ಹಂಚಿಕೆಯಾಗದ ಆಶ್ರಯ ನಿವೇಶನ; ಸ್ವಂತ ಸೂರಿಗಾಗಿ 26 ವರ್ಷಗಳಿಂದ ಕಾಯುತ್ತಿರುವ 62 ದಲಿತ ಕುಟುಂಬಗಳು

ಬೇಗೂರು: ಗ್ರಾಮದಲ್ಲಿ ವಾಸವಿರುವ ಅರವತ್ತೆರಡು ದಲಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರಾಗಿ, ಜಾಗ ಗುರುತು ಮಾಡಿದ್ದರೂ ಕಳೆದ ಇಪ್ಪತ್ತಾರು ವರ್ಷಗಳಿಂದಲೂ ನಿವೇಶನ ಹಂಚಿಕೆಯಾಗಿಲ್ಲ ಎಂದು ಸಂಚಾಲಕ ವೈ. ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಲ್ಲ ನಾಳೆ ನಿವೇಶನ ಸಿಗಬಹುದೆಂದು ನೆಲೆ ಕಾಣದ ದಲಿತ ಕುಟುಂಬಗಳು ಶಬರಿಯಂತೆ ಕಾಯುತ್ತಾ ಕುಳಿತಿವೆಯಾದರೂ, ಸರ್ಕಾರಿ ಆಡಳಿತ ದಲಿತರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡಿದೆ. 62 ಕುಟುಂಬಗಳ ಪೈಕಿ ಸುಮಾರು 30 ಪೌರಕಾರ್ಮಿಕ ಕುಟುಂಬಗಳು.

ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಗ್ರಾಮದ ಸರ್ವೆ ನಂ.302ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಆಶ್ರಯ ನಿವೇಶನಕ್ಕಾಗಿ ಅಂದಿನ ಜಿಲ್ಲಾಧಿಕಾರಿಗಳು 1994ರಲ್ಲೇ ಮಂಜೂರು ಮಾಡಿದ್ದರು. ಆದರೆ ಅಂದು ತಹಶೀಲ್ದಾರ್ ರವರು ನಿವೇಶನ ಹಂಚಿಕೆ ಮಾಡಲು ಆಸಕ್ತಿ ತೋರಲಿಲ್ಲ ಎಂದರು.

ಇದನ್ನೂ ಓದಿ: ರಾಜ್ಯಪಾಲರಿಂದ ನಾನು ಗೌರವ ಸ್ವೀಕರಿಸಲು ಸಿದ್ಧನಿರಲಿಲ್ಲ: ಡಾ.ಜಿ.ರಾಮಕೃಷ್ಣ

ಸರ್ವೆ ನಂ. 302ರ 3 ಎಕರೆ 33 ಗುಂಟೆ ಜಮೀನಿನಲ್ಲಿ 2 ಎಕರೆ 23 ಗುಂಟೆ ಜಮೀನು ಸರ್ಕಾರಿ ಗುಂಡುತೋಪು ಎಂದು ಪಹಣಿ ದಾಖಲಾತಿ ಇದೆ. ಸದರಿ ಜಮೀನಿನಲ್ಲಿ ಬೇಗೂರು ಪೊಲೀಸ್ ಠಾಣೆ ಕಟ್ಟಡಕ್ಕಾಗಿ 1 ಎಕರೆ 10 ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ. ಉಳಿದ 1 ಎಕರೆ 32 ಗುಂಟೆ ಜಮೀನನ್ನು ಬೇಗೂರು ಗ್ರಾಮದ ನಿವೇಶನ ರಹಿತ 62 ದಲಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 20*30 ಅಡಿ ನಿವೇಶನವನ್ನು ಮಂಜೂರು ಮಾಡಲಾಗಿತ್ತು.

ಮಂಜೂರಾತಿ ಆದೇಶದ ಸಂದರ್ಭದಲ್ಲಿ ಬೇಗೂರು ಗ್ರಾಮವು ಪಂಚಾಯತಿ ವ್ಯಾಪ್ತಿಯಲ್ಲಿತ್ತು. ತಹಶೀಲ್ದಾರ್ ಅವರು, ಆಗಿನ ಬ್ಲಾಕ್‌ ಅಭಿವೃದ್ಧಿ ಅಧಿಕಾರಿಯವರಿಗೆ ಪತ್ರ ಬರೆದು ಈ ಬಗ್ಗೆ ಸಮಗ್ರ ವರದಿ ಕೇಳಿದ್ದರು. ಅದರಂತೆ ಪರಿಶೀಲನೆ ನಡೆಸಿ ಸದರಿ ಜಮೀನಿನಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಹಕ್ಕುಪತ್ರ ನೀಡಬಹುದೆಂದು ಬ್ಲಾಕ್ ಬಿ.ಡಿ.ಓ ವರದಿ ನೀಡಿದ್ದರು. ಆದಾಗ್ಯೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿಲ್ಲ. ನಿವೇಶನ ಹಂಚಿಕೆ ಮಾಡಲು ಕಾನೂನಿನ ಯಾವುದೇ ತೊಡಕಿಲ್ಲದಿದ್ದರೂ ಹಂಚಿಕೆ ಮಾಡಲು ತಾಲ್ಲೂಕು ಆಡಳಿತ ಆಸಕ್ತಿ ತೋರಲಿಲ್ಲ. ಈ ಮಧ್ಯೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಬೇಗೂರು ಗ್ರಾಮ, 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿತು ಎಂದು ತಿಳಿಸಿದರು.

ಬೇಗೂರು ಗ್ರಾಮ ಬಿಬಿಎಂಪಿಗೆ ಒಳಪಟ್ಟ ಮೇಲೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ, ಬದಲಾಗಿ ‘ತಹಶೀಲ್ದಾರ್ ಮೂಲಕವೇ ಹಂಚಿಕೆ ಮಾಡಿಕೊಳ್ಳಿ’ ಎಂದು ಈ ಅವಧಿಯಲ್ಲಿದ್ದ ಬಹುತೇಕ ಜಂಟಿ ಆಯುಕ್ತರುಗಳು ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಪ್ರಯತ್ನ ನಡೆಸಿದರೇ ಹೊರತು, ಬಡ ದಲಿತರ ಬಗ್ಗೆ ಕನಿಷ್ಟ ಕರುಣೆ ತೋರಲಿಲ್ಲ.

ಸರ್ಕಾರಿ ಆಡಳಿತದ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಫಲಾನುಭವಿಗಳಾದ ಮುನಿಯಪ್ಪ. ಬಿ.ಸಿ.ವೆಂಕಟೇಶ್, ಆಂಜಿನಪ್ಪ, ಕುಮಾರ್ ಎಂ., 2022ರಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮಂಜೂರಾತಿ ಆಗಿರುವ ನಿವೇಶನಗಳನ್ನು ಫಲಾನುಭವಿಗಳಿಗೆ ಕೂಡಲೇ ಹಂಚಿಕೆ ಮಾಡಬೇಕೆಂದು ಜೂನ್ 2024ರಲ್ಲಿ ಆದೇಶಿಸಿತ್ತು ಎಂದರು.

ನಿವೇಶನ ಮಂಜೂರಾದ 1994 ವರ್ಷದಿಂದ ಹೈಕೋರ್ಟ್ ಆದೇಶದ 2024ರ ಅವಧಿಯಲ್ಲಿ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳಿಗೆ, ಶಾಸಕರಿಗೆ ಹತ್ತಾರು ಬಾರಿ ಮನವಿ ಪತ್ರಗಳನ್ನು ನೀಡಿ ನಿವೇಶನ ಹಂಚಿಕೆ ಮಾಡುವಂತೆ ಕೋರಿ ಇಪ್ಪತ್ತು ವರ್ಷ ಪಾದ ಸವೆಸಿದ ದಲಿತ ಕುಟುಂಬಗಳು, ಅಂತಿಮವಾಗಿ ನ್ಯಾಯಕ್ಕಾಗಿ ನ್ಯಾಯಾಲಯ ಮೊರೆ ಹೋಗಿದ್ದರು. ನ್ಯಾಯಾಲಯ ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಆದೇಶ ನೀಡಿತು.

ಆದರೆ ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ಕೊಡದ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಲು ಯಾವುದೇ ಆಸಕ್ತಿ ತೋರಲಿಲ್ಲ. ಇದೀಗ ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಹೋರಾಟ ಮುಂದುವರಿಸಿದ್ದಾರೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಬೆಂಗಳೂರು ಆದ ನಂತರ ಬೇಗೂರು ಪ್ರದೇಶವು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಲಯ 1 ಕ್ಕೆ ಸೇರಿಸಲಾಗಿದೆ. ಆಡಳಿತ ಬದಲಾದಂತೆ ಹೊಸದಾಗಿ ಬಂದ ಎಲ್ಲ ಅಧಿಕಾರಿಗಳು ಪುಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿವೇಶನ ರಹಿತ ಸಂತ್ರಸ್ತರನ್ನು ದಿಕ್ಕುತಪ್ಪಿಸುತ್ತಲೇ ಬಂದಿದ್ದಾರೆ.

ಬಿಬಿಎಂಪಿ ಯಿಂದ ಜಮೀನು ಒತ್ತುವರಿ:

ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ನಿವೇಶನಕ್ಕಾಗಿ ಮೀಸಲಿಟ್ಟ ಜಮೀನನ್ನು ಒತ್ತುವರಿ ಆಗುತ್ತಲೇ ಇದೆ. ಎರಡು ವರ್ಷಗಳ ಹಿಂದೆ ಜಿಬಿಎ ಆಗುವುದಕ್ಕೂ ಮೊದಲು ಬಿಬಿಎಂಪಿ ಬೊಮ್ಮನಹಳ್ಳಿ ವಲಯದವರು ಸದರಿ ಜಾಗವನ್ನು ಘನತ್ಯಾಜ್ಯ ವಿಂಗಡಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮನವಿ ಮಾಡಿ ತೆರವುಗೊಳಿಸಬೇಕೆಂದು ಕೋರಿದ್ದರೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಮತ್ತೊಂದೆಡೆ ಬೇಗೂರು ಪೊಲೀಸ್‌ ಠಾಣೆಯವರು ಪೂರ್ತಿ ಜಾಗ ಪೊಲೀಸ್ ಠಾಣೆಗೆ ಸೇರಿದ್ದು ಎಂದು ತಮ್ಮ ವಶಕ್ಕೆ ಪಡೆಯಲು ಯತ್ನ ನಡೆಸಿದ್ದಾರೆ.

ಹೀಗೆ ಬಡ ದಲಿತ ಕುಟುಂಬಗಳ ಸೂರಿಗಾಗಿ ಕೊಟ್ಟ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ ಹಂಚಬೇಕಿದ್ದ ತಾಲ್ಲೂಕು ಆಡಳಿತ ನಿರ್ಲಕ್ಷ್ಯದಿಂದಾಗಿ ಇಂದು ಜಮೀನು ಒತ್ತುವರಿ ಆಗುತ್ತಿದೆ. ಭೂಗಳ್ಳರು ಈ ಜಮೀನಿನ ಮೇಲೆ ಕಣ್ಣು ಹಾಕಿದ್ದು, ಇದು ಭೂಗಳ್ಳರ ಪಾಲಾಗುವುದಕ್ಕೂ ಮೊದಲು ಅರ್ಹ ದಲಿತ ಕುಟುಂಬಗಳಿಗೆ ನಿವೇಶನ ಸೇರಬೇಕಿದೆ. ಇದಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ರವರು ಅತೀ ಶೀಘ್ರದಲ್ಲಿ ಕ್ರಮಕೈಗೊಂಡು ನಿವೇಶನ ಹಂಚಿಕೆಗೆ ಮುಂದಾಗಬೇಕು. ಮಾನ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ನಿವೇಶನ ಹಂಚುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಬೇಕೆಂದು ಈ ಪತ್ರಿಕಾಗೋಷ್ಟಿಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.

ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಇನ್ನು ಮುಂದೆಯೂ ನಿರ್ಲಕ್ಷ್ಯ ತೋರಿದ್ದಲ್ಲಿ 62 ಕುಟುಂಬಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ.

ಇದನ್ನೂ ನೋಡಿ: ಡಾ. ರಾಮ ಮನೋಹರ ಲೋಹಿಯಾ ವಿಚಾರಧಾರೆ |ಪ್ರೊ. ಗಂಗಾಧರ ಬಿ.ಎಂ Janashakthi Media

Donate Janashakthi Media

Leave a Reply

Your email address will not be published. Required fields are marked *