ಗಾಜಾಕ್ಕೆ ‘ಟ್ರಂಪ್ ಯೋಜನೆ ಮಹತ್ವದ ಹೆಜ್ಜೆ’ : ‘ಶಾಶ್ವತ ಶಾಂತಿ’ ಯತ್ತ ಅಥವಾ  ‘ಶಾಶ್ವತ ವಸಾಹತು’ವಿನತ್ತ?

-ವಸಂತರಾಜ ಎನ್.ಕೆ

ಟ್ರಂಪ್ ಮತ್ತು ನೆತನ್ಯಾಹು ಜಂಟಿಯಾಗಿ ಗಾಜಾ ಶಾಂತಿ ಯೋಜನೆಯನ್ನು ಘೋಷಿಸಿದ್ದಾರೆ. ಇದು ಪಶ್ಚಿಮ ಏಶ್ಯಾದಲ್ಲಿಶಾಶ್ವತ ಶಾಂತಿ ಕಡೆಗೆ ಮಹತ್ವದ ಹೆಜ್ಜೆ ಎಂದಿದ್ದಾರೆ. ಹಮಾಸ್ ಅಥವಾ ಯಾವುದೇ ಪ್ಯಾಲೆಸ್ಟೈನ್ ಗುಂಪು ಅಥವಾ ವ್ಯಕ್ತಿಯ ಜತೆ ಚರ್ಚಿಸದ ಈ ಯೋಜನೆ ಪ್ಯಾಲೆಸ್ಟೈನ್ನರ ಆಶೋತ್ತರಗಳನ್ನು ಪೂರೈಸುವುದೇ ? ಅವರಿಗೆ ಒಪ್ಪಿಗೆಯಾಗುವುದೇ? ಯೋಜನೆಯನ್ನು ಪ್ಯಾಲೆಸ್ಟೈನ್ನರ ದೃಷ್ಟಿಕೋಣದಿಂದ ಇಲ್ಲಿ ವಿಶ್ಲೇಷಿಸಲಾಗಿದೆ . ಷರತ್ತುಬದ್ಧ ಪ್ರಭುತ್ವ  ಮತ್ತು ಶಾಶ್ವತ ಬಾಹ್ಯ ಮೇಲ್ವಿಚಾರಣೆಯ ಮೂಲಕ ಪ್ಯಾಲೆಸ್ಟೈನಿಯನ್ ಸ್ವಯಂನಿರ್ಧಾರದ ಹಕ್ಕಿನ ವ್ಯವಸ್ಥಿತ ಕ್ರಮೇಣ ನಾಶದ  ಉದ್ದೇಶದ ‘ಟ್ರಂಪ್ ಯೋಜನೆ’ ಪ್ಯಾಲೆಸ್ಟೈನಿಯನ್ ರಾಷ್ಟ್ರೀಯ ಆಶೋತ್ತರಗಳಿಗೆ ವಿನಾಶಕಾರಿಯಾಗಿದೆ ಮತ್ತು ಆಧುನಿಕ ವಸಾಹತುಶಾಹಿ ತರ್ಕದ ಮುಂದುವರಿದ ರೂಪವಾಗಿ ಕಾರ್ಯನಿರ್ವಹಿಸುತ್ತದೆ.  ಹೀಗಾಗಿ, ಟ್ರಂಪ್ ಯೋಜನೆ ಜಾರಿಯಾದರೆ, ಗಾಜಾದಲ್ಲಿ  ‘ಶಾಶ್ವತ ಶಾಂತಿ’ಯ ಬದಲು ಗಾಜಾ ‘ಶಾಶ್ವತ ವಸಾಹತು’ವಾಗುವತ್ತ ಮಹತ್ವದ ಹೆಜ್ಜೆಯಾಗಬಹುದು.

 ಯು.ಎಸ್  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜಂಟಿ ಪತ್ರಿಕಾ ಸಮ್ಮೇಳನದಲ್ಲಿ ಸೆಪ್ಟೆಂಬರ್ 30ರಂದು “ಶಾಂತಿ ಯೋಜನೆ” ಯನ್ನು ಘೋಷಿಸಿದ್ದಾರೆ. ಇಪ್ಪತ್ತು ಅಂಶಗಳ ಈ ಯೋಜನೆ ಪಶ್ಚಿಮ ಏಶ್ಯಾದಲ್ಲಿ “ಶಾಶ್ವತ ಶಾಂತಿ”ಯ ಕಡೆಗೆ ಮಹತ್ವದ ಹೆಜ್ಜೆ ಎಂದಿದ್ದಾರೆ.  ಹಮಾಸ್ ಈ ಯೋಜನೆಗೆ 3-4 ದಿನಗಳೊಳಗೆ ಒಪ್ಪಿಗೆ ಕೊಡಬೇಕು. ಇಲ್ಲದಿದ್ದರೆ ಅವರಿಗೆ “ನರಕ ದರ್ಶನ” ಮಾಡಲಾಗುವುದು ಮತ್ತು ಇಸ್ರೇಲಿಗೆ ಅದರ “ಕೆಲಸ ಪೂರ್ಣಗೊಳಿಸುವ” (ಅಂದರೆ ಗಾಜಾವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವ) ಅವಕಾಶವಿರುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ಅಥವಾ ಯಾವುದೇ ಪ್ಯಾಲೆಸ್ಟೈನ್ ಗುಂಪು ಅಥವಾ ವ್ಯಕ್ತಿಯ ಜತೆ ಚರ್ಚಿಸದ ಈ ಯೋಜನೆ ಪ್ಯಾಲೆಸ್ಟೈನ್ನರ ಆಶೋತ್ತರಗಳನ್ನು ಪೂರೈಸುವುದೇ ? ಅವರಿಗೆ ಒಪ್ಪಿಗೆಯಾಗುವುದೇ? ಅದಕ್ಕೆ ಅವರು ಹೇಗೆ ಬದ್ಧರಾಗುತ್ತಾರೆ ? ಈ ರೀತಿ ತಯಾರಿಸಿದ ಶಾಂತಿ ಯೋಜನೆಯಿಂದ “ಶಾಶ್ವತ ಶಾಂತಿ” ಬರುವುದೇ?

ಶಾಂತಿ ಯೋಜನೆಯ ಮುಖ್ಯ ಅಂಶಗಳು ಇವು

  1. ಈ ಒಪ್ಪಂದವನ್ನು ಬಹಿರಂಗವಾಗಿ ಒಪ್ಪಿಕೊಂಡ 72 ಗಂಟೆಗಳ ಒಳಗೆ ಹಮಾಸ್ ಎಲ್ಲ ಒತ್ತೆಯಾಳುಗಳನ್ನು (ಜೀವಂತ ಮತ್ತು ಸತ್ತವರ ಶವಗಳನ್ನು) ಒಪ್ಪಿಸಬೇಕು. ಆ ನಂತರ ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು
  2. ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಯಾದ ಕೂಡಲೇ ಹಮಾಸ್ ಎಲ್ಲ ಅಸ್ತ್ರಗಳನ್ನು ತ್ಯಜಿಸಬೇಕು
  3. ಹಮಾಸ್ ಅಸ್ತ್ರತ್ಯಾಗ ಪೂರ್ಣವಾದ ನಂತರ ಅಗತ್ಯ ಪರಿಹಾರ ಸಾಮಗ್ರಿಗಳ ಪೂರೈಕೆ ಆರಂಭಿಸಲಾಗುವುದು. ಪರಿಹಾರ ಸಾಮಗ್ರಿಗಳ ಪೂರೈಕೆ-ವಿತರಣೆಗಳನ್ನು ಎರಡೂ ಪಕ್ಷಕ್ಕೆ ಸೇರದ ವಿಶ್ವಸಂಸ್ಥೆಯ ಸಂಘಟನೆಗಳು ನಿಭಾಯಿಸುವುವು.
  4. ಹಮಾಸ್ ಗೆ ಗಾಜಾದ ಆಡಳಿತದಲ್ಲಿ ಯಾವುದೇ ಪಾತ್ರವಿರುವುದಿಲ್ಲ. ಗಾಜಾದಲ್ಲಿ ಎಲ್ಲ ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ, ಪೂರ್ಣ ಮಿಲಿಟರಿ-ರಹಿತ ವಲಯವಾಗಿಸಲಾಗುವುದು. ಇದನ್ನು ನೆರೆಯ ದೇಶಗಳು ಖಾತರಿ ಪಡಿಸುವವು.
  5. ಜೋರ್ಡಾನ್ ಮತ್ತು ಈಜಿಪ್ಟ್ ಗಳು ಯು.ಎಸ್ ನೆರವಿನೊಂದಿಗೆ ಅಂತರರಾಷ್ಟ್ರೀಯ ಸ್ಥೀರೀಕರಣ ಪಡೆ (International Stabilisation Force – ISF) ರಚಿಸುವವು. ಇದು ಪ್ಯಾಲೆಸ್ಟೈನ್ ಪೋಲಿಸ್ ಪಡೆಯನ್ನು ರಚಿಸಿ ತರಬೇತಿ ಮಾಡುವುದು. ಇದು ಗಾಜಾ ಪಟ್ಟಿಯ ಆಂತರಿಕ ಭದ್ರತೆ ಮತ್ತು ಗಡಿ ರಕ್ಷಣೆ ಮಾಡುವುದು
  6. ಇಸ್ರೇಲ್ ಗಾಜಾವನ್ನು ಆಕ್ರಮಿಸುವುದಿಲ್ಲ ಅಥವಾ ಕಬಳಿಸುವುದಿಲ್ಲ. ISF ಗಾಜಾದಲ್ಲಿ ನಿಯಂತ್ರಣ ಮತ್ತು ಸ್ಥಿರತೆ ಸ್ಥಾಪಿಸುತ್ತಿದ್ದಂತೆ,  ಒಪ್ಪಿತ ಷರತ್ತುಗಳು, ನಿಶ್ಶಸ್ತ್ರೀಕರಣದ ಸ್ಥಿತಿ ಇತ್ಯಾದಿಗಳ ಮೇಲೆ ಅವಲಂಬಿಸಿ, ಇಸ್ರೇಲಿ ಮಿಲಿಟರಿ (IDF) ಪಡೆಯು ಕ್ರಮೇಣ ಗಾಜಾದ ವಿವಿಧ ಪ್ರದೇಶಗಳಿಂದ  ಹಿಂತೆಯುತ್ತದೆ. ಇದನ್ನು ಯು.ಎಸ್, ಈ ಒಪ್ಪಂದಕ್ಕೆ ಖಾತರಿ ನೀಡುವ ದೇಶಗಳು ಮತ್ತು ISF ಜತೆ ಸಮನ್ವಯದೊಂದಿಗೆ  ಮಾಡುತ್ತದೆ. ಆದರೆ  IDF  “ಭದ್ರತಾ ಪರಿಧಿ ಉಪಸ್ಥಿತಿ”ಯನ್ನು ನಿರ್ವಹಿಸುತ್ತದೆ, ಮತ್ತು ಅದು ಗಾಜಾ ಯಾವುದೇ “ಭಯೋತ್ಪಾದನೆ ಮತ್ತೆ ಹುಟ್ಟುವ” ಬೆದರಿಕೆಯಿಂದ ಸರಿಯಾಗಿ ಮುಕ್ತವಾಗುವವರೆಗೆ ಉಳಿಯುತ್ತದೆ.
  7. ಮಧ್ಯಂತರದ ಅವಧಿಯಲ್ಲಿ, ಗಾಜಾ “ ರಾಜಕೀಯೇತರ ತಾಂತ್ರಿಕ ಪ್ಯಾಲೆಸ್ಟೈನಿಯನ್ ಸಮಿತಿಯ ತಾತ್ಕಾಲಿಕ ಮಧ್ಯಕಾಲೀನ (ಟ್ರಾನ್ಸೀಶನ್) ಆಡಳಿತ”ದಿಂದ ಆಳಲ್ಪಡುತ್ತದೆ. ಈ ಸಮಿತಿಯು  “ಶಾಂತಿ ಮಂಡಳಿ” (ಬೋರ್ಡ್ ಆಫ್ ಪೀಸ್) ಎಂಬ ಹೊಸ ಅಂತರರಾಷ್ಟ್ರೀಯ ಮಧ್ಯಕಾಲೀನ (ಟ್ರಾನ್ಸೀಶನ್) ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತದೆ.
  8. ಟ್ರಂಪ್ “ಶಾಂತಿ ಮಂಡಳಿ” ಯ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಇದರ ಸದಸ್ಯರಾಗಿರುತ್ತಾರೆ. ಇದರ ನಾಯಕತ್ವದಲ್ಲಿ ಗಾಜಾ ಪಟ್ಟಿಯ “ಮರು ಬೆಳವಣಿಗೆ” ಮತ್ತು ಅಗತ್ಯವಾದ ನಿಧಿಯ ನಿರ್ವಹಣೆ ಮಾಡಲಾಗುವುದು.

ಇದನ್ನೂ ಓದಿ : ಟ್ರಂಪ್‍ ಸುಂಕ ಭಯೋತ್ಪಾದನೆಯ ವಿರುದ್ಧ ವ್ಯಾಪಕ ಅಭಿಯಾನ

ಪ್ಯಾಲೆಸ್ಟೈನ್ ಜನತೆಯ ರಾಷ್ಟ್ರೀಯ ಆಶೋತ್ತರಗಳ ಸಾಧನೆಯ ದೃಷ್ಟಿಕೋಣದಿಂದ ಈ ಯೋಜನೆಯ ಪ್ರಮುಖ ಅಂಶಗಳನ್ನು ನೋಡಿದರೆ ಈ ಕೆಳಗಿನ ಅಂಶಗಳು ಸ್ಪಷ್ಟವಾಗುತ್ತವೆ.

  1. ಪ್ಯಾಲೆಸ್ಟೈನ್ ಜನತೆಯ ಸ್ವಯಂ-ನಿರ್ಧಾರದ, ಸ್ವಯಮಾಡಳಿತದ , ಸ್ವ-ರಕ್ಷಣೆಯ ಹಕ್ಕುಗಳನ್ನು ಪೂರ್ಣವಾಗಿ ಬಿಟ್ಟುಕೊಡಬೇಕು. ಸ್ವತಂತ್ರ ಪ್ಯಾಲೆಸ್ಟೈನ್ ಪ್ರಭುತ್ವ  ಸ್ಥಾಪನೆಗೆ ಯಾವುದೇ ಖಾತರಿ ಇಲ್ಲ. ಅದು ಇಸ್ರೇಲ್,  ಯು.ಎಸ್, ಯೋಜನೆಗೆ ಖಾತರಿ ಕೊಡುವ ನೆರೆಯ ಮತ್ತು ಇತರ ದೇಶಗಳ ಆಳುವವರ ಮರ್ಜಿಯ ಮೇಲೆ ಅವಲಂಬಿಸಿರುತ್ತದೆ. ಹೆಚ್ಚೆಂದರೆ  1993 ಒಸ್ಲೊ ಒಪ್ಪಂದದಲ್ಲಿ ಆದಂತೆ ಮುನಿಸಿಪಾಲಿಟಿಯಷ್ಟು ಅಧಿಕಾರ ಸಹ ಇಲ್ಲದ ಇಸ್ರೇಲಿನ  ಪ್ರಾಕ್ಸಿ ಮಾತ್ರ ಆಗಿರುವ “ಪ್ಯಾಲೆಸ್ಟೈನ್ ಪ್ರಾಧಿಕಾರ” ಎಂಬ ಗಡಿ ಇಲ್ಲದ ನಾಡಿನ ನಾಮ್ ಕಾ ವಾಸ್ತೆ ಸರಕಾರ ಸಿಗಬಹುದು. ಅಷ್ಟೇ.
  2. ಪ್ಯಾಲೆಸ್ಟೈನಿಯನ್ ನಿವಾಸಿಗಳ ಮೇಲೆ ದೈನಂದಿನ ವಸಾಹತುಗಾರರ ದಾಳಿಗಳು, ಅಲ್-ಅಕ್ಸಾ ಮಸೀದಿಯ ಮೇಲೆ ನಿರಂತರ ಉಲ್ಲಂಘನೆಗಳು, ಈಗಿನ “ಪ್ಯಾಲೆಸ್ಟೈನ್ ಪ್ರಾಧಿಕಾರ” ದ ಆಡಳಿತದಲ್ಲಿರುವ ಪಶ್ಚಿಮ ದಂಡೆಯ ಪ್ರದೇಶವನ್ನು ಭಾಗಗಳಾಗಿ ವಿಭಜಿಸುವ ‘ಯಹೂದಿ-ಮಾತ್ರ’ ಕಾಲೊನಿಗಳು ಮತ್ತು ಇಸ್ರೇಲಿ ಚೆಕ್ ಪಾಯಿಂಟ್ ಗಳ ನಿತ್ಯ ಚಿತ್ರಹಿಂಸೆಯನ್ನು ನಿರ್ಲಕ್ಷಿಸುತ್ತದೆ. ಅದನ್ನು ಪರಿಹರಿಸುವ ಯಾವುದೇ ಪ್ರಸ್ತಾಪವಿಲ್ಲ.
  3. ನರಮೇಧ ಮತ್ತು ಬರ ಪರಿಸ್ಥಿತಿ ಎದುರಿಸುತ್ತಿರುವ ಗಾಜಾದ ಜನತೆಯ ಅತ್ಯಂತ ತುರ್ತಿನ ಮಾನವೀಯ ಅಗತ್ಯವಾದ ಪರಿಹಾರ ಸಾಮಗ್ರಿಗಳ ಪೂರೈಕೆ-ವಿತರಣೆ ಸಹ ಒಪ್ಪಂದವಾದ ಕೂಡಲೇ ಆರಂಭವಾಗುವುದಿಲ್ಲ. ಹಮಾಸ್ ಅಸ್ತ್ರತ್ಯಾಗ ಪೂರ್ಣವಾದ ಮೇಲೆ ಅದು ಆರಂಭವಾಗುತ್ತದೆ. ಹಮಾಸ್ ಅಸ್ತ್ರತ್ಯಾಗ ಪೂರ್ಣವಾಗಿಲ್ಲ ಎಂಬ ನೆಪದ ಮೇಲೆ ಇಸ್ರೇಲ್ ಇದನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಬಹುದು.
  4. ಒಪ್ಪಂದದಲ್ಲಿ ಯಾವುದೇ ಪಾತ್ರವಿಲ್ಲದ ಹಮಾಸ್ ಮತ್ತು ಪ್ಯಾಲೆಸ್ಟೈನಿಯನ್ ಕಡೆ ಮಾಡಬೇಕಾದ್ದು ಕಾಲಬದ್ಧವಾಗಿದೆ. ಉದಾ: ಒಪ್ಪಂದದ 72 ಗಂಟೆಗಳೊಳಗೆ ಒತ್ತೆಯಾಳುಗಳ ಬಿಡುಗಡೆ; ಕೈದಿಗಳ ಬಿಡುಗಡೆಯಾದ ಕೂಡಲೇ ಅಸ್ತ್ರತ್ಯಾಗ.   ಆದರೆ ಇಸ್ರೇಲಿ ಕಡೆ ಈ ಥರದ ಯಾವುದೇ ಕಾಲಬದ್ಧ ಕಾರ್ಯಾಚರಣೆಯಿಲ್ಲ.  ಉದಾ: ಇಸ್ರೇಲಿ ಮಿಲಿಟರಿ ಹಿಂತೆಗೆತಕ್ಕೆ ಯಾವುದೇ ಕಾಲಮಿತಿ ಇಲ್ಲ, ಹಲವಾರು ಅಸ್ಪಷ್ಟ ಷರತ್ತುಗಳಿವೆ. ಕೊನೆಗೂ ಅದು ಇಸ್ರೇಲಿನ ಮರ್ಜಿ.
  5. ಅಸ್ಪಷ್ಟ ಷರತ್ತುಬದ್ಧ ಇಸ್ರೇಲಿ ಮಿಲಿಟರಿ ಹಿಂತೆಗೆತ ಒಪ್ಪಂದದಲ್ಲಿ ಇದೆ. ಆದರೆ ಅದೇ ಒಪ್ಪಂದದಲ್ಲಿ ಗಾಜಾದ ಸುತ್ತ ಇಸ್ರೇಲಿನ “ಭದ್ರತಾ ಪರಿಧಿ ಉಪಸ್ಥಿತಿ” ಶಾಶ್ವತವಾಗಿರುತ್ತದೆ ಎಂಬುದು ಅದನ್ನು ಅರ್ಥಹೀನವಾಗಿಸುತ್ತದೆ.
  6. ಅಧ್ಯಕ್ಷ ಟ್ರಂಪ್ ಮತ್ತು ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ನಾಯಕತ್ವದ “ಶಾಂತಿ ಮಂಡಳಿ” ಅಥವಾ ಅಂತರರಾಷ್ಟ್ರೀಯ ಮಧ್ಯಕಾಲೀನ ಸಂಸ್ಥೆ ಆಂಗ್ಲೋ-ಅಮೆರಿಕನ್ ಯುರೋ ದೇಶಗಳ ನಿಯಂತ್ರಣದಲ್ಲಿದ್ದು ವಸಾಹತುಶಾಹಿ ಸರಕಾರದಂತೆ ಈ ದೇಶಗಳ ಕಂಪನಿಗಳ ಹೂಡಿಕೆಗೆ ಸೂಪರ್ ಲಾಭಕ್ಕೆ ಬಳಕೆಗೆ ದಾರಿ ತೆರೆಯುತ್ತದೆ. ಗಾಜಾ ಪೂರ್ಣವಾಗಿ ಟ್ರಂಪ್-ಬ್ಲೇರ್ ಗಳ ಖಾಸಗಿ ರೀಯಲ್ ಎಸ್ಟೇಟ್ ಆದರೂ ಆಶ್ಚರ್ಯವಿಲ್ಲ. ಯಾವುದೇ ರೀಯಲ್ ಎಸ್ಟೇಟ್ ಖೂಳರಂತೆ ಗಾಜಾದ ಜನತೆಯನ್ನು ಆಮಿಷ-ಬೆದರಿಕೆಗಳ ಮೂಲಕ ಎತ್ತಂಗಡಿ ಮಾಡುವ ಸಾಧ್ಯತೆಯೇ ಹೆಚ್ಚು.

ಆಶ್ಚರ್ಯದ ಸಂಗತಿಯೆಂದರೆ ಇರಾನ್ ಮತ್ತು ಯೆಮೆನ್ ಬಿಟ್ಟು ಆ ಪ್ರದೇಶದ ನೆರೆಯ ಅರಬ್-ಮುಸ್ಲಿಂ ದೇಶಗಳು ಈ ಯೋಜನೆಯನ್ನು ಬೆಂಬಲಿಸಿವೆ.  ಇಂಡೋನೇಶ್ಯಾ,, ಭಾರತ ಸಹ ಟ್ರಂಪ್ ಯೋಜನೆಯನ್ನು ಸ್ವಾಗತಿಸಿವೆ.  ಇತ್ತೀಚೆಗೆ ಪ್ಯಾಲೆಸ್ಟೈನ್ ಜನತೆ ಮೇಲೆ ಪ್ರೀತಿ, ಅನುಕಂಪ ಉಕ್ಕಿ ಹರಿದು ತರಾತುರಿಯಲ್ಲಿ ಪ್ಯಾಲೆಸ್ಟೈನ್  ಪ್ರಭುತ್ವಕ್ಕೆ ಮಾನ್ಯತೆ ಘೋಷಿಸಿದ  ಹೆಚ್ಚಿನ ಪಾಶ್ಚಿಮಾತ್ಯ ದೇಶಗಳೂ ಇದನ್ನು ಸ್ವಾಗತಿಸಿವೆ.

ಪ್ಯಾಲೆಸ್ಟೈನ್ ಜನರ ಜತೆ ಚರ್ಚಿಸದೆ  ಪ್ಯಾಲೆಸ್ಟೈನಿನ ವಿಭಜನೆಯನ್ನು ಹೇರಿದ 1917ರ ಬಾಲ್ಫೋರ್ ಘೋಷಣೆ ಮತ್ತು 1947ರ ವಿಶ್ವಸಂಸ್ಥೆಯ ಸಾಮ್ರಾಜ್ಯಶಾಹಿ ತಂತ್ರಗಳನ್ನು ‘ಟ್ರಂಪ್ ಯೋಜನೆ’ ನೆನಪಿಸುತ್ತದೆ.

ಈ ನಡುವೆ ನೆತನ್ಯಾಹು ತಮ್ಮ ಎಂದಿನ ಚಾಳಿಯಂತೆ ಯೋಜನೆಯಲ್ಲಿ ಏನೇ ಇದ್ದರೂ ಗಾಜಾದಿಂದ ಇಸ್ರೇಲಿ ಮಿಲಿಟರಿ ಹಿಂತೆಗೆಯುವುದಿಲ್ಲ ಎಂದಿದ್ದಾರೆ.  ಇದಲ್ಲದೆ,  ಪ್ಯಾಲೆಸ್ಟೈನ್ ಪ್ರಾಧಿಕಾರವು “ICC ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ಕಾನೂನು ಯುದ್ಧ”ವನ್ನು ನಿಲ್ಲಿಸಬೇಕು ಎಂಬ ಹೊಸ ಷರತ್ತು ಹಾಕಿದ್ದಾರೆ.  ಇಸ್ರೇಲಿ ಯುದ್ಧ ಅಪರಾಧಗಳು ಮತ್ತು ನರಮೇಧದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯವನ್ನು ಕೇಳುವ ಹಕ್ಕನ್ನು ಸಹ  ಪ್ಯಾಲೆಸ್ಟೈನಿಯನ್ನರ ತ್ಯಜಿಸಬೇಕೆಂಬುದು ಇದರರ್ಥ

ಮೇಲೆ ಹೇಳಿ ದ ಕಾರಣಗಳಿಗಾಗಿ ಹಮಾಸ್ ಈ ಯೋಜನೆಯನ್ನು ಒಪ್ಪಿಕೊಳ್ಳದಿರುವ ಸಾಧ್ಯತೆಯೇ ಹೆಚ್ಚು. ಅದು ಒಪ್ಪಲಿ ಬಿಡಲಿ, ಪ್ಯಾಲೆಸ್ಟೈನ್ ಜನತೆ ಒಪ್ಪುವ ಸಾಧ್ಯತೆಯೂ ಕಡಿಮೆ.  ಅಂಥ ಸಂದರ್ಭದಲ್ಲಿ ಇಸ್ರೇಲ್-ಯು.ಎಸ್ ಜಂಟಿಯಾಗಿ ಪ್ಯಾಲೆಸ್ಟೈನ್ ಜನತೆಗೆ “ನರಕ ದರ್ಶನ” ಮಾಡಿಸುವ ಮತ್ತು “ಕೆಲಸ ಪೂರ್ಣಗೊಳಿಸುವ” (ಅಂದರೆ ಗಾಜಾವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವ) ಭೀಕರ ಪರಿಸ್ಥಿತಿ ಉಂಟಾಗಬಹುದು.

‘ಟ್ರಂಪ್ ಯೋಜನೆ’ ಪ್ಯಾಲೆಸ್ಟೈನಿಯನ್ ರಾಷ್ಟ್ರೀಯ ಆಶೋತ್ತರಗಳಿಗೆ ವಿನಾಶಕಾರಿಯಾಗಿದೆ ಮತ್ತು ಆಧುನಿಕ ವಸಾಹತುಶಾಹಿ ತರ್ಕದ ಮುಂದುವರಿದ ರೂಪವಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯ ವಸಾಹತುಶಾಹಿ ಸ್ವರೂಪದ ಕೇಂದ್ರ ಸ್ತಂಭವೆಂದರೆ ಷರತ್ತುಬದ್ಧ ಪ್ರಭುತ್ವ  ಮತ್ತು ಶಾಶ್ವತ ಬಾಹ್ಯ ಮೇಲ್ವಿಚಾರಣೆಯ ಮೂಲಕ ಪ್ಯಾಲೆಸ್ಟೈನಿಯನ್ ಸ್ವಯಂನಿರ್ಧಾರದ ಹಕ್ಕಿನ ವ್ಯವಸ್ಥಿತ ಕ್ರಮೇಣ ನಾಶ.

ಹೀಗಾಗಿ, ಟ್ರಂಪ್ ಯೋಜನೆ ಜಾರಿಯಾದರೆ, ಗಾಜಾದಲ್ಲಿ  ‘ಶಾಶ್ವತ ಶಾಂತಿ’ಯ ಬದಲು, ಗಾಜಾ ‘ಶಾಶ್ವತ ವಸಾಹತು’ ಆಗುವತ್ತ ಮಹತ್ವದ ಹೆಜ್ಜೆಯಾಗಬಹುದು.

********

 

ಇದನ್ನೂ ನೋಡಿ : ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media

 

 

Donate Janashakthi Media

Leave a Reply

Your email address will not be published. Required fields are marked *