ದೆಹಲಿಯಲ್ಲಿ ಭಾರತ ಏರ್ಪಡಿಸಿದ್ದ ಎ ಐ (ಕೃತ್ರಿಮ ಬುದ್ಧಿಮತ್ತೆ) ಅಂತರ್ರಾಷ್ಟ್ರೀಯ ಶೃಂಗದಲ್ಲಿ ಗಾಲಗೋಟಿಯಾ ವಿಶ್ವವಿದ್ಯಾಲಯದ ಸ್ಟಾಲ್ ನಲ್ಲಿ ಒಂದು ರೊಬೋಟ್ ನಾಯಿಯನ್ನು ಪ್ರದರ್ಶಿಸಲಾಯಿತು. ವಿಶ್ವವಿದ್ಯಾಲಯ ಇದು ತಮ್ಮದೇ ನವೋನ್ಮೇಶ ಎಂಬಂತೆ ಬಿಂಬಿಸಿತು ಮತ್ತು ಈ ನಾಯಿ ʼಓರಾಯನ್ʼ ಎಂಬ ಹೆಸರನ್ನು ಹೊಂದಿದೆ ಎಂದು ಹೇಳಲಾಯಿತು. ಆದರೆ ಬಲ್ಲವರು ಇದು ಚೀನಾ ದೇಶದ ಯುನಿಟ್ರೀ ಕಂಪನಿಯ “ಯುನಿಟ್ರೀ ಜಿಒ2” ರೋಬೊಟ್ ಇದನ್ನು ಕಂಪನಿ 2ರಿಂದ 3 ಲಕ್ಷ ರೂಪಾಯಿಗಳಿಗೆ ಮಾರುತ್ತಿದೆ ಎಂದು ಗುರುತಿಸಿದರು. ಅಂತರ್ರಾಷ್ಟ್ರೀಯ
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳ ಮುಂದೆ ಮರ್ಯಾದೆ ಹೋಗುವ ಸ್ಥಿತಿ ಅರಿತ ಸಂಘಟಕರು ವಿಶ್ವವಿದ್ಯಾಲಯವನ್ನು ಈ ಯಂತ್ರ ನಾಯಿಯನ್ನು ಪ್ರದರ್ಶನದಿಂದ ತಗೆಯಲು ಹೇಳಿ ತೆಗೆಸಿದರು. ಆದರೂ ಇದು ದೊಡ್ಡ ಸುದ್ದಿಯಾಯಿತು. ವಿಶ್ವವಿದ್ಯಾಲಯ ಇದು “ತಮ್ಮ ಸೃಷ್ಟಿಯಲ್ಲ ಎಲ್ಲೋ ಸಂವಹನದ ಪ್ರಮಾದ ಆಗಿದೆ” ಎಂದು ನುಣುಚಿಕೊಳ್ಳಲು ನೋಡಿತು. ಆದರೆ ಈ ವಿವಾದ ಮಾಡಬಹುದಾದ ಅನಾಹುತವನ್ನು ಮಾಡಿತ್ತು. ಘಟನೆ ಈ ಶೃಂಗದ ಸಂಘಟನೆಯ ಹಿಂದಿನ ಅಪ್ರಾಮಾಣಿಕತೆಯನ್ನು ಬಿಚ್ಚಿ ಪ್ರದರ್ಶಿಸಿತ್ತು.
ಗಾಲಗೋಟಿಯಾ ವಿಶ್ವವಿದ್ಯಾಲಯ ಮೋದಿಯವರ ಭಕ್ತ ಸುನಿಲ್ ಗಾಲಗೋಟಿಯಾ ಸ್ಥಾಪಿಸಿದ್ದು ಮತ್ತು ಈತ ತನ್ನ ಈ ವಿಶ್ವವಿದ್ಯಾಲಯ, ಮೋದಿಯವರ “ವಿಕಸಿತ ಭಾರತ” ಕನಸನ್ನು ನನಸು ಮಾಡುವ ಉದ್ದೇಶಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಲೇ ಬಂದವರು. ಇಂತಹ ವಿಶ್ವವಿದ್ಯಾಲಯಕ್ಕೆ ಮೋದಿ ಸರ್ಕಾರದ ಬೆಂಬಲ ವಿವಿಧ ರೀತಿಗಳಲ್ಲಿ ದೊರೆಯುತಿತ್ತು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶೃಂಗ ನಡೆಸುವಾಗ ಹಿಂದುತ್ವದ “ಸುಳ್ಳು ವಿ಼ಜ್ಞಾನ” ಜಗತ್ತಿನಾದ್ಯಂತ ಹರಡಿಲ್ಲ ಎಂಬುದು ಸಂಘಟಕರಿಗೆ ಗೊತ್ತಿರಬೇಕಾಗಿತ್ತು. ಮತ್ತು ಅಂತಹ ತಿಳುವಳಿಕೆ ಕೊಡಮಾಡುವ ಎಚ್ಚರಿಕೆಗಳು ಆಗ ಅವರಲ್ಲಿ ಜಾಗೃತವಾಗಿರುತ್ತಿತ್ತು. ಇಂತಹ ಅಪದ್ಧಗಳಿಗೆ ಅವಕಾಶವಿರುತ್ತಿರಲಿಲ್ಲ.
ಇದನ್ನೂ ಓದಿ: ರಾಜ್ಯಪಾಲರಿಂದ ನಾನು ಗೌರವ ಸ್ವೀಕರಿಸಲು ಸಿದ್ಧನಿರಲಿಲ್ಲ: ಡಾ.ಜಿ.ರಾಮಕೃಷ್ಣ
ಹಿಂದುತ್ವದ “ಸುಳ್ಳು ವಿ಼ಜ್ಞಾನ” ದಾಸರ ಯಡವಟ್ಟು
ಆದರೆ ಹಿಂದುತ್ವದ “ಸುಳ್ಳು ವಿ಼ಜ್ಞಾನ” ವಿಚಾರಗಳ ದಾಸರಾದವರಿಗೆ ನಮ್ಮಲ್ಲಿ ಬಹಳ ಹಿಂದೆಯೇ ವಿಮಾನ ವಿ಼ಜ್ಞಾನ ಇತ್ತು, ಅದು ರಾಮಾಯಣದ ಪುಷ್ಪಕ ವಿಮಾನದ ರೂಪದಲ್ಲಿತ್ತು, ಪ್ಲಾಸ್ಟಿಕ್ ಸರ್ಜರಿ ಗಣಪತಿಗೆ ಆನೆಯ ತಲೆ ಜೋಡಿಸುವ ಕೌಶಲ್ಯ/ ತಂತ್ರಜ್ಞಾನದ ರೂಪದಲ್ಲಿತ್ತು, ಕಾಂಡಕೋಶ ತಂತ್ರಜ್ಞಾನ ಕೌರವರ ಜನನದ ವಿಷಯದಲ್ಲಿ ಇತ್ತು ಇತ್ಯಾದಿ ಭ್ರಮೆಗಳು ಆಳವಾದ ಬೇರುಗಳನ್ನು ಬಿಟ್ಟಿವೆ.
ಇದಲ್ಲದೆ ಮೋದಿಯವರ ವರ್ಚಸ್ಸು ಹೆಚ್ಚಿಸುವ ಒಂದೇ ಗುರಿ ಹೊಂದಿರುವ ಇವರಿಗೆ ಜಾಗತಿಕ ಸತ್ಯಗಳು ಕಾಣಿಸಲಿಕ್ಕಿಲ್ಲ. ಭಾರತ “ವಿಶ್ವಗುರು” ಎಂಬ ಭ್ರಮೆ ಹೊಂದಿರುವವರಿಗೆ ಇಂತಹ ಶೃಂಗಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಅರಿವೂ ಇರುವಂತೆ ಕಾಣಿಸುವುದಿಲ್ಲ.
ಇಷ್ಟೆಲ್ಲ ನಡೆದ ಮೇಲೆ ಗಾಲಗೋಟಿಯಾ ವಿಶ್ವವಿದ್ಯಾಲಯ ಇದೊಂದು ತಪ್ಪು ಎಂದು ಒಪ್ಪಿಕೊಂಡರೂ ಇದು ಸಂವಹನದ ಪ್ರಮಾದದಿಂದ ಆಗಿದೆ ಎಂದಿತು. ಅಲ್ಲದೆ ಇದರ ಹೊರೆಯನ್ನು ನೆಹಾ ಎಂಬ ಪ್ರಾಧ್ಯಾಪಕಿಯ ತಲೆಗೆ ಹೊರಿಸಲಾಯಿತು. ಈಕೆ ರೊಬೋನಾಯಿ ತಮ್ಮ ವಿಶ್ವವಿದ್ಯಾಲಯದ ಸೃಷ್ಟಿ ಎಂಬಂತೆ ಬಿಂಬಿಸಿದ್ದಂತೂ ನಿಜ. ಆದರೆ ಆಕೆಯ ಮೇಲೆ ಯಾವುದೇ ಶಿಸ್ತಿನ ಕ್ರಮದ ಮಾತಿಲ್ಲ. ಮುಂದೆ ಇಂತಹ ತಪ್ಪುಗಳು ಆಗದಂತೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪರಿವೆಯ ಮಾತು ಯಾವ ಜವಾಬ್ದಾರಿಯ ದಿಕ್ಕಿನಿಂದಲೂ ಬರಲಿಲ್ಲ.
ತಳಹಿಡಿದ ವಿಶ್ವವಿದ್ಯಾಲಯಗಳ ಮಟ್ಟ
ಗಾಲಗೋಟಿಯಾ ವಿಶ್ವವಿದ್ಯಾಲಯವನ್ನು ಈ ಶೃಂಗದೊಳಗೆ ತಂದವರಾರು ಎಂಬುದಕ್ಕೂ ಸರಿಯಾದ ವಿವರಣೆಯಿಲ್ಲ. ಕೇಂದ್ರದ ಮಂತ್ರಿಯೊಬ್ಬರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ನೀಡಿದ್ದಾರೆ ಎಂಬುದಕ್ಕೆ ದಾಖಲೆಗಳು ಇಲ್ಲವಂತೆ. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಪ್ರಮಾದವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.
ಅಂದರೆ, ಈ ವಿಶ್ವವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳೂ ವಿಜ್ಞಾನ ಕಲಿಕೆ ಮತ್ತು ಬೆಳೆಸಲು ಬೇಕಾದ ವಸ್ತುನಿಷ್ಠತೆ ಕಲಿಯದವರು ಎಂಬುದು ಸ್ಪಷ್ಟ. ಅಲ್ಲದೇ ವಿದ್ಯಾರ್ಥಿಗಳನ್ನು ಇಂತಹ ರಾಜಕೀಯ ಲಾಭಗಳಿಗೆ ಬಳಸುವ ಕೆಟ್ಟ ಸಂಪ್ರದಾಯ ಬೆಳೆದುಬಂದಿರುವುದು ದುರದೃಷ್ಟಕರ. ಜಾಗತಿಕವಾಗಿ ನಡೆವ ವಿಶ್ವವಿದ್ಯಾಲಯಗಳ ಗುಣಮಟ್ಟದ ಮಾಪನಗಳಲ್ಲಿ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬಹಳ ಕಡಿಮೆ ಸಂಖ್ಯೆಯವು ಸ್ಥಾನ ಪಡೆಯುತ್ತವೆ ಎಂದರೆ ಇಂತಹ ಧೋರಣೆಗಳೇ ಕಾರಣ ಎಂದು ಹೇಳಬುದೇನೋ!
ದೇಶದ ಮಾನ ಹರಾಜು
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶೃಂಗ ನಡೆಸುವ ಸರ್ಕಾರ ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯುತ ನಡೆವಳಿಕೆ ತೋರಬೇಕಾಗಿತ್ತು. ಕೇಂದ್ರದ ಈ ಸರ್ಕಾರಕ್ಕೆ ದೇಶದ ಬಗೆಗೆ ಕನಿಷ್ಠ ಅಂತಹ ಕಾಳಜಿಯೂ ಇರುವಂತೆ ಕಾಣಿಸುವುದಿಲ್ಲ.
ವಿಜ್ಞಾನದ ಒಂದು ಶೃಂಗ ನಡೆಸುವವರಿಗೆ ಅದನ್ನು ರಾಜಕೀಯ ಸಭೆ ಮಾಡಬಾರದು. ಇದು ಪರಿಣತರು ನಡಸುವ ಶೃಂಗ ಸಭೆ. ಆದ್ದರಿಂದ ಅದಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಅದಕ್ಕೆ ತಕ್ಕಂತೆ ಅದನ್ನು ನಡೆಸಬೇಕು ಎಂಬ ತಿಳುವಳಿಕೆ ಮತ್ತು ಇದು ಅತ್ಯಂತ ಗಂಭೀರ ವಿಷಯವಾದ್ದರಿಂದ ಅಂತಹ ಗಂಭೀರ ವಾತಾವರಣದಡಿ ಇದನ್ನು ನಡೆಸಿ ವಿಷಯಕ್ಕೆ ತಕ್ಕ ಘನತೆ ತಂದುಕೊಡಬೇಕೆಂಬ ಕನಿಷ್ಠ ಕಾಳಜಿ ಇರಬೇಕಾಗಿತ್ತು.
ಅದಿಲ್ಲದೆ ಕೇಂದ್ರದ ಘನ ಸರ್ಕಾರ ಮತ್ತು ಮೋದಿಯವರ ವರ್ಚಸ್ಸು ವೃದ್ಧಿ ಮಾಡುವ ದುರ ಹೇತು ಮಾತ್ರ ಇದರ ಹಿಂದಿನ ಮನಸ್ಸುಗಳಲ್ಲಿ ಕೆಲಸ ಮಾಡಿರುವಂತೆ ಕಾಣುತ್ತದೆ. ದೇಶ ಇದರಿಂದಾಗಿ ಜಾಗತಿಕ ಅಪಖ್ಯಾತಿ ಅನುಭವಿಸುವಂತೆ ಆಗಿದೆ.
ಇದನ್ನೂ ನೋಡಿ: “ಯು.ಎಸ್. ಸಾಮ್ರಾಜ್ಯಶಾಹಿ: ಓದುಗರ ಅಲೆ ಎಬ್ಬಿಸಿದ ಪುಸ್ತಕ” Janashakthi Media
