ಬೆಂಗಳೂರು: ನಗರದ ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ವಾಸವಾಗಿರುವ ಸಂಜೀವಪ್ಪ, ದೊಡ್ಡ ಮುನಿಯಪ್ಪ, ಮುನಿಯಪ್ಪ, ಪೂಜಿಗಪ್ಪ, ಸೀಕ್ಲಮ್ಮ, ಸಿದ್ದಪ್ಪ, ಗುಡ್ಡಪ್ಪ, ಗುಡ್ಡ ಮುನಿಯಪ್ಪ ಹಾಗೂ ಮಂಟಿಗಾ ಸೇರಿದಂತೆ ಒಂಬತ್ತು ದಲಿತ ಕುಟುಂಬಗಳು ತಮ್ಮ ಭೂಮಿಯನ್ನು ಕಾಪಾಡಿಕೊಳ್ಳಲು ಹೋರಾಟ ನಡೆಸುತ್ತಿವೆ. ಹಾಗಾಗಿ ಕೂಡಲೇ ಅವರಿಗೆ ಭೂಮಿ ಹಕ್ಕು ನೀಡಬೇಕು ಎಂದು ಪ್ರಾಂತ ರೈತ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ದಲಿತ
1956ರಲ್ಲಿ ತಹಸೀಲ್ದಾರ್ ಆದೇಶದ ಮೂಲಕ ಬಿ.ಎಂ.ಕಾವಲ್ ಗ್ರಾಮದ ಸರ್ವೆ ನಂ.24ರಲ್ಲಿ ಈ ಕುಟುಂಬಗಳಿಗೆ ತಲಾ 2 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಕಳೆದ 70 ವರ್ಷಗಳಿಂದ ಈ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಜಮೀನಿಗೆ, ಮಾರ್ಚ್ 14ರಂದು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಪ್ರವೇಶಿಸಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಮುಂದಾದರೆಂದು ಆರೋಪಿಸಲಾಗಿದೆ. ದಲಿತ
ರೈತರು ತಮ್ಮ ಬಳಿ ಇರುವ ದಾಖಲೆಗಳನ್ನು ತೋರಿಸಿದರೂ ಅಧಿಕಾರಿಗಳು ಕೆಲಸ ನಿಲ್ಲಿಸದೇ ಮುಂದುವರಿಸಿದ್ದಾರೆ ಎನ್ನಲಾಗಿದೆ. ಬಳಿಕ ರೈತ ಸಂಘದ ಮುಖಂಡರ ಮಧ್ಯಸ್ಥಿಕೆಯಿಂದ ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಆದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ, ಮಾರ್ಚ್ 19 ಮತ್ತು 20ರಂದು ಮತ್ತೆ ಕಾಮಗಾರಿ ನಡೆಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಒರಾಕಲ್‌ನಲ್ಲಿ ಭಾರಿ ಉದ್ಯೋಗ ಕಡಿತ; 30,000 ಮಂದಿ ವಜಾ!
ಮಾರ್ಚ್ 21ರಂದು ರೈತರು ಕೆಲಸ ತಡೆಯಲು ಮುಂದಾದಾಗ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ದಾಖಲೆ ತೋರಿಸದೆ “ಇದು ಬಫರ್ ಜೋನ್” ಎಂದು ಹೇಳಿ, ವಿರೋಧಿಸಿದರೆ ಬಂಧಿಸುವುದಾಗಿ ಬೆದರಿಕೆ ಹಾಕಿದರೆಂದು ತಿಳಿಸಿದ್ದಾರೆ.
ಮಾರ್ಚ್ 23 ಹಾಗೂ 31ರಂದು ಹೆಚ್ಚಿನ ಸಿಬ್ಬಂದಿ ಮತ್ತು ಪೊಲೀಸ್ ಪಡೆಗಳೊಂದಿಗೆ ಅಧಿಕಾರಿಗಳು ಮತ್ತೆ ಜಮೀನಿಗೆ ಬಂದು, ಇದು ಅರಣ್ಯ ಇಲಾಖೆಗೆ ಸೇರಿದ ಭೂಮಿ ಎಂದು ಹೇಳಿ ರೈತರನ್ನು ತೆರವುಗೊಳಿಸಲು ಯತ್ನಿಸಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ರೈತರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ಸಹ ದಾಖಲಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ರೈತರು ತಮ್ಮ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿ, ಭೂಮಿ ತಮ್ಮದೇ ಎಂದು ತಿಳಿಸಿದ್ದಾರೆ. 2014ರಲ್ಲಿ ಅರಣ್ಯ ಇಲಾಖೆ ಮತ್ತು ತಹಸೀಲ್ದಾರ್ ಕಚೇರಿಗಳ ಪತ್ರ ವ್ಯವಹಾರದಲ್ಲಿಯೂ ಈ ಭೂಮಿ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಉಲ್ಲೇಖವಿದ್ದರೂ, ಅಧಿಕಾರಿಗಳು ಅದನ್ನು ಪರಿಗಣಿಸಿಲ್ಲ ಎಂದು ಆರೋಪಿಸಲಾಗಿದೆ. ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿ ಹಕ್ಕು ನೀಡಬೇಕು ಎಂದು ಆಗ್ರಹಿಸಿವೆ.
ಇದಲ್ಲದೆ, 2025-26ರಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿಗೆ ಸಂಬಂಧಿಸಿದ ಪರಿಹಾರವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಾಚಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ., ಜಿಲ್ಲಾಧ್ಯಕ್ಷ ಬಾಲರಾಜು, ಅಧ್ಯಕ್ಷ ಸಣ್ಣ ರಂಗಯ್ಯ ಹಾಗೂ ಕಾರ್ಯದರ್ಶಿ ಹನುಮಯ್ಯ ಇದ್ದರು.
ಇದನ್ನೂ ನೋಡಿ: ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್‌ಗೆ ಬಿಜೆಪಿ ಒತ್ತಡವಿತ್ತೆ? | ವಿ Janashakthi Media
