ಧರ್ಮಸ್ಥಳ ಪದ್ಮಲತಾ ಪ್ರಕರಣ – ಲಕ್ಷ್ಮಣ್ ಗೌಡ ಬಿಚ್ಚಿಟ್ಟ ಮಾಹಿತಿ

ಧರ್ಮಸ್ಥಳ ಮಂಜುನಾಥ ದೇವಾಲಯದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರ ದೂರು, ನಂತರದ ಬೆಳವಣಿಗೆಗಳನ್ನು ರಾಜ್ಯ, ದೇಶ ಮಾತ್ರವಲ್ಲದೆ ಜಗತ್ತಿನ ಮಾಧ್ಯಮಗಳು ಸುದ್ದಿಮಾಡುತ್ತಿವೆ. ರಾಜ್ಯ ಸರ್ಕಾರದಿಂದ ಎಸ್ ಐಟಿ ರಚನೆಯಾಗಿ ತನಿಖೆಯೂ ಆರಂಭವಾಗಿದೆ. ಅಸ್ತಿಪಂಜರಗಳನ್ನು ಹುಡುಕುವ ಕಾರ್ಯವೂ ನಡೆಯುತ್ತಿದೆ. ಲಕ್ಷಾಂತರ ಜನರ ದೃಷ್ಟಿ ಅತ್ತಕಡೆಯೇ ಇದೆ. ಈ ಸಂದರ್ಭದಲ್ಲಿ 1986ರಲ್ಲಿ ಹತ್ಯೆಗೀಡಾದ ವಿಧ್ಯಾರ್ಥಿನಿ ಪದ್ಮಲತಾ ಪ್ರಕರಣದ ಕುರಿತು ಜನರು ಮತ್ತೆ ಮಾತನಾಡತೊಡಗಿದ್ದಾರೆ. ಈ ಪ್ರಕರಣ ಕುರಿತಂತೆ, ಪದ್ಮಲತಾಳಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಒಬ್ಬರಾದ, ಅಂದು ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿದ್ದ ಲಕ್ಷ್ಮಣ್ ಗೌಡ ಅವರ ಸಂದರ್ಶನದ ಅಕ್ಷರ ರೂಪ ಇಲ್ಲಿದೆ. ಧರ್ಮಸ್ಥಳ

-ಅಕ್ಷರ ರೂಪ: ಸಿ. ಸಿದ್ದಯ್ಯ

ನಾನು, 1972ರಿಂದಲೇ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯ. 1986ರಲ್ಲಿ ರೈತ ಸಂಘದ ತಾಲೂಕು ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಧರ್ಮಸ್ಥಳ ಗ್ರಾಮದಲ್ಲಿಯೂ ಕೂಡ ನಮ್ಮ ಕರ್ನಾಟಕ ಪ್ರಾಂತ ರೈತ ಸಂಘಟನೆ ಇತ್ತು. ಅದು ಸಿಪಿಐ(ಎಂ) (ಭಾರತ ಕಮ್ಯೂನಿಸ್ಟ್ ಪಕ್ಷ -ಮಾರ್ಕ್ಸ್ ವಾದಿ) ನೇತೃತ್ವದ ರೈತ ಸಂಘಟನೆ. ದೇವಾನಂದ ರವರು ಧರ್ಮಸ್ಥಳದ ರೈತ ಸಂಘದ ಅಧ್ಯಕ್ಷರಾಗಿದ್ದರು. ಧರ್ಮಸ್ಥಳ

‘ಅವರು’ ಹೇಳುವವರೇ ಪಂಚಾಯ್ತಿಗೆ ಅಧ್ಯಕ್ಷರು, ಸದಸ್ಯರು

ರಾಮಕೃಷ್ಣ ಹೆಗೆಡೆಯವರು ಮುಖ್ಯಮಂತ್ರಿಯಾಗಿದ್ದಾಗ, ಗ್ರಾಮ ಪಂಚಾಯ್ತಿ ಹೋಗಿ ಮಂಡಲ ಪಂಚಾಯ್ತಿ ರಚನೆಯಾಯ್ತು. ದೇಶದಲ್ಲಿ ಎಲ್ಲಾ ಪಂಚಾಯ್ತಿಗಳಲ್ಲಿ ಚುನಾವಣೆ ನಡೆಯುತ್ತಿದ್ದರೆ, ನಮ್ಮ ಧರ್ಮಸ್ಥಳದಲ್ಲಿ ನಡೆಯುತ್ತಿರಲಿಲ್ಲ. ಉಳಿದ ಕಡೆ ಎರಡು ಮೂರು ಗ್ರಾಮಗಳು ಸೇರಿ ಒಂದು ಮಂಡಲ ಪಂಚಾಯಿತಿ ಆದರೆ, ಧರ್ಮಸ್ಥಳ ಒಂದೇ ಗ್ರಾಮಕ್ಕೆ ಒಂದು ಮಂಡಲ ಪಂಚಾಯ್ತಿ. ಆ ಗ್ರಾಮದ ಪಂಚಾಯಿತಿ ಆಗಲಿ ಅಥವಾ ಸ್ಥಳೀಯ ಕೊ ಅಪರೇಟಿವ್ ಸೊಸೈಟಿ ಆಗಲಿ, ಇಂತಹ ಯಾವುದೇ ಸಂಸ್ಥೆಗೆ ಚುನಾವಣೆ ಎಂಬುದು ಇಲ್ಲವೇ ಇಲ್ಲ. ‘ಅವರು’ ಯಾರನ್ನು ಹೇಳುತ್ತಾರೋ ಅವರೇ ಸದಸ್ಯರಾಗಬೇಕು, ‘ಅವರು’ ಹೇಳಿದವರೇ ಪಂಚಾಯಿತಿ ಅಧ್ಯಕ್ಷರಾಗಬೇಕು, ‘ಅವರು’ ಹೇಳಿದ ಹಾಗೇ ಪಂಚಾಯ್ತಿ ಇರಬೇಕು. ಅದು ನಡೆಯುತ್ತ ಬಂದ ಒಂದು ಪದ್ದತಿ. ಒಂದು ಸರ್ವಾಧಿಕಾರದ ರೀತಿಯಲ್ಲಿ ನಡೆಯುತ್ತಾ ಬಂದಿದ್ದ ಊರು ಇದು. ಧರ್ಮಸ್ಥಳ

ಚುನಾವಣೆಗೆ ಸ್ಪರ್ಧಿಸದಂತೆ ಒತ್ತಡ

‘ಇವರು’ ಒಕ್ಕಲೆಬ್ಬಿಸುವ ಪ್ರಶ್ನೆ ಬಂದಾಗ ನಾವು ಅಲ್ಲಿ ರೈತ ಸಂಘಟನೆ ಕಟ್ಟಿದೆವು. ದೇವಾನಂದರು ಅಲ್ಲಿ ರೈತ ಸಂಘದ ಅಧ್ಯಕ್ಷರಾಗಿದ್ದರು. ನಮಗೂ ಸಂಘಟನೆಯ ಬಲ ಇತ್ತು. ಮಂಡಲ ಪಂಚಾಯ್ತಿ ಚುನಾವಣೆ ಬಂತು. ನಾವು ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿ ಸ್ಪರ್ಧೆ ಮಾಡಿದೆವು. ಚರಿತ್ರೆಯಲ್ಲೇ ಧರ್ಮಸ್ಥಳ ಗ್ರಾಮದಲ್ಲಿ ಚುನಾವಣೆ ಆಗಿಲ್ಲ, ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ನಮ್ಮ ಮೇಲೆ ಒತ್ತಡ ಬಂತು. ನಾವು ನಾಮಪತ್ರ ಹಿಂತೆಗೆಯಲಿಲ್ಲ.

ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ದಿಡೀರ್ ರಾಜಿನಾಮೆ: ಮುಂದಿನ ಉಪರಾಷ್ಟ್ರಪತಿ ಯಾರು?

ಸಿಪಿಐ(ಎಂ) ಪಕ್ಷದ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಮೇಲೆ ಒತ್ತಡ ಬಂದಾಗ, ನಾವು ಸ್ಥಳೀಯ ಸಮಿತಿ ಸದಸ್ಯರು ಏನು ಹೇಳುತ್ತಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡು, ಅವರು ಹೇಳಿದಂತೆ ನಡೆದುಕೊಳ್ಳಬೇಕಾಗಿತ್ತು. ಸ್ಥಳೀಯ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾಲ್ಲೂಕು ಸಮಿತಿ ಬೆಂಬಲ ನೀಡಬೇಕು ಎಂಬ ತೀರ್ಮಾನಕ್ಕೆ ಬಂದೆವು. ಸ್ಥಳೀಯ ಸಮಿತಿ ಸ್ಪರ್ಧೆ ಮಾಡಲು ತೀರ್ಮಾನಿಸಿತು. ನಾಲ್ಕೈದು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿ, ಪ್ರಭಲ ಪೈಪೋಟಿ ಕೊಟ್ಟಿದ್ದೇವೆ. ಸ್ಥಾನ ಗೆಲ್ಲಲು ಆಗಲಿಲ್ಲ, ಆದರೆ, 2, 4 ಹೀಗೆ ಹತ್ತಕ್ಕಿಂತ ಕಡಿಮೆ ಮತಗಳಿಂದ ಸೋತಿದ್ದೇವೆ. ಧರ್ಮಸ್ಥಳ

ದೇವಾನಂದರ ಮಗಳು ಪದ್ಮಲತಾ ಕಿಡ್ನಾಪ್

ಅದುವರೆಗೆ ಇವರಿಗೆ ಸ್ಪರ್ಧೆಯೇ ಕೊಡದ ಊರಿನಲ್ಲಿ ಚುನಾವಣೆಗೆ ನಿಂತು ಪ್ರಭಲ ಸ್ಪರ್ಧೆ ಕೊಟ್ಟಿದ್ದೇವೆ ಎಂಬುದೇ ಅವರಿಗೆ ತಲೆನೋವಾಗಿದೆ. ಈ ಕಾರಣದಿಂದ ಇಲ್ಲಿಂದ ರೈತ ಸಂಘ, ಕಮ್ಯೂನಿಸ್ಟ್ ಪಕ್ಷವನ್ನು ತೆಗೆಯಬೇಕು. ಆಗ ಮಾತ್ರ ಎಂದಿನಂತೆ ಸರ್ವಾಧಿಕಾರ ಮುಂದುವರಿಸಿಕೊಂಡು ಹೋಗಬಹುದು ಎಂಬ ತೀರ್ಮಾನಕ್ಕೆ ಅವರು ಬಂದರು. ಇದಕ್ಕೆ ಏನು ಮಾಡಬೇಕು? ರೈತ ಸಂಘದ ಅಧ್ಯಕ್ಷ ದೇವಾನಂದರನ್ನು ಬಗ್ಗಿಸಿದರೆ, ಇಡೀ ಸಂಘಟನೆ ಹೋಗುತ್ತೆ, ಎಲ್ಲಾ ಸರಿಹೋಗುತ್ತೆ ಎಂಬ ಲೆಕ್ಕಾಚಾರ ಅವರಿಗೆ. ಅದಕ್ಕೆ ದೇವಾನಂದರು ಬಗ್ಗೋದಿಲ್ಲ. ಧರ್ಮಸ್ಥಳ

ಅವರು ಮೊದಲು ಹಲವು ಬಾರಿ ದೇವಾನಂದರನ್ನು ಮಾತುಕತೆಗೆ ಕರೆದಿದ್ದಾರೆ. ದೇವಾನಂದರು ಹೋಗಲಿಲ್ಲ. ಹಾಗಾಗಿ, ದೇವಾನಂದರನ್ನು ಕರೆದು ಮಾತನಾಡಲು ಅವರು ಮುಂದಾಗಲಿಲ್ಲ. ದೇವಾನಂದರನ್ನು ಬಗ್ಗಿಸಿ, ರೈತ ಸಂಘದಿಂದ, ಕಮ್ಯೂನಿಸ್ಟ್ ಪಕ್ಷದಿಂದ ಬಿಡಿಸಿದರೆ, ಧರ್ಮಸ್ಥಳದಲ್ಲಿ ನಡೆಯುವ ಯಾವುದೇ ಅನಾಚಾರದ ಬಗ್ಗೆ ಮಾತನಾಡುವ ಜನ ಇರುವುದಿಲ್ಲ.  ದೇವಾನಂದರ ನಾಯಕತ್ವದಲ್ಲಿ ಮಾತ್ರ ಆ ಸುದ್ದಿಗಳೆಲ್ಲ ಬರುತ್ತವೆ ಎಂಬ ಲೆಕ್ಕಾಚಾರ ಅವರದ್ದು. 1986ರ ಡಿಸೆಂಬರ್ 22ರಂದು ದೇವಾನಂದರ ಮಗಳು ಪದ್ಮಲತಾಳನ್ನು ಕಿಡ್ನಾಪ್ ಮಾಡಿಸಿದರು. ಮಗಳು ಕಾಣದಾದಾಗ ದೇವಾನಂದರು ಖಂಡಿತ ತಮ್ಮ ಕಾಲು ಹಿಡಿಯುತ್ತಾರೆ, ಮಗಳನ್ನು ಬಿಡಿಸಿಕೊಡಿ, ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಅವರಲ್ಲಿತ್ತು ಎಂಬುದು ನಮ್ಮ ಅಂದಾಜು.

ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ

ಆದರೆ, ಪರಿಸ್ಥಿತಿ ಆ ರೀತಿ ಇರಲಿಲ್ಲ. ದೇವಾನಂದರು ಅವರ ಕಾಲು ಹಿಡಿಯಲು ಹೋಗಲಿಲ್ಲ. ತನ್ನ ಮಗಳು ಪದ್ಮಲತಾ ಕಾಣೆಯಾದ ಬಗ್ಗೆ ದೇವಾನಂದ ಅವರು ಪೊಲೀಸರಿಗೆ ದೂರು ಕೊಡಲು ಹೋಗಿದ್ದಾರೆ. ನಿನ್ನ ಮಗಳು ಯಾರ ಜೊತೆಗಾದರೂ ಓಡಿಹೋಗಿರಬೇಕು ಎಂದು ಏನೇನೋ ಹೇಳಿದ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ವಿಷ್ಣುಮೂರ್ತಿ ಸೇರಿ ಪಕ್ಷದ ಒಂದಷ್ಟು ಜನರು ಜಗಳವಾಡಿದ ನಂತರ ದೂರು ದಾಖಲಿಸಿಕೊಂಡರು. ಕಾಲೇಜಿನ ಪ್ರಿನ್ಸಿಪಾಲರು ಮತ್ತು ಮತ್ತೊಬ್ಬರ ಹೆಸರನ್ನೇ ಕೊಟ್ಟು, ಅವರೇ ಕಿಡ್ನಾಪ್ ಮಾಡಿದ್ದು ಎಂದು ದೂರು ಕೊಟ್ಟಿದ್ದೇವೆ ಎಂದು ದೇವಾನಂದ ಮತ್ತು ವಿಷ್ಣುಮೂರ್ತಿ ಹೇಳುತ್ತಾರೆ.

ಅಮಾಯಕನನ್ನು ಸಿಲುಕಿಸುವ ಪ್ರಯತ್ನ

ಪ್ರಿನ್ಸಿಪಾಲರು ಮತ್ತು ಮತ್ತೊಬ್ಬರ ಮೇಲೆ ಆರೋಪ ಬರುವುದನ್ನು ತಪ್ಪಿಸಲು, ಯಾರಾದರೂ ಒಬ್ಬ ಅಮಾಯಕನನ್ನು ಇದರಲ್ಲಿ ಸಿಲುಕಿಸಬೇಕು ಎಂಬ ಕಾರಣಕ್ಕೆ, ನಮ್ಮ ಊರಿನ, ಕುಂಬಾರ ಜನಾಂಗದ, ಬಡ ಕುಟುಂಬದ ವಸಂತ್ ಎಂಬ ಜೀಪ್ ಚಾಲಕನನ್ನು ಅಪರಾಧಿಯನ್ನಾಗಿ ಮಾಡುವ ಪ್ರಯತ್ನ ಪೊಲೀಸರಿಂದ ನಡೆಯಿತು. ಧರ್ಮಸ್ಥಳ

ಆಗ ಬಸ್ಸುಗಳು ಬಹಳಷ್ಟು ಕಡಿಮೆ ಇದ್ದವು. ನಮ್ಮ ಊರೂ ಸೇರಿದಂತೆ, ಹಳ್ಳಿಗಳಿಂದ ಜನರು ಧರ್ಮಸ್ಥಳದವರೆಗೆ ಜೀಪ್ ಗಳಲ್ಲಿಯೇ ಪ್ರಯಾಣ ಮಾಡಬೇಕಿತ್ತು. ಶಾಲೆಗೆ ಹೋಗುವ ಸಮಯಕ್ಕೆ ಯಾವ ಜೀಪ್ ಬರುತ್ತದೊ ಆ ಜೀಪಿನಲ್ಲಿ ಮಕ್ಕಳು ಹೋಗುತ್ತಿದ್ದರು. ಸಂಬಳಕ್ಕೆ ದುಡಿಯುತ್ತಿದ್ದ ಚಾಲಕ ವಸಂತ್ ನ ಜೀಪಿನಲ್ಲಿಯೂ ಪದ್ಮಲತಾ ಪ್ರಯಾಣಿಸುತ್ತಿದ್ದಳು. ಆತನದು ಬಡ ಕುಟುಂಬ.

ವಸಂತ್ ನ ರಕ್ಷಣೆ ಮಾಡಲು ಯಾರೂ ಬರುವುದಿಲ್ಲ, ಪದ್ಮಲತಾ ಕಾಣೆಯಾದ ಪ್ರಕರಣವನ್ನು ಇವನ ತಲೆಗೆ ಕಟ್ಟಬಹುದು ಎಂಬ ಲೆಕ್ಕಾಚಾರದಿಂದ, ಆತನನ್ನು ಹಿಡಿದು ಆತನನ್ನೇ ಆರೋಪಿಯನ್ನಾಗಿ ಮಾಡಲು ಮುಂದಾದರು. (ಸೌಜ್ಯನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಸಹಾ ನಿರಪರಾಧಿ ಸಂತೋಷ್ ರಾವ್ ನನ್ನು ಪೊಲೀಸರು ಆರೋಪಿಯನ್ನಾಗಿ ಮಾಡಿದ್ದರು.) ವಸಂತ್ ನನ್ನು ಔಟ್ ಪೋಸ್ಟ್ ಠಾಣೆಗೆ ಕರೆದೊಯ್ದರು, ಅಲ್ಲಿಂದ ಬೆಳ್ತಂಗಡಿ  ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಬಹಳಷ್ಟು ಹೊಡೆದಿದರು. ಆದರೆ, ವಸಂತ್ ವಿರುದ್ದ ಯಾವುದೇ ದೂರುಗಳಿರಲಿಲ್ಲ.

ಪೊಲೀಸರ ಕುತಂತ್ರ ಫಲಿಸಲಿಲ್ಲ

ಇದನ್ನೆಲ್ಲಾ ನೋಡಿದ ಇಲ್ಲಿನ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಮಾಜ ಸೇವಕರಾದ ಸಿ.ಎ. ವರ್ಗೀಸ್ ತಮ್ಮ ಪಕ್ಷದ ಕೆಲ ಸ್ನೇಹಿತರನ್ನು ಸೇರಿಸಿಕೊಂಡು, ಏನಾದರೂ ಮಾಡಿ ಚಾಲಕ ವಸಂತ್ ನನ್ನು ಬಿಡಿಸಬೇಕು, ಇಲ್ಲದಿದ್ದರೆ ಆತನನ್ನು ಅವರು ಕೊಲ್ಲುತ್ತಾರೆ ಎಂದು, ಕುಂಬಾರ ಜನಾಂಗ ಪೋಪಣ್ಣನ ಮನೆಗೆ ಹೋಗಿ, ಅವರಿಗೆ ಮುಂದೆ ಆಗಬಹುದಾದ ಅನಾಹುತದ ಬಗ್ಗೆ ತಿಳಿಸಿದರು ಮತ್ತು ಹೆಚ್ಚಿನ ಸಂಖ್ಯೆಯ ಜನರೊಂದಿಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿದರು.

ಪೊಲೀಸರು ವಸಂತನನ್ನು ಮತ್ತೆ ಔಟ್ ಪೋಸ್ಟ್ ಠಾಣೆಗೆ ಕರೆದೊಯ್ಯಲು ಠಾಣೆಯಿಂದ ಹೊರಗೆ ಕರೆತರುವಾಗ, ನಮ್ಮ ಜನರೆಲ್ಲಾ ಅಲ್ಲೇ ಇದ್ದರು. ಯುವಕರೆಲ್ಲಾ ಸೇರಿ ವಸಂತ್ ನ ರಟ್ಟೆ ಹಿಡಿದು ತಮ್ಮ ಜೀಪಿಗೆ ಹಾಕಿ ಕರೆತಂದರು. ವಸಂತ್ ಮೇಲೆ ಯಾವುದೇ ದೂರುಗಳಿರಲಿಲ್ಲವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮತ್ತೆ ಬರಲಿಲ್ಲ. ಹೀಗಾಗಿ, ನಿರಪರಾಧಿಯನ್ನು ಅಪರಾಧಿಯನ್ನಾಗಿ ಮಾಡುವ ಪೊಲೀಸರ ಕುತಂತ್ರ ಫಲಿಸಲಿಲ್ಲ.

58 ದಿನಗಳ ನಂತರ ಹೆಣವಾಗಿ, ಕೊಳೆತ ಸ್ಥಿತಿಯಲ್ಲಿ ಪದ್ಮಲತಾ

1987ರ ಪೆಬ್ರವರಿ 17ರಂದು 56 ದಿನಗಳ ನಂತರ ಪದ್ಮಲತಾ ಹೆಣವಾಗಿ, ಕೊಳೆತ ಸ್ಥಿತಿಯಲ್ಲಿ ನೆಗೆಹೊಲೆಯಲ್ಲಿ ಕುದುರೆ ಹತ್ತಿರ ಸಿಕ್ಕಳು. ಅವಳ ಹುಡುಪು ಮತ್ತು ಕೈಗಡಿಯಾರದ ಮೂಲಕ ಆಕೆಯ ಗುರುತು ಹಿಡಿಯಲಾಯಿತು. ಶವ ಕಲ್ಲಿನ ಮೇಲಿತ್ತು ಎಂದು ದೇವಾನಂದರು ನನಗೆ ಹೇಳಿದರು. ಕೆಲವರು ನೀರಿನಲ್ಲಿತ್ತು ಎಂದು ಹೇಳುತ್ತಾರೆ. ನೀರಿನಲ್ಲಿ ಇದ್ದರೆ, ಶವ ಮುಂದೆ ಹೋಗಬಹುದಿತ್ತು ಎಂಬುದು ನನ್ನ ಲೆಕ್ಕಾಚಾರ.

ಶವ ಸಿಕ್ಕಿದ ದಿನವೇ ನಮ್ಮ ರೈತ ಸಂಘದ ಸದಸ್ಯರೊಬ್ಬರು ನನ್ನ ಬಳಿ ಬಂದು ಮಾಹಿತಿ ನೀಡಿದರು. ಈ ವಿಷಯ ಕೇಳಿ ದಿಗ್ಬ್ರಮೆಗೊಂಡು, ತಕ್ಷಣವೇ ಮಂಗಳೂರಿನ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಚೇರಿಗೆ ಹೊರಟೆ. ಅಲ್ಲಿ ಪಕ್ಷದ ಕಾರ್ಯದರ್ಶಿ ಕೆ.ಆರ್. ಶ್ರೀಯಾನ್, ಬಿ. ಮಾದವ ಇದ್ದರು. “ನೀವು ಈ ತಕ್ಷಣವೇ ಸ್ಥಳಕ್ಕೆ ಹೋಗಿ. ಶವವನ್ನು ಸುಡಲು ಬಿಡಬೇಡಿ, ಹೂಳಬೇಕು. ಶವವನ್ನು ಹೂತ ನಂತರವೂ ಅವರು ಹೊರತೆಗೆಯಬಹುದು, ಜಾಗ್ರತೆಯಿಂದ ಅದನ್ನು ಕಾಯಬೇಕು ಎಂದು ಬಿ.ಮಾದವ್ ಹೇಳಿದರು. ಹಣದ ಪ್ರಭಾವದಿಂದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರೂ, ಪ್ರಕರಣವನ್ನು ಮತ್ತೆ ಎಬ್ಬಿಸಲು ಸಾಧ್ಯವಾಗುತ್ತದೆ. ಮತ್ತೊಮ್ಮೆ ಪೋಸ್ಟ್ ಮಾರ್ಟಮ್ ಮಾಡಿಸಬಹುದು, ಶವವೇ ಇಲ್ಲದಿದ್ದರೆ ಪೋಸ್ಟ್ ಮಾರ್ಟಮ್ ಮಾಡಿಸುವುದಾದರೂ ಹೇಗೆ?

ಪದ್ಮಲತಾಳ ಶವವಿದ್ದ ಸ್ಥಳಕ್ಕೆ ವಿದ್ಯಾರ್ಥಿ ರಂಗದ ಮುಖಂಡ ಸುನಿಲ್ ನಾಟೆಕರ್ ಬಂದ. ದೇವಾನಂದರನ್ನು ಪಕ್ಷದಿಂದ ಬಿಡಿಸುವುದಕ್ಕಾಗಿ ಮಗಳನ್ನು ಇವರು ಕಿಡ್ನಾಪ್ ಮಾಡಿದ್ದಾರೆಂದು ನಾನು ಹೇಳಿದೆ. ಅದಕ್ಕವರು, ‘ನೀವು ಹೇಳಿದಂತೆ ಒಂದೇ ಯಾಂಗಲ್ ನಲ್ಲಿ ತನಿಖೆ ಮಾಡಿದರೆ ಆಗುತ್ತಾ’ ಎಂದು ಕೇಳಿದರು. ಆ ಯಾಂಗಲ್ ಬಿಟ್ಟು ತನಿಖೆ ಮಾಡಿದರೆ ಅಪರಾಧಿಗಳು ಸಿಗುತ್ತಾರಾ ಎಂದು ನಾನು ಕೇಳಿದೆ. ಆ ಯಾಂಗಲ್ ಬಿಟ್ಟು ತನಿಖೆ ಮಾಡಿದ್ದರಿಂದ ಅಪರಾಧಿಗಳು ಇಲ್ಲಿಯವರೆಗೆ ಸಿಗಲಿಲ್ಲ ಎಂಬುದು ನನ್ನ ಲೆಕ್ಕಾಚಾರ.

ಶವ ಸಿಕ್ಕ ನಂತರವೂ ನಮ್ಮ ಹೋರಾಟವನ್ನು ನಾವು ಮುಂದುವರಿಸಿದೆವು. ಒಮ್ಮೆ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ, ಪ್ರತಿಭಟನಾಕಾರರಿಗಿಂತ ಹೆಚ್ಚು ಜನರನ್ನು ಅವರು ಕರೆತಂದರು. ಅವರು ದೇವರ ಹೆಸರನ್ನು ಮುಂದಿಟ್ಟು, ನಮ್ಮನ್ನು ಯಾರೂ ಮುಟ್ಟಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ರಾಜಕೀಯ ನಾಯಕರಿಗೆ ತೋರಿಸುವ ರೀತಿಯಲ್ಲಿ ಪ್ರತಿಭಟನೆ ಕೂಡ ಮಾಡಿದರು.

ವಿಧಾನಸಭೆಯಲ್ಲಿ ಪ್ರಶ್ನೆ ಮಾಡದಂತೆ ತಡೆಯುವ ಪ್ರಯತ್ನ

ಪದ್ಮಲತಾಳ ಈ ಪ್ರಕರಣ ಎಲ್ಲಾ ಪತ್ರಿಕೆಗಳಲ್ಲಿ ಬಂತು. ಈ ಪತ್ರಿಕೆಗಳನ್ನೇ ಆಧಾರವಾಗಿಟ್ಟುಕೊಂಡು ನಾವು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲು ಮುಂದಾದೆವು. ಅಂದು ಸಿಪಿಐ(ಎಂ) ನ ಆರ್. ವೆಂಕಟರಾಮಯ್ಯನವರು ಮುಳುಬಾಗಿಲು ಕ್ಷೇತ್ರದ ಶಾಸಕರಾಗಿದ್ದರು. ಶಾಸಕರಿಗೆ ಬಿ.ವಿಷ್ಣುಮೂರ್ತಿಯವರು ಈ ಎಲ್ಲಾ ದಾಖಲೆಗಳನ್ನು (ಪತ್ರಿಕೆಗಳಲ್ಲಿ ಬಂದ ಸುದ್ದಿಗಳು, ದೂರು ಕೊಟ್ಟಿದ್ದಕ್ಕೆ ಸ್ವೀಕೃತಿ ಪತ್ರ ಸೇರಿದಂತೆ) ಒದಗಿಸಿಕೊಟ್ಟರು.

ಈ ರೀತಿ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತುವ ಸಿದ್ದತೆಯಲ್ಲಿದ್ದ ವಿಷಯ ಇವರಿಗೆ ಗೊತ್ತಾಗಿದೆ. ಧರ್ಮಸ್ಥಳದ ಅನುಯಾಯಿಯಾಗಿದ್ದ ವಸಂತಬಂಗೇರ ಅವರು, ಆ ಮತ್ತೊಬ್ಬರನ್ನು ಕರೆದುಕೊಡು ಶಾಸಕರಾದ ಆರ್. ವೆಂಕಟರಾಮಯ್ಯನವರ ಬಳಿ ಹೋಗಿದ್ದಾರೆ. ಇದು ಧರ್ಮಸ್ಥಳ, ದೇವರ ಪ್ರಶ್ನೆ, ಅಲ್ಲಿ ದೇವರಿಗೆ ಅಪಮಾನ ಆಗುತ್ತದೆ, ನೀವು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಬಾರದು ಎಂದು ಹೇಳುತ್ತಾರೆ.

ಆಗ ವೆಂಕಟರಾಮಯ್ಯ ಒಂದೇ ಮಾತನ್ನು ಹೇಳಿದರು, “ನಾನು ಕಮ್ಯೂನಿಸ್ಟ್, ನನ್ನ ಕಾರ್ಯಕರ್ತರು ಅಲ್ಲಿ ಏನು ಮಾಡುತ್ತಾರೆ, ಅವರು ಏನು ಹೇಳುತ್ತಾರೆ ಅದನ್ನು ನಂಬುವವನು ನಾನು. ನೀವು ಇಲ್ಲಿಗೆ ಬಂದದ್ದು ತಪ್ಪು, ನಿಮಗೆ ನನ್ನ ಬಳಿ ಮಾತಾಡೊ ಅರ್ಹತೆ ಇಲ್ಲ. ವಿಧಾನಸಭೆಯಲ್ಲಿ ಪ್ರಶ್ನೆ ಮಾಡ್ಬೇಕೋ, ಬಿಡ್ಬೇಕೊ ಅದನ್ನು ತೀರ್ಮಾನ ಮಾಡುವವನು ನಾನು. ನೀವು ಇಲ್ಲಿಂದ ಹೋಗಿ” ಎಂದು ಇಬ್ಬರನ್ನೂ ಹೊರಗೆ ಹಾಕಿದರು. ಆರ್. ವೆಂಕಟರಾಮಯ್ಯನವರು ವಿಧಾನಸಭೆಯಲ್ಲಿ ಈ ಪ್ರಶ್ನೆ ಎತ್ತಿದರು. ಇದರ ಬಗ್ಗೆ ಸರಿಯಾದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿಓಡಿ ತನಿಖೆ

ಶಾಸಕರು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ ಮರುದಿನವೇ ಗೃಹ ಸಚಿವರಾಗಿದ್ದ ಬಿ.ರಾಚಯ್ಯನವರು ದೇವಾನಂದರ ಮನೆಗೆ ಬಂದು, ಸಂತಾಪ ಸೂಚಿಸಿ, ಕುಟುಂಬಕ್ಕೆ ಸಮಾಧಾನ ಹೇಳಿದರು. ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುತ್ತೇನೆ ಎಂದು ಭರವಸೆ ಕೊಟ್ಟರು. ಸಚಿವರು ಅದರಂತೆ ನಡೆದುಕೊಂಡರು. ಸಿಓಡಿ ತನಿಖೆಯಾಗಿದೆ. ಆದರೆ, ಸಿಓಡಿನವರಿಗೂ, ಪೊಲೀಸರಿಗೂ ವ್ಯತ್ಯಾಸ ಇಲ್ಲ ಎಂದು ನಮಗೆ ಗೊತ್ತಾಯ್ತು. ‘ಅವರನ್ನು’ ಗುರಿಯಾಗಿಸಿ, ಅವರ ಮೇಲೆ ಪ್ರಕರಣ ದಾಖಲಿಸುವ ಧೈರ್ಯ ಸಿಓಡಿನವರಿಗೂ ಇಲ್ಲ, ಪೊಲೀಸರಿಗೂ ಇಲ್ಲ.

ದೇವಾನಂದರ ಮೇಲೆಯೇ ಆರೋಪ ಹೊರಿಸುವ ಪ್ರಯತ್ನ?

ಪ್ರಕರಣ ಮುಗಿಸಲು, ದೇವಾನಂದರೇ ಕೊಲೆ ಮಾಡಿದರು ಎಂದು ಅವರನ್ನೇ ಆರೋಪಿಯನ್ನಾಗಿ ಮಾಡುವ ಉದ್ದೇಶ ಇದ್ದಂತೆ ಕಂಡಿತು. ಒಂದು ದಿನ ಯಾವುದೇ ಸೂಚನೆ ಕೊಡದೆ ಸಿಓಡಿ ಅಧಿಕಾರಿಗಳು ದೇವಾನಂದರ ಮನೆಗೆ ಬಂದರು. ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ತಡಕಾಡಿದರು. ಈ ವಿಷಯ ವಿಷ್ಣುಮೂರ್ತಿಯವರಿಗೆ ತಿಳಿದು, ಬೆಳ್ತಂಗಡಿಯಿಂದ ಓಡೋಡಿ ಬಂದರು.

ತನಿಖಾಧಿಕಾರಿಗಳು ಮನೆಯಿಂದ ಹೊರಡುವಾಗ ಅವರನ್ನು ತಡೆದ ದೇವಾನಂದರು ಗಟ್ಟಿಯಾಗಿ ನಿಂತು, ನೋಟಿಸ್ ಕೊಡದೆ ತನಿಖೆಗೆ ಬಂದಿದ್ದೀರಿ, ನನ್ನ ಮನೆಯಲ್ಲಿ ಏನು ಸಿಕ್ಕಿದೆ ಎಂಬುದನ್ನು ಹೇಳಿ, ಇಲ್ಲದಿದ್ದರೆ ನಿಮ್ಮನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಕೇಳಿದರು. ಅಧಿಕಾರಿಗಳು ಅನಿವಾರ್ಯವಾಗಿ ‘ನಿಲ್ ರಿಪೋರ್ಟ್’ ಎಂದು ಬರೆದು ಸಹಿ ಹಾಕಿ ಕೊಟ್ಟಿದ್ದಾರೆ. ನನ್ನ ಪ್ರಕಾರ, ದೇವಾನಂದರನ್ನೇ ಅಪರಾಧಿಯನ್ನಾಗಿ ಮಾಡಲು ಇವರು ಬಂದಿದ್ದರು, ಆದರೆ, ಅದರು ನಡೆಯಲಿಲ್ಲ.

‘ಪತ್ತೆಯಾಗದ ಪ್ರಕರಣ’ ಎಂದು ಮುಗಿಸಿದರು

ನಂತರವೂ ಪದ್ಮಲತಾ ಪ್ರಕರಣ ಏನಾಯ್ತು ಎಂದು ದೇವಾನಂದ ಅವರು ಸಿಓಡಿ ಅಧಿಕಾರಿಗಳನ್ನು ಕೇಳುತ್ತಲೇ ಇದ್ದರು, ಏನೂ ಮಾಹಿತಿ ಸಿಕ್ಕಿಲ್ಲ ಎಂದು ಆ ಅಧಿಕಾರಿಗಳು ಹೇಳುತ್ತಲೇ ಇದ್ದರು. ಕಡೆಗೊಂದು ದಿನ ‘ಇದು ಪತ್ತೆಯಾಗದ ಪ್ರಕರಣ’ ಎಂದು ಹಿಂಬರಹ ಕೊಟ್ಟು ಕಳುಹಿಸಿದರು.

ಸುದ್ದಿ ಮಾಡಿದ ಪತ್ರಿಕೆಗಳನ್ನು ಸುಟ್ಟರು

ಪದ್ಮಲತಾ ಕಿಡ್ನಾಪ್ ಆದದ್ದು, ನಂತರ ಶವ ಸಿಕ್ಕಿದ್ದು ಈ ಎಲ್ಲಾ ವಿವರಗಳಿದ್ದ ಲೇಖನಗಳು ಚಂದ್ರಶೇಖರ್ ತೌಡೂರು ಸಂಪಾದಕರಾಗಿದ್ದ ಕ್ರೈಮ್ ನ್ಯೂಸ್ ನಲ್ಲಿ (ಅಂದಾಜು 1986-87ರಲ್ಲಿ) ಬಂದವು. ‘ಧರ್ಮಸ್ಥಳದಲ್ಲಿ ಎಲ್ಲವೂ ಸರಿಯಿಲ್ಲ’ ಎಂಬ ತಲೆಬರಹ ಕೊಟ್ಟು, ಗಿಡುಗವೊಂದು ಮಗುವನ್ನು ಎತ್ತಿಕೊಂಡು ಹೋಗುವ ಚಿತ್ರ ಕೊಟ್ಟಿದ್ದರು. ಇದು ಗೊತ್ತಾದ ತಕ್ಷಣ ಉಜಿರೆಯಲ್ಲಿ ಮಾರಾಟಕ್ಕಿದ್ದ ಎಲ್ಲಾ ಪತ್ರಿಕೆಗಳನ್ನು ಹಣ ಕೊಟ್ಟು ಕೊಂಡು ಸುಟ್ಟುಹಾಕಿದರು.

ಇದನ್ನೂ ನೋಡಿ:ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media

ಮಾತ್ರವಲ್ಲ, ಬೆಂಗಳೂರಿನಲ್ಲಿ ಅವರ ಪ್ರಿಂಟಿಂಗ್ ಪ್ರೆಸ್ ಮೇಲೂ ದಾಳಿ ಮಾಡಿದರು. ಈ ಪತ್ರಿಕೆಯನ್ನು ಖರೀದಿಸಿದ ಜನರು ಗುಟ್ಟಾಗಿ ಕಿಸೆಯಿಂದ ಕೆಸೆಗೆ ಕೊಟ್ಟು ಎಲ್ಲರೂ ಓದಿದರು. ಲಂಕೇಶ್ ಪತ್ರಿಕೆಯವರೂ ಈ ವಿಷಯ ಬರೆದಿದ್ದರು. ಆದರೆ, ಕ್ರೈಮ್ ನ್ಯೂಸ್ ನಲ್ಲಿ ವಿವರವಾಗಿ ಬರೆದಿದ್ದರು. ಇವರ ವಿರುದ್ಧ ಮಾತನಾಡುವ ಯಾವುದೇ ಪತ್ರಿಕೆ, ಯಾವುದೇ ಚಾನಲ್ ಮೇಲೆ ದಾಳಿ ಮಾಡುವಂತದ್ದು ಇವರಿಗೆ ಹೊಸತೇನಲ್ಲ.

ಅದು ತುರ್ತುಪರಿಸ್ಥಿತಿ ಸಮಯವಿರಬಹುದು, ಮಂಗಳೂರಿನಿಂದ ಹೊರಡುವ, ಶಂಕರಭಟ್ ಸಂಪಾದಕರಾಗಿದ್ದ ಅಮೃತವಾಣಿ ಎಂಬ ಪತ್ರಿಕೆ ಧರ್ಮಸ್ಥಳದ ವಿಚಾರ ಬರೆದಿದೆ ಎಂದು ಹೇಳಿ ಅವರಿಗೆ ಹೊಡೆದು, ಆ ಪತ್ರಿಕೆಯನ್ನೂ ಹುಡಿ ಮಾಡಿದರು. ಸುದ್ದಿಯಾದರೆ ತಾನೆ ಇವರು ಏನೆಂದು ಜನತೆಗೆ ತಿಳಿಯುವುದು, ಹಾಗಾಗಿ ಸುದ್ದಿಯಾಗದಂತೆ, ಮಾಧ್ಯಮದವರ ಬಾಯಿ ಮುಚ್ಚಿಸುವುದು ಇವರ ಮೊದಲ ಕೆಲಸ.  ಇಂತಹ ಚರಿತ್ರೆ ಇವರದು.

ವೇದವಲ್ಲಿ ಟೀಚರ್ ಅನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದರು

ಧರ್ಮಸ್ಥಳದಿಂದ, ದೇವಸ್ಥಾನದಲ್ಲಿ ಕೆಲಸದಲ್ಲಿದ್ದವರು, ಅವರ ಮನೆಯವರು ಯಾರೂ ಕೂಡ ಹೋರಾಟಗಳಿಗೆ ಹೋಗಬಾರದು ಎಂದು ಅವರು ಕಡ್ಡಾಯ ಮಾಡಿದರು. ಅವರಿಗೆ ವಿರುದ್ಧವಾಗಿ ನಡೆದುಕೊಂಡರೆ ನಮ್ಮನ್ನು ಬದುಕಲು ಬಿಡುತ್ತಾರೋ ಇಲ್ಲವೋ ಎಂಬ ಭಯ ಆ ಜನರಲ್ಲಿತ್ತು.  ಇದಕ್ಕೆ ಅಲ್ಲಿನ ಜನರಿಗೆ ಬಹಳಷ್ಟು ಅನುಭವಗಳಿವೆ. ವೇದವಲ್ಲಿ ಟೀಚರ್ ಕಾನೂನಾತ್ಮಕವಾಗಿ, ಸೀನಿಯಾರಿಟಿ ಪ್ರಕಾರ ಮುಖ್ಯೋಪದ್ಯಾಯರಾಗಬೇಕಿತ್ತು. ಅದಕ್ಕಾಗಿ ಕಾನೂನು ಪ್ರಕಾರವೇ ಅವರು ಹೋರಾಟ ನಡೆಸಿದರು. ಆದರೆ, ಇದನ್ನು ಸಹಿಸದೆ ಅವರನ್ನು ಅತ್ಯಾಚಾರ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದರು. ಇಂತಹ ಜೀವಂತ ದೃಶ್ಯಗಳು ಕಣ್ಣಮುಂದಿವೆ. ವೇದವಲ್ಲಿಯ ಪತಿ ಡಾಕ್ಟರ್ ಆಗಿದ್ದರು.

ಆ ದೃಶ್ಯ ನೋಡಿದ ಮಗುವನ್ನೂ ಕೊಂದರು

ವೇದವಲ್ಲಿಗೆ ಮನೆಯಲ್ಲಿ ಬೆಂಕಿ ಹಚ್ಚಿ ಕೊಂದ ದೃಶ್ಯವನ್ನು ನೋಡಿದ ಮಗುವನ್ನೂ ಕೊಂದಿದ್ದಾರೆ. ಸೌಜನ್ಯ ಪ್ರಕರಣದಲ್ಲಿಯೂ ರವಿಪೂಜಾರಿಯನ್ನು ಮರಕ್ಕೆ ತೂಗುಹಾಕಿ ಕೊಂದರು, ಆತ ಆತ್ಮಹತ್ಯೆ ಮಾಡಿಕೊಂಡ ಎಂದು ದಾಖಲಿಸಿದರು. ಸೌಜನ್ಯಳ ತಾಯಿ ಕುಸುಮಾವತಿ ಮತ್ತು ತಂದೆ ಚಂದಪ್ಪ ಗೌಡ ಯಾರನ್ನು ಅಪರಾಧಿ ಎಂದು ದೂರು ಕೊಟ್ಟಿದ್ದರೋ, ಆ ಅಪರಾಧಿಗಳಲ್ಲಿ ಒಬ್ಬರ ಮನೆಯಲ್ಲಿ ಯಶೋಧಾಚಾರ್ತಿ ಕೆಲಸಕ್ಕಿದ್ದಳು. ಸೌಜನ್ಯಳನ್ನು ಅಲ್ಲಿಗೆ ಕರೆದೊಯ್ದಿದ್ದುದು ಆಕೆಗೆ ಗೊತ್ತಿತ್ತಂತೆ. ಆಕೆ ನಾಳೆ ದಿನ ಯಾರಿಗಾದರೂ ಹೇಳಿದರೆ ತೊಂದರೆಯಾಗುತ್ತದೆ ಎಂದು, ಕೆಲಸ ಮುಗಿಸಿ ಮನೆಗೆ ಹೋದ ಆಕೆಯನ್ನು ಮತ್ತೆ ಕರೆಸಿ ಬಾವಿಗೆ ಹಾಕಿ ಕೊಂದರು.

ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತಾರೆ

ಕಮ್ಯೂನಿಸ್ಟರು ದೇವರ ವಿರೋಧಿಗಳು, ದೇವಸ್ಥಾನಕ್ಕೆ ಅಪಚಾರ ಮಾಡುವವರು ಎಂದು ಇವರು ಹೇಳುತ್ತಾರೆ. ವಿಧಾನಸಭೆಯಲ್ಲಿ ಇದರ ಬಗ್ಗೆ ದ್ವನಿ ಎತ್ತಿದಾಗಲೂ, ಇವರು ದೇವಸ್ಥಾನಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಇವರು ಕಮ್ಯೂನಿಸ್ಟರು  ಎಂದು ಹೇಳಿ, ಆ ಸಮಯದಲ್ಲಿಯೂ ಕೂಡ ದೇವರ ಹೆಸರನ್ನೇ ಮುಂದೆ ತೆಗೆದುಕೊಂಡು ಬಂದರು. ಸಾವಿರಾರು ವರ್ಷಗಳಿಂದ ದೇವರು, ದಿಂಡರು ಎಂದು ನಂಬಿಕೊಂಡು ಬಂದ ಜನರು ಇವರ ಇಂತಹ ಮಾತುಗಳನ್ನು ಸುಲಭದಲ್ಲಿ ಒಪ್ಪಿಕೊಳ್ಳುತ್ತಾರೆ.

ಹೌದೇನೋ, ಕಮ್ಯೂನಿಸ್ಟರು ದೇವಸ್ಥಾನಕ್ಕೆ ಹೋಗುವುದು ಬಹಳ ಕಡಿಮೆ, ಆದ್ದರಿಂದ ಇವರಿಗೆ ದೇವರು ಉಂಟೋ ಇಲ್ಲವೋ, ‘ಅವರು’ ಹೇಳೋದೇ ಸತ್ಯ ಇರಬೇಕು ಎಂದು ಸುಲಭದಲ್ಲಿ ಅದನ್ನು ಒಪ್ಪಿಕೊಳ್ಳುತ್ತಾರೆ. ಬದುಕಿನ ಬವಣೆಗಳನ್ನೆಲ್ಲ ಬಿಟ್ಟು, ಭಾವನಾತ್ಮಕವಾಗಿ ಜನರನ್ನು ಸಂಘಟನೆ ಮಾಡಿ ಆಡಳಿತ ಮಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಇದೇ ನಡೆಯುತ್ತಿದೆ. ಸುಲಭವಾಗಿ ಭಾವನಾತ್ಮಕವಾಗಿ ಜನರನ್ನು ತಮ್ಮ ಕಡೆ ತಿರುಗಿಸಿಕೊಳ್ಳಬಹದು. ಆದರೆ, ಅವರವರ ಬದುಕಿನ ಪ್ರಶ್ನೆ ಅವರಿಗೆ ಅರ್ಥವಾಗುವುದಿಲ್ಲ ಎಂಬುದು ನೋವಿನ ಸಂಗತಿ.

ಕೃಪೆ: KUDLA RAMAPGE BUZZ ಯೂಟ್ಯೂಬ್ ಚಾನಲ್

Donate Janashakthi Media

Leave a Reply

Your email address will not be published. Required fields are marked *