ಡಿಪಿಡಿಪಿ ಕಾಯ್ದೆ, 2023 ಮತ್ತು ಡಿಪಿಡಿಪಿ ನಿಯಮಗಳು, 2025 ಮುಕ್ತ ಮತ್ತು ಸ್ವತಂತ್ರ ಪತ್ರಿಕಾರಂಗಕ್ಕೆ ಗಂಭೀರ ಹಿನ್ನಡೆ – ಡಿಜಿಪಬ್

ನವದೆಹಲಿ: ಡಿಜಿಟಲ್ ಸುದ್ದಿ ಪೋರ್ಟಲ್‌ಗಳು ಮತ್ತು ಸ್ವತಂತ್ರ ಪತ್ರಕರ್ತರ ಸಮೂಹವಾದ ಡಿಐಜಿಐಪಿಯುಬಿ ನ್ಯೂಸ್ ಇಂಡಿಯಾ ಫೌಂಡೇಶನ್ (ಡಿಜಿಪಬ್), ಸರ್ಕಾರವು ನವೆಂಬರ್ 13 ರಂದು ಅಧಿಸೂಚಿಸಿರುವ ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು’ (ಡಿಪಿಡಿಪಿ), 2025 ರ ಬಗ್ಗೆ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ, ಈ ಅಧಿಸೂಚನೆ ಸಂಬಂಧಿತ ಕಾಯ್ದೆ ತಕ್ಷಣದಿಂದ ಜಾರಿಗೆ ಬರುವಂತೆ ಮಾಡುತ್ತದೆ.

ನ್ಯೂಸ್‍ಕ್ಲಿಕ್, ದಿ ವೈರ್, ನ್ಯೂಸ್ ಮಿನಿಟ್, ಆಲ್ಟ್‌ನ್ಯೂಸ್, ನ್ಯೂಸ್‍ಲಾಂಡ್ರಿ ಮುಂತಾದ ಸ್ವತಂತ್ರ ಡಿಜಿಟಲ್‍ ಸುದ್ದಿ ಮಾಧ್ಯಮಗಳು ಸದಸ್ಯರಾಗಿರುವ ಡಿಜಿಪಬ್ ನವಂಬರ್ 18ರಂದು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಸಂಬಂಧಪಟ್ಟ ಕಾಯ್ದೆ ಮತ್ತು ನಿಯಮಗಳು ಮಾಹಿತಿ ಹಕ್ಕು ಕಾಯ್ದೆಯನ್ನು ಒಟ್ಟಾರೆಯಾಗಿ ದುರ್ಬಲಗೊಳಿಸುತ್ತವೆ ಮತ್ತು ಪತ್ರಿಕೋದ್ಯಮಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಹೇಳಿದೆ.

ಡಿಜಿಪಬ್ ಹಿಂದೆ ಡಿಪಿಡಿಪಿ ಕಾಯ್ದೆ 2023 ಕ್ಕೆ ಸಂಬಂಧಪಟ್ಟಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ  ತಾನು ಸಲ್ಲಿಸಿದ ಆಕ್ಷೇಪಗಳಲ್ಲಿ ಆಗ್ರಹಿಸಿದಂತೆ  ಒಂದು “ಪಾರದರ್ಶಕ, ಔಪಚಾರಿಕ ಮತ್ತು ಸಮಯಬದ್ಧ” ಸಮಾಲೋಚನೆಯನ್ನು ಪ್ರಾರಂಭಿಸಬೇಕು ಮತ್ತು ಮಾಧ್ಯಮ ಸ್ವಾತಂತ್ರ್ಯ, ಮಾಹಿತಿ ಹಕ್ಕು ಹಾಗೂ ಡಿಜಿಟಲ್ ಜಾಗದ ಸಮಗ್ರತೆಯನ್ನು ದುರ್ಬಲಗೊಳಿಸುವ ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದೆ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿಕೆ ನಿರ್ಭಂದ: ಮಧ್ಯಂತರ ಆದೇಶ ಎಲ್ಲರಿಗೂ ಅನ್ವಯ- ಹೈಕೋರ್ಟ್

“ಪತ್ರಕರ್ತರನ್ನು ಯಾವುದೇ ಶಾಸನಬದ್ಧ ವಿನಾಯಿತಿಯಿಂದ ಹೊರಗಿಡುವ ಮೂಲಕ ಮತ್ತು ಪ್ರಭುತ್ವಕ್ಕೆ ಒಟ್ಟಾರೆ ಪ್ರವೇಶ ಮತ್ತು ಜಾರಿ ಅಧಿಕಾರಗಳನ್ನು ನೀಡುವ ಮೂಲಕ ಅವು ಪರೋಕ್ಷ ಸೆನ್ಸಾರ್‌ಶಿಪ್ಗೆ, ಮುಕ್ತ ಅಭಿವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಮತ್ತು ಕಾನೂನುಬದ್ಧ ಸುದ್ದಿ ಸಂಗ್ರಹ ಚಟುವಟಿಕೆಗಳ ಮೇಲೆ ಪ್ರಮಾಣ ಮೀರಿದ ಕಣ್ಗಾವಲಿಗೆ ಬಾಗಿಲು ತೆರೆಯುತ್ತದೆ” ಎಂದು ಡಿಜಿಪಬ್‍ ಆತಂಕ ವ್ಯಕ್ತಪಡಿಸಿದೆ.

ಈ ನಿಯಮಗಳು ಮತ್ತು ಕಾಯ್ದೆಯು “ಮೂಲದ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತದೆ, ಸಾರ್ವಜನಿಕ ಹಿತಾಸಕ್ತಿ ತನಿಖೆಗಳಿಗೆ ಅಡ್ಡಿಯಾಗುತ್ತವೆ, ಭ್ರಷ್ಟಾಚಾರ-ವಿರೋಧಿ ಅಂಶಗಳನ್ನು ತಿಳಿಯಪಡಿಸುವುದನ್ನು ಮತ್ತು ಪ್ರಜಾಸತ್ತಾತ್ಮಕ ಹೊಣೆಗಾರಿಕೆಗೆ ಅಗತ್ಯವಾದ ಮಾಹಿತಿ ಚೌಕಟ್ಟನ್ನು ದುರ್ಬಲಗೊಳಿಸುತ್ತದೆ” ಎಂದಿರುವ ಡಿಜಿಪಬ್ ಹೇಳಿಕೆ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಹಿತಾಸಕ್ತಿ ಪ್ರಕ್ರಿಯೆಗೆ ಸ್ಪಷ್ಟ, ಶಾಸನಬದ್ಧ ವಿನಾಯಿತಿಯನ್ನು ಪುನಃಸ್ಥಾಪಿಸಬೇಕೆಂದು, ಇದಕ್ಕಾಗಿ ಡಿಪಿಡಿಪಿ ಕಾಯ್ದೆ 2023 ಮತ್ತು ಡಿಪಿಡಿಪಿ ನಿಯಮಗಳು, 2025ನ್ನು ಸುಧಾರಿಸುವ ಒಂದು ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಕೇಂದ್ರ ಸರಕಾರವನ್ನು ಹಾಗೂ ಇಲೆಕ್ಟ್ರಾನಿಲ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯವನ್ನು ಆಗ್ರಹಿಸಿದೆ.

ಒಂದು ಮುಕ್ತ ಮತ್ತು ಸ್ವತಂತ್ರ ಪತ್ರಿಕಾರಂಗ ಯಾವುದೇ ಪ್ರಜಾಸತ್ತಾತ್ಮಕ ಗಣತಂತ್ರಕ್ಕೆ ಬೇಕೇಬೇಕು, ಈ ಆಧಾರಭೂತ ನೀತಿಗೆ ಡಿಪಿಡಿಪಿ  ಕಾಯ್ದೆ 2023 ಮತ್ತು ಡಿಪಿಡಿಪಿ ನಿಯಮಗಳು, 2025 ಒಂದು ಗಂಭೀರ ಹಿನ್ನಡೆ ಎಂದು ಡಿಜಿಪಬ್‍ ಹೇಳಿದೆ.

ಇದನ್ನೂ ನೋಡಿ: ದಿನಪೂರ್ತಿ ಕೆಲಸ ಕಮ್ಮಿ ವೇತನ : ಅಂಗನವಾಡಿ, ಬಿಸಿಯೂಟದವರ ಬದುಕಿನ ಕಥೆ Janashakthi Media

Donate Janashakthi Media