ಗಂಗಾವತಿ : ಕೈಗಾರಿಕಾ ಘಟಕಗಳು ಹರಿಬಿಡುತ್ತಿರುವ ಮಲಿನ ನೀರಿನಿಂದಾಗಿ ದೇಶದ 80ಕ್ಕೂ ಹೆಚ್ಚು ನದಿಗಳು ಕಲುಷಿತವಾಗಿವೆ, ಅತಿಯಾದ ರಾಸಾಯನಿಕ, ಕ್ರಿಮಿನಾಶಕ ಬಳಕೆ ಇದಕ್ಕೆ ಕಾರಣ. ಇದರಿಂದ ಜನರ ಬಳಕೆಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿಯ ಪ್ರಮುಖ ಮುಖಂಡ ಬಸವರಾಜ ವೀರಾಪುರ ಕಳವಳ ವ್ಯಕ್ತಪಡಿಸಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನದಿಯನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೇ ತುಂಗಭದ್ರಾ ನದಿಯ ಉಗಮ ಸ್ಥಳ ಶಿವಮೊಗ್ಗ ಜಿಲ್ಲೆಯಿಂದ ಕಿಷ್ಕಿಂಧ ಗಂಗಾವತಿವರೆಗೆ ಎರಡು ಹಂತದ ಪಾದಯಾತ್ರೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ ಈ 80 ನದಿಗಳ ಪೈಕಿ ದಕ್ಷಿಣ ಭಾರತದಲ್ಲಿ ಅದೂ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿಯಾಗಿರುವ ತುಂಗಭದ್ರಾ ನದಿ ಅತ್ಯಂತ ಕಲುಷಿತವಾಗಿದೆ. ಎಂದು ತಿಳಿಸಿದರು.
ಇದನ್ನೂ ಓದಿ : ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಬರವಣಿಗೆ ಹೆಚ್ಚಾದರೆ, ವಿಜ್ಞಾನವು ಜನರ ಬದುಕಿನ ಭಾಗವಾಗುತ್ತದೆ: ಡಾ.ಬಿ.ಎಸ್. ಶೈಲಜಾ
ಕರ್ನಾಟಕದ ಅತ್ಯಂತ ಉದ್ದವಾದ ನದಿ ಎಂದು ಖ್ಯಾತಿ ಪಡೆದಿರುವ ಈ ನದಿಯ ಒಡಲಿಗೆ ಸಾಮಾನ್ಯ ಜನರು ಬಳಿಸಿದ ಶೌಚಾಲಯ, ಸ್ನಾನದ ಕೋಣೆಯ ನೀರು, ರೈತರು ತಮ್ಮ ಹೊಲಗದ್ದೆಗಳಲ್ಲಿ ಬಳಸಿದ ಕ್ರಿಮಿನಾಶಕ, ಕೀಟನಾಶಕದ ತ್ಯಾಜ್ಯದ ನೀರು ಹಾಗೂ ಕೈಗಾರಿಕಾ ಘಟಕಗಳ ಮಲಿನ ನೀರು ಸೇರಿ ಪವಿತ್ರ ಜಲವು ವಿಷಕಾರಿಯಾಗುತ್ತಿದೆ ಡಿಸೆಂಬರ್ 27ರಂದು ಗಂಗಾವತಿಯಿಂದ ಆರಂಭವಾಗಲಿರುವ ಮೂರನೇ ಹಂತದ ಪಾದಯಾತ್ರೆಯ ಸಂದರ್ಭದಲ್ಲಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಈ ಮೂರು ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ಒಟ್ಟು 160 ಕಿ.ಮೀ. ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಎಂದು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತುಂಗಭದ್ರಾ ನದಿಯನ್ನು ಸಂರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರದ್ದು. ಹೀಗಾಗಿ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಮೊಮ್ಮಗಳಾದ ಕೊಲ್ಕತ್ತಾದ ರಾಜಶ್ರೀ ಚೌದರಿ ಅವರು ಈ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಲ ಸಂರಕ್ಷಣೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿರುವ ವಾಟರ್ ಮ್ಯಾನ್ ಖ್ಯಾತಿಯ ರಾಜಸ್ಥಾನದ ರಾಜೇಂದ್ರ ಸಿಂಗ್, ಗದಗದ ಡಿ.ಆರ್.ಪಾಟೀಲ್ ಸೇರಿದಂತೆ ಪರಿಸರವಾದಿಗಳು, ವಿವಿಧ ಮಠಾಧೀಶರು, ವಿದ್ಯಾರ್ಥಿ ಸಮೂಹವು ಪಾಲ್ಗೊಳ್ಳಲಿದೆ ಎಂದರು.
ಇದನ್ನೂ ನೋಡಿ : ದೇವದಾಸಿ, ಒಂಟಿ ಮಹಿಳೆ, ಮಸಣ ಕಾರ್ಮಿಕರಿಗೆ 6000 ರೂ ಮಾಸಿಕ ಪಿಂಚಣಿ ನೀಡಿ Janashakthi Media
