ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಮೈಮೇಲೆ ಹೊದ್ದುಕೊಂಡು, ಮನುವಾದವನ್ನುನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ ಆರ್‌ಎಸ್‌ಎಸ್ ಎಂಬ ಅಪಾಯಕಾರಿ ಸಂಘಟನೆ ಹುಟ್ಟಿ ಇದೇ ವಿಜಯದಶಮಿಗೆ ನೂರು ವರ್ಷವಾಗುತ್ತಿದೆ. ಒಂದೆಡೆ ಆರೆಎಸ್‌ಎಸ್ ತನ್ನ ಅಜೆಂಡಾದ ಜಾರಿಗಾಗಿ ಇನ್ನಿಲ್ಲದ ಪ್ರಯತ್ನ, ಕಸರತ್ತು ನಡೆಸುತ್ತಿದೆ. ಇದೇ ವೇಳೇ ಆರ್‌ಎಸ್‌ಎಸ್ ತೊರೆದು ಬಂದವರ ಸಂಖ್ಯೆಯೂ ಹೆಚ್ಚಿದೆ. ಹೊರ ಬಂದ ನಂತರ ಅವರು ಆರ್‌ಎಸ್‌ಎಸ್ ಕುರಿತಾಗಿ ಬರೆದ ಪುಸ್ತಕಗಳು ಯುಜನರ ಪುಸ್ತಕಗಳು ಯುವಜನರಲ್ಲಿ ಜಾಗೃತಿಯ ಗ್ರಂಥಗಳಾಗಿವೆ. ಆರ್‌ಎಸ್‌ಎಸ್
ಗುರುರಾಜ ದೇಸಾಯಿ
ಆರ್‌ಎಸ್‌ಎಸ್ ಹುಟ್ಟಿದ್ದು ಸೆಪ್ಟಂಬರ್ 27, 1925ರ ವಿಜಯ ದಶಮಿಯಿಂದು. ಕೇಶವ ಬಲಿರಾಮ ಹೆಡ್ಗೇವಾರ್ ಅವರು ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದರು. ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆ ಎಂದು ಆರಂಭದಲ್ಲಿ ನಂಬಿಸಿದ ಅವರು, ನಂತರದಲ್ಲಿ ಹಿಂದೂ ಸಂಸ್ಕೃತಿ, ಹಿಂದೂಗಳ ಒಗ್ಗಟ್ಟನ್ನು ಪ್ರತಿಪಾದಿಸಲು ಬಳಸಿಕೊಂಡು, ಹಿಂದುತ್ವ ಸಿದ್ದಾಂತವನ್ನು ಬಹುಸಂಖ್ಯಾತ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಮಾಡಿದರು. ಆರ್‌ಎಸ್‌ಎಸ್‌ನಲ್ಲಿದ್ದ ಸ್ವಯಂ ಸೇವಕರನ್ನು (ಮಾರಿಕೊಂಡವರು ಎಂದು ಎಕೆ ಸುಬ್ಬಯ್ಯ ಕರೆಯುತ್ತಿದ್ದರು) ಮುಸ್ಲಿಂ, ಕ್ರಿಶ್ಚಿಯನ್, ಕಮ್ಯುನಿಷ್ಟರ ವಿರುದ್ಧ ದ್ವೇಷ ಸಾಧಿಸಲು ಬಳಸಿಕೊಂಡರು.
ಆರ್‌ಎಸ್‌ಎಸ್‌ನ ಅರೆಸೈನಿಕ ಶೈಲಿಯ ಕಾರ್ಯನಿರ್ವಹಣೆ ಭಾರತ ಫ್ಯಾಸಿಸಮ್ ಎಂದೆ ಕರೆಯಿಸಿಕೊಳ್ಳುವಷ್ಟರ ಮಟ್ಟಿಗೆ ಶಿಸ್ತಿನ ಹೆಸರಿನಲ್ಲಿ ಅಪಾಯಕಾರಿಯಾಗಿ ಬೆಳದಿದೆ. ಅದಕ್ಕೆ ಕಾರಣವೇನೆಂದರೆ.., ಆರ್‌ಎಸ್‌ಎಸ್ ನಾಯಕರು ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸೊಲಿನಿಯನ್ನು ಮೆಚ್ಚಿಕೊಂಡವರು . ಗೋಲ್ವಾಲ್ಕರ್ ಅಡಾಲ್ಫ್ ಹಿಟ್ಲರ್‌ನ ಜನಾಂಗೀಯ ಶುದ್ಧತೆಯ ಸಿದ್ಧಾಂತದಿಂದ ಸ್ಫೂರ್ತಿ ಪಡೆದರು. ಜನಾಂಗೀಯ ದ್ವೇಷ, ಕೋಮುಗಲಭೆ, ಜಾತೀಯತೆಯನ್ನು ಪೋಷಿಸಿಕೊಂಡು ಆರ್‌ಎಸ್‌ಎಸ್ ಅನೇಕ ಗಲಭೆಗಳಿಗೆ ಕಾರಣವಾಗಿದೆ. ಭಯೋತ್ಪಾದಕ ದಾಳಿಗಳನ್ನು ಉತ್ತೇಜಿಸುವ ಮತ್ತು ಯೋಜಿಸುವ ಜವಾಬ್ದಾರಿಯನ್ನು ಆರ್‌ಎಸ್‌ಎಸ್ ವಹಿಸಿಕೊಂಡಿದೆ ಎಂಬುದಕ್ಕೆ ಕೆಲ ಸಾಕ್ಷಿಗಳು ಇವೆ. ನವೆಂಬರ್ 2003 ರಲ್ಲಿ, ಮಹಾರಾಷ್ಟ್ರದ ಪರ್ಭಾನಿಯಲ್ಲಿರುವ ಮಸೀದಿಯಲ್ಲಿ ಆರ್‌ಎಸ್‌ಎಸ್ ಸದಸ್ಯರು ಇಟ್ಟ ಎರಡು ಬಾಂಬ್‌ಗಳು ಒಬ್ಬ ವ್ಯಕ್ತಿಯನ್ನು ಕೊಂದು ಇತರ ಮೂವತ್ತನಾಲ್ಕು ಜನರನ್ನು ಗಾಯಗೊಳಿಸಿದವು . ಭಾರತ ಮತ್ತು ಪಾಕಿಸ್ತಾನದ ನಡುವೆ ಚಲಿಸುವ ರೈಲಿನಲ್ಲಿ ಅಂತಹ ಮತ್ತೊಂದು ಬಾಂಬ್ ದಾಳಿಯಲ್ಲಿ ಅರವತ್ತೆಂಟು ಜನರು ಸಾವನ್ನಪ್ಪಿದರು, ಹೆಚ್ಚಾಗಿ ಪಾಕಿಸ್ತಾನಿಯರು. ಸೆಪ್ಟೆಂಬರ್ 29, 2008 ರಂದು, ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಮುಸ್ಲಿಮರು ತಮ್ಮ ರಂಜಾನ್ ಉಪವಾಸವನ್ನು ಮುರಿಯುತ್ತಿದ್ದ ಪ್ರದೇಶದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಭಯೋತ್ಪಾದಕರು ಇಟ್ಟಿದ್ದ ಬಾಂಬ್ ಸ್ಫೋಟಗೊಂಡು ಆರು ಜನರು ಸಾವನ್ನಪ್ಪಿದರು ಮತ್ತು 101 ಜನರು ಗಾಯಗೊಂಡರು.
2003 ಮತ್ತು 2008 ರ ನಡುವೆ, ಆರ್‌ಎಸ್‌ಎಸ್ ಅಥವಾ ಇತರ ಸಂಘ ಪರಿವಾರ ಸಂಘಟನೆಗಳಿಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ದಾಳಿಗಳು ಸುಮಾರು 150 ಜನರನ್ನು ಕೊಂದವು,ಇದು ಉದಾಹರಣೆ ಅಷ್ಟೆ ಇಂತಹ ಅನೇಕ ಕೃತ್ಯಗಳಲ್ಲಿ ಆರ್‌ಎಸ್‌ಎಸ್ ಭಾಗಿಯಾದ ಆರೋಪವನ್ನು ಹೊತ್ತಿದೆ.
‘ಆರ್‌ಎಸ್‌ಎಸ್‌ನ ಆಳ ಅಗಲ’ದ ಬಗ್ಗೆ ಪುಟವಷ್ಟೆ ಬರೆಯಲು ಅಥವಾ ಅರ್ಧ ಗಂಟೆ ಭಾಷಣ ಅಷ್ಟೆ ಸಾಕಾಗುವುದಿಲ್ಲ. ಅದಕ್ಕೆ ಸಾಕಷ್ಟು ಅಧ್ಯಯನ ಬೇಕು. ಆರ್ ಎಸ್ ಎಸ್ ಅಂದರೇನು? ಆ ಸಂಘಟನೆಯ ನೈಜ ರೂಪ, ಸ್ವಯಂ ಸೇವಕರ ಕೆಲಸಗಳು, ಅದರ ಜನಪ್ರೀತಿ, ದೇಶಪ್ರೀತಿ ಅರಿವಾಗಬೇಕಾದರೆ ಅದರ ಬಗ್ಗೆ ತಿಳಿಯುವುದು ಅವಶ್ಯವಾಗಿದೆ. ಹಾಗಾಗಿ ಈ ಕೆಳಗಿನ ಪುಸ್ತಕಗಳ ಅಧ್ಯಯನ ಅಗತ್ಯವೆಂಬುದು ನನ್ನ ಅಭಿಪ್ರಾಯ.

ಆರ್‌ಎಸ್‌ಎಸ್ ಅಂತರಂಗ
ಈ ಪುಸ್ತಕವನ್ನು ಆರ್‌ಎಸ್‌ಎಸ್‌ನ ಕಾರ್ಯಕರ್ತರು ಮತ್ತು ಕರ್ನಾಟಕ ಬಿಜೆಪಿಯ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯನವರು ಬರೆದಿದ್ದಾರೆ. ಆರ್‌ಎಸ್‌ಎಸ್ ಅಂತರಂಗ ಕೃತಿಯನ್ನು ಲಂಕೇಶ್ ಪ್ರಕಾಶನ, ಕ್ರಿಯಾ ಮಾಧ್ಯಮ, ಲಡಾಯಿ ಪ್ರಕಾಶನ ಸೇರಿದಂತೆ ಹಲವು ಪ್ರಕಾಶನಗಳು ಪ್ರಕಟಿಸಿವೆ. ಕೇವಲ 80 ಪುಟಗಳಿರುವ ಪುಸ್ತಕ ಇದು. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು. ಆರ್‌ಎಸ್‌ಎಸ್ ಭಾರತ ದೇಶದ ನೆಲದಲ್ಲಿ ನಡೆಸಿದ ಪರಾಕ್ರಮಗಳನ್ನು ಬಿಚ್ಚಿಟ್ಟಿದೆ. ಆರ್ ಎಸ್‌ಎಸ್ ನಡೆಸಿದ ಕಿತಾಪತಿಗಳನ್ನು ವಿವರಿಸಿದ್ದಾರೆ. ಧಾರವಾಡ, ಮಂಗಳೂರು ಹೇಗೆ ಕೋಮುವಾದದ ಪ್ರಯೋಗ ಶಾಲೆ ಆಯಿತೆಂದು, ಶಾಖೆಯಲ್ಲಿ ಮುಸ್ಲಿಂ ದ್ವೇಷವನ್ನು ಹೇಗೆ ಬೆಳೆಸುತ್ತಾರೆ ಎಂಬುದನ್ನು ಈ ಪುಸ್ತಕದಲ್ಲಿ ಸರಳವಾಗಿ ಅರ್ಥೈಸುವಂತೆ ಕಟ್ಟಿಕೊಟ್ಟಿದ್ದಾರೆ.
ಆರ್‌ಎಸ್‌ಎಸ್ ಬುಟ್ಟಿಯೊಳಗೆ ಬೀಳುವ, ಕಂಡವರ ಮಕ್ಕಳು ಯಾವ ಯಾವ ಪ್ರಕಾರ, ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡು, ಮಾನಸಿಕವಾಗಿ ಬೌದ್ಧಿಕವಾಗಿ ಕುರೂಪಿಗಳಾಗಿ ಜೀತದಾಳುಗಳಾಗಿ ಬಿಡುತ್ತಾರೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ಸಾಕ್ಷಿ ಸಮೇತ ನೀಡಿದ್ದಾರೆ. ರಾಷ್ಟ್ರ ಪ್ರೇಮ ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುವ ಪದ, ಇದನ್ನೆ ಪ್ರಯೋಗಿಸಿ ಕೊನೆಯಲ್ಲಿ ರಾಷ್ಟ್ರ ಪ್ರೇಮ ಹೋಗಿ, ಹಿಂದೂ ರಾಷ್ಟ್ರವನ್ನು ತೂರಿ ಬಿಡುತ್ತಾರೆ. ಅದನ್ನು ಒಪ್ಪಿದರೆ ನೀವು ದೇಶ ಪ್ರೇಮಿ ಪ್ರಶ್ನಿಸಿದರೆ ರಾಷ್ಟ್ರದ್ರೋಹಿಯಾಗುತ್ತಿರಿ ಎಂಬ ಸೂಕ್ಷ್ಮ ವಿಚಾರಗಳನ್ನೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. “ಉಪಯೋಗಿಸಿ ಕೊಳ್ಳಿ” ಎಂಬ ಶಬ್ಧವಂತೂ ಆರ್‌ಎಸ್‌ಎಸ್‌ನವರ ಕ್ರೂರತೆಯನ್ನು ಬಿಚ್ಚಿಡುತ್ತದೆ. ಈ ಪುಸ್ತಕ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪುಸ್ತಕ ಪ್ರೀತಿ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.
ಇದನ್ನೂ ಓದಿ : ಆರ್‌ಎಸ್‌ಎಸ್ ಕೋಮ ದ್ರವೀಕರಣದ ಸಾಂಸ್ಕೃತಿಕ ರಾಜಕಾರಣಕ್ಕೆ ಮಾರ್ಕ್ಸ್ ವಾದವೇ ಉತ್ತರ – ಯು. ಬಸವರಾಜ್ ಆರ್‌ಎಸ್‌ಎಸ್

ಏನಿದು ಈ ಹಿಂದೂ ರಾಷ್ಟ್ರ?
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಸೀತಾರಾಂ ಯೆಚೂರಿ ಅವರು ಭಾರತ ಹಿಂದೂ ರಾಷ್ಟ್ರ ಆಗುವುದರ ಅಪಾಯವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯೆಚೂರಿ ಅವರ ಬರಹವನ್ನು ವೇದರಾಜ ಎನ್.ಕೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.
ಭಾರತ ದೇಶ ಧಾರ್ಮಿಕ, ಭಾಷಿಕ, ಸಾಂಸ್ಕೃತಿಕ, ಜನಾಂಗೀಯ, ಪ್ರಾದೇಶಿಕ ಇತ್ಯಾದಿಯಾಗಿ ವ್ಯಾಪಕವಾದ ವೈವಿಧ್ಯತೆಯಿಂದ ತುಂಬಿರುವ ದೇಶ. ಈ ವೈವಿಧ್ಯತೆಯ ಮೇಲೆ ಒಂದು ದುಷ್ಟ ದಾಳಿ ಹೇಗೆ ನಡೆಯುತ್ತಿದೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ತನ್ನ ಫ್ಯಾಸಿಸ್ಟ್ ಗುರಿ ಸಾಧನೆಗೆ ಆರ್‌ಎಸ್‌ಎಸ್ ಮಾಡಲಾರದ ಕೆಲಸಗಳಿಲ್ಲ ಎಂಬುದನ್ನು ಇತ್ತೀಚೆಗೆ ನಾವು ಕಾಣುತ್ತಲೆ ಇದ್ದೇವೆ. ಕೋಮು ಭಾವೋದ್ವೇಗಗಳನ್ನು ಬಡಿದೆಬ್ಬಿಸಲು ಯಾವ ರೀತಿ ಅವರು ಸಂಚು ರೂಪಿಸುತ್ತಾರೆ ಎಂಬುದನ್ನು ಈ ಪುಸ್ತಕ ಒಳಗೊಂಡಿದೆ.
ಯೆಚೂರಿ ಅವರ ಅಭಿಪ್ರಾಯದಲ್ಲಿ ’ಹಿಂದೂ ರಾಷ್ಟ್ರದ ಸ್ಥಾಪನೆಯೆಂದರೆ ಧರ್ಮನಿರಪೇಕ್ಷತೆಯ ಮೇಲೆ ನಿಂತ ಸಂಸದೀಯ ಪ್ರಜಾಪ್ರಭುತ್ವದ ಬದಲು ಒಂದು ಅಸಹಿಷ್ಣು ಮತೀಯ ವಿಚಾರಧಾರೆಯನ್ನು ಆಧರಿಸಿದ ಸರ್ವಾಧಿಕಾರವನ್ನು ತರುವುದು ಎಂದೇ ಅರ್ಥ. ಆಧುನಿಕ ಭಾರತವನ್ನು ರಕ್ಷಿಸಬೇಕಾದರೆ ಕೇಸರಿ ಪಡೆಗಳ ಈ ಆಜೆಂಡಾವನ್ನು ವಿಫಲಗೊಳಿಸಬೇಕು. ಉತ್ತಮ ಬದುಕಿಗಾಗಿ, ಭವಿಷ್ಯಕ್ಕಾಗಿ ಭಾರತವನ್ನು ಪರಿವರ್ತಿಸಬೇಕಾದರೆ ಮೊದಲು ಅದನ್ನು ಉಳಿಸಿಕೊಳ್ಳಬೇಕು’ ಎಂದು ಈ ಪುಸ್ತಕದಲ್ಲಿ ಹೇಳಿದ್ದಾರೆ. ಈ ಪುಸ್ತಕ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪುಸ್ತಕ ಪ್ರೀತಿ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ನರಕದ ಗರ್ಭಗುಡಿಯೊಳಗೆ
ಆರ್‌ಎಸ್‌ಎಸ್‌ನಲ್ಲಿದ್ದು ಬೇಸೆತ್ತು ಹೊರಗೆ ಬಂದಿದ್ದ ಸುಧೀಶ್ ಮಿನ್ನಿಯವರು ಬರೆದಿರುವ ನರಕದ ಗರ್ಭ ಗುಡಿಯೊಳಗೆ ಪುಸ್ತಕವನ್ನು ಪಿ.ಕೆ.ಇ ಕೃಷ್ಣನ್‌ರವರ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಬೆಲೆ 120 ರೂಗಳು.
“ನನ್ನ ಎಲ್ಲಾ ಕನಸುಗಳನ್ನು ಆ ಭಗವಧ್ವಜದ ಮುಂದೆ ಸಮರ್ಪಿಸಿದ್ದೆ, ನನಗೆ ನಂತರ ಗೊತ್ತಾಯಿತು ನಾನು ಕ್ರೌರ್ಯದ ದಾರಿ ತುಳಿಯುತ್ತಿದ್ದೇನೆ ಎಂದು ನಂತರ ಬದಲಾಗಿ ನಾನು ಮಾನವೀಯತೆಯ ದಾರಿಯಲ್ಲಿ ಸಾಗುತ್ತಿದ್ದೇನೆ” ಎಂದು ಸುಧೀಶ್ ಮಿನ್ನಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಯುವ ಜನರು ಎಲ್ಲರೂ ಈ ಪುಸ್ತಕವನ್ನು ಓದಬೇಕಿದೆ. ಇನ್ಯಾರೂ ದಾರಿ ತಪ್ಪಿ ಅಲ್ಲಿಗೆ ಹೋಗ ಬಾರದು. ಹೊತ್ತಿ ಉರಿಯುವ ಜ್ವಾಲೆಯಲ್ಲಿ ಯಾರೂ ಬೀಳಬಾರದು, ಮೋಸದ ಗುಂಡಿಗಳಿರುವ ಆರ್‌ಎಸ್‌ಎಸ್ ಗರ್ಭಗುಡಿಯಲ್ಲಿ ಯಾರೂ ಸಿಲುಕಬಾರದು ಎಂದು ಅನೇಕ ವಿವರಗಳನ್ನು ಈ ಪುಸ್ತಕದಲ್ಲಿ ಸುಧೀಶ್ ನೀಡಿದ್ದಾರೆ.
ತರಬೇತಿ ಮುಗಿದ ನಂತರ ಕತ್ತಲ ಕೋಣೆಯಲ್ಲಿ ಆರ್‌ಎಸ್‌ಎಸ್ ನಾಯಕರು ಏನು ಪಾಠ ಮಾಡಿಕೊಡುತ್ತಾರೆ ಎಂಬ ಅಂಶಗಳು ಈ ಪುಸ್ತಕದಲ್ಲಿ ಗಮನ ಸೆಳೆಯುತ್ತವೆ. ಒಂದು ಕತ್ತಲ ಕೋಣೆಯಲ್ಲಿ ಭಾರತದ ಚಿತ್ರವನ್ನು ಬರೆದು, ಪಕ್ಕದಲ್ಲಿ ಚೈನಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಭುತಾನ್, ನೇಪಾಳ ದೇಶಗಳನ್ನೆಲ್ಲ ಸೇರಿಸಿದರೆ ಅಖಂಡ ಭಾರತವಾಗುತ್ತದೆ ಎಂಬ ಆಟವನ್ನು ಹೇಗೆ ಶುರು ಮಾಡುತ್ತಾರೆ ಎಂಬುದನ್ನು ಸಾಕ್ಷಿ ಸಮೇತ ವಿವರಿಸಿದ್ದಾರೆ. ಈ ಪುಸ್ತಕ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪುಸ್ತಕ ಪ್ರೀತಿ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ
ಹಲವಾರು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಬೇರೆ ಬೇರೆ ಎಂದು ಅದರ ಮುಖಂಡರು ಹೇಳುತ್ತಾರೆ. ಆದರೆ ಒಟ್ಟಿಗೆ ಕೆಲಸ ಮಾಡುತ್ತಾರೆ. ಈ ಕುರಿತು ಎ.ಜೆ ನೂರಾನಿಯವರು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಆರ್‌ಎಸ್‌ಎಸ್ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದ ಮಾಡಿದ್ದು, ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 150 ರೂಗಳು. ಈ ಪುಸ್ತಕ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪುಸ್ತಕ ಪ್ರೀತಿ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.

‘ಹಿಂದುತ್ವ ರಾಜಕಾರಣ ಅಂದು ಇಂದು ಮುಂದು’
ಈ ಕೃತಿಯನ್ನು ಬಿ. ಶ್ರೀಪಾದ ಭಟ್ ಬರೆದಿದ್ದಾರೆ. ಕ್ರಿಯಾ ಮಾಧ್ಯಮ ಈ ಪುಸ್ತಕವನ್ನು ಪ್ರಕಟಿಸಿದೆ. ಕೋಮುವಾದ ಎನ್ನುವುದು ಮೂಲತಃ ಮನುಷ್ಯ ವಿರೋಧಿ, ಅಷ್ಟು ಮಾತ್ರವಲ್ಲ ವರ್ಣಾಶ್ರಮ ವ್ಯವಸ್ಥೆಯ ಕೆಳಪಾದ ದಲ್ಲಿರುವ ದಲಿತರು ಮತ್ತು ಹಿಂದುಳಿದ ಜಾತಿಗಳ ಕೋಮುವಾದ ಜೀವವಿರೋಧಿ. ಹೀಗಿದ್ದರೂ ಧರ್ಮದ ಬಾಲಬುಡುಕರು ಹೆಸರಲ್ಲಿ ಶೋಷಣೆಗೀಡಾದವರನ್ನೇ ಕೋಮುವಾದದ ರಾಜಕಾರಣಕ್ಕೆ ಕಾಲಾಳುಗಳಾಗಿ ಬಳಸುತ್ತಿದ್ದಾರೆ. ‘ಹಿಂದುತ್ವ ಅಂದು’, ‘ಹಿಂದುತ್ವ ರಾಜಕಾರಣದ ನೆಲೆಗಳು, ಅಸ್ತ್ರಗಳು’ ಮತ್ತು‘ಹಿಂದುತ್ವ ಇಂದು ಮುಂದು’ ಎಂಬ ಮೂರು ಭಾಗಗಳ ಈ ಪುಸ್ತಕ ಕೋಮುವಾದದ ರಾಜಕಾರಣ ಗೋಡ್ಸೆಯಿಂದ ಮೋದಿವರೆಗೆ ಬೆಳೆದು ಬಂದ ಬಗೆಯನ್ನು ವಿಸ್ತಾರವಾಗಿ, ದಾಖಲೆಗಳು ಮತ್ತು ತರ್ಕಬದ್ಧ ಅಭಿಪ್ರಾಯಗಳ ಮೂಲಕ ಶ್ರೀಪಾದ ದಾಖಲಿಸಿದ್ದಾರೆ. ಅನೇಕಾನೇಕ ಗೊಂದಲಗಳನ್ನು ನಿವಾರಿಸುವ ಮತ್ತು ಚರ್ಚೆ-ಸಂವಾದಗಳಿಗೆ ಅಗತ್ಯವಾದ ಆಕರ ಗ್ರಂಥವಾಗಿ ಈ ಪುಸ್ತಕ ರೂಪುಗೊಂಡಿದೆ’. ಈ ಪುಸ್ತಕ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪುಸ್ತಕ ಪ್ರೀತಿ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ಆರ್‌ಎಸ್‌ಎಸ್ ಆಳ- ಅಗಲ
ಈ ಪುಸ್ತಕವನ್ನು ದೇವನೂರು ಮಹಾದೇವರವರು ಬರೆದಿದ್ದಾರೆ. ಆರ್‌ಎಸ್‌ಎಸ್‌ನ ಪ್ರಾಣ ಎಲ್ಲಿದೆ ಎಂಬುದರಿಂದ ಅರಂಭವಾಗಿ ಕರ್ನಾಟಕದ ವರ್ತಮಾನದ ಸವಾಲುಗಳವರೆಗೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಕ್ರಿಯಾ ಪ್ರಕಾಶನ ಸೇರಿದಂತೆ ಸುಮಾರು 20 ಪ್ರಕಾಶನ ಸಂಸ್ಥೆಗಳು ಮುದ್ರಿಸಿವೆ. ಲಕ್ಷಾಂತರ ಪ್ರತಿಗಳು ಮಾರಾಟವಾದ ಪುಸ್ತಕ ಇದು. ಬೆಲೆ 40 ರೂ.
ಸಮಾಜಕ್ಕೆ ಸುಳ್ಳು, ಮೋಸ, ವಂಚನೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಆರ್‌ಎಸ್‌ಎಸ್ ಮುಖವಾಡ ಕಳಚಲು ಈ ಮೇಲಿನ ಪುಸ್ತಕಗಳ ಅಧ್ಯಯನ ಮುಖ್ಯ. ಸೌಹಾರ್ಧ ಭಾರತವನ್ನು ಕಟ್ಟಲು ಈ ಪುಸ್ತಕಗಳ ಸಣ್ಣ ಪರಿಚಯನ್ನು ಮಾಡಿಕೊಟ್ಟಿರುವೆ.
ಇದನ್ನೂ ನೋಡಿ : “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media
