(ದಿನಾಂಕ 5. 03. 2026 ರಂದು ಜ್ಞಾನಭಾರತಿಯಲ್ಲಿ ಜನ ಶಿಕ್ಷಣ ಟ್ರಸ್ಟ್ನವರು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತತ್ವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಆಯೋಜಿಸಿದ್ದ ‘ಯುವತಲೆಮಾರಿಗೆ ಕುವೆಂಪು ಅಭಿಯಾನ – ಓದು ಕಾರ್ಯಾಗಾರ’ ದಲ್ಲಿ ನೀಡಿದ ವಿಶೇಷೋಪನ್ಯಾಸದ ಆಯ್ದ ಭಾಗಗಳ ಬರಹರೂಪ) ಕುವೆಂಪು
– ಡಾ. ಬಂಜಗೆರೆ ಜಯಪ್ರಕಾಶ
ಈ ದಿನ ನಾವೆಲ್ಲರೂ ಕೂಡ ಇಲ್ಲಿಯವರೆಗೂ ತತ್ವಶಾಸ್ತ್ರಜ್ಞರು ಅಂತ ವಿಶೇಷವಾಗಿ ಗುರ್ತಿಸದೇ ಇರುವಂತಹ ಒಬ್ಬ ದಾರ್ಶನಿಕ ಲೇಖಕರ ಬಗೆ ಈ ತತ್ವಶಾಸ್ತ್ರ ವಿಭಾಗದಲ್ಲಿ ಮಾತನಾಡೋದಕ್ಕೆ ನಾನು ಬಯಸುತ್ತಾ ಇದ್ದೀನಿ. ಅದನ್ನ ಸ್ವಲ್ಪ ಸಾಮಾನ್ಯೀಕರಿಸಿ ಹೇಳ್ಬೇಕು ಅಂತ ಹೇಳಿದರೆ ಪ್ರತೀ ಲೇಖಕನೂ ತತ್ವ ದರ್ಶಿಯೇ.
ಸಾಹಿತ್ಯ ತತ್ವ ದರ್ಶನವನ್ನು ಬಿಟ್ಟಿರೋದಕ್ಕೆ ಸಾಧ್ಯಇಲ್ಲ. ತತ್ವಶಾಸ್ತ್ರ ಅನ್ನೋದು ಅಮೂರ್ತವಾಗಿರುವ ಒಂದು ತರ್ಕ. ಒಂದು ವಿಶ್ಲೇಷಣೆ – ಅಸ್ತಿತ್ವದ ಬಗ್ಗೆ ಮತ್ತು ಸೃಷ್ಟಿಯ ಬಗ್ಗೆ. ಸಾಹಿತ್ಯ ಅನ್ನುವಂತಾದ್ದು ಮೂರ್ತ ರೂಪದಲ್ಲಿರುವ ತತ್ವಶಾಸ್ತ್ರ . ಅದೂಕೂಡ ಅಸ್ತಿತ್ವದ ಬಗ್ಗೆಯೇ, ಅದೂಕೂಡ ಸೃಷ್ಟಿಯ ಬಗ್ಗೆಯೇ ಇರೋದು. ಬಹಳ ಹಿಂದಿನ ಕಾಲದಲ್ಲಿ ಸಾಹಿತ್ಯವನ್ನು ಬರೆಯುವಂತಹ ಬಹಳ ದೊಡ್ಡದೊಡ್ಡ ಲೇಖಕರು ತತ್ವಶಾಸ್ತ್ರದ ಅಭ್ಯಾಸಿಗಳೂಆಗಿರುತ್ತಿದ್ದರು. ತತ್ವ ಶಾಸ್ತ್ರವನ್ನ ಗಾಢವಾಗಿ ಅಧ್ಯಯನ ಮಾಡಿ, ತತ್ವಶಾಸ್ತ್ರವನ್ನ ಕುರಿತು ನೇರವಾಗಿ ವಾದವಿವಾದಗಳಲ್ಲಿ ತೊಡಗದಿದ್ದರೂ ಕೂಡ ಒಂದು ದರ್ಶನಾತ್ಮಕವಾಗಿರುವ ಅಂಶವನ್ನ ನಮ್ಮ ಮುಂದೆಅವರು ಸಾಹಿತ್ಯದಲ್ಲಿ ಕಟ್ಟಿಕೊಡ್ತಾ ಇದ್ದರು. ಕುವೆಂಪು
ಇದನ್ನೂ ಓದಿ: ತಿಂಡಿ ನಿರಾಕರಣೆ, ಮುಸ್ಲಿಂ ಮಹಿಳೆಗೆ ಅವಮಾನ ಆರೋಪ: ಹಾಸನದ ಹೋಟೆಲ್ ವಿರುದ್ಧ ಆಕ್ರೋಶ
ಉದಾಹರಣೆ ಹೇಳಬೇಕು ಅಂದರೆ ಖಲೀಲ್ ಗಿಬ್ರಾನ್. ಆತ ನಿಮಗೆ ಪರಿಚಿತ ಇದ್ದಾನೋ ಇಲ್ಲವೋ ಗೊತ್ತಿಲ್ಲ. ʻದಜೀಸಸ್’, ʻದ ಪ್ರಾಫೆಟ್’ ಆತನ ಬಹಳ ಪ್ರಸಿದ್ಧವಾಗಿರುವ ಎರಡು ಕೃತಿಗಳು. ‘ಪ್ರವಾದಿ’ಯನ್ನ (ದ ಪ್ರಾಫೆಟ್) ನಾನು ಅನುವಾದ ಮಾಡಿದ್ದೀನಿ. ಏಕಕಾಲದಲ್ಲಿ ಅದು ಸಾಹಿತ್ಯ ಕೃತಿಯೂ ಹೌದು. ತತ್ವದರ್ಶನವನ್ನ ಕುರಿತ ತಾತ್ವಿಕ ಕೃತಿಯೂ ಹೌದು. ಬದುಕಿನ ಹಲವು ವಿದ್ಯಮಾನಗಳ ಬಗ್ಗೆ ಕವಿ ತನ್ನದೇ ಆಗಿರುವ ದೃಷ್ಟಿ ಕೋನವನ್ನ ಅದರಲ್ಲಿ ಕೊಟ್ಟಿದ್ದಾನೆ.
ಮದುವೆ ಅಂದರೆ ಏನು? ಗಂಡ-ಹೆಂಡತಿ ಅಂದರೆ ಏನು? ಮಕ್ಕಳು ಅಂದ್ರೆ ಏನು? ಪಾಪ ಅಂದ್ರೆ ಏನು? ಪುಣ್ಯಅಂದ್ರೆ ಏನು? ಸ್ವರ್ಗಅಂದ್ರೆ ಏನು? ಹುಟ್ಟುಅಂದ್ರೆ ಏನು? ಸಂತೋಷ ಅಂದ್ರೆ ಏನು? ದುಃಖ ಅಂದ್ರೆ ಏನು? ಮುಂತಾದ ವಿಷಯಗಳನ್ನ ಅದು ಬಹಳ ಸುಂದರವಾಗಿರುವ ಮಾತುಗಳಲ್ಲಿ, ಒಂದು ಸಲ ಓದಿದರೆ ಮರೆಯೋಕೆಆಗದಿರುವಂತಹದೃಷ್ಟಿಕೋನದಲ್ಲಿ, ಆ ಕಾಲಕ್ಕೆ ಬಹಳ ಹೊಸತನದನಿಲುವುಗಳನ್ನ ಅದರಲ್ಲಿ ಹೇಳಿದ್ದಾನೆ. ಕುವೆಂಪು
‘ಮಕ್ಕಳು ನಿಮ್ಮಿಂದ ಬಂದವರಿರಬಹುದು ಆದರೆ ನಿಮಗೆ ಸೇರಿದವರಲ್ಲ. ಆ ಸೃಷ್ಟಿಕರ್ತತನ್ನ ಹಂಬಲಕ್ಕಾಗಿ ತನ್ನ ಸೃಷ್ಟಿಯನ್ನ ಮುಂದುವರಿಸುವುದಕ್ಕೋಸ್ಕರವಾಗಿ
ನಿಮ್ಮನ್ನ ಬಿಲ್ಲಿನಂತೆ ಹೂಡಿ ಅವುಗಳನ್ನ ಬಾಣದಂತೆ ಬಿಟ್ಟಿದಾನೆ’ ಕುವೆಂಪು
ಅದಕ್ಕಿಂತ ಮುಖ್ಯವಾಗಿ ಅವನು ಹೇಳುವುದೇನೆಂದರೆ ಅವರನ್ನ(ನಿಮ್ಮ ಮಕ್ಕಳನ್ನ) ಎಂದಿಗೂ ನಿಮ್ಮಂತಾಗಿಸಲು ಯತ್ನಿಸದಿರಿ. ಯಾಕಂದರೆ ನೀವು ಕನಸಿನಲ್ಲೂ ಕಾಣಲಾಗದ ನಾಳೆಗಳಲ್ಲಿ ವಾಸಿಸುತ್ತವೆ ಅವರ ಆತ್ಮಗಳು. ಬೇಕಾದರೆ ಅವರಂತಾಗಲು ಪ್ರಯತ್ನಿಸಿ. ಇದು ಬಹಳ ಮುಖ್ಯವಾಗಿರುವಂತ ನಿಲುವು. ನಾವು ಮಕ್ಕಳನ್ನ ಏನಂತ ಭಾವಿಸುತ್ತೇವೆ ಅಂದರೆ ನಮ್ಮ ರೀತಿ ಅವರನ್ನ ಮಾಡಬೇಕು ಅಂತ. ಆದರೆ ಅವರ ಆತ್ಮಗಳು ನಾಳೆಗಳಲ್ಲಿ ವಾಸಿಸುತ್ತವೆ. ಆ ನಾಳೆಗಳನ್ನ ನಾವು ಕಂಡೇ ಇಲ್ಲ. ಕನಸಿನಲ್ಲೂ ಕಾಣೋಕೆ ಸಾಧ್ಯಇಲ್ಲ. ಆದ್ದರಿಂದ ನಾವು ಅವರಂತಾಗಲೂ ಯತ್ನಿಸಬಹುದೇ ಹೊರತು ಅವರನ್ನ ನಮ್ಮಂತೆ ಮಾಡುವುದಕ್ಕೆ ಯತ್ನಿಸಬಾರದು. ಇದುಗಿಬ್ರಾನ್ ನ ಅದರ ನಿಲುವು. ಕುವೆಂಪು
ನಾನು ಯಾಕೆಇದನ್ನ ಪೀಠಿಕೆಯಾಗಿ ಹೇಳಿದೆ ಅಂದ್ರೆಈಗ ನಾನು ಮಾತನಾಡಲಿರುವ ಕುವೆಂಪು ಅವರ ಎರಡು ಉಪನ್ಯಾಸಗಳೂ ಕೂಡ ಹೆಚ್ಚೂ ಕಡಿಮೆ ಇಂತಹ ತತ್ವದರ್ಶನವನ್ನ ತಿಳಿಸುತ್ತವೆ. ಯುವಕರನ್ನ ಕುರಿತು ಮಾತನಾಡಿರುವ ಮಾತುಗಳು ಅವು. ಯುವಕರು ವಿಚಾರಕ್ರಾಂತಿಯನ್ನ ಮುನ್ನಡೆಸುತ್ತಾರೆ ಎಂಬ ಬಹಳ ದೊಡ್ಡ ನಂಬಿಕೆಯಿಂದ ಮಾತನಾಡಿದ್ದಾರೆ ಅವರು. ಸಾಮಾಜಿಕ ಕ್ರಾಂತಿ, ಸಾಂಸ್ಕೃತಿಕ ಕ್ರಾಂತಿ ಇತ್ಯಾದಿ ಹಲವು ಕ್ರಾಂತಿಗಳ ವಿಷಯ ಕೇಳಿದ್ದೀವಿ ನಾವು. ಒಂದು ವಿಚಾರಕ್ರಾಂತಿ ಆಗಬೇಕು ಅನ್ನೋದು ಕುವೆಂಪು ಬಯಕೆ. 1974ರಲ್ಲಿ ಇದೇ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣ ಅದು. ಅವರು ಘಟಿಕೋತ್ಸವಗಳಿಗೆ ಸಾಮಾನ್ಯವಾಗಿ ಬರ್ತಿರಲಿಲ್ಲ. ಎಚ್ ನರಸಿಂಹಯ್ಯನವರಿಗೂ ಕುವೆಂಪು ಅವರಿಗೂ ಇದ್ದಂತಹ ಸ್ನೇಹ ಮತ್ತು ಸಲಿಗೆಯಿಂದಾಗಿ ಎಚ್ ಎನ್ ಅವರು ಬಿಡದೇ ಕರ್ಕೊಂಡು ಬಂದ್ರು. ಕುವೆಂಪು

ಆಗ ಅವರು ಮಾಡಿದ ಭಾಷಣ ‘ವಿಚಾರಕ್ರಾಂತಿಗೆ ಆಹ್ವಾನ’ ಎನ್ನುವ ಹೆಸರಲ್ಲಿ ಮುದ್ರಣಗೊಂಡು ಪ್ರಸಿದ್ಧವಾಗಿದೆ. ಆ ಹೊತ್ತಿಗೆ ನಮಗೆ ಸ್ವಾತಂತ್ರ್ಯ ಬಂದು 27 ವರ್ಷಗಳಾಗಿದ್ದವು. ಆಗ ಅವರು ಯುವಜನತೆಗೆ ಕೊಟ್ಟಕರೆ- ʻವಿಚಾರಕ್ರಾಂತಿಗೆ ಆಹ್ವಾನ’. ಯಾಕೆ ಅಂದರೆ ಆಗಿದ್ದ ವ್ಯವಸ್ಥೆ ತೋರಿಕೆಯದ್ದಾಗಿತ್ತು. ಡೆಮಾಕ್ರಸಿ ಎನ್ನುವುದು ಮಾಕರಿಯಾಗಿದೆ. ನಿಜವಾದ ಸತ್ವದಲ್ಲಿಇಲ್ಲಅದು. ಚುನಾವಣೆಯಲ್ಲಿ ದುಡ್ಡು ಕಾಸಿನ ಪ್ರಭಾವ ಎಷ್ಟು ಜಾಸ್ತಿ ಆಗೋಗಿದೆ ಅಂತ 1974ರಲ್ಲಿ ಹೇಳಿದ್ದರು- ಈಗ ಇದ್ದಿದ್ರೆ ಇನ್ನೂ ಜಾಸ್ತಿ ಉದ್ಗಾರವನ್ನ ಅವರು ತೆಗೀತಿದ್ರೋ ಏನೋ.
ಆದ್ದರಿಂದ ಯುವಕರು ಮಾಡಬೇಕಾದುದೇನು? ಪ್ರತಿಯೊಂದನ್ನೂ ವಿಚಾರಕ್ಕೆಒಡ್ಡಿ, ಆಲೋಚನೆಗೆ ಒಡ್ಡಿ, ಈ ಸಮಾಜವನ್ನ ನೇರ್ಪುಗೊಳಿಸುವುದು ಹೇಗೆ ಮತ್ತು ತನ್ನನ್ನ ತಾನು ನೇರ್ಪುಗೊಳಿಸಿಕೊಳ್ಳುವುದು ಹೇಗೆ?ಎನ್ನುವ ಬಗ್ಗೆ ತಮ್ಮ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಒಳಗಡೆ ಒಂದು ವಿಚಾರ ಬೆಳೆದರೆ, ಆಲೋಚನೆ ಬೆಳೆದರೆ, ಅದು ಬಲವಾದ ನಂಬಿಕೆಯಾಗಿ ರೂಪುಗೊಂಡರೆ, ಅದರ ಮುಖಾಂತರವಾಗಿ ನಾವು ಕಾರ್ಯಾಚರಣೆಗೆ ಇಳಿದರೆ ನಮಗೆ ನಮ್ಮ ಸಂಗಡಿಗರು ದೊರೆಯುತ್ತಾರೆ. ಸಂಗಡಿಗರು ದೊರೆತಾಗ ಅವರ ಮುಖಾಂತರವಾಗಿ ನಾವು ಒಂದುಹೊಸ ಸಮಾಜವನ್ನ ನಿರ್ಮಾಣ ಮಾಡುವುದಕ್ಕೆ ಒಂದು ಕೊಡುಗೆಯನ್ನ ಕೊಡಬಹುದು.
ಉಪದೇಶದ ಭಾಷಣ ಮಾಡುವುದಕ್ಕೆ ನಾನು ಬಂದಿಲ್ಲ ಅಂತ ಹೇಳುತ್ತಾ ಶುರುಮಾಡ್ತಾರೆ ತಮ್ಮ ಮಾತುಗಳನ್ನ. ‘ಇದು ಉಪದೇಶ ಭಾಷಣದ ತರ ನಿಮಗೆ ಕೇಳುತ್ತೆ, ಆದರೆ ಇದು ಉಪದೇಶದ ಭಾಷಣ ಅಲ್ಲ. ಇಲ್ಲಿಯವರೆಗೆ ಬಹಳಷ್ಟು ಜನ ಬಹಳ ಉಪದೇಶಗಳನ್ನ ನಿಮ್ಮ ಮೇಲೆ ಹೊರಿಸಿ ಹೋಗಿದ್ದಾರೆ. ಆದ್ದರಿಂದ ನಾನು ಹೊಸದಾಗಿ ಉಪದೇಶ ಮಾಡೋಕೆ ಬಂದಿಲ್ಲ. ನಿಮ್ಮ ಒಳಗಡೆ ಬರಬೇಕಾಗಿರುವ ಒಂದು ಆಲೋಚನೆ, ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾವು ತಳೆಯಬೇಕಾಗಿರುವ ಜಾಗೃತಿ ಏನು? ಇದರ ಬಗ್ಗೆ ಮಾತನಾಡೋದಕ್ಕೆ ನಾನು ಬಂದಿದ್ದೀನಿ. ಅಷ್ಟನ್ನ ಮಾತ್ರ ನಾನು ಮಾತಾಡ್ತೀನಿ’ ಎನ್ನುತ್ತಾರೆ ಕುವೆಂಪು.
ಅದು ಬಹಳ ಮುಖ್ಯವಾಗಿರುವ ನಿಲುವು. ಅವರು ವಿಚಾರವನ್ನ ಬಹಳ ನಂಬುತ್ತಾಇದ್ದರು. ಅವರಧ್ಯೇಯ ವಾಕ್ಯ-ವಿಜ್ಞಾನದೃಷ್ಟಿ, ವಿಚಾರ ಬುದ್ಧಿ. ದೃಷ್ಟಿಕೋನ ವಿಜ್ಞಾನವನ್ನ ಅನುಸರಿಸಬೇಕು. ಬುದ್ಧಿ ಯಾವಾಗಲೂ ಕೂಡ ವೈಚಾರಿಕವಾಗಿರಬೇಕು. ವಿಚಾರಕ್ಕೂ, ವಿಜ್ಞಾನಕ್ಕೂ ಇರುವಂತಹ ಪರಸ್ಪರ ಸಂಬಂಧವನ್ನ ಅವರು ಒತ್ತಿ ಹೇಳಿದ್ದಾರೆ. ವಿಜ್ಞಾನದ ಆಧಾರದಲ್ಲಿ ವಿಚಾರವನ್ನ ಮಾಡುವ ಹಾದಿಯಲ್ಲಿ ನಾವು ಹೋಗ್ಬೇಕು. ಯಾಕಂದ್ರೆ ವಿಚಾರವನ್ನ ಬೇರೆ ರೀತಿಯಲ್ಲೂ ನಾವು ಮಾಡಬಹುದು. ವಿಜ್ಞಾನವನ್ನು ಹೊರತುಪಡಿಸಿಯೂ ನಾವು ವೈಚಾರಿಕ ಚರ್ಚೆಗಳಲ್ಲಿ ತೊಡಗಬಹುದು.
ವಿಚಾರಿಸು ಅಂದರೆ ಆಲೋಚಿಸು ಅಂತ. ಚರ್ಚೆಮಾಡುವುದು, ವಿಶ್ಲೇಷಿಸುವುದು ಅಂತ. ಯಾವುದಾದರೂ ಒಂದು ವಿಷಯವನ್ನು ವಿಶ್ಲೇಷಣೆಮಾಡ್ತಾ ಇರಬಹುದು. ಆದರೆ ಅದು ವಿಜ್ಞಾನ ದೃಷ್ಟಿಯಾಗಿಯೇ ಇರುತ್ತದೆ ಎಂದಿಲ್ಲ. ವಿಜ್ಞಾನ ದೃಷ್ಟಿಯಾವುದು ಅಂದರೆ ಯಾವುದು ಈಗಾಗಲೇ ಪ್ರಯೋಗದ ಮುಖಾಂತರ, ಅಸ್ತಿತ್ವದ ಮುಖಾಂತರ ಋಜುವಾತಾಗಿದೆಯೋ, ಮತ್ತೆ ಮತ್ತೆ ಋಜುವಾತಾಗಬಲ್ಲದೋ ಅದು. ಅದು ವಿಜ್ಞಾನ. ಬೆಂಕಿ ಸುಡುತ್ತದೆ – ಇದನ್ನ ತರ್ಕ ಮಾಡಿ ಹೇಳಬೇಕಾದ್ದಿಲ್ಲ. ಬೆಂಕಿ ಸುಡುತ್ತೆ. ಅದು ಅನುಭವದಿಂದಲೇ ಅರಿವಿಗೆ ಬರುತ್ತದೆ. ಯಾರು ಮುಟ್ಟಿದರೂ ಕೂಡ ಬೆಂಕಿ ಸುಡುತ್ತೆ. ಗಾಳಿ ಬೀಸುತ್ತೆ ಮತ್ತು ಅದಕ್ಕೆ ಅದರದೇ ಆದ ಒಂದು ಶಕ್ತಿ ಇದೆ. ಇದೂ ಕೂಡ ಅನುಭವದಿಂದ ಬರುವಂತಾದ್ದು.ಇದು ವಿಜ್ಞಾನವಾದ. ವಿಚಾರವಾದ ಏನು ಹೇಳುತ್ತೆ? ಇದುಯಾಕೆ ಹೀಗಿದೆ? ಇದು ಯಾವುದರಿಂದ ಈ ರೀತಿಯಾಗಿ ಸೃಷ್ಟಿಯಾಗಿದೆ? ಇವುಗಳನ್ನ ಮಾತಾನಾಡುತ್ತಾ ಹೋಗುವುದು. ವಿಜ್ಞಾನವನ್ನ ತಳಹದಿಯಾಗಿಟ್ಟುಕೊಂಡು ವಿಚಾರವನ್ನ ಮಾಡಬೇಕು. ವಿಚಾರವನ್ನ ಆಧಾರಗಳಿಲ್ಲದೆಯೂ ಮಾಡಬಹುದು. ಅದು ಅಧಿಭೌತಿಕ ತರ್ಕ.

ಒಂದು ಪ್ರಸಂಗವನ್ನ ಹೇಳಿ ಇದನ್ನು ಸ್ಪಷ್ಟಗೊಳಿಸಲು ಪ್ರಯತ್ನಿಸುತ್ತೇನೆ. ಬುದ್ಧನಿಗೆ ಆತನ ಪ್ರಿಯ ಶಿಷ್ಯನಾಗಿರುವ ಆನಂದ ಎರಡು-ಮೂರು ಪ್ರಶ್ನೆಗಳನ್ನ ಕೇಳ್ತಾನೆ. ಆ ಹೊತ್ತಿಗಾಗಲೇ ಬುದ್ಧನಿಗೆ ಜ್ಞಾನೋದಯ ಆಗಿರುತ್ತೆ. ಬಿಕ್ಕು ಸಂಘವನ್ನ ಕಟ್ಟಿರ್ತಾನೆ. ಹಲವು ಕಡೆ ಅವನ ಅನುಯಾಯಿಗಳು ಸೃಷ್ಟಿಯಾಗಿರ್ತಾರೆ. ಆನಂದ ‘ಆತ್ಮ ಅನ್ನುವುದು ಇದೆಯೋ ಇಲ್ಲವೋ? ಪರಲೋಕ ಅನ್ನುವುದು ಇದೆಯೋ ಇಲ್ಲವೋ? ದೇವರು ಅನ್ನುವುದು ಇದೆಯೋ ಇಲ್ಲವೋ?’ ಪ್ರಶ್ನೆಗಳನ್ನು ಕೇಳುತ್ತಾನೆ. ಆ ಮೂರಕ್ಕೂ ಬುದ್ಧ ಕೊಟ್ಟಿರುವಂತಹ ಉತ್ತರ ಬಹಳ ಮಾರ್ಮಿಕವಾಗಿದೆ.
ಆತ ಹೇಳುತ್ತಾನೆ – ‘ನನಗೆ ಗೊತ್ತಿರುವಂತೆ ಅವು ಇಲ್ಲಅಥವಾ ನನಗೆ ಗೊತ್ತಿಲ್ಲ’. ಅದು ನಿಜವಾದ ವಿಚಾರವಾದಿ ಹೇಳಬಹುದಾಗಿರುವ ಉತ್ತರ. ಅವು ಇಲ್ಲ ಅಂತಯಾವುದರ ಆಧಾರದಲ್ಲಿ ಹೇಳ್ತಾ ಇದ್ದಾನೆ ಬುದ್ಧ? ನನ್ನ ಅನುಭವಕ್ಕೆ ಬಂದಂತೆ, ನನ್ನ ಆಲೋಚನೆಗೆ ಗೊತ್ತಾದಂತೆ, ನಾನು ಅರಿತಿರುವಂತೆ, ನನ್ನ ತಿಳಿವಳಿಕೆಯ ಮಿತಿ ಏನು ಹೇಳ್ತಾ ಇದೆಯೋ ಅದರಂತೆ ಈ ಮೂರೂ ಇಲ್ಲ- ಪರಲೋಕ, ಆತ್ಮ ಹಾಗೂದೇವರು. ಅಷ್ಟನ್ನ ಹೇಳಿ ನಿಲ್ಲಿಸಲಿಲ್ಲ ಬುದ್ಧ. ವಿಚಾರವಾದಿಯಾಗಿ ಅವನು ಏನು ಹೇಳಿದ? ‘ಅಥವಾ ನನಗೆ ಗೊತ್ತಿಲ್ಲ’. ನನ್ನ ಅನುಭವದ ಮಟ್ಟಿಗೆ ಅವು ಇಲ್ಲ. ಅಥವಾ ನನಗೆ ಗೊತ್ತಿಲ್ಲ. ನಾಳೆ ಗೊತ್ತಾಗಬಹುದು. ಇನ್ನೊಬ್ಬರಿಗೆ ಗೊತ್ತಾಗಿ ನನಗೆ ತಿಳಿಸಬಹುದು, ಆದ್ದರಿಂದ ಆ ಖಾಲಿ ಜಾಗವನ್ನು ಉಳಿಸಿದ್ದಾನೆ. ಆಸ್ತಿಕರು-ನಾಸ್ತಿಕರು ಜಗಳ ಆಡೋದು ಏನಂತ? ದೇವರಿದ್ದಾನೆ, ದೇವರಿಲ್ಲ ಅಂತ. ಬುದ್ಧಅವೆರಡರ ನಡುವೆ ನಿಂತ ಅದು ಇಲ್ಲಅಥವಾ ನನಗೆ ಗೊತ್ತಿಲ್ಲ ಅಂದ.
ಆಗ ನಿಮಗೊಂದು ಸ್ಪೇಸ್ ಸಿಗುತ್ತೆ. ಅವನು ಇದಾನೋ ಇಲ್ಲವೋ ನೀವೇ ಕಂಡುಕೋಬೇಕು. ಯಾಕಂದ್ರೆ ಬುದ್ಧ ಕೇವಲ ಇಲ್ಲಎಂದು ಹೇಳಿಲ್ಲ. ‘ಅಥವಾ ನನಗೆ ಗೊತ್ತಿಲ್ಲ’ ಅಂತಲೂ ಹೇಳಿದ್ದಾರೆ. ಗೊತ್ತು ಮಾಡಿಕೊಳ್ಳೋ ಜವಾಬ್ದಾರಿ ನಮ್ಮದು. ದೇವರು ಇಲ್ಲಅಂತ ಹೇಳಿದ್ದು ವಿಜ್ಞಾನ ದೃಷ್ಟಿ. ಯಾಕಂದ್ರೆ ಆತನ ಅನುಭವಕ್ಕೆ ಬಂದದ್ದು, ಆಲೋಚನೆಗೆ ನಿಲುಕಿದಂತೆ, ಕಂಡಂತೆ, ಕೇಳಿದಂತೆ ಆತನಿಗೆದೇವರ ಅಸ್ತಿತ್ವದ ಬಗ್ಗೆ ಖಾತ್ರಿ ಇಲ್ಲ. ಪರಲೋಕದ ಅಸ್ತಿತ್ವದಲ್ಲಿ ನಂಬಿಕೆ ಇಲ್ಲ. ನಂತರದ್ದು ಏನಂದ್ರೆ – ಜ್ಞಾನ ಅಗಣಿತವಾಗಿದೆ, ಸೃಷ್ಟಿಯ ವಿಸ್ಮಯ ಬಹಳ ದೊಡ್ಡದಿದೆ, ಆದ್ದರಿಂದ ನಾನು ಎಲ್ಲವನ್ನೂ ಕಂಡವನಲ್ಲ, ಆದ್ದರಿಂದ ಅದು ನನಗೆ ಗೊತ್ತಿಲ್ಲದೇ ಇರುವ ಸಾಧ್ಯತೆ ಇದೆ. ಅದು ನಮ್ಮದೇ ಸ್ಪೇಸ್. ನಾವೇ ಕಂಡುಕೊಳ್ಳಬೇಕು. ನಾವು ಇಲ್ಲ ಅಂತಾನಾದ್ರೂ ನಿರ್ಣಯಕ್ಕೆ ಬರಬಹುದು, ಹುಡುಕಿ ಹುಡುಕಿ ಇದಾನೆ ಅಂತನಾದ್ರೂ ಸಂಶೋಧನೆ ಮಾಡಬಹುದು, ತಂದು ತೋರಿಸಬಹುದು, ಅದಕ್ಕೆ ಅಡ್ಡಇಲ್ಲ. ವಿಜ್ಞಾನ ಬುದ್ಧಿಗೂ, ವಿಚಾರ ಬುದ್ಧಿಗೂ ಇರುವ ಸಂಬಂಧ ಅದು. ನಾವು ಬರೀತರ್ಕದಲ್ಲಿ ದೇವರಿದ್ದಾನೆ ಅಥವಾ ಇಲ್ಲ ಅನ್ನೋದನ್ನ ಸಾಬೀತು ಮಾಡೋದು ಬಹಳ ಕಷ್ಟ. ಯಾರೂ ನೋಡಿಲ್ಲ, ಯಾರೂ ಕಂಡಿಲ್ಲ.
ದೇವರಿಲ್ಲದಿದ್ದರೆ ನಾವು ಹೆಂಗೆ ಬಂದ್ವಿ? ಯಾರು ಸೃಷ್ಟಿ ಮಾಡಿದರು? ಒಂದ್ಸಲ ಜನಕ ಮಹಾರಾಜನ ಆಸ್ಥಾನದಲ್ಲಿ ಒಂದುಚರ್ಚೆ ನಡೀತಾ ಇರುತ್ತೆ. ಯಾಜ್ಞವಲ್ಕ್ಯ ಬಹಳ ಪ್ರಸಿದ್ಧ ತತ್ವಜ್ಞಾನಿ. ನನ್ನ ಜೊತೆಯಲ್ಲಿ ಯಾರು ಚರ್ಚೆಯಲ್ಲಿ ಗೆಲ್ಲುತ್ತಾರೋ ಅವರಿಗೆ ಒಂದು ಸಾವಿರ ಹಸುಗಳ ಬಹುಮಾನ ಘೋಷಿಸು. ರಾಜ ಅದಕ್ಕೆ ಒಪ್ಪಿರ್ತಾನೆ. ಬೇರೆ ಬೇರೆಯವರು ಬಂದು ಅವನ ಹತ್ರ ಏನೇನೋ ಚರ್ಚೆ ಮಾಡ್ತಾರೆ. ಸೃಷ್ಟಿ, ಅದ್ವಯ, ದ್ವಯ, ಅದು, ಇದು ಎಲ್ಲ ಮಾತಾಡುತ್ತಾರೆ. ಎಲ್ಲರು ವಾದದಲ್ಲಿ ಸೋಲುತ್ತಾರೆ. ಸಾವಿರ ಹಸುಗಳನ್ನ ಕಳಿಸಿರಿ ನನ್ನ ಆಶ್ರಮಕ್ಕೆ. ಯಾರೂ ಗೆಲ್ಲೋಕೆ ಸಾಧ್ಯವಾಗಲಿಲ್ಲ ಅಂತಾನೆ ಯಾಜ್ಞವಲ್ಕ್ಯ.
ಆಗ ತನ್ನ ಗಂಡನನ್ನ ಹುಡುಕಿಕೊಂಡು ಬಂದಿರೋ ಗಾರ್ಗಿ ವಾಚಕ್ನವಿ ಈ ಚರ್ಚೆಯಲ್ಲಿ ಬಾಗವಹಿಸುತ್ತಾಳೆ. ನಂದು ಒಂದೇ ಪ್ರಶ್ನೆ, ನೀವು ಉತ್ತರ ಕೊಟ್ಟ ಮೇಲೆ ಮುಂದಕ್ಕೆ ಹೋಗೋಣ ಎನ್ನುತ್ತಾಳೆ. ಈ ಸೃಷ್ಟಿಯನ್ನ ಯಾರು ಸೃಷ್ಟಿ ಮಾಡಿದರು? ಅಂತ ಕೇಳ್ತಾಳೆ. ಯಾಜ್ಞವಲ್ಕ್ಯನಿಗೆ ಇದು ಬಹಳ ಸರಳ ಪ್ರಶ್ನೆ ಅನಿಸಿ ನಗುತ್ತಾನೆ. ‘ದೇವರು ಈ ಸೃಷ್ಟಿಯ ಸೃಷ್ಟಿಕರ್ತ, ಯಾಕೆಂದರೆ ಇರುವುದೆಲ್ಲವನ್ನೂ ಯಾರಾದರೊಬ್ಬರು ನಿರ್ಮಿಸಿರಲೇಬೇಕಲ್ಲ’ ಎಂದು ಉತ್ತರಿಸುತ್ತಾನೆ. ಆಗ ಗಾರ್ಗಿ ‘ಸರಿ, ಇರುವುದೆಲ್ಲದನ್ನೂ ಯಾರಾದರೂ ನಿರ್ಮಿಸಿರಲೇಬೇಕಾದ್ದರಿಂದ ದೇವರಿಗೂ ಒಬ್ಬ ನಿರ್ಮಾತೃ ಇರಬೇಕಾದೆಂದಾಯ್ತು. ಹಾಗಾದರೆ ಅದು ಯಾರು?’ ಎಂದು ಕೇಳುತ್ತಾಳೆ.
ಈ ಪ್ರಶ್ನೆ ಸರಳವಾದುದಲ್ಲ ಎಂಬುದು ಯಾಜ್ಞವಲ್ಕ್ಯನಿಗೆ ಅರಿವಾಯಿತು. ಈ ಪ್ರಶ್ನಾವಳಿ ಕೊನೆಗೊಳ್ಳವುದು ಸಾಧ್ಯವಿಲ್ಲ. ದೇವರನ್ನೂ ನಿರ್ಮಿಸಿದವನೊಬ್ಬ ಇರಬೇಕಾದರೆ ಅವನನ್ನು ನಿರ್ಮಿಸಿದವರೂ ಇರಬೇಕಾಗುತ್ತದೆ. ಹಾಗಾದರೆ ಅವನನ್ನು ನಿರ್ಮಿಸಿದ ಇನ್ನೊಬ್ಬರಿರಬೇಕಾಗುತ್ತದೆ. ಅವನನ್ನು ಸ್ವಯಂಭೂ ಎಂದರೆ, ಈ ಸೃಷ್ಟಿಯೂ ಯಾಕೆ ಸ್ವಯಂಭೂ ಆಗಿರಲಾರದು ಎಂಬ ಪ್ರಶ್ನೆ ಬರುತ್ತದೆ. ರಾಜ ಸಾವಿರ ಹಸುಗಳು ಇವಳಿಗೆ ಸೇರಬೇಕು, ಅವಳ ಮನೆಗೆ ಕಳಿಸಿಬಿಡು ಅಂತ ಯಾಜ್ಞವಲ್ಕ್ಯ ಹೇಳಿದ.
ತತ್ವಶಾಸ್ತ್ರದಲ್ಲಿ ಆರೀತಿಯಾಗಿರುವ ವಾದೋಪವಾದಗಳು ನಡೀತಾ ಇದ್ದವು ಉಪನಿಷತ್ತುಗಳ ಕಾಲದಲ್ಲಿ. ಆದ್ದರಿಂದಲೇ ಕುವೆಂಪು ಬಹಳ ನಿರ್ದಿಷ್ಟವಾಗಿ ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿ ಅಂತನಿರ್ದಿಷ್ಟವಾಗಿ ಹೇಳಿದರು. ವಿಜ್ಞಾನದ ಆಧಾರದಲ್ಲಿ ವಿಚಾರ ಮಾಡುವುದು. ಆ ರೀತಿಯಾಗಿರುವ ವಿಚಾರಕ್ರಾಂತಿಗೆ ವ್ಯಕ್ತಿಗಳು ಮುಂದಾಗಬೇಕು ಎಂದರು. ಕುವೆಂಪು
ಅದಕ್ಕೆ ಪೂರ್ವ ಪೀಠಿಕೆಯಾಗಿ 1938ರಲ್ಲಿ ಅವರು ಇನ್ನೊಂದು ಭಾಷಣ ಮಾಡಿದ್ದರು. ಅದು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನ ಕುರಿತು ಮಾಡಿದ ಒಂದು ಉಪನ್ಯಾಸ. ಅದರಲ್ಲಿ ಅವರು ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಅಂತಕರೆ ಕೊಟ್ಟರು. ಅದನ್ನ 1944ರಲ್ಲಿ ಬರಹ ರೂಪಕ್ಕಿಳಿಸಿ ಮುದ್ರಿಸಿದರು. ವಿಚಾರ ಕ್ರಾಂತಿಗೆ ಮುಂದಾಗಬೇಕು ಅಂತ ಹೇಳಿದರೆ ನೀವು ನಿರಂಕುಶಮತಿಯಾಗಿರಬೇಕು ಅನ್ನುವ ಪೂರ್ವ ತಳಹದಿಯನ್ನ ಅವರು ಹೇಳಿದ್ದರು. ಆದ್ದರಿಂದ ಈ ಎರಡೂ ಭಾಷಣಗಳು ಕೂಡ ನಾವು ಇವತ್ತು ಅರಿಯಬೇಕಾಗಿರುವ ಬಹಳ ಮುಖ್ಯವಾಗಿರುವ ಸಂದೇಶವನ್ನ ಒಳಗೊಂಡಿವೆ. ನಾವು ಆಲೋಚಿಸಬೇಕಾಗಿರುವಂತಹ ಅಂಶಗಳನ್ನ ಹೊಂದಿವೆ. ಕುವೆಂಪು
ನಿರಂಕುಶಮತಿ ಅಂತ ಹೇಳಿದರೆ ಲಂಗು ಲಗಾಮಿಲ್ಲದವನು ಅಂತ ಅಲ್ಲ. ಅದನ್ನ ನಾವು ತಿಳಿದಿರಬೇಕು. ಅಂಕುಶವೇ ಇಲ್ಲಅಂದರೆಅರ್ಥ ಏನು? ಅವರು ಹೇಳುವ ಅಂಕುಶಗಳ್ಯಾವುದು? ಹಲವು ಬಗೆಯ ಅಂಕುಶಗಳು ಮನುಷ್ಯನ ಮತಿಯನ್ನ ಹಿಡಿದಿಟ್ಟಿವೆ. ಧರ್ಮ ಅನ್ನುವುದು ಒಂದು ಅಂಕುಶ. ಜಾತಿ ಅನ್ನುವುದು ಒಂದು ಅಂಕುಶ. ಅವನ ಕುಟುಂಬ ಅನ್ನುವುದೇ ಒಂದು ಅಂಕುಶ. ಸಂಪ್ರದಾಯ ಅನ್ನುವುದು ಒಂದು ಅಂಕುಶ. ಶಾಸ್ತ್ರಗಳು, ಪುರಾಣಗಳು ಕೂಡ ಒಂದು ಅಂಕುಶ. ಈ ಅಂಕುಶಗಳಿಂದ ನಿಮ್ಮನ್ನ ಬಿಡಿಸಿಕೊಳ್ಳಿರಿ ಅಂದರೆ ಮುಕ್ತ ಮನಃಸ್ಥಿತಿಯನ್ನ ಹೊಂದಿದವರಾಗಿ, ವಿಚಾರಮತಿಗಳಾಗಿ ಎಂದರ್ಥ. ನಿರಂಕುಶಮತಿಗಳಾಗಿ ಅಂದರೆ ಮತಕ್ಕೆ ಜೋತು ಬೀಳಬೇಡಿ ಮತಿವಂತರಾಗಿ ಅಂತ. ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಇರುವಂಥ ವ್ಯತ್ಯಾಸಯಾವುದು? ಮನುಷ್ಯ ಮತಿವಂತ.
ಆದರೆ ದುರದೃಷ್ಟವಷಾತ್ ಅಂತಹ ವಿಶಿಷ್ಟವಾಗಿರುವ ಸೃಷ್ಟಿ ಲಕ್ಷಣವನ್ನ, ಮತಿಯನ್ನ ಮತದ ಸಂಕೋಲೆಗೆ ನಾವು ತಗಲಿಹಾಕಿದ್ದೀವಿ. ನಾವು ಸ್ವಂತಕ್ಕೆ ವಿಚಾರ ಮಾಡುವುದರ ಬದಲು, ಮತಿಯನ್ನ ಬಳಸುವುದರ ಬದಲು ಮತದ ಸಂಕೋಲೆಯಲ್ಲಿ ಆಲೋಚಿಸುತ್ತಾ ಇದ್ದೀವಿ. ಆದ್ದರಿಂದ ನಮಗೆ ಮೌಢ್ಯಕಾಡುತ್ತಿದೆ. ಪುರೋಹಿತಶಾಹಿ ಇದನ್ನ ನಿಯಂತ್ರಿಸುತ್ತಾ ಇದೆಯಾರದ್ದೋ ಲಾಭಕ್ಕೋಸ್ಕರವಾಗಿ. ಅದು ಎಲ್ಲ ಮನುಷ್ಯರ ಹಿತಕ್ಕೋಸ್ಕರವಾಗಿ ಅಲ್ಲ. ಆದ್ದರಿಂದ ನಾವು ಮತಿವಂತರಾಗಬೇಕು ಅಂದ್ರೆ ಆಲೋಚನೆಯನ್ನ ಮಾಡ್ಬೇಕು – ಆತ್ಮಶ್ರೀಗಾಗಿ. ಕುವೆಂಪು
ನಮ್ಮ ವ್ಯಕ್ತಿತ್ವ, ನಮ್ಮ ಆಲೋಚನಾ ವ್ಯಕ್ತಿತ್ವ ದೊಡ್ಡದಾಗಬೇಕು ಅನ್ನುವ ಕಾರಣಕ್ಕೆ ನಾವು ಮಾಡಬೇಕಾಗಿರೋದು ಈ ಮಿತಿಗಳನ್ನ ಮೀರಿರುವಂತಹ ಮತಿಯನ್ನ ಬೆಳೆಸಿಕೊಳ್ಳೋದು. ಪ್ರತಿಯೊಂದನ್ನೂ ಕೂಡ ಆಲೋಚಿಸಿ, ಚಿಂತಿಸಿ. ಪ್ರಪಂಚದಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ತರದ ಮತಗಳಿರುವಂತೆ ಮಾಡೋದು. ಮತ ಅನ್ನೋದು ಅಭಿಮತ. ಸಿದ್ಧಪಡಿಸಿಟ್ಟಿರುವಂತಹ, ಸಂಪ್ರದಾಯಿಕವಾದ ಮತ ಅಲ್ಲ. ಧರ್ಮ ಅಲ್ಲ. ಅದು ಹೇರಿಕೆಯಾಗಿರುವ ಶಾಸ್ತ್ರ ಅಲ್ಲ. ಆದ್ದರಿಂದ ಯುವಕರು, ಅದರಲ್ಲೂ ವಿದ್ಯಾವಂತರು ನಿರಂಕುಶ ಮತಿಗಳಾಗಿರಬೇಕು. ಅದು ಆತ್ಮಶ್ರೀಯನ್ನ ಬೆಳೆಸುತ್ತೆ. ಅವರು ಬಳಸೋ ಶಬ್ದ ಆತ್ಮ. ಅದು ನಮ್ಮ ಬುದ್ಧಿಶಕ್ತಿ. ನಮ್ಮ ಆಲೋಚನಾ ಶಕ್ತಿ. ನಮ್ಮ ಮನಃಸ್ಥಿತಿ. ಅದನ್ನ ನಾವು ಅಂಕುಶಗಳಿಂದ ಬಿಡಿಸಬೇಕು. ನಾವು ಹಲವು ರೀತಿಯ ಸಂಕೋಲೆಗಳಿಂದ ಬಂಧಿತರಾಗಿದ್ದೀವಿ. ಒಂದು ರೂಪದಲ್ಲಲ್ಲ. ಮನುಷ್ಯ ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟುತ್ತಾನೆ. ಆದರೆ ಆಮೇಲೆ ಅವನು ಈ ರೀತಿಯ ಮಿತಿಗಳಿಗೆ ಒಳಪಟ್ಟು ಮತಿ ಕಳೆದುಕೊಳ್ಳುತ್ತಾನೆ. ಮೊದಲು ಏನು ಸಿದ್ಧ ಆಗಿದೆಯೋ ಆ ದಾರಿ, ಈ ಮೊದಲುಯಾರ್ಯಾರು ಏನೇನು ಹೇಳಿದ್ದಾರೋ ಅದನ್ನ ಅನುಸರಿಸುವಂತಹ ಅನುಕರಣಾಶೀಲರಾಗಿದ್ದೇವೆ.
ಅಂತಹವರಿಗೆ ಆತ್ಮಶ್ರೀ ಇಲ್ಲ. ಚಿಂತನಾ ಶಕ್ತಿ ಇಲ್ಲದಿದ್ದವನು, ಸ್ವಂತ ವಿವೇಚನೆ ಅನ್ನೋದು ಬೆಳೆಯದಿದ್ದವನು, ಸ್ವಂತ ಅನುಭವ ಮತ್ತು ಸ್ವಂತ ಅಭಿವ್ಯಕ್ತಿ ಅನ್ನೋದು ಇಲ್ಲದಿರುವವನು ಮನುಷ್ಯ ರೂಪದಲ್ಲಿರುವ ಯಂತ್ರವಾಗಿರುತ್ತಾನೆ. ಸಂಪ್ರದಾಯ ಅನ್ನುವಂತಾದ್ದುಅವನನ್ನು ಮುನ್ನಡೆಸುತ್ತಾ ಇರುತ್ತೆ. ಹೀಗಾಗಬಾರದು ಅನ್ನುವ ಕಾರಣಕ್ಕೆ ಅವರು ಮಾಡಿರುವಂತಹ ಎರಡು ಮುಖ್ಯವಾದ ಭಾಷಣಗಳು ಇವು. ವಿಚಾರವಂತಿಕೆ, ಮತಿವಂತಿಕೆ ಮನುಕುಲದ ದಾರಿ ದೀಪವಾಗ ಬೇಕೆಂಬುದು ಕುವೆಂಪು ಆಶಯ.
ಇದನ್ನೂ ನೋಡಿ: ಯುವತಲೆಮಾರಿಗೆ ಕುವೆಂಪು ಓದು; ಸಾಹಿತ್ಯ ಚಿಂತನೆಗಳ ಸಡಗರ Janashakthi Media
