“ವಿದ್ಯಾರ್ಥಿಗಳು ,ಅಧ್ಯಾಪಕರ ಸಾಮೂಹಿಕ ಪ್ರಯತ್ನ ಐಕ್ಯತೆಯಿಂದ ಮಾತ್ರ ಸಾಧ್ಯ”
ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮದರ್ಶಿತ್ವ ಉತ್ತೇಜನೆ ನಿಯಮಗಳು, 2026” ರಲ್ಲಿನ ಗಂಭೀರ ಅಸಮರ್ಪಕತೆಗಳನ್ನು ತುರ್ತಾಗಿ ಸರಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ. ಯುಜಿಸಿ
ಯುಜಿಸಿ-ಸಂಯೋಜಿತ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ತಾರತಮ್ಯವನ್ನು ಪರಿಹರಿಸಲು “ಸಮದರ್ಶಿತ್ವ ಸಮಿತಿ”(ಇಕ್ವಿಟಿ ಕಮಿಟಿ) ರಚಿಸುವುದನ್ನು ಈ ನಿಬಂಧನೆಗಳು ಕಡ್ಡಾಯಗೊಳಿಸುತ್ತವೆ. ಅಂತಹ ಸಮಿತಿಯ ರಚನೆಯು ಸಕಾರಾತ್ಮಕ ಹೆಜ್ಜೆಯಾಗಿದ್ದರೂ, ಅದರ ಅನುಷ್ಠಾನದ ನಿಕಟ ಮೇಲ್ವಿಚಾರಣೆ ಇರಬೇಕು. ಈ ನಿಬಂಧನೆಗಳು ಸಂವಿಧಾನದ 14 ನೇ ವಿಧಿಯಿಂದ ಬಂದಿವೆ ಮತ್ತು 2012 ರ ನಿಬಂಧನೆಗಳಂತೆ ಸುಪ್ರೀಂ ಕೋರ್ಟ್ನ ಅವಲೋಕನಗಳಿಗೆ ಸ್ಪಂದಿಸಿದ ಒಂದು ನಡೆಯಾಗಿದೆ. ಆದ್ದರಿಂದ ಅವುಗಳನ್ನು ಕಾಯಾ,ವಾಚಾ ಜಾರಿಗೊಳಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.
ಆದರೆ, ಈ ನಿಬಂಧನೆಗಳು ವಿಶ್ವವಿದ್ಯಾಲಯಗಳು ಮತ್ತು ಅವುಗಳಿಗೆ ಸಂಯೋಜಿತವಾದ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿವೆ. ಐಐಟಿ, ಐಐಎಂ, ಎಐಐಎಂಎಸ್ ಮುಂತಾದ ಕೇಂದ್ರೀಯ ಸಂಸ್ಥೆಗಳಲ್ಲಿ ಈ ನಿಬಂಧನೆಗಳನ್ನು ಜಾರಿಗೊಳಿಸಲಾಗುವುದಿಲ್ಲ. ಸರ್ಕಾರವು ಈ ಗಂಭೀರ ಲೋಪವನ್ನು ಪರಿಶೀಲಿಸಬೇಕಾಗಿದೆ ಮತ್ತು ಈ ಸಂಸ್ಥೆಗಳಿಗೂ ಪರಿಣಾಮಕಾರಿ ಸಮದರ್ಶಿತ್ವ ಕಾರ್ಯವಿಧಾನಗಳನ್ನು ವಿಸ್ತರಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: ವಿಬಿ-ಜಿರಾಮ್ (ಜಿ): “ಸಮರ್ಥಿಸಿಕೊಳ್ಳಲಾಗದನ್ನು ಸಮರ್ಥಿಸಿಕೊಳ್ಳಲು ಈಗ ಕೃಷಿ ಸಚಿವರ ಜುಮ್ಲಾಗಳು”
ಅಲ್ಲದೆ ಈ ನಿಬಂಧನೆಗಳು ತಾರತಮ್ಯವನ್ನು ಒಂದು ಸಮಗ್ರವಾದ ರೀತಿಯಲ್ಲಿ ನಿರೂಪಿಸುವಲ್ಲಿ ವಿಫಲವಾಗಿವೆ. ಅವು ಪ್ರಾಥಮಿಕವಾಗಿ ತಾರತಮ್ಯದ ಗ್ರಹಿಕೆಯನ್ನು ತೆಗೆದುಹಾಕುವುದರ ಮೇಲೆ ಗಮನ ಕೇಂದ್ರೀಕರಿಸುತ್ತವೆ, ಮತ್ತು ಈ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳೊಳಗೆ ವಾಸ್ತವವಾಗಿ ನಡೆದಿರುವುದನ್ನು ಮರೆಮಾಡುತ್ತವೆ.. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎದುರಿಸುತ್ತಿರುವ ಎಲ್ಲಾ ಸ್ವರೂಪಗಳ ತಾರತಮ್ಯವನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಲು, ನಿರೂಪಿಸಲು, ಗುರುತಿಸಲು ಮತ್ತು ನಿವಾರಿಸಲು ಸಾಧ್ಯವಾಗುವಂತೆ ಅದರ ಚೌಕಟ್ಟನ್ನು ಬಲಪಡಿಸಬೇಕು ಎಂದು ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ.
ಸಮದರ್ಶಿತ್ವ ಸಮಿತಿಯ ರಚನೆಯನ್ನು ಸಂಸ್ಥೆಯ ಮುಖ್ಯಸ್ಥರ ಇಚ್ಛೆ ಮತ್ತು ಮರ್ಜಿಗೆ ಬಿಡಬಾರದು. ಬದಲಾಗಿ, ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಲು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಯ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರತಿನಿಧಿಗಳ ಮೂಲಕ ಅದನ್ನು ಕೈಗೊಳ್ಳಬೇಕು.
ಇದಲ್ಲದೆ, ಸಮದರ್ಶಿತ್ವ ಸಮಿತಿಯ ನಿರ್ಧಾರಗಳ ವಿರುದ್ಧದ ಮೇಲ್ಮನವಿಗಳನ್ನು ನಿರ್ಣಯಿಸಲು ಒಬ್ಬರು ಮೇಲಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಯುಜಿಸಿ ತಾನೇ ಇಟ್ಟುಕೊಂಡಿದೆ..ಸಾಕಷ್ಟು ಸಂಖ್ಯೆಯ ವಿಶ್ವವಿದ್ಯಾಲಯಗಳನ್ನು ರಾಜ್ಯ ಶಾಸಕಾಂಗದ ಕಾಯಿದೆಗಳ ಅಡಿಯಲ್ಲಿ ಸ್ಥಾಪಿಸಲಾಗಿರುವುದರಿಂದ, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ತತ್ವಗಳಿಗೆ ಅನುಗುಣವಾಗಿ ಮೇಲಧಿಕಾರಿಯನ್ನು ನೇಮಿಸುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳ ಬಳಿ ಇರಬೇಕು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೈಕ್ಷಣಿಕ ಪಠ್ಯಕ್ರಮದಲ್ಲಿ ಪ್ರತಿಗಾಮಿ ಮತ್ತು ಅವೈಜ್ಞಾನಿಕ ಅಂಶಗಳನ್ನು ಪರಿಚಯಿಸುವ ಮೂಲಕ ಶಿಕ್ಷಣವನ್ನು ಹೆಚ್ಚು ಹೆಚ್ಚು ಕೋಮುವಾದೀಕರಣಗೊಳಿಸಿದೆ. ಜಾತಿ ತಾರತಮ್ಯವನ್ನು ನ್ಯಾಯಸಮ್ಮತಗೊಳಿಸುವ, ವರ್ಣಾಧಾರಿತ, ದಬ್ಬಾಳಿಕೆಯ ಮತ್ತು ಶೋಷಣಾವಾದಿ ಸಾಮಾಜಿಕ ವ್ಯವಸ್ಥೆಯನ್ನು ವೈಭವೀಕರಿಸುವ ಮನುಸ್ಮೃತಿಯಂತಹ ಪಠ್ಯಗಳನ್ನು ಸೇರಿಸುವುದರಿಂದ ಜಾತಿ ಮತ್ತು ಲಿಂಗ ಆಧಾರಿತ ಪೂರ್ವಾಗ್ರಹಗಳು ಬಲಗೊಳ್ಳುತ್ತವೆಯಷ್ಟೇ. ಸರ್ಕಾರವು ತಕ್ಷಣವೇ ಅಂತಹ ಕುರುಡುನಂಬಿಕೆಯ ಪಠ್ಯಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಬೇಕು.
ಆರ್ಎಸ್ಎಸ್ ಮತ್ತು ಅದರ ಸಂಯೋಜಿತ ಸಂಘಟನೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ವಿಭಜನೆಗಳನ್ನು ಹುಟ್ಟುಹಾಕಲು ಈ ನಬಂಧನೆಗಳ ಅಧಿಸೂಚನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಅಂತಹ ಪ್ರಯತ್ನಗಳನ್ನು ನಿಗ್ರಹಿಸಲು ಮತ್ತು ಅವುಗಳ ವಿರುದ್ಧ ಒಕ್ಕೂಟ ಸರ್ಕಾರ ದೃಢವಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದೆ. ಏಕೆಂದರೆ,ಸಾಮೂಹಿಕ ಪ್ರಯತ್ನದ ಮೂಲಕ ಮಾತ್ರವೇ ಜಾತಿ ತಾರತಮ್ಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯ ಎಂದು ಅದು ಹೇಳಿದೆ.
ಇದನ್ನೂ ನೋಡಿ: ಬಾದಲ್ ಸರ್ಕಾರ ನಾಟಕಗಳಲ್ಲಿ ಸಾಮಾಜಿಕ ಬದ್ಧತೆ ಇತ್ತು – ಧು. ಸರಸ್ವತಿ Janashakthi Media
