ಕಸಾಪ ಚುನಾವಣೆಗಳಲ್ಲಿ ಸುಧಾರಣೆ ಅಗತ್ಯ: ಕೆ.ಮರುಳಸಿದ್ದಪ್ಪ ಸರ್ಕಾರಕ್ಕೆ ಆಗ್ರಹ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿದಿಲ್ಲ. ‘ಬದಲಾದ ಕಾಲಘಟ್ಟದಲ್ಲಿ ಈ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ವ್ಯವಸ್ಥೆಯನ್ನು ಬದಲಾಯಿಸಬೇಕು’ ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಕಸಾಪ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ‘ಜೈನ ಧರ್ಮ 63 ಒಳನೋಟಗಳು’ ಕೃತಿಗೆ ‘ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ’, ‘ಸುಧಾ’ ವಾರಪತ್ರಿಕೆ ಮುಖ್ಯ ಉಪಸಂಪಾದಕಿ ಉಮಾ ಅನಂತ್‌ ಅವರ ‘ಆರೋಗ್ಯ ಮಾಹಿತಿ ಸ್ವಸ್ಥ ಬದುಕಿಗೆ ಸ್ಫೂರ್ತಿ’ ಕೃತಿಗೆ ‘ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ’ ಸೇರಿ 2024ನೇ ಸಾಲಿನ 52 ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಇದನ್ನೂ ಓದಿ : ಕೊಲೆ ಪ್ರಕರಣ: ಬೈರತಿ ಬಸವರಾಜ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಈ ವೇಳೆ ಮಾತನಾಡಿದ ಪ್ರಶಸ್ತಿಗಳ ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದ ಮರುಳಸಿದ್ದಪ್ಪ, ಈ ಸಂಸ್ಥೆಗೆ ಅಧ್ಯಕ್ಷರಾಗಿ ಬಂದವರೊಬ್ಬರು, ಪಂಪ ಮಹಾಕವಿ ರಸ್ತೆಯ ಹೆಸರನ್ನು ಸಾಹಿತ್ಯ ಪರಿಷತ್ತು ರಸ್ತೆಯೆಂದು ಬದಲಾಯಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.  ನೂರಾರು ಸಂಖ್ಯೆಯಲ್ಲಿ ಸದಸ್ಯರಿದ್ದಾಗ ಕಸಾಪ ಇಡೀ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯಂತೆ ಕೆಲಸ ಮಾಡುತ್ತಿತ್ತು. ಈಗ ಅದು ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿದಿಲ್ಲ. ಇದು ಪರಿಷತ್ತಿನ ಅವನತಿ ಸೂಚಿಸಲಿದೆ’ ಎಂದರು.

ಜನರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ, ವರ್ಷಕ್ಕೆ ₹80 ಕೋಟಿಯಿಂದ ₹100 ಕೋಟಿಯನ್ನು ಸರ್ಕಾರವು ಪರಿಷತ್ತಿಗೆ ಒದಗಿಸುತ್ತಿದೆ. ‘ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹಣವುಳ್ಳವರು ಮಾತ್ರ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ₹25 ಲಕ್ಷದಿಂದ ₹30 ಲಕ್ಷ ವೆಚ್ಚ ಮಾಡುವವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಲು, 4.5 ಲಕ್ಷ ಜನ ಮತ ಹಾಕುವ ವ್ಯವಸ್ಥೆ ಕಿತ್ತು ಹಾಕಬೇಕು. ಸರ್ಕಾರ ಪರ್ಯಾಯ ಮಾರ್ಗವನ್ನು ಹುಡುಕಬೇಕು’ ಎಂದು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ‘ಸಾಹಿತ್ಯ ಮತ್ತು ಕಲೆಯು ಕಟ್ಟುವ ಕಡೆ ಹೋಗಬೇಕೆ ಹೊರತು, ಕೆಡವುವ ಕಡೆಗೆ ಹೋಗಬಾರದು. ಮಕ್ಕಳಿಗೆ ಮಣ್ಣಿನ ವಾಸನೆ, ಮಳೆಯ ವಾಸನೆ ಪರಿಚಯಿಸಬೇಕು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಜಾಗತೀಕರಣದ ನಂತರ ಅನೇಕ ಭಾಷೆ ಬಿಕ್ಕಟ್ಟು ಎದುರಿಸಿದವು. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು, ಲೇಖಕರ ಮೇಲೆ ದೊಡ್ಡ ಜವಾಬ್ದಾರಿಯಿದೆ’ ಎಂದು ಹೇಳಿದರು.

ಕಸಾಪ ಆಡಳಿತಾಧಿಕಾರಿ ಕೆ.ಎಂ. ಗಾಯಿತ್ರಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಉಪಸ್ಥಿತರಿದ್ದರು.

ಇದನ್ನೂ ನೋಡಿ : “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *