ದಾವಣಗೆರೆ: ಏಪ್ರಿಲ್ 9ರಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಕ್ಷೇತ್ರ ವ್ಯಾಪ್ತಿಯ 284 ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು. ದಾವಣಗೆರೆ
‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 234 ಮತಗಟ್ಟೆಗಳಿವೆ. ಉಳಿದ 50 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. 76 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡು ಪರಿಶೀಲಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದಾವಣಗೆರೆ
‘ಕ್ಷೇತ್ರ ವ್ಯಾಪ್ತಿಯಲ್ಲಿ 2.31 ಲಕ್ಷ ಮತದಾರರಿದ್ದಾರೆ. ಅಂಗವಿಕಲ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಹಕ್ಕು ಚಲಾವಣೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸಖಿ, ಅಂಗವಿಕಲ, ಯುವ ಮತಗಟ್ಟೆಗಳ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ. ಎಲ್ಲ ಮತಗಟ್ಟೆಗಳಿಗೆ 586 ಬ್ಯಾಲೆಟ್ ಯುನಿಟ್, 284 ಕಂಟ್ರೋಲ್ ಯುನಿಟ್ ಹಾಗೂ 284 ವಿವಿಪ್ಯಾಟ್‌ಗಳನ್ನು ಒದಗಿಸಲಾಗಿದೆ. ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ’ ಎಂದು ವಿವರಿಸಿದರು. ದಾವಣಗೆರೆ
ಇದನ್ನೂ ಓದಿ: ಮಣಿಪುರದಲ್ಲಿ ಬಾಂಬ್ ದಾಳಿ; ಇಬ್ಬರು ಮಕ್ಕಳು ಮೃತ್ಯು
‘ಏ.9ರಂದು ನಸುಕಿನ 5.30ರಿಂದ ಅಣಕು ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಮತಗಟ್ಟೆಯ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಂಜೆ 6 ಗಂಟೆಗೆ ಮತಗಟ್ಟೆಯ ಪರಿಮಿತಿಯೊಳಗೆ ಇರುವ ಮತದಾರರಿಗೆ ಟೋಕನ್ ನೀಡಲಾಗುತ್ತದೆ. ಮತಗಟ್ಟೆಯೊಳಗೆ ಸರತಿಯಲ್ಲಿ ಕಾಯುವ ಈ ಮತದಾರರಿಗೆ ಮಾತ್ರ ಹಕ್ಕು ಚಲಾವಣೆ ಮಾಡುವ ಅವಕಾಶ ನೀಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ಡಿಆರ್‌ಆರ್ ಶಾಲೆಯಲ್ಲಿ ಮಸ್ಟರಿಂಗ್:
ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಕೊಂಡೊಯ್ಯುವ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡುವ ‘ಮಸ್ಟರಿಂಗ್’ ಪ್ರಕ್ರಿಯೆ ನಗರದ ಪಿ.ಬಿ. ರಸ್ತೆಯ ಡಿಆರ್‌ಆರ್ ಶಾಲೆಯ ಆವರಣದಲ್ಲಿ ಏ.8ರಂದು ನಡೆಯಲಿದೆ.
‘ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ 681 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 60 ವೀಕ್ಷಕರು ಮತಗಟ್ಟೆಗಳ ಮೇಲೆ ನಿಗಾ ಇಡಲಿದ್ದಾರೆ. ಮತಯಂತ್ರಗಳ ಸಾಗಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) 28 ಬಸ್, 39 ಮಿನಿ ಬಸ್ ಹಾಗೂ 5 ಜೀಪ್‌ಗಳನ್ನು ಬಳಸಲಾಗುತ್ತಿದೆ. ಡಿಮಸ್ಟರಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಲೆಯಲ್ಲಿ ತೆರೆದಿರುವ ಭದ್ರತಾ ಕೊಠಡಿಯಲ್ಲಿ ಮತಗಟ್ಟೆಗಳನ್ನು ಭದ್ರಪಡಿಸಲಾಗುತ್ತದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ’ ಎಂದರು.
1,000 ಪೊಲೀಸ್ ನಿಯೋಜನೆ:
ಮತದಾನದ ದಿನ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸೇರಿದಂತೆ 1,000 ಪೊಲೀಸರನ್ನು ನಿಯೋಜಿಸಲಾಗಿದೆ.
‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಿಎಪಿಎಫ್ ಸೇರಿ ಇತರ ಭದ್ರತಾ ಪಡೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಇರಲಿದ್ದಾರೆ’ ಎಂದು ಚುನಾವಣಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು.
₹ 15.37 ಲಕ್ಷ ವಶ:
ಉಪಚುನಾವಣಾ ಕಣದಲ್ಲಿ ದಾಖಲೆ ರಹಿತವಾಗಿ ಸಾಗಣೆ ಮಾಡುತ್ತಿದ್ದ ₹ 15.37 ಲಕ್ಷ ನಗದು ಹಾಗೂ ₹ 1.33 ಲಕ್ಷ ಮೌಲ್ಯದ 233 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
‘ಉಪಚುನಾವಣೆಯ ಅಂಗವಾಗಿ ಕ್ಷೇತ್ರದಾದ್ಯಂತ 11 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ವಿಚಕ್ಷಣಾ ದಳ, ಸಂಚಾರ ದಳ ಸೇರಿದಂತೆ ಹಲವು ತಂಡಗಳು ಕಾರ್ಯನಿರ್ವಹಿಸಿವೆ. ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬಳಿಕ ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಚುನಾವಣಾಧಿಕಾರಿ ವಿವರಿಸಿದರು.
ಸೀರೆ, ಕುಕ್ಕರ್ ವಿತರಣೆ: ದೂರು
ಮತದಾರರಿಗೆ ಆಮಿಷವೊಡ್ಡುತ್ತಿರುವ ಕುರಿತು ಕೆಲ ದೂರುಗಳು ಬಂದಿವೆ. ಸೀರೆ, ಕುಕ್ಕರ್ ವಿತರಿಸುತ್ತಿರುವ ಬಗ್ಗೆ ಜನರು ಗಮನಕ್ಕೆ ತಂದಿದ್ದಾರೆ. ಈ ಕುರಿತು ಪರಿಶೀಲನೆ ಮಾಡಿ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು.
‘ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕವೂ ಮತಯಾಚನೆಗೆ ಅವಕಾಶವಿಲ್ಲ. ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂ ಸೇರಿ ಹಲವು ಜಾಲತಾಣಗಳ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ನಕಲಿ ಖಾತೆ ತೆರೆದು ಮಾಹಿತಿ ಹಂಚಿಕೊಳ್ಳುವವರನ್ನು ಕೂಡ ಪತ್ತೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ನೋಡಿ: ʼಮಿಥಿಲೆಯ ಮಾವಿನ ಮರʼದಿಂದ ಎರಡು ಕವಿತೆಗಳು Janashakthi Media
