“ಬಿಗ್ ಬಾಸ್” : ‘ಮನೆ’ ಎಂಬ ಪರಿಕಲ್ಪನೆಗೆ ಕೊಡಲಿ ಏಟು

ಆಕ್ರಮಣಕಾರಿ ಮಾಧ್ಯಮಗಳು ಮುನುಷ್ಯನ ಮೆದುಳಿನಲ್ಲಿ ಸೃಷ್ಠಿಸುತ್ತಿರುವ ಕೋಲಾಹಲಗಳು ಒಂದೆರಡಲ್ಲ. ಮಾಧ್ಯಮಗಳು ಕೀಳುಮಟ್ಟದ ಡೊಪಮೈನ್ ಉದ್ರೇಕಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವಲ್ಲಿ ಎತ್ತಿದ ಕೈ. ಇದರಿಂದ ಮಕ್ಕಳನ್ನು, ವೃದ್ಧರನ್ನು ಜೊತೆಗೆ ಜವಾಬ್ದಾರಿಯು ಮನೆಯೊಡತಿಯರನ್ನೂ, ಒಡೆಯರನ್ನೂ ಕಾಪಿಟ್ಟುಕೊಳ್ಳುವುದು ಬಲು ಪ್ರಯಾಸದ ವಿಷಯವಾಗಿದೆ. ಬಿಗ್

– ವಸು ವತ್ಸಲೆ

ರಿಯಾಲಿಟಿ ಶೋಗಳೆಂಬ ಕಾಲಹರಣ, ಶಕ್ತಿವ್ಯಯ, ಹುಚ್ಚು ಮನರಂಜನೆ, ಕೆಳಮಟ್ಟದ ಹಾಸ್ಯವನ್ನು ಮುಂದು ಮಾಡಿಕೊಂಡ ಕಾರ್ಯಕ್ರಮಗಳು ಮನೆಮಂದಿ ಮಕ್ಕಳ ಮನಸ್ಸನ್ನಂತೂ ಹೆಗ್ಗಿಲ್ಲದೆ ಹಾಳುಗೆಡುವುತಿವೆ. ನಿಜವಾದ ಕೌಟುಂಬಿಕ ಮನರಂಜನೆಯೊಂತೂ ಧಾರವಾಹಿಗಳೊಂದಿಗೆ ವಿಲೀನಗೊಂಡಿವೆ. ಇನ್ನು ಪುಸ್ತಕದ ಓದು ಜ್ಞಾನಾರ್ಜನೆ ಚಂದನ ವಾಹಿನಿ ಬಿಟ್ಟಂದಿನಿಂದಲೇ ಮುಕ್ತಾಯಗೊಂಡಿವೆ. ಅದಿರಲಿ ನಮ್ಮ ಜಂಜಾಟದ ಬದುಕಿನಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು? ಯಾವ ವಿಷಯದಲ್ಲಿ ಚಿಂತನೆಗಿಳಿಯಬೇಕೆಂಬ ಯಕಶ್ಚಿತ್ ಕಾಳಜಿಯೂ ಇಲ್ಲದೆ ವರ್ತಿಸುವ ನಮ್ಮ ಬಗ್ಗೆಯೂ ನಾವು ಚಿಂತಿಸದಿದ್ದರೆ ಹೇಗೆ?

“ಬಿಗ್ ಬಾಸ್” ಎಂಬ ಅತಿಶಯದ ಕಾರ್ಯಕ್ರಮ ‘ಮನೆ’ ಎಂಬ ಪರಿಕಲ್ಪನೆಗೆ ಕೊಡಲಿ ಏಟು ನೀಡಿದೆ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮ ಕೇವಲ ಕನ್ನಡವಷ್ಟೇ ಅಲ್ಲ ಏಳು ಭಾಷೆಗಳಲ್ಲೂ ಇದರ ಉಪಟಳವಿದ್ದೇ ಇದೆ. Endomolshine ಎಂಬ ಅಂತರಾಷ್ಟ್ರೀಯ ಕಂಪೆನಿಯು ಇಂತಹ ಕೀಳು ಅಭಿರುಚಿಯ ಕಾರ್ಯಕ್ರಮವೊಂದನ್ನು ಬಹಳ ವರ್ಷಗಳಿಂದ ತಂದು ತುರುಕಿತು. ಹೆಣ್ಣು ಗಂಡುಗಳನ್ನು ಒಟ್ಟಿಗೆ ಕೂಡಿ ಹಾಕಿ ಅಸಹ್ಯಕರ ವರ್ತನೆಗೆ ಸಾಕ್ಷಿಯಾಗುವುದಲ್ಲದ ಸಮಾಜದ ಸ್ವಾಸ್ಥ್ಯ ವನ್ನು ಹಾಳುಗೆಡುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಅಂತರಾಷ್ಟೀಯ ಮಟ್ಟದ ಇಂಗ್ಲೀಷ್ ಬಿಗ್ ಬಾಸ್ ನ್ನೊಂತು ಕಣ್ಣಿಂದ ನೋಡಲಾಗದ್ದು. ಹಿಂದಿಯೂ ಹೊರತಲ್ಲ. ಆ ತುಂಡುಡುಗೆಯ ಹೇಯಕರ ವರ್ತನೆಯ ಮಾಡೆಲ್ ಗಳ , ನಟರ ಪ್ರಭಾವ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಎಂಬ ಭಯವಿಲ್ಲದೆ ಅಪ್ಪಂದಿರಿ, ತಾಯಂದಿರು, ಮಕ್ಕಳೊಂದಿಗೆ ಕೂತು ನೋಡುವ ಬೇಜವಾಬ್ದಾರಿತನಕ್ಕೆ ಏನು ಹೇಳಬೇಕು?

ಇದನ್ನೂ ಓದಿ: ಹೈಕೋರ್ಟ್‌ ಸ್ಥಳಾಂತರ: ರಿಜಿಸ್ಟ್ರಾರ್‌ ಜನರಲ್‌ಗೆ ನೋಟಿಸ್‌ ಜಾರಿ

ಈ ಕಾರ್ಯಕ್ರಮವು ಜನರ ಮನಸ್ಸನ್ನು ಆವರಿಸುವಂತೆ ಮಾಡಲು ಖ್ಯಾತ ಚಲನಚಿತ್ರ ನಾಯಕರನ್ನು ನಟರನ್ನು ಬಳಸಿಕೊಳ್ಳಲಾಯಿತು. ಅದು ಈಗ ಯಾವ ಮಟ್ಟಕ್ಕೆ ತಲೆಯೇರಿದೆಯೆಂದರೆ, ಒಂದು presidential ಚುನಾವಣೆಯಂತೆ ವಿಜೇತರ ವೋಟಿಂಗ್ ಅನ್ನು ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಕಳವಳಕಾರಿ. ಈ ಕಾರ್ಯಕ್ರಮದ ವಿಜೇತರು ಯಾವ ಕೋಟೆ ಆಳುತ್ತಾರೋ, ಅದೇನು ದಬಾಕುತ್ತಾರೋ? ಅಥವಾ ಬರೇ ಬಕೇಟನ್ನೇ ದಬಾಕುತ್ತಾರೋ ಯಾರೂ ಅರಿಯರು. ಆದರೆ

ಅದರ ಬಗೆಗಿನ ಆಸಕ್ತಿಯನ್ನು ಕಂಡಾಗ, ಇದು ಇಷ್ಟೊಂದು ಅವಶ್ಯವೇ ಎನಿಸುತ್ತದೆ. ಒಂದು ಕೃತಕ ಮನೆಯಲ್ಲಿ ಹತ್ತಾರು ಜನರನ್ನು ಕೂಡಿ ಹಾಕಿ, ಅವರ ವಿಕಲ್ಪಗಳನ್ನು ಆಟವೆಂದು ಹೆಸರಿಟ್ಟು, ಅಸಹ್ಯಕರ ಭಾಷೆ, ಜಗಳ, ಟಾಸ್ಕ್ ಹೆಸರಿನ ದ್ವೇಷ ಭಾವದ ಹೂರಣವಾಗಿಸಿರುವ, ಈ ಕಾರ್ಯಕ್ರಮ ಜನರಲ್ಲಿ ಮಾನಸಿಕ ದ್ವಂದ್ವ, ಅರೆಚಾಟ ಕಿರುಚಾಟವನ್ನು ತುಂಬುತ್ತಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ ಇದರಲ್ಲಿನ ಆಟಗಾರರೆಲ್ಲರೂ controversy ಗೆ ಒಳಗಾದವರು. ಹಾಗಾದರೆ ಈ ಕಾರ್ಯಕ್ರಮದ ಸಂದೇಶ controversial ವ್ಯಕ್ತಿಗಳಾದರೆ ಬಿಗ್ ಬಾಸ್ ಪ್ರವೆಶವೆಂಬಂತಿದೆ. ಅಲ್ಲಿಯ ಹಣ, ಪ್ರಚಾರಕ್ಕೆ ಆಸೆ ಪಟ್ಟು ಯುವಪೀಳಿಗೆ controversyಗೆ ತೊಡಗಲು ಪ್ರೇರೇಪಿಸಿದಂತಾಗಲಿಲ್ಲವೇ?

ಯುವಪೀಳಿಗೆಯಲ್ಲಿ ವೈಚಾರಿಕವಾಗಿಯೋ, ಶೈಕ್ಷಣಿಕವಾಗಿಯೋ, ವೈಜ್ಞಾನಿಕವಾಗಿಯೋ ಜ್ಞಾನ ಬಿತ್ತಬೇಕಾದ ಮಾದ್ಯಮಗಳು, ಇಂದು ಹಣಕ್ಕಾಗಿ, ಟಿ.ಆರ್.ಪಿಗಾಗಿ ಇಂತಹ ಮಾರಕ ಮಾರ್ಗಗಳನ್ನು ಅನುಸರಿಸಿರುವುದನ್ನು ಯಾರೂ ಏಕೆ ಖಂಡಿಸುತ್ತಿಲ್ಲವೆಂಬುದೇ ಆಶ್ಚರ್ಯ. ಇದರ ಬದಲಾಗಿ ಹುಚ್ಚುಚ್ಚಾಗಿ ಮನಬಂದಂತಾಡುವ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡುತ್ತಾ ಊರು ತುಂಬಾ ಬ್ಯಾನರ್ ಹಾಕಿ ರಾರಾಜಿಸುವಂತೆ ಮಾಡಿದ್ದಾರೆ. ಇವೆಲ್ಲಾ ಗಿಮಿಕ್ ಗಳು ಓದುವ ಹುಡುಗರ ಮೇಲೆ ಪ್ರಭಾವಬೀರದೇ ಇರುತ್ತದೆಯೇ? ಬಿಗ್ ಬಾಸ್ ಹೋಗುವ ಆಸಕ್ತಿಗೆ ಏನೋ ಮಾಡಲು ಹೋಗಿ ಏನೂ ಆಗಬಹುದು ಎಚ್ಚರ. ಅದರಲ್ಲಿ ನಿಮ್ಮ ಮಕ್ಕಳೂ ಇರಬಹುದು ಎಚ್ಚರ. ಆದರ್ಶ ವ್ಯಕ್ತಿತ್ವಗಳನ್ನು ಸಮಾಜದ ಮುಂದಿಡುವ ಬದಲು ಆರಕ್ಕೂ ಮೂರಕ್ಕೂ ಉಪಯೋಗಕ್ಕೆ ಬರದ ಇವರನ್ನು ತಿಂಗಳಾನುಗಟ್ಟಲೆ ತೋರಿಸಿ ಏನು ಸಾಧಿಸಬೇಕೆಂದಿದ್ದಾರೋ ಆ ಸಂಸ್ಥೆವರೇ ಬಲ್ಲರು. ಯಾವುದೇ ಸಾಮಾಜಿಕ ಬದ್ಧತೆ ಇಲ್ಲದೇ ಈ ಬಿಗಬಾಸ್ ನೋಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಮನೆಯ ಸ್ವಾಸ್ಥ್ಯ ಕೆಡುವುದಂತೂ ಖಂಡಿತ.

ಈ ಹನ್ನೆರಡು ಸೀಸನ್ ಗಳಲ್ಲಿ ಒಂದೇ ಒಂದು ಆಟವನ್ನು ನೋಡುವ ಮನಸ್ಸಾಗದಿದ್ದಕ್ಕೆ ನನಗೆ ನಾನೇ ಥ್ಯಾಂಕ್ಸ್ ಹೇಳಿಕೊಳ್ಳುವೆ. ಮನೆಯಲ್ಲೂ ಟಿ.ವಿ ಬಂದ್. ಏಕೆಂದರೆ ಕೆಡುಕು ಬೇಗ ಆಕರ್ಷಿಸುತ್ತದೆ.

ಅದೊಂದು ಮನೆಯಂತೆ ಅವರೆಲ್ಲ ಬಂಧು ಬಾಂಧವರಂತೆ, ಅವರೊಳಗೇ ಕಿತ್ತಾಟವಾಗುವಂತೆ ಮಾಡುವವನು ಬಿಗ್ ಬಾಸ್ ಅಂತೆ, ಅವನು ಇವಳಿಗೆ, ಇವಳು ಅವನಿಗೆ ಎಕ್ಕಾಮಕ್ಕ ಉಗಿಯುವುದಂತೆ, ಅವರವರಲ್ಲೇ ಎಲಿಮಿನೇಟ್ ಎಂಬ ಬಾಣ ಹೂಡಿ ದ್ವೇಷದ ಕಿಡಿ ಹೊತ್ತಿಸುವುದಂತೆ, ಅದ್ಯಾರೊಳಗೋ ಪ್ರೇಮ ಗೀಮ ಎಬ ಕಾಮೋದ್ರೇಕಿತ ವಿಲಾಸಗಳನ್ನು ತೋರ್ಪಡಿಸಿ ಚರ್ಚೆಗೆಳೆಯುವುದಂತೆ ಅದನ್ನೆಲ್ಲಾ ಪಂಚಾಯತಿ ಕಟ್ಟೆಯಲ್ಲಿ ಇತ್ಯರ್ಥ ಮಾಡುವುದಂತೆ…. ಅದನ್ನೆಲ್ಲಾ ವಾರವೆಲ್ಲಾ ನೋಡಿ ವಾರಾಂತ್ಯದಲ್ಲಿ ಮಕ್ಕಳು ಮರಿ ಅವ್ವ ಅಪ್ಪನ ಸಮೇತ ಕೂತು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವುದಂತೆ…. ನೀವೇ ಯೋಚಿಸಿ ಇದರಲ್ಲಿ ಎಷ್ಟರ ಮಟ್ಟಿಗೆ ಸರಿ ತಪ್ಪು ಎಂದು!

ನಮ್ಮ ಅಪಾರ್ಟ್ ಮೆಂಟಿನ ಪುಟಾಣಿ‌ ಮಕ್ಕಳೂ ಸಹ ಮೊನ್ನೆ ಪಾರ್ಕಿಂಗ್ ಪ್ಲೇಸಿನಲ್ಲಿ ಇದೇ ಆಟವನ್ನು ಆಡುತ್ತಾ, “ಬಿಗ್ ಬಾಸ್ ಹೇಳುತ್ತಿದ್ದಾರೆ” ಎಂದು ಜೋರು ದನಿಯಲ್ಲಿ ಅನುಕರಣೆ ಮಾಡುತ್ತಿದ್ದವು. ಗಿಲ್ಲಿ ಗಿಲ್ಲಿ ಏನು ದಬಾಕಿದ್ದೀಯ? ಎಂದೆಲ್ಲಾ ಆಡುತ್ತಿದ್ದವು. ದೂರದಲ್ಲೇ ನಿಂತು ನಾನು ಹತ್ತಾರು ನಿಮಿಷ ನೋಡುತ್ತಲೇ ಇದ್ದೆ. ಅದೇ ತೆರನಾದ ಆಟ ಆವಾಹಿಸಿಕೊಂಡಂತೆ ಅವೂ ಆಡುತ್ತಿದ್ದನ್ನು ನೋಡಿ “ದೇವ್ರೆ” ಎಂದುಕೊಂಡು ಬಂದೆ.

ಇನ್ನು ಬಹುಭಾಷಾ ವಿದ್ಯಾರ್ಥಿಗಳ ನಮ್ಮ ಶಾಲೆಯಲ್ಲಿ ಇದರ ಬಗ್ಗೆ ಸೊಲ್ಲೆತ್ತಿ ನೋಡೋಣವೆಂದು “ಹೇ ಮಕ್ಕಳಾ ಬಿಗ್ ಬಾಸ್ ನೋಡ್ತೀರಾ” ಎಂದು ಕೇಳಿ ರಿಯಾಲಿಟಿ ಚೆಕ್ ಮಾಡಿದೆ.”ನಾನು ನಾನು” ಎಂದು ತೆಲುಗು, ತಮಿಳು, ಕನ್ನಡ, ಹಿಂದಿ ಮಕ್ಕಳೂ ಕೂಗಿದವು. ಮೊನ್ನೆಯ ಟಾಸ್ಕು ಗಳನ್ನು ಊಟದ ಸಮಯದಲ್ಲಿ ಇವೂ ಆಡಿ, ಇಬ್ಬರು ಮಕ್ಕಳು ಹೊಡೆದಾಡಿಕೊಂಡ ಬಗ್ಗೆ ಕೇಳಿ ಸುಸ್ತಾದೆ. ಒಟ್ಟಾರೆ ಎಲ್ರೂ ಅವರವರ ಭಾಷೆಯಲ್ಲಿ ನೋಡುತ್ತಿದ್ದಾರೆ ಎಂಬುದು ಖಚಿತವಾಯಿತು.

ದೇಶದಲ್ಲಿ ಯಾವುದೋ ಜ್ವಲಂತ ಸಮಸ್ಯೆ ಬಂದಾಗಲೂ ಇಷ್ಟು ಚರ್ಚೆ ನಡೆಯುವುದಿಲ್ಲ. ಈಗ ನಾಳೆ ಯಾರು ಗೆಲ್ಲಬೇಕು? ಯಾರು ಗೆಲ್ತಾರೆ? ಎಂಬ ಚರ್ಚೆ ಪ್ರಸ್ತುತ ಜ್ವಲಂತ ಸಮಸ್ಯೆಯಾಗಿರುವುದು ನಿಜಕ್ಕೂ ವಿಷಾದನೀಯ. ಸ್ನೇಹಿತರೇ ನಿಮಗೋ, ನಮ್ಮ ಮನೆಯಲ್ಲಿರುವ ಮಕ್ಕಳಿಗೋ ಈ ಗೀಳು ಹೆಚ್ಚಾಗುವ ಮುನ್ನ ಎಚ್ಚರ ವಹಿಸಿ. ಇಂತಹ ಹತ್ತು ಹಲವಾರು ರೀಲ್ ಶೋಗಳು ನಿಮ್ಮ ಮನಸ್ಸು ಹೃದಯವನ್ನು ತಟ್ಟಿ, ನಿಮಗೇ ತಿಳಿಯದ ಸಂದರ್ಭದಲ್ಲಿ ಅಲ್ಲಿಯಂತೆಯೇ ನೀವು ವರ್ತಿಸುವ ಮುನ್ನ ಪ್ರಜ್ಞಾವಸ್ಥೆಗೆ ಬನ್ನಿ.

ಏಕೆಂದರೆ, ಯಾರು ಗೆಲ್ಲಬೇಕೆಂಬ ಈ ಚರ್ಚೆ ಪ್ರಸ್ತುತವೇ? ಗೆದ್ದವನಿಂದ ನಿಮಗೆ? ಅಥವಾ ದೇಶಕ್ಕೆ ಏನಾದರೂ ಪ್ರಯೋಜನವಿದೆಯೇ? ಇದ್ದರೆ ತಿಳಿಸಿ

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು- 74 ಅಸಹಜ ಸಾವುಗಳ‌ ಪ್ರಕರಣಗಳಿಗೆ ಪ್ರತ್ಯೇಕ FIR ದಾಖಲಾಗುವುದೇ??? Janashakthi Media

Donate Janashakthi Media

Leave a Reply

Your email address will not be published. Required fields are marked *