ಪುತ್ತೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ಅನಂತರ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ವೈದ್ಯ ಮತ್ತು ಆಸ್ಪತ್ರೆಯಿಂದ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆ ಸಂಭವಿಸಿದೆ ಎಂದು ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ದೂರುದಾರರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆಯಲ್ಲದೇ ವ್ಯಾಜ್ಯ ವೆಚ್ಚವಾಗಿ 30,000 ರೂ. ನೀಡುವಂತೆ ಆದೇಶ ನೀಡಿದೆ. 10 ಲಕ್ಷ ರೂ. ಜತೆಗೆ ಶೇ. 6 ಬಡ್ಡಿಯನ್ನು ಪ್ರಕರಣ ದಾಖಲಾತಿ ಸಮಯದಿಂದ ವಸೂಲಾಗುವವರೆಗೆ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.
ಕೆಮ್ಮಿಂಜೆ ಗ್ರಾಮದ ಮುಂಡೂರು ನಿವಾಸಿ ಗಣೇಶ್ ಬಂಗೇರ ದೂರುದಾರರು. ಅವರ ಪತ್ನಿ ಶ್ವೇತಾ ಯಾನೆ ಶಾಂತ ಕುಮಾರಿ 2011ರ ಮಾ. 29ರಂದು ಹೆರಿಗೆಗಾಗಿ ದರ್ಬೆಯಲ್ಲಿನ ಖಾಸಗಿ ಹೆಲ್ತ್ ಸೆಂಟರ್ಗೆ ದಾಖಲಾಗಿದ್ದರು. ಮರುದಿನ ಅವರು ಗಂಡು ಮಗುವಿಗೆ ಜನ್ಮತಾಳುವ ವೇಳೆ ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು.
ಇದನ್ನೂ ಓದಿ: ಅಮೆರಿಕ ಮತ್ತು ಜಿ-7 ಯುದ್ಧಕೋರತನ- ಸಿಪಿಐ(ಎಂ) ಖಂಡನೆ
ವೈದ್ಯರ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಪತ್ನಿ ಮೃತ ಪಟ್ಟಿದ್ದಾರೆಂದು ಆರೋಪಿಸಿ 2014ರ ನ. 7ರಂದು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಆದರೆ 2017ರಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿತ್ತು. ಈ ಕುರಿತು ಮೃತರ ಪತಿ ಗಣೇಶ್ ಬಂಗೇರ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದು ಪ್ರಕರಣದ ಮರು ವಿಚಾರಣೆ ನಡೆಸಬೇಕೆಂದು ಆದೇಶಿಸಿತ್ತು. 2022ರ ಅನಂತರ ಈ ಪ್ರಕರಣದ ಮರು ವಿಚಾರಣೆ ದ.ಕ.ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಆರಂಭವಾಗಿ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
45 ದಿನದೊಳಗೆ ಪರಿಹಾರ
45 ದಿನಗಳ ಒಳಗಾಗಿ ಪರಿಹಾರ ನೀಡದಿದ್ದರೆ ಶೇ. 8 ಬಡ್ಡಿಯಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಸೂಲಾತಿಗಾಗಿ ಸೂಕ್ತ ಕ್ರಿಮಿನಲ್ ಅಥವಾ ಸಿವಿಲ್ ವ್ಯವಹರಣೆಯನ್ನು ಆರಂಭಿಸಬಹುದು ಎಂದು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ನೋಡಿ: POSH ಕಾಯ್ದೆ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?Janashakthi Media
