ಇರಾನ್ ಮೇಲೆ ಯುಎಸ್-ಇಸ್ರೇಲ್ ಆಕ್ರಮಣದ ಬಗ್ಗೆ ಹಿಂದುತ್ವ ಮಂದಿಯ ಮೌನವು ಮತ್ತು ಈ ಯುದ್ಧದಲ್ಲಿ ಮೋದಿ ನೇತೃತ್ವದ ಸರಕಾರ ಯಾರ ಪಕ್ಷವನ್ನೂ ವಹಿಸಿಲ್ಲದಿರುವುದು ಭಾರತದ ಜನತೆಯ ಹಿತದೃಷ್ಟಿಯಿಂದ ಕೂಡಿದೆ, ಅದೊಂದು ಬುದ್ಧಿವಂತಿಕೆಯ ನಡೆ ಎಂದು ಸೋಗು ಹಾಕುವುದು ಪೂರ್ಣವಾಗಿಯೂ ಒಂದು ಅಸಂಬದ್ಧವೇ ಸರಿ! ಈ ವಾದವು ಅತ್ಯಂತ ಅಪಾಯಕಾರಿಯಾಗಿದೆ ಕೂಡ. ಅವರ ಈ ಪುಕ್ಕಲು ಮೌನವು ಇಸ್ರೇಲ್‌ನೊಂದಿಗೆ ಅವರ ಶಾಮೀಲಿನ ಸಂಬಂಧ ಮತ್ತು ಅಮೆರಿಕದ ಜೀಹುಜೂರಿಕೆಗೆ ಅನುಗುಣವಾಗಿಯೇ ಇದೆ. ಅವರ ಈ ಮೌನವು ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ತೊಡಗಿದ್ದ ಪ್ರಗತಿಪರ ರಾಷ್ಟ್ರೀಯ ಪ್ರವಾಹವು ಪ್ರತಿಪಾದಿಸುವ ನಿಲುವಿಗೆ ವಿರುದ್ಧವಾಗಿದೆ. ಈ ಮೌನವು ಸಾಮ್ರಾಜ್ಯಶಾಹಿಯ ಕುತಂತ್ರಗಳಿಗೆ ಕುರುಡಾಗಿರುವುದು ಮಾತ್ರವಲ್ಲದೆ ದೇಶದ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಒಂದು ದೊಡ್ಡ ಅವಮಾನವೂ ಹೌದು. ಆಕ್ರಮಣ
– ಪ್ರೊ.ಪ್ರಭಾತ್ ಪಟ್ನಾಯಕ್
– ಅನು: ಕೆ ಎಂ ನಾಗರಾಜ್
ಇರಾನಿನ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸದ ಮತ್ತು ಈ ದಾಳಿಯ ಬಗ್ಗೆ ಬಾಯಿ ತೆರೆಯಲು ಹೆದರುತ್ತಿರುವ ಭಾರತ ಸರ್ಕಾರವು, ಈ ಯುದ್ಧದಲ್ಲಿ ತಾನು ಯಾರ ಪಕ್ಷವನ್ನೂ ವಹಿಸಿಲ್ಲ ಎಂಬುದನ್ನು ಮತ್ತು ತಾನು ಈ ಬಗ್ಗೆ ತಳೆದಿರುವ ಮೌನವು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಬುದ್ಧಿವಂತಿಕೆಯ ನಡೆ ಎಂಬ ಅಭಿಪ್ರಾಯವನ್ನು ಮೂಡಿಸುವ ತನ್ನ ಪ್ರಯತ್ನವನ್ನು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಅನುಯಾಯಿಗಳ ಮೂಲಕ ಪ್ರಚುರಪಡಿಸುವಲ್ಲಿ ನಿರತವಾಗಿದೆ. ದಾಳಿ ಮಾಡಿದ ಅಮೆರಿಕವನ್ನು ಮತ್ತು ಇಸ್ರೇಲ್‌ಅನ್ನು ಖಂಡಿಸುವುದು ನೈತಿಕ ನೆಲೆಯಲ್ಲಿ ಸರಿ ಎನಿಸಬಹುದು ನಿಜ; ಆದರೆ, ಒಂದು ದೇಶದ ವಿದೇಶಾಂಗ ನೀತಿಯು ಅದರ ರಾಷ್ಟ್ರೀಯ ಸ್ವ-ಹಿತಾಸಕ್ತಿಯ ವಾಸ್ತವಗಳನ್ನು ಆಧರಿಸಿರಬೇಕೇ ವಿನಃ, “ಕಾಲ್ಪನಿಕ” ನೈತಿಕ ಪರಿಗಣನೆಗಳನ್ನಲ್ಲ; ಭಾರತದ ರಾಷ್ಟ್ರೀಯ ಸ್ವ-ಹಿತಾಸಕ್ತಿಯ ದೃಷ್ಟಿಯಲ್ಲಿ ಪಶ್ಚಿಮದೊಂದಿಗಿನ ನಮ್ಮ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ, ನೈತಿಕವಾಗಿ ತೃಪ್ತಿಕರವಾಗಿ ಕಾಣುವ ಮೂರನೆಯ ಜಗತ್ತಿನೊಂದಿಗೆ ಸೌಹಾರ್ದತೆಯಂಥಹ ಒಂದು ಅಮೂರ್ತ ವಿಷಯದ ಮೇಲೆ ಪಶ್ಚಿಮದೊಂದಿಗಿನ ನಮ್ಮ ಸಂಬಂಧಗಳನ್ನು ಹಾಳುಮಾಡಿಕೊಳ್ಳುವುದರಿಂದ ಯಾವ ಭೌತಿಕ ಪ್ರಯೋಜನವೂ ಇರುವುದಿಲ್ಲ ಎಂಬುದು ಸರ್ಕಾರದ ವಾದ. ಆಕ್ರಮಣ
ಈ ವಾದವು ಅತ್ಯಂತ ಅಪಾಯಕಾರಿಯಾಗಿದೆ ಎಂಬುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನೈತಿಕ ಪರಿಗಣನೆಗಳನ್ನು ತಳ್ಳಿಹಾಕುವುದು ಅಪಾಯಕಾರಿಯಾಗುತ್ತದೆ. ಏಕೆಂದರೆ ಅದು ಎರಡನೇ ಮಹಾಯುದ್ಧಾನಂತರದ ಇಡೀ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಕಿತ್ತೆಸೆಯುವುದಕ್ಕೆ ಸಮರ್ಥನೆಯಂತಾಗುತ್ತದೆ. ವಿಶ್ವ ಸಂಸ್ಥೆ ವ್ಯವಸ್ಥೆಯೂ ಸೇರಿದಂತೆ ಯುದ್ಧಾನಂತರದ ಅಂತಾರಾಷ್ಟ್ರೀಯ ವ್ಯವಸ್ಥೆಯು ಸದಾ ನೈತಿಕವಾಗಿಯೇ ವರ್ತಿಸಿದೆ ಎಂದೇನೂ ನಾವಿಲ್ಲಿ ಹೇಳುತ್ತಿಲ್ಲ. ಇಲ್ಲಿ ಒತ್ತಿಹೇಳಬೇಕಾಗಿರುವ ಅಂಶವೆಂದರೆ, ಈ ವ್ಯವಸ್ಥೆಯ ಮತ್ತು ಅದರೊಂದಿಗೆ ಬಂದ ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯ ಸಮರ್ಥನೆಗಳು ಮೂಲಭೂತವಾಗಿ ಕೆಲವು ನೈತಿಕ ಪರಿಗಣನೆಗಳಿಂದ ರೂಪುಗೊಂಡಿವೆ ಎಂಬುದು. ಅವುಗಳನ್ನು ಗೌರವಿಸುವ ಒತ್ತಾಯಕ್ಕೆ ಎರಡನೆಯ ಮಹಾಯುದ್ಧದಿಂದ ದುರ್ಬಲಗೊಂಡ ಸಾಮ್ರಾಜ್ಯಶಾಹಿಯು ಒಳಪಟ್ಟಿತ್ತು.
ಇದನ್ನೂ ಓದಿ: “ನಾಲ್ಕೇ ತಿಂಗಳಲ್ಲಿ ನಿರ್ಗಮನ? ನಿತೀಶ್‌ಗೆ ಬಿಜೆಪಿ ಒತ್ತಡವಿತ್ತೆ?”
ಈ ಇಡೀ ಅವಧಿಯಲ್ಲಿ ಸಾಮ್ರಾಜ್ಯಶಾಹಿಯು ನಿಸ್ಸಂದೇಹವಾಗಿ ತನ್ನ ಎಂದಿನ ವಂಚನೆಯಲ್ಲೇ ತೊಡಗಿತ್ತಾದರೂ, ಅಂಥಹ ವಂಚನೆಯ ಪ್ರಕರಣಗಳು ವಿರಳವೂ ಮತ್ತು ಸಮಯ-ಸಂದರ್ಭ-ಉಚಿತವೂ ಆಗಿರಬೇಕಿತ್ತು. ಅದಕ್ಕಿಂತಲೂ ಮಿಗಿಲಾಗಿ, ಸಾಮ್ರಾಜ್ಯಶಾಹಿಯು ತನಗೆ ಅನುಕೂಲವಾಗಿಲ್ಲವೆಂದು ಕಂಡು ಬಂದ ಮೂರನೇ ಜಗತ್ತಿನ ದೇಶಗಳ ಸರ್ಕಾರಗಳನ್ನು ಉರುಳಿಸುವ ತನ್ನ ಮೋಸದ ಕೃತ್ಯಗಳನ್ನು ಅವುಗಳಿಗೆ ದೇಶೀಯ ದಂಗೆಯ ರೂಪ ಕೊಡುವ ಮೂಲಕ ಮರೆಮಾಚಬೇಕಾಗಿತ್ತು ಮತ್ತು ಇಂಥಹ ದಂಗೆಗಳು ಸಾಮಾನ್ಯವಾಗಿ ನಗ್ನ ಆಕ್ರಮಣದ ರೂಪದಲ್ಲೇನೂ ಇರುತ್ತಿರಲಿಲ್ಲ. ಹಾಗಾಗಿ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ನೈತಿಕ ಪರಿಗಣನೆಗಳನ್ನು ಹಾಸ್ಯಮಾಡುವುದೆಂದರೆ ಅಂಥಹ ಒಂದು ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಕಿತ್ತೆಸೆಯಬೇಕೆಂದು ವಾದಮಾಡಿದಂತಾಗುತ್ತದೆ ಮತ್ತು ಸಾಮ್ರಾಜ್ಯಶಾಹಿಯ ನಗ್ನ ದಾಳಿಯ ಸಮರ್ಥನೆಯಾಗುತ್ತದೆ.
ಸಾಮ್ರಾಜ್ಯಶಾಹಿ ದಾಳಿಯ ತಿರುಗುಮುರುಗು ಮೀಮಾಂಸೆ
ಎರಡನೆಯದು, ಅಂಥಹ ಒಂದು ವ್ಯವಸ್ಥೆಯನ್ನು ಕಿತ್ತೆಸೆದ ಸನ್ನಿವೇಶದಲ್ಲಿ ನಾವು ಯಾವಾಗಲೋ ಒಮ್ಮೆ ನೋಡಬಹುದಾಗಿದ್ದ ದಾಳಿಯ ಬದಲಾಗಿ ವಸಾಹತುಶಾಹಿ ಆಳ್ವಿಕೆಯಿಂದ ಮೂರನೇ ಜಗತ್ತು ಪಡೆದ ಔಪಚಾರಿಕ ಸ್ವಾತಂತ್ರ‍್ಯದ ಬಹುಮುಖ್ಯ ಸಾಧನೆಯನ್ನು ತಿರುಗು ಮುರುಗು ಮಾಡುವ ದಾಳಿಗಳ ಸರಣಿಯನ್ನೇ ನೋಡಬೇಕಾಗುತ್ತದೆ. ಒಂದು ನಿರ್ದಿಷ್ಟ ಸನ್ನಿವೇಶವು ವಸಾಹತು/ಅರೆ-ವಸಾಹತು ಸ್ಥಾನಮಾನ ಹೊಂದಿದ್ದ ಮೂರನೇ ಜಗತ್ತಿಗೆ ಸ್ವಾತಂತ್ರ‍್ಯವನ್ನು ಸಾಧ್ಯಗೊಳಿಸಿತ್ತು. ಅದು ಬೊಲ್ಶೆವಿಕ್ ಕ್ರಾಂತಿಯೊಂದಿಗೆ ಜಾಗತಿಕವಾಗಿ ಆರಂಭಗೊಂಡು ಮತ್ತು ಅದರಿಂದ ಹೆಚ್ಚು ಬಲಗೊಂಡ ದಮನಿತ ಜನರ ಐತಿಹಾಸಿಕ ಉತ್ಕ್ರಾಂತಿಯ ಸನ್ನಿವೇಶ. ಈ ಒಂದು ಸತ್ಯಾಂಶವನ್ನು ಕೆಲವು ವಾರಗಳ ಹಿಂದೆ ಯು.ಎಸ್. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಯುರೋಪಿಯನ್ ನಾಯಕರಿಗೆ ಮಾಡಿದ ಕುಖ್ಯಾತ ಭಾಷಣದಲ್ಲಿಯೂ ಗುರುತಿಸಬಹುದು. ಆ ಸನ್ನಿವೇಶ ಕುಸಿದು ಹೋದದ್ದು, ಎಲ್ಲಕ್ಕಿಂತಲೂ ಹೆಚ್ಚಾಗಿ ಸೋವಿಯತ್ ಒಕ್ಕೂಟದ ಪತನ ಸಾಮ್ರಾಜ್ಯಶಾಹಿ ದಾಳಿಯ ಒಂದು ತಿರುಗುಮುರುಗಾದ ಮೀಮಾಂಸೆಯನ್ನು ಹರಿಯಬಿಟ್ಟಿತು.
ಇದನ್ನು ಹಲವು ಬೆಳವಣಿಗೆಗಳಿಂದ ಗುರುತಿಸಬಹುದು: ವಿವಿಧ “ಬಣ್ಣದ ಕ್ರಾಂತಿಗಳ” ಮೂಲಕ ಹಿಂದಿನ ಸೋವಿಯತ್ ಗಣರಾಜ್ಯಗಳೊಳಕ್ಕೆ ಸಾಮ್ರಾಜ್ಯಶಾಹಿ ಅತಿಕ್ರಮಣ; ರಷ್ಯಾದ ಗಡಿ ಭಾಗದವರೆಗೆ ನ್ಯಾಟೋದ ವಿಸ್ತರಣೆ; ಗಾಜಾದಲ್ಲಿ ಭಯಾನಕ ನರಮೇಧ; ಇಸ್ರೇಲಿ ನೆಲಸಿಗ ವಸಾಹತುಶಾಹಿ ಭೂಪ್ರದೇಶದ ವಿಸ್ತರಣೆ; ಅಮೆರಿಕದಿಂದ ವೆನೆಜುವೆಲಾದ ಅಧ್ಯಕ್ಷ ಮದುರೊ ಮತ್ತು ಅವರ ಪತ್ನಿಯ ಅಪಹರಣ; ಕ್ಯೂಬಾದ ಸಮಾಜವಾದಿ ಕ್ರಾಂತಿಯನ್ನು ನಾಶಪಡಿಸಲು ಹಸ್ತಕ್ಷೇಪ ಮಾಡುವುದಾಗಿ ಅಮೆರಿಕದ ಬಹಿರಂಗ ಬೆದರಿಕೆ; ಮತ್ತು ಈಗ ಇರಾನ್ ವಿರುದ್ಧ ಖುಲ್ಲಂ ಖುಲ್ಲಾ ಯುದ್ಧ. ಸಾಮ್ರಾಜ್ಯಶಾಹಿ ದಾಳಿಯ ಈ ತರ್ಕಕ್ಕೆ ಇರಾನ್ ಪ್ರಸ್ತುತ ಒಡ್ಡುತ್ತಿರುವ ಕೆಚ್ಚಿನ ಪ್ರತಿರೋಧವು ಒಂದು ಬ್ರೇಕ್ ಆಗಿ ಕೆಲಸ ಮಾಡುತ್ತಿದೆ; ಈ ಪ್ರತಿರೋಧವನ್ನು ಪ್ರಾಯಶಃ ಒಂದು ವೇಳೆ ಜಯಿಸಿದರೆ ಸಾಮ್ರಾಜ್ಯಶಾಹಿ ಆಕ್ರಮಣದ ಈ ನಿರ್ದಯ ತರ್ಕವು ಇನ್ನಷ್ಟು ಲಜ್ಜೆಗೆಟ್ಟ ಮತ್ತು ಹುರಿದುಂಬಿದ ರೂಪದಲ್ಲಿ ಮುಂದುವರಿಯುತ್ತದೆ.
ಇರಾನಿನ ಪ್ರಸ್ತುತ ಆಳ್ವಿಕೆಯ ಸಿದ್ಧಾಂತ ಮತ್ತು ಸಂಸ್ಥೆಗಳ ಬಗ್ಗೆ ನಿಮ್ಮ ಮನೋಭಾವವೇನೇ ಇರಲಿ, ಸಾಮ್ರಾಜ್ಯಶಾಹಿ ದಾಳಿಯ ವಿರುದ್ಧ ಇರಾನನ್ನು ಇಂದು ಬೆಂಬಲಿಸದಿರುವುದು, ಸಾಮ್ರಾಜ್ಯಶಾಹಿ ಪ್ರಾಬಲ್ಯದ ನಿರೀಕ್ಷೆಗೆ ಅನುಗುಣವಾಗಿ ನಾಳೆ ನಮ್ಮದೇ ದೇಶವನ್ನು ದಾಳಿಗೆ ತೆರೆದಿಡುವುದಕ್ಕೆ ಸಮಾನವಾಗಿರುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮ್ರಾಜ್ಯಶಾಹಿಯ ವಿರುದ್ಧ ಇರಾನ್‌ಗೆ ನೀಡುವ ಬೆಂಬಲವು ನೈತಿಕ ಪರಿಗಣನೆಗಳ ಮೇಲೆ ಮಾತ್ರವಲ್ಲ, ನಮ್ಮದೇ ಸಾರ್ವಭೌಮತ್ವದ ರಕ್ಷಣೆಗಾಗಿ ಸಾಮ್ರಾಜ್ಯಶಾಹಿ ದಾಳಿಯ ನಿರ್ದಯ ತರ್ಕವನ್ನು ತಡೆದು ನಿಲ್ಲಿಸ ಬೇಕಾಗುತ್ತದೆ. ಇರಾನ್‌ಗೆ ಏನಾಗುತ್ತದೆ ಎಂಬುದು ಇರಾನ್‌ಗೆ ಮಾತ್ರ ಸಂಬಂಧಿಸುವುದಿಲ್ಲ; ನಮ್ಮದೇ ಸ್ವಾತಂತ್ರ‍್ಯವೂ ಅದರೊಂದಿಗೆ ಸಂಬಂಧ ಬೆಸೆದುಕೊಂಡಿದೆ.
ಸಾಮ್ರಾಜ್ಯಶಾಹಿಯ ವಿರುದ್ಧ ಇರಾನ್‌ಗೆ ನೀಡುವ ಬೆಂಬಲವು ನೈತಿಕ ಪರಿಗಣನೆಗಳ ಮೇಲೆ ಮಾತ್ರವಲ್ಲ, ನಮ್ಮದೇ ಸಾರ್ವಭೌಮತ್ವದ ರಕ್ಷಣೆಗಾಗಿ ಸಾಮ್ರಾಜ್ಯಶಾಹಿ ದಾಳಿಯ ನಿರ್ದಯ ತರ್ಕವನ್ನು ತಡೆದು ನಿಲ್ಲಿಸ ಬೇಕಾಗುತ್ತದೆ. ಇರಾನ್‌ಗೆ ಏನಾಗುತ್ತದೆ ಎಂಬುದು ಇರಾನ್‌ಗೆ ಮಾತ್ರ ಸಂಬಂಧಿಸುವುದಿಲ್ಲ; ನಮ್ಮದೇ ಸ್ವಾತಂತ್ರ‍್ಯವೂ ಅದರೊಂದಿಗೆ ಸಂಬಂಧ ಬೆಸೆದುಕೊಂಡಿದೆ.
ಸಾಮ್ರಾಜ್ಯಶಾಹೀ ಸ್ವಾಧೀನದ ಅನ್ವೇಷಣೆ
ಈ ಸಾಮ್ರಾಜ್ಯಶಾಹಿ ಮೀಮಾಂಸೆಯ ನಿಷ್ಠುರತೆ ಒಬ್ಬ ಡೊನಾಲ್ಡ್ ಟ್ರಂಪ್‌ನ ತಿಕ್ಕಲುತನದಿಂದ ಉದ್ಭವಿಸುವ ವಿಷಯವಲ್ಲ. ಬದಲಿಗೆ, ಅದು ಬಂಡವಾಳಶಾಹಿಯ ಸ್ವರೂಪದಲ್ಲೇ ಅಂತರ್ಗತವಾಗಿದೆ. ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯಿಂದಾಗಿ ಬಂಡವಾಳಶಾಹಿ ಜಗತ್ತು ಛಿದ್ರಗೊಂಡಿದ್ದ ಸಂದರ್ಭದಲ್ಲಿ ಬರೆದಿದ್ದ ಲೆನಿನ್, ಸಾಮ್ರಾಜ್ಯಶಾಹಿ ರಥದ ಈ ನಿಷ್ಠುರ ಮುನ್ನಡೆಯ ಬಗ್ಗೆ ಗಮನ ಸೆಳೆದಿದ್ದರು; ಹಾಗಾಗಿ, ಸಾಮ್ರಾಜ್ಯಶಾಹೀ ಸ್ವಾಧೀನದ ಅನ್ವೇಷಣೆಯು ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಗೆ ಮಾತ್ರ ಸಂಬಂಧಿಸಿದೆ ಎಂಬ ಒಂದು ಭಾವನೆ ಸೃಷ್ಟಿಯಾಗಿತ್ತು. ಆದರೆ ಅದು ತಪ್ಪಾಗಿದೆ. ಆಕ್ರಮಣ
ಪ್ರಸ್ತುತ ಸನ್ನಿವೇಶದಲ್ಲಿ ಅಂತರ್-ಸಾಮ್ರಾಜ್ಯಶಾಹಿ ಪೈಪೋಟಿಯ ಗದ್ದಲವಿಲ್ಲ ಎಂದ ಮಾತ್ರಕ್ಕೆ ಸಾಮ್ರಾಜ್ಯಶಾಹಿಯ ಈ ನಿಷ್ಠುರ ಮುನ್ನಡೆಯೂ ಇಲ್ಲ ಎಂದು ಹೇಳುವುದು ಖಂಡಿತಾ ಸಾಧ್ಯವಿಲ್ಲ. ಲೆನಿನ್ ಗಮನ ಸೆಳೆದ ಕಚ್ಚಾ ವಸ್ತುಗಳ ನಿಜ ಅಥವಾ ಸಂಭಾವ್ಯ ಮೂಲಗಳ ಈ ಹುಡುಕಾಟವು ಇಂದು ಸಾಮ್ರಾಜ್ಯಶಾಹಿಗೆ ಅವರ ಕಾಲದಲ್ಲಿದ್ದಷ್ಟೇ ಅನಿವಾರ್ಯವಾಗಿದೆ. ಈ ಕಚ್ಚಾ ವಸ್ತುಗಳ ನಿಜ ಅಥವಾ ಸಂಭಾವ್ಯ ಮೂಲಗಳ ಮೇಲೆ ಮೂರನೇ ಜಗತ್ತಿನ ಸ್ವತಂತ್ರ ಸರ್ಕಾರಗಳು ಹೊಂದಿರುವ ನಿಯಂತ್ರಣವನ್ನು ತಡೆಯುವುದು ಸಾಮ್ರಾಜ್ಯಶಾಹಿಗೆ ಅತ್ಯಂತ ಮಹತ್ವದ ವಿಷಯವಾಗಿದೆ. ಆಕ್ರಮಣ
ಬಂಡವಾಳಗಳ ನಡುವಿನ ಜೀವನ್ಮರಣ ಸ್ಪರ್ಧೆ ಸಾಮ್ರಾಜ್ಯಶಾಹಿ ಜಗತ್ತಿನ ಸಹಜಸ್ವಭಾವ ಮತ್ತು ಅದರ ಕ್ರಿಯೆಗಳು ಈ ಸರ್ವವ್ಯಾಪಿ ಸ್ಪರ್ಧೆಯ ಮೇಲೆಯೇ ನಿಂತಿವೆ. ಈ ಜಗತ್ತಿನಲ್ಲಿ, ಸಾಮ್ರಾಜ್ಯಶಾಹಿಯು ಯಾವುದಾದರೂ ಒಂದು ಸಮತೋಲನದ ಮಟ್ಟದಲ್ಲಿ ಶಾಶ್ವತವಾಗಿ ನೆಲೆಗೊಳ್ಳುವುದು ಎಂದಿಗೂ ಸಾಧ್ಯವಿಲ್ಲ. ಅಥವಾ, ಶಾಂತಿಯುತ ಸಹಬಾಳ್ವೆಯ ಒಂದು ಶಾಶ್ವತ ಸ್ಥಿತಿಯನ್ನು ಅದು ಸ್ವೀಕರಿಸುವುದೂ ಸಹ ಸಾಧ್ಯವಿಲ್ಲ. ಯಾವುದನ್ನು ಲೆನಿನ್ “ಆರ್ಥಿಕ ಪ್ರದೇಶ” ಎಂದು ಕರೆದಿದ್ದರೊ ಅದನ್ನು ವಶಪಡಿಸಿಕೊಳ್ಳುವ ಧಾವಂತವು ಅದರ ಅಸ್ತಿತ್ವಕ್ಕೆ ಅನಿವಾರ್ಯವಾಗುತ್ತದೆ. ಆದ್ದರಿಂದ, ಯುದ್ಧಾನಂತರದಲ್ಲಿ ತನ್ನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಅದರ ಅಸ್ತಿತ್ವಕ್ಕೆ ಅತ್ಯಗತ್ಯವಾಗುತ್ತದೆ. ಮತ್ತು, ಸೋವಿಯತ್ ಒಕ್ಕೂಟದ ಪತನದ “ವಿಜಯ”ವನ್ನು ಸಾಧಿಸಿದ ನಂತರ, ಈಗ ಅದು ತನ್ನ ಆಕ್ರಮಣದ ತರ್ಕದೊಂದಿಗೆ ಮುಂದುವರಿಯ ಬಯಸುತ್ತದೆ. ಮೂರನೇ ಜಗತ್ತಿನ ಜನರು ಈ ದಾಳಿಯ ತರ್ಕವನ್ನು ಪ್ರತಿರೋಧದ ತರ್ಕದ ಮೂಲಕ ಎದುರಿಸಬೇಕಾಗುತ್ತದೆ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಈಗ ಹೋರಾಡುವವರಿಗೆ, ಅದು ಯಾರೇ ಇರಲಿ, ಬೆಂಬಲ ನೀಡುವುದು ಮುಖ್ಯವಾಗುತ್ತದೆ.
ಸಾಮ್ರಾಜ್ಯಶಾಹಿ ಈಗ ತನ್ನ ಆಕ್ರಮಣದ ತರ್ಕದೊಂದಿಗೆ ಮುಂದುವರಿಯ ಬಯಸುತ್ತದೆ. ಮೂರನೇ ಜಗತ್ತಿನ ಜನರು ಈ ದಾಳಿಯ ತರ್ಕವನ್ನು ಪ್ರತಿರೋಧದ ತರ್ಕದ ಮೂಲಕ ಎದುರಿಸಬೇಕಾಗುತ್ತದೆ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಈಗ ಹೋರಾಡುವವರಿಗೆ, ಅದು ಯಾರೇ ಇರಲಿ, ಬೆಂಬಲ ನೀಡುವುದು ಮುಖ್ಯವಾಗುತ್ತದೆ. ಆಕ್ರಮಣ
ಈ ವಾದಕ್ಕೆ ಒಂದು ನಿರ್ದಿಷ್ಟ ಸಂದರ್ಭವೂ ಇದೆ. ಸಮಾಜವಾದದ ವಿರುದ್ಧ ಮತ್ತು ಮೂರನೇ ಜಗತ್ತಿನಲ್ಲಿ ಜಾತ್ಯತೀತ ಪ್ರಗತಿಪರ ರಾಷ್ಟ್ರೀಯತೆಯ ವಿರುದ್ಧದ ಹೋರಾಟದಲ್ಲಿ, ಸಾಮ್ರಾಜ್ಯಶಾಹಿಯು ಇಸ್ಲಾಂ ಮತೀಯತೆಯನ್ನು ಒಂದು ಆಯುಧವಾಗಿ ಬಳಸಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದ ಜನತೆಯ ಹೋರಾಟವನ್ನು ಬುಡಮೇಲು ಮಾಡುವ ಒಂದು ಸಾಧನವಾಗಿ ಭಾರತ ಉಪಖಂಡದಲ್ಲಿ ಮುಸ್ಲಿಂ ಪ್ರತ್ಯೇಕತಾವಾದಕ್ಕೆ ಕಟ್ಟಾ ಸಾಮ್ರಾಜ್ಯಶಾಹಿ ವಿನ್ಸ್ಟನ್ ಚರ್ಚಿಲ್ ನೀಡಿದ ಬೆಂಬಲದಿದಿಂದ ಹಿಡಿದು; ಇರಾನ್‌ನಲ್ಲಿ ಮೊಹಮ್ಮದ್ ಮೊಸದೇಗ್ ಅವರ ಜಾತ್ಯತೀತ ಮತ್ತು ಪ್ರಗತಿಪರ ಆಡಳಿತದ ವಿರುದ್ಧ ದಂಗೆಯನ್ನು ನಡೆಸಲು ಇರಾನಿನ ಮತೀಯ ಮುಖಂಡ ಅಯತೊಲ್ಲಾ ಕಶಾನಿಯೊಂದಿಗೆ ಯುಎಸ್ ಸಾಮ್ರಾಜ್ಯಶಾಹಿಯ ಸಖ್ಯದವರೆಗೆ; ಅಫ್ಘಾನಿಸ್ತಾನದಲ್ಲಿ ಸವುರ್ ಕ್ರಾಂತಿಯ ವಿರುದ್ಧ ಅಮೆರಿಕವು ಇಸ್ಲಾಮ್‌ವಾದಿ ಪಡೆಗಳನ್ನು ಸೋವಿಯತ್ ಒಕ್ಕೂಟವನ್ನು ಬಳಲಿಸಲು ಕೂಡ ಬಳಸುವುದರ ವರೆಗೆ; ಇದೆಲ್ಲವೂ ಮೂರನೇ ಜಗತ್ತಿನ ಪ್ರಗತಿಪರ ಚಳುವಳಿಗಳನ್ನು ಹತ್ತಿಕ್ಕುವ ಸಲುವಾಗಿ ಜನರನ್ನು ಅವರ ಮತೀಯ ನಂಬಿಕೆಗಳ ಆಧಾರದ ಮೇಲೆ ವಿಭಜಿಸಿದ ಸಾಮ್ರಾಜ್ಯಶಾಹಿಯ ಒಂದೇ ತೆರನ ಕಥೆಯೂ ಹೌದು.
ಹಿಂದುತ್ವವಾದಿಗಳು ಅರ್ಥಮಾಡಿಕೊಳ್ಳುವುದಿಲ್ಲ
ಆದಾಗ್ಯೂ, ಮೇಲ್ನೋಟದಲ್ಲಿ ಇತಿಹಾಸದ ಒಂದು ವಿಡಂಬನೆಯಾಗಿ ತೋರುವ ವಾಸ್ತವವಾಗಿ ಪರಿಸ್ಥಿತಿಯ ತರ್ಕದಲ್ಲಿ ಬೇರೂರಿದ ಸಾಮ್ರಾಜ್ಯಶಾಹಿಯು, ಆ ಒಂದು ನಿರ್ದಿಷ್ಟ ಹಂತದಲ್ಲಿ, “ಪ್ರಜಾಪ್ರಭುತ್ವ”ದ ಮತ್ತು “ಸ್ವಾತಂತ್ರ‍್ಯ”ದ ರಕ್ಷಕನ ವೇಷ ಧರಿಸಿ, ಅದು ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಆಡಳಿತಗಳ ವಿರುದ್ಧವೇ ಹೋಯಿತು. ಕೆಲವೊಮ್ಮೆ ಇದಕ್ಕೆ ತದ್ವಿರುದ್ಧವಾದದ್ದನ್ನು ತನ್ನ ವಿರುದ್ಧ ತಿರುಗಿಬಿದ್ದ ಇಸ್ಲಾಮಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ ಜಾತ್ಯತೀತ ಆಡಳಿತಗಳನ್ನು ಸಾಮ್ರಾಜ್ಯಶಾಹಿಯು ಬೆಂಬಲಿಸಿರುವುದೂ ಇದೆ. ಇಂಥಹ ಒಂದು ಕಾರ್ಯವನ್ನು ಅದು ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಮಾಡಿತ್ತು.
ತನ್ನ ವಿರುದ್ಧ ದ್ವೇಷ ವ್ಯಕ್ತಪಡಿಸಿದ ಅಥವಾ ತನ್ನ ಬಗ್ಗೆ ಉದಾಸೀನ ಭಾವನೆ ತೋರಿದ ಆಡಳಿತಗಳ ವಿರುದ್ಧ ಅಶಾಂತಿಯನ್ನು ಹುಟ್ಟುಹಾಕಲು ‘ರಾಷ್ಟ್ರೀಯ ಪ್ರಜಾಪ್ರಭುತ್ವ ದತ್ತಿ’(ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ-ಎನ್‌ಇಡಿ)ಯಂಥಹ ತನ್ನ ಸಾಧನಗಳನ್ನು ಸಾಮ್ರಾಜ್ಯಶಾಹಿಯು ಬಳಸಿದೆ. ಉಕ್ರೇನ್‌ನಲ್ಲಿ ವಿಕ್ಟರ್ ಯಾನುಕೋವಿಚ್ ಅವರ ವಿರುದ್ಧದ “ಜನಪ್ರಿಯ ದಂಗೆ” ಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಮತ್ತು ಯಶಸ್ಸನ್ನು ಅನುಭವಿಸಿದ ಎನ್‌ಇಡಿ ಅನ್ನು ಇರಾನ್‌ನಲ್ಲಿ ಇಸ್ಲಾಮಿಸ್ಟ್ ಆಡಳಿತದ ವಿರುದ್ಧ ಒಂದು “ಜನಪ್ರಿಯ ಉತ್ಕ್ರಾಂತಿ”ಯನ್ನು ಎಬ್ಬಿಸಲು ಬಳಸಿಕೊಳ್ಳಲಾಯಿತು. ಆದರೆ ಎನ್‌ಇಡಿ ಯ ಈ ರೀತಿಯ ಕಾರ್ಯಾಚರಣೆ ಇರಾನ್‌ನಲ್ಲಿ ವಿಫಲವಾಗಿತ್ತು. ಆದ್ದರಿಂದ, ಇರಾನ್ ವಿರುದ್ಧ ಒಂದು ನೇರ ಮಿಲಿಟರಿ ದಾಳಿಗೆ ಇಳಿದಿದೆ ಸಾಮ್ರಾಜ್ಯಶಾಹಿ. ಇಸ್ಲಾಮಿಸ್ಟ್ ಶಕ್ತಿಗಳೂ ಕೂಡ ಅಧಿಕಾರಕ್ಕೆ ಬಂದಾಗ ತಿರುಗಿ ಬಿದ್ದಿವೆ. ಆಕ್ರಮಣ
ಇದನ್ನೂ ನೋಡಿ: ಕುವೆಂಪು: ಮನುಷ್ಯತ್ವದ ಹೊಸ ಭಾಷೆ ಕಟ್ಟಿದ ಯುಗಪ್ರಜ್ಞೆ — ಎಸ್.ಜಿ. ಸಿದ್ದರಾಮಯ್ಯ Janashakthi Media
ಇರಾನ್ ವಿರುದ್ಧ ಈ ದಾಳಿ ನಡೆಯುತ್ತಿರುವಾಗ, ಅದನ್ನು ಸಾಮ್ರಾಜ್ಯಶಾಹಿಯ ವಿಶ್ವ ಪ್ರಾಬಲ್ಯದ ಒಟ್ಟಾರೆ ಯೋಜನೆಯಿಂದ ಪ್ರತ್ಯೇಕಿಸಿ ನೋಡುವುದು ಒಂದು ಕ್ರಿಮಿನಲ್ ಪ್ರಮಾದವಾಗುತ್ತದೆ ಮತ್ತು ಇದು ಮೂರನೇ ಜಗತ್ತಿನ ಪ್ರಗತಿಪರ ಆಡಳಿತಗಳ ವಿರುದ್ಧವಾಗಿ ಸ್ವತಃ ಇಸ್ಲಾಮಿಸಂ ಸಾಮ್ರಾಜ್ಯಶಾಹಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಹಿಂದೆ ಅದು ಮಾಡಿದ್ದ ತಪ್ಪನ್ನು ಪುನರಾವರ್ತಿಸಿದಂತಾಗುತ್ತದೆ. ಆದ್ದರಿಂದ, ಸಾಮ್ರಾಜ್ಯಶಾಹಿಯ ಯೋಜನೆಗಳನ್ನು ವಿಫಲಗೊಳಿಸಲು ಮತ್ತು ಅದರ ಆಕ್ರಮಣದ ತರ್ಕದ ವಿರುದ್ಧವಾಗಿ ಪ್ರತಿರೋಧದ ತರ್ಕವನ್ನು ಪ್ರತಿಪಾದಿಸಲು ಮೂರನೇ ಜಗತ್ತಿನ ಜನರ ಐಕ್ಯತೆ ಅಗತ್ಯವಾಗುತ್ತದೆ.
ಇರಾನ್ ವಿರುದ್ಧ ಈ ದಾಳಿ ನಡೆಯುತ್ತಿರುವಾಗ, ಅದನ್ನು ಸಾಮ್ರಾಜ್ಯಶಾಹಿಯ ವಿಶ್ವ ಪ್ರಾಬಲ್ಯದ ಒಟ್ಟಾರೆ ಯೋಜನೆಯಿಂದ ಪ್ರತ್ಯೇಕಿಸಿ ನೋಡುವುದು ಒಂದು ಕ್ರಿಮಿನಲ್ ಪ್ರಮಾದವಾಗುತ್ತದೆ ಮತ್ತು ಇದು ಮೂರನೇ ಜಗತ್ತಿನ ಪ್ರಗತಿಪರ ಆಡಳಿತಗಳ ವಿರುದ್ಧವಾಗಿ ಸ್ವತಃ ಇಸ್ಲಾಮಿಸಂ ಸಾಮ್ರಾಜ್ಯಶಾಹಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಹಿಂದೆ ಅದು ಮಾಡಿದ್ದ ತಪ್ಪನ್ನು ಪುನರಾವರ್ತಿಸಿದಂತಾಗುತ್ತದೆ. ಆದ್ದರಿಂದ, ಸಾಮ್ರಾಜ್ಯಶಾಹಿಯ ಯೋಜನೆಗಳನ್ನು ವಿಫಲಗೊಳಿಸಲು ಮತ್ತು ಅದರ ಆಕ್ರಮಣದ ತರ್ಕದ ವಿರುದ್ಧವಾಗಿ ಪ್ರತಿರೋಧದ ತರ್ಕವನ್ನು ಪ್ರತಿಪಾದಿಸಲು ಮೂರನೇ ಜಗತ್ತಿನ ಜನರ ಐಕ್ಯತೆ ಅಗತ್ಯವಾಗುತ್ತದೆ.
ಇದೆಲ್ಲವನ್ನು ಹಿಂದುತ್ವವಾದಿಗಳು ಅರ್ಥಮಾಡಿಕೊಳ್ಳುವುದಿಲ್ಲ. ಮೊಹಮ್ಮದ್ ಅಲಿ ಜಿನ್ನಾ ಪ್ರತಿಪಾದಿಸಿದ್ದ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆಗಿನ ನಾಯಕ ವಿನ್ಸ್ಟನ್ ಚರ್ಚಿಲ್ ಸಕ್ರಿಯವಾಗಿ ಪ್ರೋತ್ಸಾಹಿಸಿದ್ದ “ದ್ವಿ-ರಾಷ್ಟ್ರ” ಸಿದ್ಧಾಂತವನ್ನು ಭಾರತದ ಸ್ವಾತಂತ್ರ‍್ಯದ ಹೋರಾಟದ ಸಂದರ್ಭದಲ್ಲಿ ಅವರ ಪೂಜನೀಯರುಗಳಲ್ಲಿ ಒಬ್ಬರಾದ ವಿ ಡಿ ಸಾವರ್ಕರ್ ಪ್ರತಿಪಾದಿಸಿದ್ದರು. ಹಿಂದುತ್ವ ಮಂದಿ ಇರಾನ್ ವಿರುದ್ಧದ ಯುದ್ಧದ ಬಗ್ಗೆ ತೋರುವ ಪುಕ್ಕಲು ಮೌನವು ಇಸ್ರೇಲ್‌ನೊಂದಿಗೆ ಅವರ ಶಾಮೀಲಿನ ಸಂಬಂಧ ಮತ್ತು ಅಮೆರಿಕದ ಜೀಹುಜೂರಿಕೆಗೆ ಅನುಗುಣವಾಗಿಯೇ ಇದೆ. ಅವರ ಈ ಮೌನವು ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ತೊಡಗಿದ್ದ ಪ್ರಗತಿಪರ ರಾಷ್ಟ್ರೀಯ ಪ್ರವಾಹವು ಪ್ರತಿಪಾದಿಸುವ ನಿಲುವಿಗೆ ವಿರುದ್ಧವಾಗಿದೆ. ಈ ಮೌನವು ಭಾರತದ ಜನತೆಯ ಹಿತದೃಷ್ಟಿಯಿಂದ ಕೂಡಿದೆ ಎಂದು ಅವರು ಸೋಗು ಹಾಕುವುದು ಪೂರ್ಣವಾಗಿಯೂ ಒಂದು ಅಸಂಬದ್ಧವೇ! ಈ ಮೌನವು ಸಾಮ್ರಾಜ್ಯಶಾಹಿಯ ಕುತಂತ್ರಗಳಿಗೆ ಕುರುಡಾಗಿರುವುದು ಮಾತ್ರವಲ್ಲದೆ ದೇಶದ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಒಂದು ದೊಡ್ಡ ಅವಮಾನವೂ ಹೌದು.
ಸಬ್ ಮೆರಿನ್‍ಗಳನ್ನು ಗುರುತಿಸುವ ಸೀಮಿತ ವ್ಯಾಪ್ತಿ

