ತನ್ನ ಗ್ರಾಮದ ಅವ್ಯಸ್ಥೆಯ ವಿರುದ್ಧ ಹೋರಾಡಿ, ಬಲಾಡ್ಯರಿಂದ ಕೊಲೆಯಾಗಿದ್ದ ಯಲ್ಲಾಲಿಂಗನಿಗೆ ನ್ಯಾಯ ಸಿಗದೆ ಮತ್ತೊಮ್ಮೆ ಕೊಲೆಯಾಗಿದ್ದಾನೆ. ಸಾಕ್ಷಾಧಾರಗಳಿದ್ದರೂ ನ್ಯಾಯಾಲಯ ಕುರುಡಾಗಿದ್ದು ಹಲವು ಅನುಮಾನ ಸೃಷ್ಟಿಸಿದೆ. ಯಲ್ಲಾಲಿಂಗ ಕೊಲೆ
-ಗುರುರಾಜ ದೇಸಾಯಿ
ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ. ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ ಚಂದ್ರಶೇಖರ್ ಅವರು ತೀರ್ಪು ಪ್ರಕಟಿಸಿದ್ದಾರೆ. ಮರಕುಂಬಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದ್ದ ಜಸ್ಟೀಸ್ ಸಿ. ಚಂದ್ರಶೇಖರ್ ಅವರಿಂದ ಇಂತಹದ್ದೆ ತೀರ್ಪು ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಯಲ್ಲಾಲಿಂಗ ಕೊಲೆ
ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ ನಾಯಕ ಸೇರಿ 9 ಜನರ ಮೇಲೆ ಕೊಲೆಯಲ್ಲಿ ಭಾಗಿಯಾದ ಆರೋಪವಿತ್ತು. 2015 ರಲ್ಲಿ ಯಲ್ಲಾಲಿಂಗ ಎನ್ನುವ ಯುವಕನ ಶವ ಕೊಪ್ಪಳದ ಬಳಿ ರೈಲ್ವೆ ಹಳಿಯ ಮೇಲೆ ದೊರಕಿತ್ತು. ಸದರಿ ಯುವಕ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿ, ರೈಲು ಹಳಿ ಮೇಲೆ ಬಿಸಾಕಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಯಲ್ಲಾಲಿಂಗ ಕೊಲೆ
ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ ತೀರ್ಪು ಪ್ರಕಟ ಎಲ್ಲಾ ಆರೋಪಗಳು ಖುಲಾಸೆ
ಘಟನೆಯ ಹಿನ್ನಲೆ
ಕನಕಗಿರಿ ತಾಲ್ಲೂಕಿನ ಕನಕಾ ಪುರ ಗ್ರಾಮದ ಯಲ್ಲಾಲಿಂಗ 2015ರಲ್ಲಿ ಊರಿನಲ್ಲಿ ಚರಂಡಿ, ರಸ್ತೆ ಹಾಗೂ ಜನತಾ ಮನೆಗಳ ಅವ್ಯವಸ್ಥೆ ಕುರಿತು ಸ್ಥಳೀಯ ಟಿವಿ ವಾಹಿನಿಗೆ ಬೈಟ್ ನೀಡಿದ್ದ. ಅದು ಎರಡು ದಿನ ಪ್ರಸಾರಗೊಂಡಿತ್ತು. ಇನ್ನಷ್ಟು ಕಾಮಗಾರಿಗಳ ಬಗ್ಗೆಯೂ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದಿದ್ದ. ಇದು ಕೆಲ ರಾಜಕೀಯ ವ್ಯಕ್ತಿಗಳ ಮತ್ತು ಅವರ ಹಿಂಬಾಲಕರ ಸಿಟ್ಟಿಗೆ ಕಾರಣವಾ ಗಿತ್ತು. ಗಂಗಾವತಿಯಿಂದ ಗಿಣಿಗೇರಾವರೆಗೆ ಪ್ರಯಾಣಿಸಿದ್ದ ಯಲ್ಲಾಲಿಂಗ ಅವರನ್ನು ಬೈಕ್ ಮೇಲೆ ಹಿಂಬಾಲಿಸಿ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಿಡಿದಿದ್ದರು. ಹಳಿಗಳ ಮೇಲೆ ಹೊಡೆದ ಕಾರಣ ಯಲ್ಲಾಲಿಂಗ ಅಲ್ಲಿಯೇ ಕುಸಿದು ಬಿದ್ದ. ಹಳಿಗಳ ಮೇಲೆ ಮಲಗಿಸಿದ್ದರಿಂದ ರೈಲು ಹರಿದು ದೇಹ ಎರಡು ತುಂಡಾಗಿತ್ತು.
ಯಲ್ಲಾಲಿಂಗ ಕೊಲೆ
ಇದು ಮೊದಲು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದರೂ ನಂತರ ಕೊಲೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಖಾಸಗಿ ವಾಹಿನಿಗೆ ಗ್ರಾಮದ ಸಮಸ್ಯೆ ಹೇಳಿದ್ದಕ್ಕೆ ವಿದ್ಯಾರ್ಥಿ ಯಲ್ಲಾಲಿಂಗನ ಹತ್ಯೆಯಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿತ್ತು. ಮೊದಲು ಪೊಲೀಸರು ಹನುಮೇಶ್ ನಾಯಕ್ ಮಗ ಸೇರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ 8 ಜನರನ್ನು ಬಂಧಿಸಿದ್ದರು. ಹನುಮೇಶ್ ನಾಯಕ್ ಬಂಧಿಸಲ್ಪಟ್ಟಿರಲಿಲ್ಲ ಜಿಲ್ಲೆಯಲ್ಲಿ ಯಲ್ಲಾಲಿಂಗ ಕೊಲೆ ಖಂಡಿಸಿ ಜನ ಬೀದಿಗಿಳಿದು ಹೋರಾಟ ಮಾಡಿದ್ದರು. ಯಲ್ಲಾಲಿಂಗ ಕೊಲೆ
ಯಲ್ಲಾಲಿಂಗನ ಸಾವಿಗೆ ನ್ಯಾಯ ಒದಗಿಸುವಂತೆ SFI, KPRS, CITU, AIAWU ಸಂಘಟನೆಗಳು ಸೇರಿದಂತೆ ಜನಪರ ಸಂಘಟನೆಗಳು, ದಲಿತ ಸಂಘಟನೆಗಳು, ಎಡಪಕ್ಷಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದವು. ಶಿವರಾಜ ತಂಗಡಗಿ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಹೋರಾಟದ ಒತ್ತಡಕ್ಕೆ ಮಣಿದಿದ್ದ ಸರ್ಕಾರ, ಸಚಿವರಾಗಿದ್ದ ಶಿವರಾಜ ತಂಗಡಗಿಯವರನ್ನು ಸಂಪುಟದಿಂದ ಹೊರಹಾಕಿತ್ತು. ಆರೋಪಿಗಳು ಮೂರು ವರ್ಷಗಳ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಜಾಮೀನಿನ ಮೇಲೆ 9 ಮಂದಿ ಬಿಡುಗಡೆಯಾಗಿದ್ದರು. ಈ ವೇಳ ಸಾಕ್ಷಗಳನ್ನು ಹೆದರಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

ಮದುವೆಯಿಂದ ಮತ್ತೆ ಮುನ್ನಲೆಗೆ
ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು ಆರೋಪಿಯಾದ ಹನುಮೇಶ್ ನಾಯಕ್ ಮಗ ಮಹಾಂತೇಶ್ ನಾಯಕ್ ಮದುವೆಯ ಸಂದರ್ಭದಲ್ಲಿ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿ ಹೈದರ್ ಗ್ರಾಮದಲ್ಲಿ ಮಹಾಂತೇಶ್ ನಾಯಕ್ ಮದುವೆ ಇತ್ತು. ಮಹಾಂತೇಶ್ ನಾಯಕ್ ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ನಂಬರ್ 3. ಗಂಗಾವತಿಯ DYSP ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆ CPI ಉದಯರವಿ,ಕನಕಗಿರಿ PSI ತಾರಾಬಾಯಿ ಮದುವೆಗೆ ಹೋಗಿದ್ದರು. ಕೊಲೆ ಪ್ರಕರಣದ ಆರೋಪಿಗಳ ಮದುವೆಗೆ ಪೋಲಿಸರು ಭಾಗಿಯಾಗಿದ್ದಕ್ಕೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಅದು ಪೊಲೀಸ್ ಸಮವಸ್ತ್ರದಲ್ಲಿ ಮೂವರು ಅಧಿಕಾರಿಗಳು ಹೋಗಿ ಹೂವಿನ ಹಾರ ಹಾಕಿಸಿಕೊಂಡು ಫೋಟೊ ತೆಗೆಸಿಕೊಂಡಿದ್ದರು. ಮದುವೆಗೆ ಅಷ್ಟೆ ಹೋಗಿದ್ದರೆ ಉಡುಗೊರೆ ನೀಡಿ, ವಾಪಸ್ಸಾಗಬಹುದಿತ್ತು. ಆದರೆ ಮದು ಮಕ್ಕಳ ಜೊತೆ ಪೊಲೀಸರು ಹೂವಿನಹಾರ ಹಾಕಿಸಿಕೊಂಡಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿತ್ತು. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಅಧಿಕಾರಗಳು ಮೂವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದ್ದರು. ಕಡ್ಢಾಯ ರಜೆ ಮುಗಿದ ಮೇಲೆ ಮತ್ತೆ ಅದೇ ಪೊಲೀಸ್ ಠಾಣೆಗೆ ಬಂದು ಕರ್ತವ್ಯಕ್ಕೆ ಹಾಜರಾಗಿ ಆರೋಪಿಗಳ ಜೊತೆಗೂಡಿ ಸಾಕ್ಷಿಗಳಿಗೆ ಬೆದರಿಕೆ ಒಡ್ಡುವಲ್ಲಿ ಇವರ ಪಾತ್ರ ಇದೆ ಎಂದು ಹೆಸರು ಹೇಳಲು ಇಚ್ಚಿಸಿದ ಹುಲಿಹೈದರ್ ಗ್ರಾಮದ ವ್ಯಕ್ತಿಯೊಬ್ಬರು ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದಾರೆ.
ತನಿಖೆಯಲ್ಲಿ ಅಪರಾಧ ಸಾಬೀತು
ಯಲಬುರ್ಗಾದಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ ಕಮ್ಮಾರ್ ನೇತೃತ್ವದಲ್ಲಿ ಪೊಲೀಸ್ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತನಿಖಾ ತಂಡ ನ್ಯಾಯಲಯಕ್ಕೆ ವರದಿ ಸಲ್ಲಿಸಿತ್ತು. ಈ ಪ್ರಕರಣಕ ರಾಜಕೀಯ ತಿರುವು ಪಡೆದ ನಂತರ ಸಿಐಡಿಗೆ ಒಪ್ಪಿಸಲಾಗಿತ್ತು. ಸಿಐಡಿ ನಡೆಸಿದ ತನಿಖೆಗೂ ನಾಗರಾಜ ಕಮ್ಮಾರ ನಡೆಸಿದ ತನಿಖೆಗೆ ಸಾಮ್ಯತೆ ಇತ್ತು ಎಂದು ಹೇಳಲಾಗಿತ್ತು.
ಯಲ್ಲಾಲಿಂಗನ ಪ್ರಕರಣ ಕುರಿತು ಸಿಐಡಿ ಪೊಲೀಸರು, ಜಿಲ್ಲಾ ನ್ಯಾಯಾಲಯಕ್ಕೆ 426 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿ, 9 ಆರೋಪಿಗಳದ್ದು ಶಿಕ್ಷಾರ್ಹ ಅಪರಾಧವೆಂದು ವರದಿ ನೀಡಿದ್ದರು. ಸಿಐಡಿ ನೀಡಿದ್ದ ವರದಿಯ ಸಾರಾಂಶ ಈ ರೀತಿ ಇದೆ…
‘ನಗರದ ರೈಲ್ವೆ ನಿಲ್ದಾಣ ಬಳಿಯ ನಗರ ಠಾಣೆ ವ್ಯಾಪ್ತಿಯಲ್ಲಿ ಯಲ್ಲಾಲಿಂಗನ ಕೊಲೆ ನಡೆದಿತ್ತು. ಕನಕಾಪುರ ಗ್ರಾಮದಲ್ಲಿ ಚರಂಡಿ, ರಸ್ತೆ, ಆಶ್ರಯ ಮನೆಗಳ ಅವ್ಯವಸ್ಥೆ ಹಾಗೂ ಕಳಪೆ ಕಾಮಗಾರಿಗಳ ಕುರಿತು 6.1.2015ರಂದು ಖಾಸಗಿ ಟಿವಿಗೆ ಪಿಯುಸಿ ವಿದ್ಯಾರ್ಥಿ ಯಲ್ಲಾಲಿಂಗ ಬೈಟ್ ನೀಡಿದ್ದ. ಈ ಹೇಳಿಕೆ ಎರಡು ದಿನಗಳವರೆಗೆ ಖಾಸಗಿ ಚಾನೆಲ್ನಲ್ಲಿ ಪ್ರಸಾರಗೊಂಡಿತ್ತು. ಅಷ್ಟೇ ಅಲ್ಲದೆ ಆರ್ಟಿಐ ಕಾಯಿದೆಯಡಿ ಹುಲಿಹೈದರ್ ಗ್ರಾಮ ಪಂಚಾಯಿತಿ ಪಿಡಿಒ ಸಂಪರ್ಕಿಸಿ, ಮಾಹಿತಿ ಕೋರಿದ್ದ. ಈ ವಿಷಯ ಜಿ.ಪಂ. ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಹನುಮೇಶ ನಾಯಕನ ಗಮನಕ್ಕೂ ಬಂದಿತ್ತು.
ಆರ್‌ಟಿಐ ಅಡಿ ಕಾಮಗಾರಿ ಮಾಹಿತಿ ಪಡೆದು ಟಿವಿಗಳಿಗೆ ಮತ್ತಷ್ಟು ಮಾಹಿತಿ ನೀಡಿದರೆ ಅವ್ಯವಹಾರ ಬಯಲಿಗೆ ಬರುತ್ತದೆ ಎಂದು ಹನುಮೇಶ ನಾಯಕ ಹೆದರಿದ್ದ. ಈ ಕಾಮಗಾರಿಗಳನ್ನು ಹನುಮೇಶ ನಾಯಕನ ಮಗ ಹಾಗೂ ಆತನ ಕುಟುಂಬದವರೇ ನಿರ್ವಹಿಸಿದ್ದರು. ಕಳಪೆ ಕಾಮಗಾರಿ ಬಯಲಾಗುತ್ತವೆ ಎಂಬ ಉದ್ದೇಶದಿಂದ ಆರೋಪಿಗಳು ವಿದ್ಯಾರ್ಥಿಯನ್ನು ಕೊಲೆಮಾಡಿದ್ದಾರೆ,’’ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.
ಬೈಕ್ನಿಂದಲೂ ಸಿಕ್ಕಿತ್ತು ಸಾಕ್ಷಿ ಕನಕಗಿರಿಯಿಂದ 6 ಆರೋಪಿಗಳು ಯಲ್ಲಾಲಿಂಗನನ್ನು ಬೆನ್ನಟ್ಟಿ ಕೊಪ್ಪಳದವರೆಗೆ ಮೂರು ಬೈಕ್ಗಳಲ್ಲಿ ತೆರಳಿದ್ದರು. ಇವರಲ್ಲಿ ಪ್ರಮುಖ ಆರೋಪಿ ಮಹಾಂತೇಶ ವಾಹನವು ಇತ್ತು. ಬಾಳನಗೌಡ, ಪರಶುರಾಮ ಕೂಡ ಅದೇ ವೇಳೆ ಬಂಧಿಸಲ್ಪಟ್ಟಿದ್ದರು.
ಕೊಲೆ ವೇಳೆ ತೆಗೆದುಕೊಂಡು ಹೋಗಿದ್ದ ಮೂರು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬೈಕ್ಗಳನ್ನು ನ್ಯಾಯಯಾಲಯ ಸಾಕ್ಷಾಧಾರವಾಗಿ ಯಾಕೆ ಪರಿಗಣಿಸಲಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ?
ಬಲಾಡ್ಯರಿಂದ ರಾಜೀ ಸಂಧಾನ
“ನಾಯಕ” ಸಮುದಾಯದ ಬಲಾಢ್ಯ ರಾಜಕಾರಣಿಗಳು (ಕಾಂಗ್ರೆಸ್ + ಬಿಜೆಪಿ) ಹನುಮೇಶ್ ನಾಯಕ್ ಬೆನ್ನಿಗೆ ನಿಂತಿದ್ದರು. ಈ ಕೇಸ್ನಿಂದ ಇವರು ಪಾರಾಗಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಯಲ್ಲಾಲಿಂಗನ ತಾಯಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಸಂಸದ, ಸಿಂಧನೂರಿನ ಕುರುಬ ಸಮಾಜದ ಪ್ರಭಾವಿ ನಾಯಕರೊಬ್ಬರು, “ ಈ ಪ್ರಕರಣದಲ್ಲಿ ರಾಜೀಯಾಗುವಂತೆ” ಒತ್ತಡ ಹೇರಲಾಗಿತ್ತು. ವ್ಯವಸ್ಥೆಯ ಕ್ರೌರತೆಗೊ, ಬೆದರಿಕೆಗೋ ಯಲ್ಲಾಲಿಂಗನ ತಾಯಿ ಕೆಂಚಮ್ಮ ಗಟ್ಟಿಯಾಗಿ ಸಾಕ್ಷಿ ಹೇಳಲಿಲ್ಲ ಎಂದು ಪ್ರತ್ಯಕ್ಷದರ್ಶಿ ವಕೀಲರೊಬ್ಬರು ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ.
ತನ್ನ ಗ್ರಾಮದಲ್ಲಿ ಚರಂಡಿ, ರಸ್ತೆ, ಆಶ್ರಯ ಮನೆಗಳ ಅವ್ಯವಸ್ಥೆ ಹಾಗೂ ಕಳಪೆ ಕಾಮಗಾರಿಗಳ ವರುದ್ಧ ಧ್ವನಿ ಎತ್ತಿದ್ದಕ್ಕೆ ಕೊಲೆಯಾಗಿದ್ದ ಯಲ್ಲಾಲಿಂಗ ಮತ್ತೊಮ್ಮೆ ನ್ಯಾಯಾಲಯದ ಅನ್ಯಾಯದ ತಕ್ಕಡಿಯಲ್ಲಿ ಮತ್ತೊಮ್ಮೆ ಕೊಲೆಯಾಗುವಂತಾಗಿದೆ.
ಇದನ್ನೂ ನೋಡಿ: ಬುರುಡೆ ಹಾಡು| ರಾಶಿಯಿಂದ ಬುರುಡೆಯೊಂದ ತಂದನಾತ| ಹೂತಿರುವೆ ನೂರಾರು ಎಂದನಾತಾ |Janashakthi Media #viralsong
