ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗಿದೆ. ಆ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದಂತೆ ತೋರಿಸಲಾಗಿದೆ. ಜೊತೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇರುವಂತೆ ಫೋಟೊದಲ್ಲಿ ಕಂಡುಬರುತ್ತದೆ. ಫ್ಯಾಕ್ಟ್
ಈ ಕುರಿತು ಜನಶಕ್ತಿ ಮೀಡಿಯಾ ಪರಿಶೀಲನೆ ನಡೆಸಿದಾಗ, ವೈರಲ್ ಆಗುತ್ತಿರುವ ಈ ಫೋಟೋ ನಿಜವಾದುದಲ್ಲ ಎಂಬುದು ಸ್ಪಷ್ಟವಾಗಿದೆ. ಚಿತ್ರದಲ್ಲಿ ‘SynthID’ ಎಂಬ ಗುರುತು ಪತ್ತೆಯಾಗಿದೆ. ಇದು ಗೂಗಲ್ನ ಎಐ ಮಾದರಿಗಳು ಸೃಷ್ಟಿಸುವ ಕೃತಕ ವಿಷಯಗಳನ್ನು ಗುರುತಿಸಲು ಬಳಸುವ ವಾಟರ್ಮಾರ್ಕ್ ತಂತ್ರಜ್ಞಾನ. ಸಾಮಾನ್ಯವಾಗಿ ಕಣ್ಣಿಗೆ ಕಾಣದಿದ್ದರೂ, ವಿಶೇಷ ಡಿಟೆಕ್ಟರ್ ಮೂಲಕ ಇದನ್ನು ಪತ್ತೆಹಚ್ಚಬಹುದು.
ಮಾರ್ಚ್ 30, 2026ರಂದು ‘ಸಂಪತ್ ದೇವಿ ಪಾಲ್’ ಎಂಬ ಖಾತೆ ಈ ಫೋಟೋವನ್ನು ಹಂಚಿಕೊಂಡು “ಇಂದು ನರೇಂದ್ರ ಮೋದಿ ತಮ್ಮ ವಿರೋಧ ಪಕ್ಷದ ನಾಯಕರನ್ನು ಆಸ್ಪತ್ರೆಗೆ ಭೇಟಿ ಮಾಡಿದರು” ಎಂದು ಬರೆದುಕೊಂಡಿತ್ತು. ಇದೇ ರೀತಿಯ ದಾವೆಗಳೊಂದಿಗೆ ಇನ್ನೂ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕೇರಳ ಚುನಾವಣೆ | ಎಲ್ಡಿಎಫ್ ವಿರೋಧಿ ಅಲೇ ಇದೆಯೇ? ಯುಡಿಎಫ್ ಸೋತರೆ ಏನಾಗಬಹುದು? ಬಿಜೆಪಿ ಲೆಕ್ಕಾಚಾರ ಏನಿದೆ?
ಪರಿಶೀಲನೆಯ ವೇಳೆ, ಸೋನಿಯಾ ಗಾಂಧಿ ಅವರು ಆರೋಗ್ಯ ಸಮಸ್ಯೆಯಿಂದ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿರುವುದು ಹಲವು ಮಾಧ್ಯಮ ವರದಿಗಳಲ್ಲಿ ದೃಢಪಟ್ಟಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ, ವೈದ್ಯಕೀಯ ನಿಗಾದಲ್ಲೇ ಇದ್ದಾರೆಂದು ತಿಳಿದುಬಂದಿದೆ. ಇದೇ ವೇಳೆ, ರಾಹುಲ್ ಗಾಂಧಿ ಅವರು ಆಸ್ಪತ್ರೆಗೆ ಜೊತೆಯಲ್ಲಿದ್ದರು ಎಂಬ ಮಾಹಿತಿಯೂ ಲಭ್ಯವಾಯಿತು. ಆದರೆ, ಪ್ರಧಾನಿ ಮೋದಿ ಅವರು ಭೇಟಿ ನೀಡಿದ ಕುರಿತು ಯಾವುದೇ ವಿಶ್ವಾಸಾರ್ಹ ವರದಿ ಸಿಕ್ಕಿಲ್ಲ.

ಈ ಹಿನ್ನೆಲೆ ಚಿತ್ರದ ನೈಜತೆಯ ಬಗ್ಗೆ ಅನುಮಾನ ಮೂಡಿದ ಕಾರಣ, ಅದನ್ನು ‘SynthID’ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ, ಚಿತ್ರದಲ್ಲಿ ಬಹುಪಾಲು ಅಂಶಗಳು ಎಐ ಮೂಲಕ ಸೃಷ್ಟಿಸಲ್ಪಟ್ಟಿರುವ ಸಾಧ್ಯತೆ ಬಹಳ ಹೆಚ್ಚಾಗಿದೆ ಎಂಬುದು ಗೊತ್ತಾಯಿತು. ವಿಶ್ಲೇಷಣೆಯಲ್ಲಿ ನೀಲಿ ಬಣ್ಣದಲ್ಲಿ ತೋರಿಸಿದ ಭಾಗಗಳು ಮೋದಿ, ಸೋನಿಯಾ, ರಾಹುಲ್ ಹಾಗೂ ಸುತ್ತಮುತ್ತಲಿನ ಸಿಬ್ಬಂದಿ ಎಲ್ಲವೂ ಕೃತಕವಾಗಿರುವುದು ಗೊತ್ತಾಗುತ್ತದೆ. ಹಳದಿ ಬಣ್ಣದಲ್ಲಿ ಹೈಲೈಟ್ ಮಾಡಲಾದ ಭಾಗದಲ್ಲಿ ಯಾವುದೇ ಕುಶಲತೆ ದೃಢೀಕರಿಸಲ್ಪಟ್ಟಿಲ್ಲ. ಫ್ಯಾಕ್ಟ್
ಇನ್ನಷ್ಟು ಖಚಿತಪಡಿಸಿಕೊಳ್ಳಲು ‘Hive Moderation’ ಉಪಕರಣ ಬಳಸಿ ಪರಿಶೀಲಿಸಿದಾಗ, 97.8% ಪ್ರಮಾಣದಲ್ಲಿ ಇದು ಎಐ ಮೂಲಕ ನಿರ್ಮಿತ ಚಿತ್ರ ಎಂದು ಫಲಿತಾಂಶ ನೀಡಿದೆ. ವಿಶೇಷವಾಗಿ ‘Gemini’ ಮಾದರಿಯ ಬಳಕೆ ಸಾಧ್ಯತೆ ಸೂಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಪತ್ರೆಗೆ ತೆರಳಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ ಎಂಬ ವಿಷಯದೊಂದಿಗೆ ಹರಿದಾಡುತ್ತಿರುವ ಫೋಟೋ ಸಂಪೂರ್ಣವಾಗಿ ಸುಳ್ಳು. ಇದು ಎಐ ಮೂಲಕ ಸೃಷ್ಟಿಸಲ್ಪಟ್ಟ ಕೃತಕ ಚಿತ್ರ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ 6361984022 ಈ ನಂಬರ್ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್ಚೆಕ್ ಮಾಡುತ್ತೇವೆ.
ಇದನ್ನೂ ನೋಡಿ : ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್ಗೆ ಬಿಜೆಪಿ ಒತ್ತಡವಿತ್ತೆ? | ವಿ Janashakthi Media
