ಅಕ್ರಮ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಗೆ ಕಾಂಗ್ರೆಸ್​ ಅಭ್ಯರ್ಥಿ ಪ್ರಾಣ ಬೆದರಿಕೆ

ಚಿಕ್ಕಬಳ್ಳಾಪುರ: ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ನಡು ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ನಗರಸಭೆ ಪೌರಾಯುಕ್ತೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ರಾಜೀವ್ ಗೌಡ ಅವರು ಪೋನ್ ಕರೆ ಮಾಡಿ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಅಶ್ಲಿಲ ಪದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾರೆ. ರಾಜೀವ್​ ಗೌಡ ಆಡಿದ ಕೊಳಕು ಮಾತುಗಳಿಂದ ಬೇಸತ್ತಿರುವ ಅಮೃತಾ ಅವರು ಕಣ್ಣೀರಿಟ್ಟಿದ್ದಾರೆ.

ಫೋನ್ಸಂಭಾಷಣೆಯಲ್ಲಿ ಏನಿದೆ?

ಕರೆ ಮಾಡಿದ ರಾಜೀವ್​ ಗೌಡ, ಮೇಡಂ ನೀವು ಬ್ಯಾನರ್​ ಬಿಚ್ಚೋಕೆ ಹೇಳಿದ್ರಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ ಅಮೃತಾ, ಇಲ್ಲ ಸರ್​ ಒಂದು ಬ್ಯಾನರ್​ ಮಾತ್ರ ರಸ್ತೆಯ ಮಧ್ಯದಲ್ಲಿ ಹಾಕಿದ್ದರಂತೆ, ಅದು ವಾಹನಗಳಿಗೆ ಅಡ್ಡಿಯಾಗುತ್ತಿತ್ತಂತೆ. ಇದರಿಂದ ಅಪಘಾತಗಳು ಆಗುವ ಸಾಧ್ಯತೆ ಇತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರು ಅಂತ ನಾನು ಪಕ್ಕದಲ್ಲಿ ಬ್ಯಾನರ್​ ಕಟ್ಟಿಕೊಳ್ಳಲು ಸೂಚನೆ ನೀಡಿದ್ದೆ ಎಂದು ಅಮೃತಾ ಹೇಳುತ್ತಾರೆ. ಇದಕ್ಕೆ ಏರು ಧ್ವನಿಯಲ್ಲಿ ಮಾತನಾಡುವ ರಾಜೀವ್​, ಬ್ಯಾನರ್ ಬಿಚ್ಚಿದ್ದೀರಿ ಅಂತಾ ಏನಾದರೂ ಗೊತ್ತಾದ್ರೆ, ಬಂದು ಬೆಂಕಿ ಹಚ್ಚಿಸುತ್ತೇನೆ. ನೀವು ನನ್ನ ಒಳ್ಳೆಯತನ ನೋಡಿದ್ದೀರಿ ಆದರೆ, ಕೆಟ್ಟತನ ನೋಡಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್ ಯಾದವ್‌ರ ಎಫ್ಐಆರ್ ರದ್ದಿಗೆ ಸಿಬಿಐ ವಿರೋಧ

ದೂರು ಬಂದರೆ ಅದು ಹೇಗೆ ಬ್ಯಾನರ್​ ಕಿತ್ತುಹಾಕುತ್ತೀರಿ ಎನ್ನುತ್ತಲೇ ರಾಜೀವ್​ ಅವರು ತೀರಾ ಅಶ್ಲೀಲ ಪದಗಳನ್ನು ಬಳಸಿದರು. ಬ್ಯಾನರ್​ ಕಟ್ಟಿರುವುದೇ ಅಕ್ರಮ ಮತ್ತು ಅದನ್ನು ಸೈಂಟಿಫಿಕ್​ ಆಗಿ ಕಟ್ಟಿಲ್ಲ. ಇದರಿಂದ ಅಪಘಾತವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ ಎಂದು ಅಮೃತಾ ಅವರು ಸ್ಪಷ್ಟನೆ ನೀಡಲು ಪ್ರಯತ್ನಿಸಿದಾಗ, ರಾಜೀವ್​ ಅವರು ಮಾತು ನಿಲ್ಲಿಸದೇ, ಅಶ್ಲೀಲ ಬೈಗುಳಗಳನ್ನು ಮುಂದುವರಿಸಿದ್ದಾರೆ.

ಕಳೆದ ಬಾರಿಯೂ ಇದೇ ರೀತಿ ಬ್ಯಾನರ್​ಗಳನ್ನು ತೆಗೆಸಿಹಾಕಿ, ಶಾಸಕರ ಬ್ಯಾನರ್​ ಹಾಕಿಸಿದ್ದೀರಿ ಎನ್ನುತ್ತಾ ಸ್ಥಳೀಯ ಶಾಸಕ ಬಿ.ಎನ್​. ರವಿಕುಮಾರ್​ ಅವರಿಗೂ ಅಶ್ಲೀಲ ಪದಗಳಿಂದ ನಿಂದಿಸಿದರು. ಅಲ್ಲದೆ, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ. ಸಿ.ಸುಧಾಕರ್​ಗೂ ನಿಂದನೆ ಮಾಡಿದ್ದಾರೆ.

ಇದಿಷ್ಟೇ ಅಲ್ಲದೆ, ಜನರನ್ನು ದಂಗೆ ಏಳಿಸ್ತೀನಿ, ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಮತ್ತು ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡನ ಬೆದರಿಕೆಗೆ, ಶಿಡ್ಲಘಟ್ಟ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಅಂದಹಾಗೆ, ಸಚಿವ ಜಮೀರ್​ ಅಹ್ಮದ್​ ಅವರ ಪುತ್ರ ಜೈದ್​ ಖಾನ್​ ಅವರ ಕಲ್ಟ್​ ಸಿನಿಮಾದ ಬ್ಯಾನರ್​ ತೆರೆವುಗೊಳಿಸಿದ್ದಕ್ಕೆ ಈ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

ರಾಜೀವ್ಗೌಡ ಸ್ಪಷ್ಟನೆ

ಫೋನ್​ ಕಾಲ್​ ರೆಕಾರ್ಡಿಂಗ್​ ಆಡಿಯೋ ವೈರಲ್​ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ರಾಜೀವ್​ ಗೌಡ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡಿರುವ ರಾಜೀವ್​ ಗೌಡ, ನಾನು ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ.

ಅಮೃತಾ ಅವರೊಂದಿಗೆ ನಾನು ಆ ರೀತಿ ಮಾತನಾಡಬಾರದಿತ್ತು. ಈ ವಿಚಾರವಾಗಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

ಇದನ್ನೂ ನೋಡಿ: ರಸ್ತೆ ನಿಯಮ ಪಾಲಿಸಿ : ಅಪಘಾತಗಳನ್ನು ತಪ್ಪಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *