ಚಂಡೀಗಢ: ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು ರಾಜ್ಯ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಗನ್ದೀಪ್ ಸಿಂಗ್ ರಾಂಧವಾ ರ ಆತ್ಮಹತ್ಯೆ ಪ್ರಕರಣದ ವಿವಾದದ ನಡುವೆಯೇ ಮಾರ್ಚ್ 21ರಂದು ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಳಿಕ ಭುಲ್ಲರ್, ಅವರ ತಂದೆ ಸುಖದೇವ್ ಸಿಂಗ್ ಭುಲ್ಲರ್ ಮತ್ತು ಮತ್ತೊಬ್ಬ ಸಹಾಯಕನ ವಿರುದ್ಧ ಎಫ್ಐಆರ್(FIR) ದಾಖಲಿಸಲಾಗಿದೆ ಎಂದು ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109, 351(3) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ದೇಶದ 17 ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆ: ಐಎಂಡಿ
ಮೂಲಗಳ ಪ್ರಕಾರ, ತಮ್ಮ ರಾಜಕೀಯ ಆಪ್ತರಿಗೆ ಗೋದಾಮು ಟೆಂಡರ್ ನೀಡುವಂತೆ ಭುಲ್ಲರ್ ಅವರು ರಾಂಧವಾ ಅವರ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.
ಅಧಿಕಾರಿ ಸಚಿವರು ಹೇಳಿದವರಿಗೆ ಟೆಂಡರ್ ನಿರಾಕರಿಸಿದಾಗ, ಅವರನ್ನು ಸಚಿವರ ನಿವಾಸಕ್ಕೆ ಕರೆಸಿ, ಹಲ್ಲೆ ನಡೆಸಿ, ಬಳಿಕ ಬ್ಲ್ಯಾಕ್ಮೇಲ್ ಮಾಡಲು 10 ಲಕ್ಷ ರೂ. ಲಂಚ ಸ್ವೀಕರಿಸಿದ್ದಾಗಿ ಕ್ಯಾಮೆರಾದಲ್ಲಿ “ತಪ್ಪೊಪ್ಪಿಕೊಳ್ಳುವಂತೆ” ಒತ್ತಾಯಿಸಲಾಯಿತು ಎಂದು ಆರೋಪಿಸಲಾಗಿದೆ.
ಮಾರ್ಚ್ 19ರ ಸಂಜೆ ವಿಷ ಸೇವಿಸಿ ರಾಂಧವಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಸ್ವಲ್ಪ ಮೊದಲು ಒಂದು ವಿಡಿಯೋ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು, “ನಿಮ್ಮ ಸ್ನೇಹಿತ, ಸಚಿವ ಲಾಲ್ಜಿತ್ ಭುಲ್ಲರ್ ಅವರ ಭಯದಿಂದ ವಿಷ ಸೇವಿಸಿದ್ದಾರೆ, ನಾನು ಈಗ ಬದುಕುಳಿಯುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media
