ್ದನ್ನು ಬಿಟ್ಟರೆ ಮತ್ತೆ ಅವರಿಗೆ ಟಿಕೆಟ್ ಕೊಟ್ಟು ಅವರನ್ನು ಗೆಲ್ಲಿಸಬೇಕು ಎನ್ನುವ ಪ್ರಯತ್ನಕ್ಕೆ ಇಡಿ ಸಂಪುಟದ ದಂಡು ಅಲ್ಲಿ ನೆರದಿದೆ. ಕಾಂಗ್ರೆಸ್ಸಿನ ಈ ವರ್ತನೆಯನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನವರೇ ಆದ ಹಿರಿಯ ನಾಯಕ ಪೈಲ್ವಾನ್ ಕಣಕ್ಕೆ ಇಳಿದರಾದರೂ ಅಂತಿಮವಾಗಿ ಅವರ ಮೇಲೆ ಒತ್ತಡವೋ ಅಥವಾ ಆಮಿಷವೋ, ಮನವೊಲಿಕೆಯೋ ಅಂತು ಈಗ ಕಣದಿಂದ ಹಿಂದೆ ಸರಿದಿದ್ದಾರಂತೆ.
ಇದೆಲ್ಲಾ ಅವರ ಪಕ್ಷದೊಳಗಿನ ಆಂತರಿಕ ವಿಷಯ. ಆದರೆ ಒಂದು ವಿಷಯ ಸ್ಪಷ್ಟ, ಕಾಂಗ್ರೆಸ್ ಪಕ್ಷ ಮುಸ್ಲಿಂ ಅಲ್ಪಸಂಖ್ಯಾತರನ್ನು ಸತತವಾಗಿ ಬಿಜೆಪಿಯ ಭೂತವನ್ನು ತೋರಿಸಿ ಬಳಸಿಕೊಳ್ಳುತ್ತಿರುವುದರ ವಿರುದ್ಧವಾಗಿ ಆ ಸಮುದಾಯದ ಒಂದು ವಿಭಾಗದಲ್ಲಿ ತೀವ್ರವಾದ ಆಕ್ರೋಶ ಇರುವುದುಹೊರ ಬಿತ್ತು. ಪೈಲ್ವಾನ್ ರವರ ಮೂಲಕ ಕಾಂಗ್ರೆಸ್ಸಿಗೆ ಪಾಠ ಕಲಿಸುವ ಸಾಧ್ಯತೆಗಳು ಇದ್ದೇ ಇವೆ ಎಂದು ಹಲವರು ಭಾವಿಸಿದ್ದರು. ಆದರೆ ಕೊನೆಗಳಿಗೆ ನಿವೃತ್ತಿಗೊಳಿಸುವ ಮೂಲಕ ಕಾಂಗ್ರೆಸ್ ತನ್ನ ದಾರಿಯನ್ನು ಸುಗಮಗೊಳಿಸಿಕೊಂಡಿದೆ ಎಂದು ಭಾವಿಸಿದಂತಿದೆ. ಆದರೆ ಮುಸ್ಲಿಮರಲ್ಲಿರುವ ಈ ಅತೃಪ್ತಿಯನ್ನು ಬಳಸಲು ಇತರರು ಪ್ರಯತ್ನಿಸುತ್ತಿದ್ದಾರೆ. ಇಂತಹ ಅತೃಪ್ತ ಮುಸ್ಲಿಂ ಮತದಾರರನ್ನು ಬೇರೆ ಬೇರೆ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಚದುರುವಂತೆ ಮಾಡುವಲ್ಲಿ ಅಥವಾ ಸೆಳೆಯುವಲ್ಲಿ ಕೆಲವು ಪಕ್ಷಗಳ ನಾಯಕರು ಪ್ರಯತ್ನಿಸಿದಂತೆ ಕಾಣುತ್ತದೆ.
ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಕಂಡುಬಂದ ವಿರೋಧ ಒಂದು ಸಾಂಕೇತಿಕವೂ ಆಗಿದೆ. ರಾಜ್ಯದಲ್ಲಿ ಪ್ರತಿ ವಿಧಾನಸಭಾ ಚುನಾವಣೆಗಳಲ್ಲೂ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ ಮತ್ತು ಗೆದ್ದು ಬಂದವರ ಸಂಖ್ಯೆಯೂ ಕೂಡ ತುಂಬಾ ಕಡಿಮೆ ಇದೆ ಎನ್ನುವುದು ತಮಗೆ ಬಿಜೆಪಿಯ ಭೂತವನ್ನು ತೋರಿಸಿಕೊಳ್ಳುವುದನ್ನು ಬಿಟ್ಟರೆ, ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಅಷ್ಟಾಗಿ ಪರಿಗಣಿಸುತ್ತಿಲ್ಲ ಎಂಬ ಆಕ್ರೋಶವಂತೂ ಇದ್ದೇ ಇದೆ. 2023ರ ಚುನಾವಣೆಯಲ್ಲಿ ಈ ಪ್ರಶ್ನೆ ಕೂಡ ಚರ್ಚೆಗೆ ಬಂದಿತ್ತು. ಹಾಗೆ ನೋಡಿದರೆ 2018 ರಲ್ಲಿ 7 ಜನ ಮುಸ್ಲಿಂ ಶಾಸಕರಿದ್ದರೆ, 2023ರಲ್ಲಿ 9 ಜನ ಆಯ್ಕೆಯಾಗಿದ್ದಾರೆ. ಶೇ.13 ರಷ್ಟು ಜನಸಂಖ್ಯೆ ಇದ್ದಾಗಲೂ ಕೇವಲ ಶೇ. 4 ರಷ್ಟು ಮಾತ್ರ ಅಸೆಂಬ್ಲಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ವಾಸ್ತವದಲ್ಲಿ ಅವರಿಗೆ ಪಾಲು ಸಿಗುವಂತಿದ್ದರೆ 17 ರಿಂದ 18 ಶಾಸಕರು ಇರಬೇಕಿತ್ತು ಎನ್ನುವ ಒಂದು ಲೆಕ್ಕಾಚಾರವಿದೆ. 1978 ರಲ್ಲಿ ಮಾತ್ರವೇ 17 ಶಾಸಕರಿದ್ದರು.
ಇನ್ನು ಬಾಗಲಕೋಟೆಯಲ್ಲೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತದ್ದು ಕೇವಲ 5000 ಮತಗಳಲ್ಲಿ. ಈ ಬಾರಿ ಖಂಡಿತಕ್ಕೂ ಸ್ಪರ್ಧೆ ತೀವ್ರ ಪೈಪೋಟಿ ಇದೆ. ಈ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ಹಲವಾರು ತಿಂಗಳುಗಳಿಂದಲೇ ‘ತಯಾರಿ’ ಆರಂಭಿಸಿದ್ದವು. ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಗಲಭೆಯ ಪ್ರಯತ್ನ ಮತ್ತು ಮತೀಯ ವಿಭಜನೆಯ ಪ್ರಯತ್ನಗಳು ಕೋಮುವಾದಿ ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಈ ತಂತ್ರವನ್ನು ಜನತೆ ಅರ್ಥಮಾಡಿಕೊಳ್ಳಬೇಕು.
ಬೆಳವಣಿಗೆಗಳು ಹೀಗೆಲ್ಲ ಇರುತ್ತವೆ. ಆದರೆ ಎರಡೂ ಕ್ಷೇತ್ರಗಳಲ್ಲಿ ಕೋಮುವಾದಿ ಬಿಜೆಪಿಯ ಅಪಾಯವಂತೂ ಹೆಚ್ಚಿದೆ. ಕರ್ನಾಟಕದಲ್ಲಿ ಅಸಂವಿಧಾನಿಕವಾದ ಹಲವಾರು ಕ್ರಮಗಳ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಿ ತಾವೇ ಹಿಂಬಾಲಿಗಿನಿಂದಅಧಿಕಾರ ಹಿಡಿಯಬೇಕು ಎನ್ನುವ ಪ್ರಯತ್ನಗಳು ಸತತವಾಗಿ ನಡೆಯುತ್ತಲೇ ಇವೆ.
ಈಗಲೂ ಗೃಹ ಸಚಿವ ಅಮಿತ್ ಶಾ ರವರ ನೆರವಿನಿಂದ ಕರ್ನಾಟಕದಲ್ಲಿ ಏನೋ ಒಂದು ಚಮತ್ಕಾರ ನಡೆದು ಎಚ್. ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ಚಾಲಿತ ಮುಖ್ಯಮಂತ್ರಿಗಳನ್ನಾಗಿ ಮಾಡುತ್ತಾರೆ ಎನ್ನುವ ಸುದ್ದಿಗಳು ಇತ್ತೀಚೆಗೆ ಓಡಾಡುತ್ತಿವೆ ಎನ್ನುವುದನ್ನು ಗಮನಿಸಬೇಕು. ಉಪಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೊಂಡರೂ, ಬಿಜೆಪಿ ಮೇಲುಗೈ ಸಾಧಿಸುವ ರೀತಿ ಫಲಿತಾಂಶ ಬಿಜೆಪಿಯ ಅಟ್ಟಹಾಸಕ್ಕೆ ಕುಮ್ಮಕ್ಕು ನೀಡಬಲ್ಲದು. ಆದ್ದರಿಂದ ಒಟ್ಟಾರೆಯಾಗಿ ಈ ಕ್ಷೇತ್ರದಲ್ಲಿ ಕೋಮುವಾದಿಗಳು ಮೇಲುಗೈ ಸಾಧಿಸದಂತೆ ಅವರನ್ನು ಸೋಲಿಸಲು ಜನತೆ ದೃಢ ನಿಶ್ಚಯವನ್ನು ಮಾಡಬೇಕು.
ಇದನ್ನೂ ನೋಡಿ: ಕೇರಳ ಚುನಾವಣೆ | ಎಲ್ಡಿಎಫ್ vs ಯುಡಿಎಫ್ ನೆಕ್ ಟು ನೆಕ್ ಫೈಟ್ – ಗೇಮ್ಚೇಂಜರ್ ಆಗುವ ಮತದಾರರು ಯಾರು?
