ತಮಿಳುನಾಡು| ವಿಧಾನಸಭೆ ಚುನಾವಣೆ ಪ್ರಚಾರ: ಡಿಎಂಕೆ, ಎಐಎಡಿಎಂಕೆ, ಬಿಜೆಪಿ ಪೈಪೋಟಿ

ಚೆನ್ನೈ: ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಹೊಂದಿರುವ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ರಂಗೇರಿದೆ. ರಾಜ್ಯದಲ್ಲಿ ಭದ್ರ ಅಸ್ತಿತ್ವ ಹೊಂದಿರದ ಬಿಜೆಪಿ ಕ್ಷೇತ್ರ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮತ್ತೊಂದು ಅವಧಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಡಿಎಂಕೆ ನಾಯಕರು ಜನತೆಗೆ ಹಲವು ಭರವಸೆಗಳನ್ನು ನೀಡಿದ್ದಾರೆ. ತಮಿಳುನಾಡು

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಚಾರ ರ್ಯಾಲಿಗಳಿಗೆ ಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಬೊಕ್ಕಸದ ಮೇಲೆ ಹೊರೆ ಆಗುತ್ತಿದ್ದರೂ, ‘ಗ್ಯಾರಂಟಿ’ಗಳನ್ನು ಘೋಷಿಸುವ ಪರಿಪಾಠ ಮುಂದುವರಿದಿದೆ. ತಮಿಳುನಾಡು

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಈಗಲೂ ಮುಂದುವರಿದಿದೆ. ಆಡಳಿತಾರೂಢ ಡಿಎಂಕೆ ಅಧಿಕಾರಕ್ಕೆ ಮರಳಲು ಹರಸಾಹಸ ಪಡುತ್ತಿದ್ದು, ಆಕರ್ಷಕ ಘೋಷಣೆಗಳನ್ನು ಮಾಡಿದೆ. ಚುನಾವಣೆ ಘೋಷಣೆ ಮುಂಚೆಯೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ತಮಿಳುನಾಡು

ತಮಿಳುನಾಡಿನಲ್ಲಿ ಬಿಜೆಪಿ ಬೇರು ವಿಸ್ತರಿಸುವ ಪ್ರಯತ್ನ ನಡೆದಿದ್ದರೂ, ಅದಕ್ಕೆ ನಿರೀಕ್ಷಿತ ಫಲಿತಾಂಶ ದೊರಕಿಲ್ಲ. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಬಲಹೀನವಾಗಿದ್ದು, ಹಲವು ಬಣಗಳಲ್ಲಿ ಚದುರಿಹೋಗಿದೆ.

ಇದನ್ನೂ ಓದಿ: ಆಕ್ರಮಣ ಮತ್ತು ಪ್ರತಿರೋಧದ ತತ್ವ ಮೀಮಾಂಸೆ ಹಾಗೂ ಹಿಂದುತ್ವ ಮಂದಿಯ ಪುಕ್ಕಲು ಮೌನದ ಕುತರ್ಕ

ಮಾಜಿ ಮುಖ್ಯಮಂತ್ರಿ ಪನ್ನಿರಸೆಲ್ವಂ ಇತ್ತೀಚೆಗಷ್ಟೇ ಎಐಎಡಿಎಂಕೆ ತೊರೆದು ಡಿಎಂಕೆ ಸೇರ್ಪಡೆಯಾಗಿದ್ದಾರೆ. ನಟ ವಿಜಯ್ರ ಹೊಸ ಪಕ್ಷ ಟಿವಿಕೆ ಎಂಟ್ರಿಯಿಂದಾಗಿ ಈ ಬಾರಿ ಬಹುಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಜಯಲಲಿತಾ ಆಪ್ತೆ ಶಶಿಕಲಾ ಚುನಾವಣೆಯ ಹೊಸ್ತಿಲಲ್ಲೇ ಹೊಸ ಪಕ್ಷ ಘೋಷಿಸಿದ್ದು, ಇದು ಪರಿಣಾಮ ಬೀರುವ ಸಾಧ್ಯತೆ ತೀರ ಕ್ಷೀಣ. ಆಡಳಿತ ವಿರೋಧಿ ಅಲೆ ಮತ್ತು ಹೊಸ ಪಕ್ಷ ಟಿವಿಕೆ ಪ್ರಭಾವ ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗುವ ಸಾಧ್ಯತೆಗಳಿವೆ. ಈ ಬಾರಿ ಉಚಿತ ಕೊಡುಗೆಗಳ ಅಬ್ಬರ ಜೋರಾಗಿದ್ದು, ನಾಮ್ ತಮಿಳರ್ ಕಚ್ಚಿ (ಎನ್​ಟಿಕೆ) ಪಕ್ಷ ಮಾತ್ರ ಉಚಿತ ಕೊಡುಗೆಗಳನ್ನು ವಿರೋಧಿಸುತ್ತಿದೆ. ತಮಿಳುನಾಡು

ಮಹಿಳಾ ಮತಬ್ಯಾಂಕ್ ಸೆಳೆಯಲು ಯತ್ನ

ತಮಿಳುನಾಡು ವಿಧಾನಸಭಾ ಚುನಾವಣೆ ಕಣವು ಭರ್ಜರಿ ಪ್ರಚಾರ ಮತ್ತು ಆಕರ್ಷಕ ಭರವಸೆಗಳಿಂದ ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಡುತ್ತಿವೆ.

ಡಿಎಂಕೆ: ಬಡ ಕುಟುಂಬಗಳ ಮಹಿಳೆಯರಿಗೆ ಪ್ರಸ್ತುತ ನೀಡುತ್ತಿರುವ 1,000 ರೂ. ಮಾಸಿಕ ಸಹಾಯಧನವನ್ನು 2,000ಕ್ಕೆ ಏರಿಸುವುದಾಗಿ ಹಾಗೂ ಗೃಹಿಣಿಯರಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು 8,000 ರೂ. ಮೌಲ್ಯದ ಕೂಪನ್ ನೀಡುವುದಾಗಿ ಭರವಸೆ ನೀಡಿದೆ.

ಎಐಎಡಿಎಂಕೆ: ಮಹಿಳೆಯರಿಗೆ ಉಚಿತ ರೆಫ್ರಿಜರೇಟರ್ ಹಾಗೂ ಮಾಸಿಕ ಧನಸಹಾಯವನ್ನು ಹೆಚ್ಚಿಸುವ ಪೈಪೋಟಿಗೆ ಇಳಿದಿದೆ.

ಟಿವಿಕೆ: ಬಡ ಕುಟುಂಬಗಳ ಮಹಿಳೆಯರಿಗೆ ನೀಡುವ ನೆರವಿನ ಮೊತ್ತವನ್ನು 2,500ಕ್ಕೆ ಏರಿಸುವ ಮತ್ತು ವಿವಾಹ ಸಹಾಯ ಯೋಜನೆಯಡಿ ಚಿನ್ನದ ನಾಣ್ಯ ನೀಡುವ ಭರವಸೆಯನ್ನು ನಟ ವಿಜಯ್ ನೀಡಿದ್ದಾರೆ.

ಶಿಕ್ಷಣ ಮತ್ತು ಯುವಜನತೆ

ಯುವ ಮತದಾರರನ್ನು ಸೆಳೆಯಲು ಪಕ್ಷಗಳು ಡಿಜಿಟಲ್ ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡುತ್ತಿವೆ. 35 ಲಕ್ಷ ಕಾಲೇಜ್ ವಿದ್ಯಾರ್ಥಿಗಳಿಗೆ ಡಿಎಂಕೆ ಉಚಿತ ಲ್ಯಾಪ್​ಟಾಪ್ ನೀಡುವ ಭರವಸೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಈಗಿರುವ 5ನೇ ತರಗತಿವರೆಗಿನ ಉಪಾಹಾರ ಯೋಜನೆಯನ್ನು 8ನೇ ತರಗತಿಯವರೆಗೆ ವಿಸ್ತರಿಸುವ ವಿಷಯ ಚರ್ಚೆಯಲ್ಲಿದೆ. ಎಐಎಡಿಎಂಕೆ ಮತ್ತು ಟಿವಿಕೆ ಪಕ್ಷಗಳು ಪದವೀಧರರಿಗೆ ಮಾಸಿಕ 2,000ದಿಂದ 4,000 ರೂ. ವರೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿವೆ.

ರೈತರ ಸಮಸ್ಯೆಗಳು

ಭತ್ತ ಮತ್ತು ಕಬ್ಬಿನ ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ರೈತರಿಗೆ ಉಚಿತವಾಗಿ ಆಧುನಿಕ ವಿದ್ಯುತ್ ಪಂಪ್​ಸೆಟ್ ನೀಡುವುದು ಮತ್ತು ನೀರಾವರಿ ಕಾಲುವೆಗಳ ಹೂಳೆತ್ತುವ ಕಾರ್ಯಗಳು ಚುನಾವಣಾ ವಿಷಯಗಳಾಗಿವೆ.

ಆಡಳಿತ ವೈಫಲ್ಯ

ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ನೆರೆ ಹಾವಳಿಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು (ಎಐಎಡಿಎಂಕೆ ಮತ್ತು ಬಿಜೆಪಿ) ಟೀಕಿಸುತ್ತಿದ್ದು, ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಯತ್ನಿಸುತ್ತಿವೆ.

ನೀಟ್ ಪರೀಕ್ಷೆಗೆ ವಿರೋಧ

ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ರದ್ದುಗೊಳಿಸು ವುದು ಸದಾಕಾಲದ ಭಾವನಾತ್ಮಕ ವಿಷಯವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಈ ವಿಷಯದಲ್ಲಿ ನಿರಂತರವಾಗಿ ಹೋರಾಡುತ್ತಿದೆ, ಇದನ್ನು ಈ ಬಾರಿಯೂ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಜಾತ್ಯತೀತ ಪ್ರಗತಿಪರ ಮೈತ್ರಿಕೂಟ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಈ ಮೈತ್ರಿಕೂಟವು ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿದೆ. ಡಿಎಂಕೆ ನೇತೃತ್ವದ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಐ(ಎಂ) ಮತ್ತು ಎಂಡಿಎಂಕೆ ಪಕ್ಷಗಳಿವೆ. ಒಟ್ಟು 234 ಸ್ಥಾನಗಳ ಪೈಕಿ ಡಿಎಂಕೆ 164 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದ 70 ಸೀಟುಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೊಳತ್ತೂರು ಕ್ಷೇತ್ರದಿಂದ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಚೆಪಾಕ್-ತಿರುವಲ್ಲಿಕ್ಕೇನಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಎನ್​ಡಿಎ ಮೈತ್ರಿಕೂಟ

ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಈ ಬಾರಿ ಬಿಜೆಪಿಯೊಂದಿಗೆ ಕೈಜೋಡಿಸಿ ಪ್ರಬಲ ಪೈಪೋಟಿ ನೀಡುತ್ತಿದೆ. ಈ ಮೈತ್ರಿಕೂಟದಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ ಮತ್ತು ಎಎಮ್ಂಕೆ ಪಕ್ಷಗಳಿವೆ. ಎಐಎಡಿಎಂಕೆ 165 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಇತ್ತೀಚೆಗಷ್ಟೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಮಿಳುನಾಡು

ವಿಜಯ್ ಅಲೆ

ಖ್ಯಾತ ನಟ ವಿಜಯ್ ಆರಂಭಿಸಿರುವ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಈ ಚುನಾವಣೆಯ ಆಕರ್ಷಣೆ. ಯುವ ಮತದಾರರು ಮತ್ತು ನಗರ ಪ್ರದೇಶದ ಮತದಾರರ ಮೇಲೆ ಈ ಪಕ್ಷ ಪ್ರಭಾವ ಬೀರುವ ನಿರೀಕ್ಷೆಯಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡಕ್ಕೂ ಪರ್ಯಾಯವಾಗಿ ನಿಲ್ಲಲು ವಿಜಯ್ ಸಜ್ಜಾಗಿದ್ದು, ಇದು ಮತಗಳ ವಿಭಜನೆಗೆ ಕಾರಣವಾಗುವ ದಟ್ಟ ಸಾಧ್ಯತೆ ಇದೆ. ದ್ರಾವಿಡ ಮತ್ತು ಆರ್ಯ ಸಿದ್ಧಾಂತಗಳ ನಡುವಿನ ಸಮರಕ್ಕಿಂತ ಜನಪರ ರಾಜಕಾರಣ ಮುಖ್ಯ ಎಂದು ಹೇಳುವ ಮೂಲಕ ವಿಜಯ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ವಿಜಯ್ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಎನ್​ಡಿಎ ಒಕ್ಕೂಟ ಪ್ರಯತ್ನ ನಡೆಸಿತ್ತಾದರೂ, ಅದು ಸಫಲವಾಗಲಿಲ್ಲ. ವಿಜಯ್ ರ್ಯಾಲಿಯಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರಾದರೂ, ಇದು ತಮಿಳುನಾಡಿನಲ್ಲಿರುವ ‘ತಾರಾ ಸಂಸ್ಕೃತಿಯ ಆರಾಧನೆ’ಯ ಭಾಗವೇ ಆಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ರ್ಯಾಲಿಗೆ ಬಂದ ಸಂಖ್ಯೆ ಮತಗಳಾಗಿ ಪರಿವರ್ತಿತವಾಗುವ ಸಾಧ್ಯತೆ ಕಡಿಮೆ. ಹಾಗೊಂದು ವೇಳೆ ಆದಲ್ಲಿ, ಟಿಎಂಕೆ ಪ್ರಬಲ ಪಕ್ಷವಾಗಿ ಹೊಮ್ಮಬಹುದು. ಪ್ರತಿ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಟಿವಿಕೆ ಪ್ರವೇಶದಿಂದ ಈ ಬಾರಿ ಚುನಾವಣಾ ಕಣದ ಚಿತ್ರಣ ಬದಲಾಗಿರುವುದಂತೂ ಹೌದು.

ಇತರ ಪ್ರಮುಖ ಪಕ್ಷಗಳು

1. ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್​ಟಿಕೆ) ಪಕ್ಷವು ಯಾವುದೇ ಮೈತ್ರಿ ಇಲ್ಲದೆ ಒಂಟಿಯಾಗಿ ಸ್ಪರ್ಧಿಸುತ್ತಿದ್ದು, ತನ್ನ ತಮಿಳು ಅಸ್ಮಿತೆಯ ವಿಚಾರಗಳೊಂದಿಗೆ ಮತ ಸೆಳೆಯಲು ಪ್ರಯತ್ನಿಸುತ್ತಿದೆ.

2. ನಟ ಕಮಲ್ ಹಾಸನ್ ಸಾರಥ್ಯಧ ಮಕ್ಕಳ್ ನೀಧಿ ಮೈಯಂ (ಎಂಎನ್​ಎಂ) ಪಕ್ಷವು ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಸಾಧ್ಯತೆಗಳಿವೆ.

3. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ಶಶಿಕಲಾ ನೇತೃತ್ವದ ಎಐಪಿಟಿಎಂಎಂಕೆ ಕೂಡ ಕೆಲವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ.

ಇದನ್ನೂ ನೋಡಿ: ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್‌ಗೆ ಬಿಜೆಪಿ ಒತ್ತಡವಿತ್ತೆ? | ವಿ Janashakthi Media

Donate Janashakthi Media

Leave a Reply

Your email address will not be published. Required fields are marked *