ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿರದವರ ನೇತೃತ್ವದ ಸರಕಾರದಿಂದ
ಪ್ರೊ..ಪ್ರಭಾತ್ ಪಟ್ನಾಯಕ್
ಎರಡು ದೇಶಗಳ ನಡುವೆ ಸುಂಕ ದರಗಳ ತಾರತಮ್ಯವನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸುವ ಒಂದು ಒಪ್ಪಂದವಾಗುವುದಾದರೆ, ಖಂಡಿತವಾಗಿಯೂ ಅದೊಂದು ಅಸಮಾನ ಸಂಧಿ, ಹೇರಿಕೆಯ ಒಪ್ಪಂದ. ಬಿಜೆಪಿ ನೇತೃತ್ವದ ಸರ್ಕಾರದ ನಟನೆ ಏನೇ ಇರಲಿ, ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಭಾರತದ ಕೈ ತಿರುಚಿದೆ. ಸ್ವಾತಂತ್ರ‍್ಯಾನಂತರದ ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಸ್ವತಂತ್ರ ದೇಶದ ಸರ್ಕಾರವು ವಸಾಹತುಶಾಹಿ ಕಾಲವನ್ನು ನೆನಪಿಸುವ ಒಂದು ಅಸಮಾನ ಒಪ್ಪಂದಕ್ಕೆ ಸಹಿ ಹಾಕುವಂತಹ ಪುಕ್ಕಲುತನದಿಂದ ವರ್ತಿಸಿದೆ. ವಸಾಹತುಶಾಹಿ ಯುಗದ ಪ್ರತಿಧ್ವನಿಯಿರುವ ಈ ಒಪ್ಪಂದವನ್ನು ವಸಾಹತುಶಾಹಿ-ವಿರೋಧಿ ಸ್ವಾತಂತ್ರ‍್ಯ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲದ ಒಂದು ಪಕ್ಷದ ನೇತೃತ್ವದ ಸರ್ಕಾರ ಮಾಡಿಕೊಳ್ಳುತ್ತಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ವಸಾಹತುಶಾಹಿ
ಅನು:ಕೆ.ಎಂ.ನಾಗರಾಜ್
ಭಾರತ-ಯುಎಸ್ ವ್ಯಾಪಾರ ಒಪ್ಪಂದವು, ಅದರ ನಿರ್ದಿಷ್ಟ ನಿಬಂಧನೆಗಳನ್ನು ಬದಿಗಿಟ್ಟು ನೋಡಿದರೂ ಸಹ, ಒಂದು ಅಸಮಾನ ಸಂಧಿ ಎಂದು ತೋರಿಸುವ ಎರಡು ಅಸಾಧಾರಣ ಲಕ್ಷಣಗಳನ್ನು ಹೊಂದಿದೆ. ಇವು ಸಾಮ್ರಾಜ್ಯಶಾಹಿ ಶಕ್ತಿಗಳು ನೇರವಾಗಿ ಆಳ್ವಿಕೆ ನಡೆಸದ ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೇರುತ್ತಿದ್ದ ರೀತಿಯವು. ಮೊದಲನೆಯ ಅಸಾಧಾರಣ ಲಕ್ಷಣವೆಂದರೆ, ಡೊನಾಲ್ಡ್ ಟ್ರಂಪ್ ಅವರ ಸ್ಥೂಲ ವಿವರಣೆಯ ಪ್ರಕಾರ, ಭಾರತದ ಸರಕುಗಳ ಮೇಲೆ ಶೇ. 18ರಷ್ಟು ಆಮದು ಸುಂಕವನ್ನು ಅಮೆರಿಕ ವಿಧಿಸುತ್ತದೆಯಾದರೂ, ಅಮೆರಿಕದ ಸರಕುಗಳ ಮೇಲೆ ಭಾರತ ಶೂನ್ಯ ಆಮದು ಸುಂಕವನ್ನು ವಿಧಿಸುತ್ತದೆ. ನಿಜ, ಕೆಲವು ಸರಕುಗಳನ್ನು ಹೊರತುಪಡಿಸಲಾಗಿದೆ. ಸುಂಕ ದರಗಳ ಈ ತಾರತಮ್ಯವನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸುವ ಒಪ್ಪಂದವನ್ನು ಹೊಂದುವುದೇ ಒಂದು ವಿಚಿತ್ರ. ಇದು ಅಮೆರಿಕ ಅಳವಡಿಸಿಕೊಂಡ “ನಿನ್ನ-ನೆರೆಯವನು ಹಾಳಾಗಲಿ” (beggar-thy-neighbour) ನೀತಿಯಾಗಿದೆ. ಈ ನೀತಿಯ ಪ್ರಕಾರ, “ಭಿಕ್ಷುಕ”ನ ಸ್ಥಿತಿಗೆ ಇಳಿಸಲ್ಪಡುವ “ನೆರೆಯವನು” (ಭಾರತವು) ಅಂತಹ ಒಂದು ಸ್ಥಿತಿಗೆ ಇಳಿಸಲ್ಪಡಲು ಒಪ್ಪಿಗೆ ನೀಡುವ ಒಂದು ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಎರಡನೆಯ ವಿಚಿತ್ರ ಲಕ್ಷಣವೆಂದರೆ ಭಾರತವು ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷವೂ ಕನಿಷ್ಠ $100 ಶತಕೋಟಿ ಮೌಲ್ಯದ ಅಮೇರಿಕದ ಸರಕುಗಳನ್ನು ಖರೀದಿಸಬೇಕು ಎಂಬ ನಿಬಂಧನೆ.
ಒಂದು ದೇಶವು, ಏನೇ ಆಗಲಿ, ಮತ್ತೊಂದು ದೇಶದಿಂದ ಖರೀದಿಸಬೇಕಾದ ಸರಕುಗಳ ಕನಿಷ್ಠ ಪ್ರಮಾಣವನ್ನು ನಿಗದಿಪಡಿಸುವ ಒಂದು ವ್ಯಾಪಾರ ಒಪ್ಪಂದವು, ಬೂರ್ಜ್ವಾಗಳು ಅಷ್ಟೊಂದು ಕೊಂಡಾಡುವ ಇಡೀ ಮುಕ್ತ ಮಾರುಕಟ್ಟೆಯ ಸಿದ್ಧಾಂತಕ್ಕೇ ವಿರುದ್ಧವಾಗಿದೆ. ಈ ಸಿದ್ಧಾಂತದ ಪ್ರಕಾರ ಒಂದು ವಹಿವಾಟಿನ ಮೊತ್ತ ಎಷ್ಟಿರಬೇಕು ಎಂಬುದು ಖರೀದಿದಾರರ ಆಯ್ಕೆಯಾಗಿರುತ್ತದೆ. ಮತ್ತು ಅದನ್ನು ಸರ್ಕಾರಗಳು ನಿರ್ದೇಶಿಸಲು, ಆಮೂಲಕ ನಿರ್ಧರಿಸುವುದು ಸಾಧ್ಯವಿಲ್ಲ. ಆದ್ದರಿಂದ, ವಹಿವಾಟಿನ ಮೊತ್ತವನ್ನು ಒಪ್ಪಂದದಲ್ಲಿ ಸೇರಿಸಿರುವ ಕ್ರಮ ಒಂದು ವಿಲಕ್ಷಣ ಸಂಗತಿಯೇ ಸರಿ. ಇನ್ನೂ ಹೆಚ್ಚಿನ ವಿಚಿತ್ರವೆಂದರೆ, ವಹಿವಾಟಿನ ಕನಿಷ್ಠ ಮೊತ್ತವನ್ನು ಒಂದು ದೇಶಕ್ಕೆ ಮಾತ್ರ ನಿಗದಿಪಡಿಸಲಾಗಿದೆ, ಇನ್ನೊಂದು ದೇಶಕ್ಕೆ ಇಲ್ಲ ಎಂಬುದು. ಆದ್ದರಿಂದ ಖಂಡಿತವಾಗಿಯೂ ಇದು ಒಂದು ಅಸಮಾನ ಸಂಧಿಯಾಗಿದೆ.
ಈ ರೀತಿಯ ಅಸಮಾನ ಸಂಧಿಯನ್ನು ಒಂದು ದೇಶದ ಮೇಲೆ ಮತ್ತೊಂದು ದೇಶ ಹೇರಬಹುದು ಮಾತ್ರ. ಬಿಜೆಪಿ ನೇತೃತ್ವದ ಸರ್ಕಾರದ ನಟನೆ ಏನೇ ಇರಲಿ, ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಭಾರತದ ಕೈ ತಿರುಚಿದೆ. ಸ್ವಾತಂತ್ರ‍್ಯಾನಂತರದ ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಸ್ವತಂತ್ರ ದೇಶದ ಸರ್ಕಾರವು ವಸಾಹತುಶಾಹಿ ಕಾಲವನ್ನು ನೆನಪಿಸುವ ಒಂದು ಅಸಮಾನ ಒಪ್ಪಂದಕ್ಕೆ ಸಹಿ ಹಾಕುವಂತಹ ಪುಕ್ಕಲುತನದಿಂದ ವರ್ತಿಸಿದೆ.
ಬೆಸ್ಟ್ ಫ್ರೆಂಡ್ ಮತ್ತು ಬೆಸ್ಟ್ ಡೀಲ್

ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಸೌತ್ ಫಸ್ಟ್
ಈ ಅಸಮಾನ ಸಂಧಿಯ ಎರಡು ಪರಿಣಾಮಗಳು ಎದ್ದುಕಾಣುತ್ತವೆ. ಮೊದಲನೆಯದು, ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ್ದು; ಮತ್ತು ಎರಡನೆಯದು, ಕೃಷಿ ವಲಯಕ್ಕೆ ಸಂಬಂಧಿಸಿದ್ದು. ಈಗ ತಕ್ಷಣ ಉದ್ಭವಿಸುವ ಪ್ರಶ್ನೆಯೆಂದರೆ: ಬಿಜೆಪಿ ನೇತೃತ್ವದ ಸರ್ಕಾರವು ಯುಎಸ್‌ನಿಂದ ಮಾಡಿಕೊಳ್ಳುವ ಆಮದುಗಳನ್ನು ಈಗಿರುವ ಸುಮಾರು $40 ಬಿಲಿಯನ್‌ನಿಂದ ಮುಂಬರುವ ವರ್ಷದಲ್ಲಿ ಕನಿಷ್ಠ $100 ಬಿಲಿಯನ್‌ಗೆ ಹೆಚ್ಚುವುದನ್ನು ಹೇಗೆ ಖಚಿತಪಡಿಸುತ್ತದೆ? ಸುಂಕಗಳನ್ನು ಶೂನ್ಯ ದರಕ್ಕೆ ಇಳಿಸಿದರೂ ಸಹ, ಯುಎಸ್‌ನಿಂದ ಮಾಡಿಕೊಳ್ಳುವ ಎಲ್ಲ ಸರಕು-ಸೇವೆಗಳ ಆಮದುಗಳು ಕೆಲವೇ ತಿಂಗಳುಗಳಲ್ಲಿ ಇದ್ದಕ್ಕಿದ್ದಂತೆಯೇ ದ್ವಿಗುಣಗೊಳ್ಳುತ್ತವೆ ಎಂದು ಸರ್ಕಾರವೂ ನಿರೀಕ್ಷಿಸಲಾರದು. ಆದ್ದರಿಂದ, ಅದು ರಷ್ಯಾದ ತೈಲ ಆಮದುಗಳನ್ನು ಕಡಿತಗೊಳಿಸುವುದನ್ನು ಮತ್ತು ಅದರ ಬದಲಿಗೆ ಅಮೇರಿಕದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮಾತ್ರವೇ ಮಾಡಬಲ್ಲದು. ಇದು ಬಹಳ ಸಮಯದಿಂದಲೂ ಅಮೆರಿಕ ಮುಂದಿಟ್ಟಿರುವ ಆಗ್ರಹವನ್ನು ಈಡೇರಿಸುತ್ತದೆ ಮಾತ್ರವಲ್ಲ, ನಮ್ಮ ತೈಲ ಆಮದು ಬಾಬ್ತು ಮೊತ್ತವನ್ನು ಹೆಚ್ಚಿಸುತ್ತದೆ ಮತ್ತು ದೇಶವನ್ನು ಹಣದುಬ್ಬರದತ್ತ ತಳ್ಳುತ್ತದೆ. ಏಕೆಂದರೆ ಅಮೆರಿಕದ ತೈಲವು ರಷ್ಯಾದ ತೈಲಕ್ಕಿಂತ ಕನಿಷ್ಠ ಶೇ. 20ರಷ್ಟು ಹೆಚ್ಚು ದುಬಾರಿಯಾಗಿದೆ.
ಇದನ್ನೂ ಓದಿ : ಹಂಚಿಕೆಯಾಗದ ಆಶ್ರಯ ನಿವೇಶನ; ಸ್ವಂತ ಸೂರಿಗಾಗಿ 26 ವರ್ಷಗಳಿಂದ ಕಾಯುತ್ತಿರುವ 62 ದಲಿತ ಕುಟುಂಬಗಳು
ರಾಜತಾಂತ್ರಿಕ ಪ್ರಶ್ನೆಯಷ್ಟೇ ಅಲ್ಲ; ಮುಖ್ಯ ವರ್ಗ ಪ್ರಶ್ನೆಯೂ ಹೌದು
ಭಾರತದ ಒಟ್ಟು ತೈಲ ಆಮದಿನ ಸರಾಸರಿ ಮೂರನೇ ಒಂದು ಭಾಗವು ರಷ್ಯಾದಿಂದ ಬರುತ್ತಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಸರ್ಕಾರವು ಈ ಆಮದುಗಳನ್ನು ಕಡಿತಗೊಳಿಸಿತು. ಆದರೆ ಈ ಕಡಿತವೂ ಅಮೆರಿಕದೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಕ್ಕೆ ಒಂದು ಪೀಠಿಕೆಯಾಗಿತ್ತು. ಆದ್ದರಿಂದ, ರಷ್ಯಾದಿಂದ ಆಮದಾಗುತ್ತಿದ್ದ ತೈಲವನ್ನು ಕಡಿತಗೊಳಿಸಿದ್ದರಿಂದ ಉಂಟಾದ ಪರಿಣಾಮವನ್ನು ಪ್ರತ್ಯೇಕವಾಗಿ ನೋಡಲಾಗದು. ಅದನ್ನು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಜೊತೆಯಲ್ಲೇ ನೋಡಬೇಕಾಗುತ್ತದೆ. ಈಗ, ನಮ್ಮ ಒಟ್ಟು ತೈಲ ಆಮದುಗಳ ಮೊತ್ತವನ್ನು ಸುಮಾರು $120 ಬಿಲಿಯನ್ ಎಂದು ತೆಗೆದುಕೊಂಡರೆ, ರಷ್ಯಾದ ತೈಲದ ಬದಲಿಗೆ ಅದನ್ನು ಅಮೇರಿಕದಿಂದ ಕೊಂಡಾಗ ನಮ್ಮ ತೈಲ ಆಮದು ಮೊತ್ತವು ಸುಮಾರು $8 ಬಿಲಿಯನ್‌ದಷ್ಟು ಹೆಚ್ಚುತ್ತದೆ. ಇದು ಹೊಸ ವ್ಯಾಪಾರ ಒಪ್ಪಂದದ ಮೂಲಕ ಅಮೆರಿಕವು ಭಾರತದಿಂದ ವಸಾಹತುಶಾಹಿ ಶೈಲಿಯಲ್ಲಿ “ಬರಿದು”(drain) ಮಾಡುವ ಮೊತ್ತವೇ ಆಗಿದೆ. ಇದನ್ನು ಭಾರತದ ತೈಲ ಕಂಪನಿಗಳ ಜೇಬಿನಿಂದ ‘ಬರಿದು’ ಮಾಡಿಕೊಳ್ಳುತ್ತಿಲ್ಲ. ಅದನ್ನು ಸರಕುಗಳ ಬೆಲೆಗಳ ಏರಿಕೆಯ ಮೂಲಕ ಕೊಳ್ಳುವವರ ಮೇಲೆ “ದಾಟಿಸಿಯೇ” ಬಿಡುತ್ತದೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರದ ಒತ್ತಡ ಉಂಟಾಗುತ್ತದೆ. ಇದರ ನಿಜ ಬಲಿಪಶುಗಳು ದುಡಿಯುವ ಜನರೇ ಆಗಿರುತ್ತಾರೆ. ಏಕೆಂದರೆ ಅವರ ಹಣ-ವರಮಾನವನ್ನು ಬೆಲೆ ಸೂಚ್ಯಂಕದೊಂದಿಗೆ ಹೊಂದಿಕೆ ಮಾಡಿಲ್ಲ. ಆದ್ದರಿಂದ ರಷ್ಯಾದ ತೈಲದ ಬದಲಿಗೆ ಅಮೇರಿಕದ ತೈಲ ಕೊಳ್ಳುವುದು ಕೇವಲ ಒಂದು ಅಂತರರಾಷ್ಟ್ರೀಯ ರಾಜತಾಂತ್ರಿಕ ವಿಷಯ ಮಾತ್ರವಲ್ಲ; ಇದೊಂದು ಬಹಳ ಮುಖ್ಯವಾದ ವರ್ಗ ಪ್ರಶ್ನೆಯೂ ಹೌದು.
ಈ ಒಪ್ಪಂದದಿಂದಾಗಿ ಕೃಷಿ ವಲಯದಲ್ಲಿ ಉಂಟಾಗುವ ಪರಿಣಾಮಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಅಕ್ಕಿ ಮತ್ತು ಗೋಧಿಯಂತಹ ಕೆಲವು ಪ್ರಮುಖ ಧಾನ್ಯಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲಾಗಿರುವುದರಿಂದ, ಕೃಷಿ ವಲಯವು ತೊಂದರೆಗೊಳಗಾಗುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ಕೃಷಿ ವಲಯದ ಬಹಳಷ್ಟು ವಿಭಾಗಗಳನ್ನು ಅಥವಾ ಕೃಷಿ ಉತ್ಪನ್ನ ಸಂಬಂಧಿತ ಚಟುವಟಿಕೆಗಳನ್ನು ತೆರೆದು ಕೊಡಲಾಗುವುದು ಎಂಬುದನ್ನು ಸ್ವತಃ ವಾಣಿಜ್ಯ ಸಚಿವರೇ ಒಪ್ಪಿಕೊಂಡಿದ್ದಾರೆ (ಸಾರ್ವಜನಿಕವಾಗಿ ಅಲ್ಲವಾದರೂ). ಉದಾಹರಣೆಗೆ ಸೇಬು, ಹತ್ತಿ, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ ಮತ್ತು ವೈನ್ ಮತ್ತು ಮಾದಕ ಪಾನೀಯಗಳು, ಭಟ್ಟಿ ಇಳಿಸಿದ ನಂತರ ಉಳಿಯುವ ಹಿಂಡಿ ಮತ್ತು ಕೆಂಪು ಜೋಳದಂತಹ ಪಶು ಆಹಾರಗಳ ಆಮದುಗಳು ಇರುತ್ತವೆ. ಇದು ಅಮೇರಿಕನ್ ಕಂಪೆನಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ವಾಸ್ತವವಾಗಿ ಏಕಸ್ವಾಮ್ಯ ಸ್ಥಾನದಲ್ಲಿ ಇರಿಸುತ್ತದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳು ಪ್ರತಿಕೂಲ ಪರಿಣಾಮಗಳಿಗೆ ಒಳಗಾಗುತ್ತವೆ.
ಮತ್ತೆ ರೈತ-ಕೂಲಿಕಾರರೇ ಬಲಿಪಶುಗಳು
ದೇಶದಲ್ಲಿ ಪಶು ಆಹಾರದ ಕೊರತೆ ಇರುವುದರಿಂದ ಹೆಚ್ಚು ಆಮದುಗಳು ಪ್ರಯೋಜನಕಾರಿಯಾಗುತ್ತವೆ ಎಂದು ವಾದಿಸಬಹುದು. ಆದರೆ, ಈ ಕೊರತೆಯನ್ನು ನೀಗಿಸಿಕೊಳ್ಳಲು ಅಗತ್ಯವಾಗುವ ಆಮದುಗಳನ್ನು ಪಡೆದುಕೊಳ್ಳುವುದಕ್ಕೂ ಮತ್ತು ಅಂತಹ ಆಮದುಗಳಿಗೆ ಸುಂಕ ವಿಧಿಸದೇ ನಮ್ಮ ಇಡೀ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆದಿಡುವುದಕ್ಕೂ ಬಹಳ ವ್ಯತ್ಯಾಸವಿದೆ. ಅದೇ ರೀತಿಯಲ್ಲಿ, ಈ ಒಪ್ಪಂದದಿಂದ ಡೈರಿ ಉತ್ಪನ್ನಗಳನ್ನು ಹೊರಗಿಡಲಾಗಿದೆ ಎಂಬ ವಾಣಿಜ್ಯ ಸಚಿವರ ಹೇಳಿಕೆಯು ಸಮಾಧಾನಕರವೇ ಅಲ್ಲ, ಏಕೆಂದರೆ, ಇತ್ತೀಚೆಗೆ ಯುರೋಪಿಯನ್ ಒಕ್ಕೂಟ, ನ್ಯೂಜಿಲೆಂಡ್ ಮತ್ತು ಬ್ರಿಟನ್‌ನೊಂದಿಗೆ ಸಹಿ ಹಾಕಿದ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಈ ಡೈರಿ ಉತ್ಪನ್ನಗಳು ಸೇರಿವೆ.
ಒಂದು ವಾಸ್ತವವಾಂಶವನ್ನು ಹೇಳುವುದಾದರೆ, ಈ ಒಪ್ಪಂದದಿಂದಾಗಿ ಅಮೇರಿಕದ ರೈತರ ಆದಾಯವು ಬಹು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗುವ ಬಗ್ಗೆ ಟ್ರಂಪ್ ಆಡಳಿತ ಮಾತನಾಡುತ್ತಿರುವಾಗ, ಭಾರತದ ಕೃಷಿಯ ಮೇಲೆ ಈ ಒಪ್ಪಂದದಿಂದ ಪ್ರತಿಕೂಲ ಪರಿಣಾಮಗಳೇನೂ ಆಗುವುದಿಲ್ಲ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಭಾರತದಂಥಹ ಒಂದು ದೊಡ್ಡ ಮಾರುಕಟ್ಟೆಯ ಅವಕಾಶವನ್ನು ಅಮೇರಿಕದ ರೈತರು ಪಡೆದಾಗ, ಭಾರತದ ರೈತರನ್ನು ಹಿಂಡಿ-ಹಿಪ್ಪೆ ಮಾಡಿ ಮಾರುಕಟ್ಟೆಯಿಂದ ಹೊರದಬ್ಬಲಾಗುತ್ತದೆ ಎಂದೇ ಅರ್ಥ. ಪಶು ಆಹಾರದ ಲಾಗುವಾಡುಗಳಾಗಿ ಬಳಸಲಾಗುವ ಕೆಲವು ಕೃಷಿ ಉತ್ಪನ್ನಗಳ ತಾಜಾ-ಸಾಲ ಹಣಕಾಸಿನಿಂದ ಖರೀದಿ ಮಾತ್ರವೇ ಒಂದು ಅಪವಾದವಾಗಬಹುದಾದರೂ, ಅವು ಈ ಒಪ್ಪಂದದ ಆಡಿಯಲ್ಲಿ ಭಾರತಕ್ಕೆ ಅಮೇರಿಕದ ಕೃಷಿ ರಫ್ತುಗಳ ಒಟ್ಟು ಹೆಚ್ಚಳದ ಒಂದು ತುಣುಕು ಮಾತ್ರ.
ಇಲ್ಲಿಯೂ ಕೂಡ ನಮಗೆ ಮತ್ತೊಮ್ಮೆ ವಸಾಹತುಶಾಹಿ ಯುಗದ ಪ್ರತಿಧ್ವನಿ ಕೇಳುತ್ತಿದೆ. ಆ ಕಾಲದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಅರ್ಥವ್ಯವಸ್ಥೆಯ ವಸಾಹತುಶಾಹಿ ಅತಿಕ್ರಮಣದಿಂದಾಗಿ ದಾರುಣ ರೀತಿಯಲ್ಲಿ ಬಲಿಪಶುಗಳಾದರು. ಈ ಕಾರಣದಿಂದಾಗಿಯೇ ವಸಾಹತುಶಾಹಿ ವಿರೋಧಿ ಹೋರಾಟದ ಬಾವುಟದಡಿಯಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಕೇಳಬಂದ ಒಂದು ಘೋಷಣೆಯೆಂದರೆ, ಸ್ವತಂತ್ರ ಭಾರತದಲ್ಲಿ ಅವರು ಎಂದಿಗೂ ಅಂತಹ ಒಂದು ಗತಿಯನ್ನು ಕಾಣಬೇಕಾಗಿಲ್ಲ ಎಂಬುದು. ಆದರೆ, ಸ್ವಾತಂತ್ರ‍್ಯ ಹೋರಾಟದ ಭರವಸೆಗೆ ಪೂರ್ಣವಾಗಿ ದ್ರೋಹ ಬಗೆವ ರೀತಿಯಲ್ಲಿ ಮತ್ತೊಮ್ಮೆ ಅದೇ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಅವರ ಮೇಲೆ ಹೇರಲಾಗುತ್ತಿದೆ. ಇದನ್ನು ಸ್ವಾತಂತ್ರ‍್ಯ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲದ ಒಂದು ಪಕ್ಷದ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.
ದುಡಿಯುವ ಜನಗಳ ಬಗ್ಗೆ ನಿರ್ದಯ ನಿರ್ಲಕ್ಷ್ಯ
ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗೆಗಿನ ವಿಮರ್ಶಾತ್ಮಕ ಟೀಕೆ ಟಿಪ್ಪಣಿಗಳು ಈ ಒಪ್ಪಂದದ ಹೊಣೆಯನ್ನು ಮೋದಿ ಸರ್ಕಾರದ ಮೇಲಷ್ಟೇ ಹೊರಿಸುತ್ತವೆ. ಆದರೆ, ಇವು ಆಳವಿಲ್ಲದ ಟೀಕೆ-ಟಿಪ್ಪಣಿಗಳು. ಏಕೆಂದರೆ, ಸರ್ಕಾರಗಳು, ಫ್ಯಾಸಿಸ್ಟ್ ತೆರನವುಗಳೂ ಸೇರಿದಂತೆ, ನಿರ್ದಿಷ್ಟ ವರ್ಗಗಳ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತವೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತಿದೆ ಎಂಬ ಸುದ್ದಿಯು ಭಾರತದ ಷೇರು ಮಾರುಕಟ್ಟೆಯಲ್ಲಿ ಬಹಳ ಸಡಗರ ತಂದಿದೆ. ಭಾರತದ ಹಿರಿ-ಬೂರ್ಜ್ವಾಗಳು ಮತ್ತು ಸಂಬಳದಾರರು ಹಾಗೂ ವೃತ್ತಿಪರರ ಮೇಲ್ಪದರಕ್ಕೆ ಸೇರಿದವರು ದೇಶದ ದುಡಿಯುವ ಜನರಿಗೆ ನಷ್ಟ ಉಂಟುಮಾಡಿದರೂ ಪರವಾಗಿಲ್ಲ ಎಂದು ಈ ಒಪ್ಪಂದವನ್ನು ಬಯಸುತ್ತಾರೆ. ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗಳನ್ನು ಹುಡುಕಾಡುತ್ತಿರುವ ಭಾರತದ ಹಿರಿ-ಬೂರ್ಜ್ವಾಗಳಿಗೆ ಅಮೇರಿಕದ ಮಾರುಕಟ್ಟೆಯ ಅವಕಾಶವು, ಶೇ. 18ರಷ್ಟು ಸುಂಕಗಳಿದ್ದರೂ ಸಹ, ಸಂತಸ ತಂದಿದೆ. ಅದೇ ರೀತಿಯಲ್ಲಿ, ತಮ್ಮ ಮಕ್ಕಳನ್ನು ಅಮೆರಿಕದಲ್ಲಿ ನೆಲೆಗೊಳಿಸುವ ಈ ವಿಭಾಗಗಳ ಮಂದಿಯ ಬಯಕೆಗೆ ಟ್ರಂಪ್‌ರ ವೈಷಮ್ಯದಿಂದಾಗಿ ಹಿನ್ನಡೆಯಾಗಿತ್ತು. ಅದೀಗ ಮತ್ತೆ ಈಡೇರುವ ಅವಕಾಶ ಹೆಚ್ಚುತ್ತಿದೆ ಎಂಬುದು ಅವರಿಗೆ ಸಂತಸ ತಂದಿದೆ. ಮತ್ತು, ಹಿರಿ-ಬೂರ್ಜ್ವಾಗಳು, ಸಂಬಳದಾರರು ಮತ್ತು ವೃತ್ತಿಪರರ ಮೇಲ್ಪದರಗಳಿಗೆ ಸೇರಿದವರು ತಮ್ಮ ಸ್ವಾರ್ಥಕ್ಕಾಗಿ ದುಡಿಯುವ ಜನರ ಹಿತಾಸಕ್ತಿಗಳನ್ನು ಬಲಿ ಕೊಡುವುದರಿಂದ ವಸಾಹತುಶಾಹಿ-ವಿರೋಧಿ ವರ್ಗಮೈತ್ರಿ ಮುರಿದುಹೋಗಿರುವುದು ಸಾಮ್ರಾಜ್ಯಶಾಹಿಯ ಎದುರು ಈ ಶರಣಾಗತಿಯ ತಳದಲ್ಲಿದೆ.
ಆದರೆ, ವಸಾಹತುಶಾಹಿ-ವಿರೋಧಿ ವರ್ಗ ಮೈತ್ರಿಯಲ್ಲಿನ ಈ ಬಿರುಕು ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲೇ ಕಾಣಿಸಿಕೊಂಡಿತ್ತು. ಹಾಗೆ ನೋಡಿದರೆ, ನವ-ಉದಾರವಾದಿ ಆರ್ಥಿಕ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಕ್ರಮವೇ ಈ ಬಿರುಕಿನ ಒಂದು ಅಭಿವ್ಯಕ್ತಿಯಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹಿಂದೆ ನವ-ಉದಾರವಾದಿ ಆರ್ಥಿಕ ನೀತಿಗಳ ಅಳವಡಿಕೆಯೊಂದಿಗೆ ಆರಂಭವಾದ ದುಡಿಯುವ ಜನರ ಕುರಿತ ನಿರ್ದಯ ನಿರ್ಲಕ್ಷ್ಯದ ಈ ಪ್ರವೃತ್ತಿಯನ್ನು ಫ್ಯಾಸಿಸ್ಟ್ ತೆರನ ಶಕ್ತಿಗಳ ನೇತೃತ್ವದ ಸರ್ಕಾರ ಮುಂದೊಯ್ಯುತ್ತಿದೆ..
ಹಿಂದಿನ ಪ್ರಧಾನ ಮಂತ್ರಿಯೊಬ್ಬರು, ಒಂದು ಬೂರ್ಜ್ವಾ-ನೇತೃತ್ವದ ಆಳ್ವಿಕೆಯ ಮುಖ್ಯಸ್ಥರಾಗಿದ್ದರೂ, ಅಮೆರಿಕನ್ ಒತ್ತಡವವನ್ನು ಎಷ್ಟು ಗಟ್ಟಿಯಾಗಿ ಎದುರಿಸಿ ನಿಂತಿದ್ದರೆಂದರೆ, ಒಬ್ಬ ಅಮೆರಿಕನ್ ಅಧ್ಯಕ್ಷರು ತನಗೆ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಭಯವಾಗುತ್ತಿತ್ತು ಎಂದು ಒಪ್ಪಿಕೊಂಡಿದ್ದರು. ಇದಕ್ಕೂ ಇಂದಿನ ಮೋದಿ ಸರ್ಕಾರವು ಅಮೆರಿಕ ಸಾಮ್ರಾಜ್ಯಶಾಹಿಯ ಮುಂದೆ ಮಂಡಿಯೂರುತ್ತಿರುವುದಕ್ಕೂ ಎಷ್ಟು ತೀಕ್ಷ್ಣವಾದ ವ್ಯತ್ಯಾಸವಿದೆ ಎಂಬುದನ್ನು ಕಾಣಬಹುದು. ಈ ಎರಡು ಸನ್ನಿವೇಶಗಳ ನಡುವಿನ ವ್ಯತ್ಯಾಸವೆಂದರೆ, ಆಕೆ ಒಂದು ನಿಯಂತ್ರಿತ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಯಾಗಿದ್ದರು. ಅದು ವಸಾಹತುಶಾಹಿ ವಿರೋಧಿ ಹೋರಾಟದಿಂದ ಹೊರಹೊಮ್ಮಿದ್ದ ಅರ್ಥವ್ಯವಸ್ಥೆಯಾಗಿತ್ತು. ಅದು ಬೂರ್ಜ್ವಾ ಅಭಿವೃದ್ಧಿಯನ್ನು ತರುತ್ತಿದ್ದರೂ, ದುಡಿಯುವ ಜನಗಳ ಹಿತಾಸಕ್ತಿಗಳನ್ನು ಉಪೇಕ್ಷಿಸಿರಲಿಲ್ಲ.
ಹುರ‍್ರೇ! ಭಾರತದಿಂದ ಅಮೆರಿಕಾಕ್ಕೆ18-0 ಸೋಲು!

ವ್ಯಂಗ್ಯಚಿತ್ರ: ಸಜಿತ್ ಕುಮಾರ್,ಡೆಕ್ಕನ್ ಹೆರಾಲ್ಡ್
ಇದನ್ನೂ ನೋಡಿ : “ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ಪ್ರಚಾರ: ನಿಜವೇ, ರಾಜಕೀಯ ಆಟವೇ?” – ಶಿವಸುಂದರ್ Janashakthi Media
