ನವದೆಹಲಿ: ಕೇಂದ್ರ ಸರ್ಕಾರವು ಲೋಕಸಭೆಯ ಸೀಟುಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದು, ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭೆ ಸಂಖ್ಯಾಬಲವನ್ನು ಶೇ 50ರಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ಹೊಂದಿದೆ. ಇದರಿಂದಾಗಿ ದಕ್ಷಿಣ ಸೇರಿದಂತೆ ಈಶಾನ್ಯ ಮತ್ತು ಪಶ್ಚಿಮ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಏಪ್ರಿಲ್ 1ರಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಕಾಂಗ್ರೆಸ್ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮತದಾರರ ಹಕ್ಕಿಗೆ ಧಕ್ಕೆ: ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ
ಮೋದಿ ಸರ್ಕಾರವು ಲೋಕಸಭೆ ಸೀಟುಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸುವ ಮಸೂದೆಯನ್ನು ‘ಬುಲ್ಡೋಜ್’ ಮಾಡಲು ಯತ್ನಿಸುತ್ತಿದ್ದಾರೆ ಎಂದು ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಎಲ್ಲ ಕಡೆಗಳಲ್ಲಿ ಶೇ 50ರಷ್ಟು ಸೀಟುಗಳ ಹೆಚ್ಚಳವು ನ್ಯಾಯಸಮ್ಮತವಾಗಿದೆ ಎನ್ನುವ ವಾದವು ಮೋಸವಾಗಿದೆ’ ಎಂದು ಹೇಳಿದ್ದಾರೆ.
ಇದಕ್ಕೆ ಉದಾಹರಣೆ ನೀಡಿರುವ ರಮೇಶ್, ‘ಉತ್ತರ ಪ್ರದೇಶದಲ್ಲಿ ಈಗ 80 ಹಾಗೂ ತಮಿಳುನಾಡಿನಲ್ಲಿ 39 ಸೀಟುಗಳಿವೆ. ಪ್ರಸ್ತಾವಿತ ಮಸೂದೆಯಂತೆ ಉತ್ತರ ಪ್ರದೇಶದ ಸಂಖ್ಯಾಬಲ 120 ಹಾಗೂ ತಮಿಳುನಾಡಿನ ಬಲ 59ಕ್ಕೆ ಏರಿಕೆಯಾಗುತ್ತದೆ. ಹಾಗೆಯೇ ಕೇರಳದ ಸಂಖ್ಯೆ 20ರಿಂದ 30ಕ್ಕೆ ಹಾಗೂ ಬಿಹಾರದ್ದು 40ರಿಂದ 60ಕ್ಕೆ ಏರಿಕೆಯಾಗಲಿದೆ. ಒಟ್ಟಾರೆಯಾಗಿ ದಕ್ಷಿಣದ ರಾಜ್ಯಗಳಲ್ಲಿ 66 ಹಾಗೂ ಉತ್ತರ ಭಾರತದಲ್ಲಿ 200ರಷ್ಟು ಸೀಟುಗಳ ಸಂಖ್ಯೆ ಹೆಚ್ಚಳವಾಗಲಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಅವರ ಏಕಪಕ್ಷೀಯ ನಿರ್ಧಾರದಿಂದಾಗಿ ಸಣ್ಣ ರಾಜ್ಯಗಳು ಅನ್ಯಾಯಕ್ಕೆ ಒಳಗಾಗಲಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು.
ಇದನ್ನೂ ನೋಡಿ: ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media
