ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಗುಳೆದಾಳು ಮತ್ತು ಓಬಳಾಪುರ ಗ್ರಾಮದ ಸರ್ಕಾರಿ ಶಾಲೆಗಳನ್ನು ಕೆಪಿಎಸ್ (KPS) ಶಾಲೆಗಳ ಮ್ಯಾಗ್ನೆಟಿಕ್ ಶಾಲೆಗಳಲ್ಲಿ ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚುತ್ತಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಗರಿಬೊಮ್ಮನಹಳ್ಳಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ. ನಮ್ಮ
ಎಸ್ಎಫ್ಐ ಕಾರ್ಯಕರ್ತರು ಗುಳೆದಾಳು ಮತ್ತು ಓಬಳಾಪುರ ಗ್ರಾಮದ ಜನರೊಂದಿಗೆ ಸೇರಿ “ನಮ್ಮ ಗ್ರಾಮದ ಶಾಲೆಗಳು ನಮ್ಮ ಊರಲ್ಲೇ ಇರಬೇಕು, ಬೆಳೆಯಬೇಕು” ಎಂಬ ಆಗ್ರಹ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ನೆಪದಲ್ಲಿ ಬೇರೆ ಶಾಲೆಗಳಿಗೆ ವಿಲೀನಗೊಳಿಸಿ ಮುಚ್ಚುತ್ತಿರುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಭೌಗೋಳಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ವಿವರಿಸಿ, ಮಾನ್ಯ ಮುಖ್ಯಗುರುಗಳು ಮತ್ತು ಎಸ್ಡಿಎಂಸಿ ಸಮಿತಿಯ ಮುಖಾಂತರ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದನ್ನೂ ಓದಿ : ಪಶ್ಚಿಮ ಬಂಗಾಳ| 60 ಲಕ್ಷ ಮತದಾರರ ಹೆಸರು ಅಳಿಸುವ ಯತ್ನ: ಚುನಾವಣಾ ಆಯೋಗದ ವಿರುದ್ಧ ಸಲೀಂ ಕಿಡಿ
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ವಿಜಯನಗರ ಜಿಲ್ಲಾ ಅಧ್ಯಕ್ಷ ಜಯಸೂರ್ಯ ಅವರು, ಸರ್ಕಾರ ಶಿಕ್ಷಣ ವಿರೋಧಿ ನೀತಿಯನ್ನು ಜಾರಿಗೆ ತರುವತ್ತ ಸಾಗುತ್ತಿದೆ ಎಂದು ಆರೋಪಿಸಿದರು. ಸಾಮಾಜಿಕ ಬದಲಾವಣೆಯ ಹೆಸರಿನಲ್ಲಿ ಬಡವರ ಕೈಯಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ಸಮಾಜವಾದದ ಮೌಲ್ಯಗಳನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಧೋರಣೆ ಅನುಸರಿಸುವುದು ಸರಿಯಲ್ಲ. ಪೋಷಕರನ್ನು ಬಲವಂತವಾಗಿ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ಶಾಲೆಯನ್ನು ಉನ್ನತೀಕರಿಸುವ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳ ಶಾಲೆಗಳನ್ನು ಮುಚ್ಚುವುದು ಬಡವರನ್ನು ಶಿಕ್ಷಣದಿಂದ ದೂರ ಮಾಡುವ ಕ್ರಮವಾಗಿದೆ. ಇದು ಶಿಕ್ಷಣವನ್ನು ಖಾಸಗಿ ವಲಯದ ಕೈಗೆ ಒಪ್ಪಿಸುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಅವರು ಟೀಕಿಸಿದರು.
ಈ ಹೋರಾಟದಲ್ಲಿ ಗುಳೆದಾಳು ಗ್ರಾಮದ ಕೃಷ್ಣಪ್ಪ, ಏಕೆ ದುರ್ಗೇಶ, ನಿಂಗರಾಜ, ಧರ್ಮಪ್ಪ ಪೂಜಾರಿ, ರಾಮೇಶ್, ಪದ್ದಮ್ಮ, ಸುಮಂಗಳ, ಗಂಗಮ್ಮ, ಗುಂಡ್ರ ನಿಂಗಜ್ಜ, ತಳವಾರ್ ಹೇಮಣ್ಣ, ಜಟಂಗಿ ಶಿವಣ್ಣ, ಬಣಕಾರ್ ಮಲ್ಲೇಶ, ವೆಂಕಟೇಶ, ಮಹಾಂತೇಶ, ಹೆಚ್ಚು ಗೋಣಿ ಸ್ವಾಮಿ, ಕಲ್ಲೇಶ, ಅವಾಜಿ ಬಸವರಾಜ, ಓಬಳಾಪುರ ಗ್ರಾಮದ ನರಸಿಂಹರಾಜ, ರಮೇಶ್, ಕರಿಯಪ್ಪ, ಹನುಮಂತಸ್ವಾಮಿ, ತಿಪ್ಪೇಸ್ವಾಮಿ, ಬಸವರಾಜ, ಕುಮಾರಪ್ಪ, ನಾಗರಾಜ, ಜ್ಞಾನೇಶ್, ಪವಾಡಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ನೋಡಿ : ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media
